ಈ ಸಾಕ್ಷ್ಯಚಿತ್ರದ ವಿಶೇಷ ಎಂದರೆ, ಮಾಮೂಲಾಗಿ ಇದೊಂದು ಪೆದ್ದು ಹೆಂಗಸರು ಪಿಗ್ಗಿ ಬಿದ್ದ ಕಥೆ ಎನ್ನುವಂತೆ ಚಿತ್ರಿಸದೆ, ಭಾವನಾತ್ಮಕ ನೆಲೆಯಲ್ಲಿ ಈ ಕಥೆಯನ್ನು ಚಿತ್ರಿಸಿರುವುದು. ಚಿತ್ರದ ತಾಕತ್ತು ಅದರ ಎಡಿಟಿಂಗ್‌ನಲ್ಲಿದೆ. ಅದು ಈ ಕಥೆಗೆ ನಾಟಕೀಯತೆಯನ್ನು ತಂದುಕೊಡುತ್ತದೆ. ‘ದಿ ಟಿಂಡರ್ ಸ್ವಿಂಡ್ಲರ್’ ಡಾಕ್ಯುಮೆಂಟರಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇಂದು ಫೆಬ್ರವರಿ 14. ಜಗತ್ತು ಪ್ರೇಮಿಗಳ ದಿನವನ್ನು ಆಚರಿಸುವ ದಿನ. ಪ್ರೇಮವನ್ನೇ ವಸ್ತುವಾಗಿಟ್ಟುಕೊಂಡ ಚಿತ್ರವನ್ನು ಬಿಟ್ಟು ನಾನು ಇಂದು ‘ದಿ ಟಿಂಡರ್ ಸ್ವಿಂಡ್ಲರ್’ ಎನ್ನುವ, ಪ್ರೀತಿಯ ಹೆಸರಿನಲ್ಲಿ ದ್ರೋಹ ಮಾಡಿದವನನ್ನು ಕುರಿತಾದ ಚಿತ್ರದ ಬಗ್ಗೆ ಏಕೆ ಬರೆಯುತ್ತಿದ್ದೇನೆ? ಇದರ ಬಗ್ಗೆ ಬರೆಯಬೇಕು ಎನ್ನಿಸಿದ ಕ್ಷಣದಲ್ಲೂ ನನಗೆ ಈ ಪ್ರಶ್ನೆ ಬಂದಿತ್ತು. ಆದರೆ ಇಂದಿನ ದಿನ, ಇದರ ಬಗ್ಗೆಯೇ ಬರೆಯಬೇಕು ಅನ್ನಿಸುವಂತೆ ಮಾಡಿದ್ದು ಈ ಚಿತ್ರದಲ್ಲಿನ ಯುವತಿ ಸಿಸಲಿ. ಅದರ ಬಗ್ಗೆ ಹೇಳುವ ಮೊದಲು ಚಿತ್ರದ ಬಗ್ಗೆ ಮಾತನಾಡೋಣ.
ಬಹುಶಃ ನಾವು ಅತ್ಯಂತ ಹೆಚ್ಚಾಗಿ ಹೂಡಿಕೆ ಮಾಡುವುದು ಪ್ರೇಮದಲ್ಲಿ, ಸಂಬಂಧಗಳಲ್ಲಿ. ಹಣ ಅಲ್ಲಿ ವಿಷಯವಲ್ಲ, ಭಾವನೆ, ಸಂವೇದನೆ, ಸಮಯ, ನಂಬಿಕೆ, ವಿಶ್ವಾಸ ಎಲ್ಲವನ್ನೂ ಅಲ್ಲಿ ಹೂಡಿಕೆ ಮಾಡಿರುತ್ತೇವೆ. ಅಲ್ಲಿ ಆಗುವ ಮೋಸ ನಮ್ಮನ್ನು ಅಷ್ಟರಮಟ್ಟಿಗೆ ಬಡವರನ್ನಾಗಿ ಮಾಡುತ್ತದೆ. ನಮ್ಮಲ್ಲಿನ ಏನೋ ಒಂದು ಒಂದಿಷ್ಟು ಮುಕ್ಕಾಗಿರುತ್ತದೆ. ನಮ್ಮಲ್ಲಿನ ನಂಬುವ ಶಕ್ತಿ, ಪ್ರೀತಿಸುವ ಶಕ್ತಿ ಒಂದಿಷ್ಟು ಹುಷಾರಿಯನ್ನು, ದುನಿಯಾ ದಾರಿಯನ್ನು ಕಲಿತುಕೊಂಡಿರುತ್ತದೆ. ಆದರೆ ಸಂಬಂಧಗಳಲ್ಲಿ ಹಣ ಸಹ ಒಳಗೊಂಡಿದ್ದರೆ? ಈ ಚಿತ್ರ ಪ್ರಧಾನವಾಗಿ ಮೂರು ಹುಡುಗಿಯರ ಕಥೆ ಹೇಳುತ್ತದೆ. ಮೂವರೂ ನಂಬಿ, ಸೋತವರೇ. ಒಬ್ಬಳು ಪ್ರೀತಿಗೆ ಸೋತಿದ್ದರೆ, ಮತ್ತೊಬ್ಬಳು ಸ್ನೇಹಕ್ಕೆ ಸೋತಿರುತ್ತಾಳೆ. ಮೂರನೆಯವಳು ಸೋತೂ, ತನ್ನ ಆತ್ಮಗೌರವವನ್ನು ಮರಳಿ ಗೆದ್ದಿರುತ್ತಾಳೆ. ಫೆಲಿಸಿಟಿ ಮೋರಿಸ್ ನಿರ್ದೇಶಿಸಿರುವ ಈ ಚಿತ್ರ ಮೂರೂ ಕಥೆಗಳನ್ನು ನಾಟಕೀಯತೆಯೊಡನೆ ಕಟ್ಟಿಕೊಡುತ್ತದೆ. ಟಿಂಡರ್ ಎನ್ನುವ ಡೇಟಿಂಗ್ ಆಪ್ ಈ ಕಥೆಗೆ ಭೂಮಿಕೆ ಒದಗಿಸುತ್ತದೆ.
ಕಥೆ ಪ್ರಾರಂಭವಾಗುವುದು ಸಿಸಿಲಿ ಎನ್ನುವ ಮೂಲತಃ ನಾರ್ವೆಯ, ಈಗ ಲಂಡನ್‌ನಲ್ಲಿ ನೆಲೆಸಿರುವ ಹುಡುಗಿ ಹೇಳುವ ಕಥೆಯಿಂದ. ಅರಳುಕಣ್ಣುಗಳ ಪಕ್ಕಾ ರೊಮ್ಯಾಂಟಿಕ್ ಹುಡುಗಿ ಇವಳು. ಪ್ರೇಮ ಎನ್ನುವುದು ತನ್ನ ಬಾಳಿಗೆ ಬಂದೇ ಬರುತ್ತದೆ ಎಂದು ನಂಬಿರುವವಳು. ಈಗಲೂ ಆ ಕಥೆ ಹೇಳುವಾಗ ಅವಳ ಕಣ್ಣುಗಳಲ್ಲಿ ನಕ್ಷತ್ರ ಮಿನುಗುತ್ತಿರುತ್ತದೆ, ವಿಷಾದ ಮಡುಗಟ್ಟಿರುತ್ತದೆ, ಕಡೆಯಲ್ಲಿ ಕಂಬನಿ ಕೆನ್ನೆಯನ್ನು ತೋಯಿಸುತ್ತಿರುತ್ತದೆ. ಅವಳ ಕಥೆ ಶುರುವಾಗುವುದು ಇದೇ ಟಿಂಡರ್ ಆಪ್‌ನಿಂದ. ಒಂದು ಸಲ ಇವಳು ಟಿಂಡರ್ ನೋಡುವಾಗ ಸಿಗುವ ಯುವಕ ಸೈಮನ್. ಇವಳ ಪ್ರೊಫೈಲ್‌ಗೆ ಅವನ ಪ್ರೊಫೈಲ್ ಮ್ಯಾಚ್ ಆಗುತ್ತದೆ.
ಹೆಚ್ಚಿನ ಹುಷಾರಿಗಾಗಿ ಅವಳು ಆತನ ಹೆಸರನ್ನು ಗೂಗಲ್ ಮಾಡುತ್ತಾಳೆ. ಅಲ್ಲೇ ಅವನ ಇನ್‌ಸ್ಟಾಗ್ರಾಂ ವಿವರಗಳಿರುತ್ತದೆ. ಅಲ್ಲಿ ಹೋಗಿ ನೋಡುತ್ತಾಳೆ. ಪ್ರೈವೇಟ್ ಜೆಟ್, ವೈಭವೋಪೇತ ಹಡಗು, ಪಂಚತಾರಾ ಹೋಟೆಲ್, ಮುದ್ದಾದ ನಾಯಿಮರಿ ಹೀಗೆ ಅವನ ವ್ಯಕ್ತಿತ್ವದ, ಅವನ ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ಮಜಲುಗಳನ್ನು ಕಟ್ಟಿಕೊಡುವ ಅನೇಕ ಚಿತ್ರಗಳಿರುತ್ತದೆ. ಅಷ್ಟರಲ್ಲಿ ಅವನ ಮೆಸೇಜ್ ಬರುತ್ತದೆ. ಲಂಡನ್‌ನ ಪಂಚತಾರಾ ಹೋಟೆಲ್ ಫೋರ್ ಸೀಸನ್ಸ್‌ನಲ್ಲಿ ತಂಗಿರುವ ಅವನು ಅವಳನ್ನು ಅಲ್ಲಿ ಕಾಫಿಗೆ ಆಹ್ವಾನಿಸುತ್ತಾನೆ. ಮಧ್ಯಮವರ್ಗದ ಹುಡುಗಿಗೆ ಆ ಹೋಟೆಲ್ ಬೆರಗು ಹುಟ್ಟಿಸುತ್ತದೆ. ಕಾಫಿ ಕುಡಿಯುತ್ತಾ ಮಾತನಾಡುತ್ತಾ ಇಬ್ಬರ ಪರಿಚಯ ಬೆಳೆಯುತ್ತದೆ.
ಅವನು ತನ್ನ ಮೊದಲ ಮದುವೆ, ವಿಚ್ಛೇದನ, ಮೊದಲ ಮದುವೆಯಲ್ಲಿ ಹುಟ್ಟಿದ ಮಗಳು ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾನೆ. ತಾನೊಬ್ಬ ಇಸ್ರೇಲಿ ವಜ್ರ ವ್ಯಾಪಾರಿಯ ಮಗ ಎಂದು ಹೇಳಿಕೊಳ್ಳುವ ಅವನು ಅದೇ ವ್ಯವಹಾರ ನಿಮಿತ್ತ, ”ಬಲ್ಗೇರಿಯಾಗೆ ನನ್ನ ಪ್ರೈವೇಟ್ ಜೆಟ್‌ನಲ್ಲಿ ಹೋಗುತ್ತಿದ್ದೇನೆ, ಬರುವೆಯಾ, ನಾಳೆ ಮತ್ತೆ ವಾಪಸ್ಸಾಗಬಹುದು” ಎನ್ನುತ್ತಾನೆ. ಅವಳಿಗೆ ಅಷ್ಟರಲ್ಲಿ ಅವನ ಮಾತು, ನಡತೆ, ವಿನಯ ಎಲ್ಲಾ ಮೆಚ್ಚುಗೆಯಾಗಿರುತ್ತದೆ. ಅವನ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಸಹ ಅದಕ್ಕೆ ನೆರವಾಗಿರಲಿಕ್ಕೂ ಸಾಕು. ‘ಹೂ’ ಅಂದೇ ಬಿಡುತ್ತಾಳೆ. ಅವನದೇ ರೋಲ್ಸ್ ರಾಯ್ಸ್ ಕಾರಿನಲ್ಲಿ ಮನೆಗೆ ಹೋಗಿ, ಒಂದು ದಿನಕ್ಕಾಗಿ ಬಟ್ಟೆ ಪ್ಯಾಕ್ ಮಾಡಿಕೊಂಡು ಬರುತ್ತಾಳೆ. ಸುದ್ದಿ ಕೇಳಿದ ಅವಳ ಸ್ನೇಹಿತೆಯರು ಅವಳನ್ನು ತಡೆಯಲು ಪ್ರಯತ್ನಿಸುತ್ತಾರೆ, ಅದೆಷ್ಟು ರಿಸ್ಕ್ ಎಂದು ಹೇಳುತ್ತಾರೆ. ಆದರೆ ಆ ಹುಡುಗಿ ಪ್ರತಿಯೊಬ್ಬರ ಬದುಕಿಗೂ ಪ್ರೀತಿ ಬಂದೇ ಬರುತ್ತದೆ ಎಂದು ನಂಬಿರುವವಳು. ಅದು ಕದ ತಟ್ಟಿದಾಗ ತೆಗೆಯದೆ ಇದ್ದರೆ ಬಾಳಿನಲ್ಲಿ ಮತ್ತೆ ಪ್ರೀತಿ ಬಾರದೆಯೇ ಹೋದೀತು ಎಂದು ಹೆದರುವವಳು, ಹೊರಟೇಬಿಡುತ್ತಾಳೆ.
ಅದೊಂದು ಪ್ರೈವೇಟ್ ಜೆಟ್. ಸೈಮನ್ ಅಂಗರಕ್ಷಕ ಪೀಟರ್, ಸೈಮನ್ ಮೊದಲ ಹೆಂಡತಿ, ಪುಟ್ಟಮಗಳು, ಪೈಲೆಟ್, ಅವನ ಖಾಸಗಿ ಡ್ರೈವರ್ ಎಲ್ಲರೂ ಪ್ಲೇನ್ ಏರುತ್ತಾರೆ. ಈ ಹುಡುಗಿಯದು ಸಿಂಡ್ರೆಲಾ ಸಂಭ್ರಮ. ಊರು ತಲುಪಿದಾಗ ಅವನ ಮೊದಲ ಹೆಂಡತಿಯೊಡನೆ ಕಾರಿನಲ್ಲಿ ಹೋಟೆಲ್‌ಗೆ ಹೋಗುವಾಗ ಆಕೆಯೂ ಸೈಮನ್ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಾಳೆ. ಮರುದಿನ ಲಂಡನ್‌ಗೆ ಹಿಂದಿರುಗುವ ಸಿಸಿಲಿಗೆ ‘ಭೂಮೀಲಿ ನಿಲ್ತಿಲ್ಲ ಕಾಲು!’ ಹಿಂಜರಿಯುತ್ತಲೇ ಅವನಿಗೆ ಮೆಸೇಜ್ ಮಾಡುತ್ತಾಳೆ. ಅವನು ತಕ್ಷಣ ಉತ್ತರಿಸುತ್ತಾನೆ. ”ನೀನೆಂದರೆ ಇಷ್ಟ” ಅನ್ನುತ್ತಾನೆ. ”ನಿನ್ನ ಮಿಸ್ ಮಾಡ್ತೀನಿ” ಅನ್ನುತ್ತಾನೆ.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವಳು ಬಾಲ್ಯದಿಂದಲೂ ಕೇಳಿರುವ ರಾಜಕುಮಾರನ ಕಥೆ ನಿಜವಾಗಿಬಿಟ್ಟಿರುತ್ತದೆ. ಅವಳ ಮನೆ ವಿಳಾಸ ಕೇಳುವ ಸೈಮನ್ ಒಂದು ದೊಡ್ಡ ಕೆಂಪು ಗುಲಾಬಿ ಬೊಕೆ ಕಳಿಸುತ್ತಾನೆ. ಸಿಸಿಲಿಯ ಕಣ್ಣುಗಳಲ್ಲಿ ನೀರು. ಒಮ್ಮೆ ಅವಳು ನಾರ್ವೆಯ ಓಸ್ಲೋಗೆ ಹೋಗಿರುತ್ತಾಳೆ. ”ನಿನ್ನನ್ನು ಮಿಸ್ ಮಾಡುತ್ತಿದ್ದೇನೆ” ಎಂದು ಮೆಸೇಜ್ ಮಾಡುತ್ತಾಳೆ. ಬೆಳಗಿನ ಜಾವ ಮೂರು ಗಂಟೆಗೆ ತನ್ನ ಪ್ರೈವೇಟ್ ಜೆಟ್‌ನಲ್ಲಿ ಅವನು ಅಲ್ಲಿ ಲ್ಯಾಂಡ್ ಆಗಿರುತ್ತಾನೆ! ಅವಳು ಪೂರ್ಣವಾಗಿ ಸೋತುಬಿಡುತ್ತಾಳೆ. ಮೊಬೈಲ್ ನಲ್ಲಿ ಅವನ ಹೆಸರಿನ ಪಕ್ಕ ಅವಳು ಹೃದಯದ ಸಿಂಬಲ್ ಹಾಕಿಟ್ಟುಕೊಳ್ಳುತ್ತಾಳೆ.
ವಜ್ರದ ವ್ಯಾಪಾರದಲ್ಲಿರುವ ಅಪಾಯ, ತನ್ನ ಜೀವನಕ್ಕಿರುವ ಬೆದರಿಕೆ, ತನಗೆ ಬರುವ ಬೆದರಿಕೆ ಕರೆಗಳು ಎಲ್ಲವನ್ನೂ ಅವನು ಅವಳಲ್ಲಿ ಹೇಳಿಕೊಳ್ಳುತ್ತಾನೆ. ತನ್ನ ಜೀವನದ ಅಪಾಯ, ದೌರ್ಬಲ್ಯಗಳನ್ನು ಒಪ್ಪಿಕೊಳ್ಳುತ್ತಾ ಅವಳಿಗೆ ಮತ್ತೂ ಹತ್ತಿರವಾಗುತ್ತಾನೆ. ನಾವಿಬ್ಬರೂ ಒಟ್ಟಿಗೇ ನೆಲೆಸೋಣ. ಲಂಡನ್‌ನಲ್ಲಿ ಚೆನ್ನಾಗಿರುವ ಅಪಾರ್ಟ್‌ಮೆಂಟ್ ಹುಡುಕು ಅನ್ನುತ್ತಾನೆ, ಬಾಡಿಗೆಯ ಬಡ್ಜೆಟ್ 15000 ಡಾಲರ್, ಅಂದರೆ ತಿಂಗಳಿಗೆ ಸುಮಾರು ಹನ್ನೊಂದೂವರೆ ಲಕ್ಷ! ಎಲ್‌ಎಲ್‌ಡಿ ಡೈಮಂಡ್ಸ್ ಒಡೆಯನ ಮಗ ಅವನು, ಅವನ ಅಂತಸ್ತಿಗೆ ತಕ್ಕದಾಗಿರಬೇಕಲ್ಲ ಮನೆ? ಹೀಗೆ ಅವಳ ಜೀವನ ಇದ್ದಕ್ಕಿದ್ದಂತೆ ಸಿಂಡ್ರೆಲಾ ಕಥೆಯಾಗಿರುತ್ತದೆ.
ಒಂದು ಮಧ್ಯರಾತ್ರಿ ಅವಳಿಗೆ ಕರೆ ಬರುತ್ತದೆ. ಫೋನ್‌ನಲ್ಲಿ ಕಂಗಾಲಾದ ದನಿಯಲ್ಲಿ ಸೈಮನ್. ತನ್ನ ಮೇಲೆ ಅಟ್ಯಾಕ್ ನಡೆಯಿತು, ಪೀಟರ್ ಕಾರಣದಿಂದ ನಾನು ಬಚಾವಾಗಿ ಉಳಿದೆ. ಭದ್ರತಾ ಕಾರಣಗಳಿಗಾಗಿ ನನ್ನ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ. ನಿನ್ನ ಕಾರ್ಡ್ ಕಳಿಸು ಅನ್ನುತ್ತಾನೆ. ಅವಳು ಅನುಮಾನ ಪಡಲು ಕಾರಣವೇ ಇರುವುದಿಲ್ಲ. ಅವರಿಬ್ಬರೂ ಸಂಗಾತಿಗಳು, ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗಬೇಕು. ಇನ್ನೊಂದು ಯೋಚನೆಯಿಲ್ಲದೆ ತನ್ನ ಕಾರ್ಡ್ ಕಳಿಸುತ್ತಾಳೆ. ಎರಡು ಮೂರು ದಿನಗಳಲ್ಲಿ ಮ್ಯಾಕ್ಸಿಮಂ ಲಿಮಿಟ್ ಆಗಿಹೋಗುತ್ತದೆ. ಅದರ ಹಣ ಅವನೇ ತುಂಬುತ್ತಾನೆ. ಆಮೇಲೆ 25000 ಡಾಲರ್ ಹಣ ಅರ್ಜೆಂಟಾಗಿ ಬೇಕು, ತೆಗೆದುಕೊಂಡು ಬಾ ಅನ್ನುತ್ತಾನೆ. ತಿಂಗಳ ಬಾಡಿಗೆ 15000 ಓಕೆ ಅಂದವನು, ಅವನಿಗೆ 25000 ಒಂದು ಲೆಕ್ಕವೇ? ಈಕೆ ಸಾಲ ತೆಗೆದುಕೊಳ್ಳುತ್ತಾಳೆ. ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸಿಕೋ ಎನ್ನುತ್ತಾನೆ, ತಿಂಗಳಿಗೆ 95000 ಡಾಲರ್ ಸಂಬಳ ಇರುವ ಹಾಗೆ ತನ್ನದೇ ವಜ್ರದ ಕಂಪನಿಯ ಅಪಾಯಿಂಟ್‌ಮೆಂಟ್ ಲೆಟರ್ ಕಳಿಸುತ್ತಾನೆ. ಕಾರ್ಡ್ ಮಿತಿ ಏರುತ್ತದೆ. ಮೂರು ದಿನಕ್ಕೆ 30000 ಡಾಲರ್ ಮೊತ್ತಕ್ಕೆ ಕಾರ್ಡ್ ಬಳಸಿರುತ್ತಾನೆ. ಮತ್ತೆ ಸಾಲ. ಮತ್ತೆ ಬೇಡಿಕೆ. ಹೀಗೆ ಸುಮಾರು 2,50,000 ಡಾಲರ್ ಅಂದರೆ ಸುಮಾರು ಎರಡು ಕೋಟಿ ರೂ ಕೊಟ್ಟಿರುತ್ತಾಳೆ! ಅದಕ್ಕೆ ಅವನು ಬಳಸುವುದು ಒಮ್ಮೆ ಅನುನಯ, ಒಮ್ಮೆ ಪ್ರೀತಿ, ಒಮ್ಮೆ ಬೆದರಿಕೆ, ಒಮ್ಮೆ ಕಂಬನಿ, ಒಮ್ಮೆ ಪ್ರಲೋಭನೆ ……ಅಬ್ಬಬ್ಬಾ.
ಇದು ಪ್ರೀತಿಯಲ್ಲಿ ಬಿದ್ದವಳ ಕತೆ ಎಂದಿರಾ, ಇನ್ನೊಬ್ಬಳ ಕತೆಯೂ ಇದೆ! ಪೆರ್ನಿಲಾ, ಸ್ವೀಡನ್‌ನವಳು. ಅವಳಿಗೂ ಅವನು ಟಿಂಡರ್‌ನಲ್ಲಿ ಪರಿಚಯವಾದವನು. ಆದರೆ ಅವಳು ಅವನೊಂದಿಗೆ ಪ್ರೇಮದಲ್ಲಿ ಬೀಳುವುದಿಲ್ಲ. ಸ್ನೇಹಿತರಾಗೇ ಇರೋಣ ಎನ್ನುತ್ತಾನೆ. ಅವಳನ್ನು ಕರೆದುಕೊಂಡು, ತನ್ನ ಇನ್ನೊಬ್ಬ ಗೆಳತಿಯನ್ನೂ ಸೇರಿಸಿಕೊಂಡು ಪ್ರಪಂಚ ಸುತ್ತುತ್ತಾನೆ. ಅವನು ಹೋಗುವ ರೆಸ್ಟೋರೆಂಟ್‌ಗಳೆಲ್ಲಾ ಪಂಚತಾರಾ ಮಟ್ಟದವೆ! ಅವನು ಹೆಜ್ಜೆಯಿಟ್ಟ ಕ್ಷಣ ಹೋಟೆಲಿನವರೆಲ್ಲಾ ಅವನ ಹೆಸರು ಹಿಡಿದು ಸ್ವಾಗತಿಸುತ್ತಾರೆ. ಒಂದು ಮಧ್ಯರಾತ್ರಿ ಇವಳಿಗೂ ಕರೆ ಬರುತ್ತದೆ. ಅದೇ ಫೋಟೋ, ಅದೇ ಕಥೆ, ಅದೇ ಬೇಡಿಕೆ. ಇವಳೂ ಸಾಲ ಮಾಡುತ್ತಾಳೆ, ಹಣ ಕೊಡುತ್ತಾಳೆ.
ಇಷ್ಟರಲ್ಲಿ ಸಿಸಿಲಿಗೆ ತಾನು ಮೋಸ ಹೋದೆ ಎಂದು ಅರ್ಥವಾಗಿರುತ್ತದೆ. 9 ಬ್ಯಾಂಕ್‌ಗಳ ಸಾಲ, ಅದರ ಜೀವ ತಿನ್ನುವ ಬಡ್ಡಿ. ಒಮ್ಮೆಯಂತೂ ಕಾರ್ ಡ್ರೈವ್ ಮಾಡುವಾಗ ಎದುರಿನ ಲಾರಿಗೆ ಗುದ್ದಿ ಇದೆಲ್ಲಾ ಮುಗಿಸಿಬಿಡಲೆ ಎನ್ನುವ ಭಾವನೆಯೂ ಬರುತ್ತದೆ. ಕಡೆಗೆ ತನ್ನನ್ನು ತಾನು ಮನಶ್ಯಾಸ್ತ್ರಜ್ಞರ ಕ್ಲಿನಿಕ್‌ಗೆ ನೋಂದಾಯಿಸಿಕೊಳ್ಳುತ್ತಾಳೆ. ತನ್ನ ಕ್ರೆಡಿಡ್ ಕಾರ್ಡ್ ಕಂಪನಿಗೆ ಫೋನ್ ಮಾಡುತ್ತಾಳೆ, ಅವರೆದುರಿಗೆ ಸತ್ಯ ಹೇಳಿಬಿಡುತ್ತಾಳೆ. ಅವಳ ಮೊಬೈಲ್‌ನಲ್ಲಿದ್ದ ಸೈಮನ್ ಫೋಟೋ ನೋಡಿದ ಅವರು ಒಬ್ಬರ ಮುಖವನ್ನೊಬ್ಬರು ನೋಡಿ ತಲೆಯಾಡಿಸಿಕೊಳ್ಳುತ್ತಾರೆ.
ಸಿಸಿಲಿ ಅವರನ್ನು ವಿವರ ಕೇಳುತ್ತಾಳೆ. ಅನೇಕ ದೇಶಗಳ, ಅನೇಕ ಮಹಿಳೆಯರಿಗೆ ಇವನು ಹೀಗೇ ಮೋಸ ಮಾಡಿರುವುದು ಗೊತ್ತಾಗುತ್ತದೆ. ಪೋಲೀಸರ ಬಳಿ ಹೋದರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆಗ ಅವಳು ಸಂಪರ್ಕಿಸುವುದು ನಾರ್ವೆಯ ಪ್ರಖ್ಯಾತ ಪತ್ರಿಕೆ ‘ವಿಜೆ’ಯನ್ನು. ಅದರ ಪತ್ರಕರ್ತರು ಅವಳೊಡನೆ ನಿಲ್ಲುತ್ತಾರೆ. ಅವನ ಹುಟ್ಟಿದೂರು ಟೆಲ್ ಅವೀವ್‌ಗೂ ಹೋಗುತ್ತಾರೆ. ಅಲ್ಲಿ ಇವನ ಸುಳ್ಳುಗಳೆಲ್ಲಾ ಒಂದೊಂದಾಗಿ ಹೊರಬರುತ್ತವೆ. ಅವರು ಪೆರ್ನಿಲಾಳನ್ನು ಸಂಪರ್ಕಿಸುತ್ತಾರೆ. ಅವಳೂ ಜೊತೆಯಾಗುತ್ತಾಳೆ. ಈ ಇಬ್ಬರು ಹುಡುಗಿಯರಿಗೂ ಹೇಗಾದರೂ ಅವನ ಕೆಲಸವನ್ನು ಜಗದ ಮುಂದಿಡುವ ತವಕ.
ಸಿಸಿಲಿಯೊಂದಿಗೆ ಅವನು ಮಾಡಿದ ವಾಟ್ಸ್‌ಆಪ್ ಚಾಟ್ ಸುಮಾರು 400 ಪುಟಗಳಿಷ್ಟುರುತ್ತದೆ! ಜೊತೆಗೆ ವಾಯ್ಸ್ ನೋಟ್, ಫೋಟೋ, ವೀಡಿಯೋಗಳು. ಪರ್ನಿಲಾ ಸಹ ತನ್ನ ಸಂಗ್ರಹ ಕೊಡುತ್ತಾಳೆ. ಪೇಪರ್‌ನಲ್ಲಿ ಸುದ್ದಿ ಬಂದೇ ಬಿಡುತ್ತದೆ. ಜಗತ್ತಿನ ಬೇರೆಬೇರೆ ಪತ್ರಿಕೆಗಳು ಅದನ್ನು ಕೈಗೆತ್ತಿಕೊಳ್ಳುತ್ತವೆ. ಆನ್‌ಲೈನ್‌ನಲ್ಲೂ ಅದು ಸುದ್ದಿಯಾಗುತ್ತದೆ. ಆದರೆ ಈ ಹುಡುಗಿಯರು ಎದಿರು ನೋಡದೆ ಇದ್ದ ಫಲಿತಾಂಶವೂ ಬರುತ್ತದೆ. ಮೊದಮೊದಲಿಗೆ ಬರೀ ಟ್ರೋಲ್‌ಗಳು. ನೀವು ಅವನ ವೈಭವ ನೋಡಿ ಬಿದ್ದಿರಿ, ನಿಮ್ಮ ದಡ್ಡತನಕ್ಕೆ ಇದು ಶಾಸ್ತಿಯಾಯಿತು ಎನ್ನುವ ನಿಂದನೆ, ಅವಹೇಳನ. ಅವರು ಅದನ್ನೂ ಸಹಿಸುತ್ತಾರೆ. ಆದರೆ ನಿಧಾನವಾಗಿ ಜನರ ಮನಸ್ಸೂ ತಿಳಿಯಾಗುತ್ತದೆ. ಹಣ ಬರುವುದಿಲ್ಲವಾದರೂ ಈ ಹುಡುಗಿಯರು ಮತ್ಯಾರೂ ಈ ಮೋಸಕ್ಕೆ ಬೀಳಬಾರದು ಎನ್ನುವ ಉದ್ದೇಶಕ್ಕೆ ಈ ಲೇಖನ ಬರಲು ಕಾರಣವಾಗಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಲೇಖನವನ್ನು ಮತ್ತೊಬ್ಬ ಹುಡುಗಿಯೂ ನೋಡುತ್ತಾಳೆ ಮತ್ತು ಅದು ಇನ್ನೊಂದು ಕಾವ್ಯಾತ್ಮಕ ನ್ಯಾಯವನ್ನೂ ಒದಗಿಸುತ್ತದೆ. ಅದನ್ನು ನೀವು ಈ ಸಾಕ್ಷ್ಯಚಿತ್ರವನ್ನು ನೋಡಿಯೇ ತಿಳಿಯಬೇಕು!
ಈ ಸಾಕ್ಷ್ಯಚಿತ್ರದ ವಿಶೇಷ ಎಂದರೆ, ಮಾಮೂಲಾಗಿ ಇದೊಂದು ಪೆದ್ದು ಹೆಂಗಸರು ಪಿಗ್ಗಿ ಬಿದ್ದ ಕಥೆ ಎನ್ನುವಂತೆ ಚಿತ್ರಿಸದೆ, ಭಾವನಾತ್ಮಕ ನೆಲೆಯಲ್ಲಿ ಈ ಕಥೆಯನ್ನು ಚಿತ್ರಿಸಿರುವುದು. ಚಿತ್ರದ ತಾಕತ್ತು ಅದರ ಎಡಿಟಿಂಗ್‌ನಲ್ಲಿದೆ. ಅದು ಈ ಕಥೆಗೆ ನಾಟಕೀಯತೆಯನ್ನು ತಂದುಕೊಡುತ್ತದೆ. ಚಿತ್ರದ ಕೊನೆಯ ಘಟನೆಯಂತೂ ತುಂಬಾ ಸೊಗಸಾಗಿದೆ. ಈ ಚಿತ್ರದಲ್ಲಿ ಬರುವ ಮೂರೂ ಹೆಂಗಸರ ಕಥೆಗಳನ್ನೂ ಚಿತ್ರ ಎಳೆಎಳೆಯಾಗಿ ಬಿಚ್ಚಿಡುವ ರೀತಿ ಇನ್ನೂ ಸೊಗಸಾಗಿದೆ. ಇಲ್ಲಿ ಪ್ರೇಮದ ಹುಡುಕಾಟವಿದೆ, ಆನ್‌ಲೈನ್ ಜಗತ್ತಿನ ವಂಚನೆ ಇದೆ, ಮೋಸಮಾಡುವವರ ಸಕ್ಕರೆಯ ನಾಲಿಗೆಯ ಬಣ್ಣನೆ ಇದೆ. ಚೈನ್ ಮನಿ ಲಿಂಕ್ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ವಿಸ್ತರಿಸಿದ ಸೈಮನ್ ಹೇಗೆ ಸಿಸಿಲಿಯ ಹಣದ ಹೊಳೆ ಹರಿಸುತ್ತಾ ಪರ್ನಿಲಾಳ ನಂಬಿಕೆ ಗಳಿಸುತ್ತಾನೆ, ಅವಳ ದುಡ್ಡಿನಲ್ಲಿ ಮತ್ಯಾರಿಗೋ ಬಲೆ ಹಾಕುತ್ತಾ ನಾಳಿನ ವಂಚನೆಗೆ ಅಲ್ಲಿ ಪಾಯ ಹಾಕುತ್ತಾನೆ ಎಂದು ಈ ಚಿತ್ರ ವಿವರಿಸುತ್ತದೆ.
ಈ ಚಿತ್ರ ನಿರ್ಮಾಣ ಮಾಡುವಾಗ ನಿರ್ದೇಶಕಿ ಸೈಮನ್‌ನನ್ನು ಸಂಪರ್ಕಿಸಿ ಈ ಬಗ್ಗೆ ಅವನ ಮಾತುಗಳೇನಾದರೂ ಇದೆಯೇ ಎಂದು ಕೇಳುತ್ತಾಳೆ. ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಅವನೂ ಆವಾಜ್ ಹಾಕುತ್ತಾನೆ. ಈ ಚಿತ್ರ ನಿರ್ಮಾಣ ಆಗುವಾಗ ಆತ ಇಸ್ರೇಲ್‌ನಲ್ಲಿರುತ್ತಾನೆ, ಅವನ ಬಂಧನವಾಗಿದ್ದರೂ ಆರೋಪ ನಕಲಿ ಪಾಸ್‌ಪೋರ್ಟ್ ಹೊಂದಿರುವುದು ಮಾತ್ರವಾಗಿರುತ್ತದೆ. 15 ತಿಂಗಳ ಸಜೆ ಆಗಿದ್ದರೂ, ‘ಸನ್ನಡತೆ’ಗಾಗಿ 5 ತಿಂಗಳಲ್ಲಿ ಜೈಲಿನಿಂದ ಹೊರಬಂದಿರುತ್ತಾನೆ. ಒಂದು ಅಂದಾಜಿನ ಪ್ರಕಾರ ಹೀಗೆ ಅವನು ಮೋಸ ಮಾಡಿ ಗಂಟು ಕಟ್ಟಿಕೊಂಡ ಹಣದ ಮೊತ್ತ ಒಂದು ಕೋಟಿ ಡಾಲರ್‌ಗಳು! ಈಗ ಅವನು ಬೆಂಟ್ಲೆ ಕಾರ್ ತೆಗೆದುಕೊಂಡಿದ್ದಾನೆ, ಅಷ್ಟೇ ವೈಭವೋಪೇತ ಬದುಕು ಬದುಕುತ್ತಿದ್ದಾನೆ. ಆ ಮೂವರು ಹುಡುಗಿಯರೂ ಇಂದಿಗೂ, ಇನ್ನೂ ಸಾಲ ತೀರಿಸುತ್ತಲೇ ಇದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರ ಬಿಡುಗಡೆಯಾದ ದಿನ ಸಹ ಇನ್‌ಸ್ಟಾಗ್ರಾಮ್‌ನಲ್ಲಿ Simon Levive ಖಾತೆ ಹಾಗೆಯೇ ಇತ್ತು. ನಂತರ ಟಿಂಡರ್ ತನ್ನ ಎಲ್ಲಾ ವೇದಿಕೆಗಳಲ್ಲೂ ಅವನ ಖಾತೆಯನ್ನು ಬ್ಯಾನ್ ಮಾಡಿತು. ಜಗತ್ತಿನ ಬೇರೆಬೇರೆ ಭಾಗಗಳಿಂದ ಜನ ಇವನ ಮೋಸದ ಕಥೆಗೆ ತಮ್ಮ ಕಥೆಗಳನ್ನು ಸೇರಿಸುತ್ತಲೇ ಇದ್ದಾರೆ. ಯಾರದೋ ಮನೆಯಲ್ಲಿ ಬೇಬಿ ಸಿಟರ್ ಆಗಿರುವಾಗ ಅವರ ಚೆಕ್‌ಗಳನ್ನು ಕದ್ದಿರುತ್ತಾನೆ. ಮತ್ಯಾವುದೋ ವೈಭವೋಪೇತ ಲಿಮೋಸಿನ್ ಕಂಪನಿಯ ಕಾರ್ ಬಾಡಿಗೆಗೆ ಪಡೆದವನು, ತಿಂಗಳುಗಟ್ಟಲೆ ಅದನ್ನು ಬಳಸಿ, ಬಾಡಿಗೆ ಕೊಡದೆ ಓಡಿಹೋಗಿರುತ್ತಾನೆ. ಮತ್ಯಾವುದೋ ಹುಡುಗಿಗೆ ನಾನು ಮೊಸ್ಸಾದ್‌ಗೆ ಸೇರಿದವನು ಅನ್ನುತ್ತಾನೆ. ಅವರೆಲ್ಲಾ ಇನ್ನೂ ಸುಧಾರಿಸಿಕೊಳ್ಳುತ್ತಲೇ ಇದ್ದಾರೆ. ಅವನು ಮಾತ್ರ ತಾನು ನಿರಪರಾಧಿ ಎಂದು ಹೇಳುತ್ತಾ, ಆ ಹೆಣ್ಣುಮಕ್ಕಳನ್ನು ದೂಷಿಸುತ್ತಲೇ ಇದ್ದಾನೆ. ಜಗತ್ತಿನ ಮತ್ಯಾವುದೋ ಭಾಗದಲ್ಲಿ ಬಹುಶಃ ಮತ್ತೊಬ್ಬಳು ಸಿಸಿಲಿ ಅವನ ಕಥೆಗಳಿಗೆ ತಲೆಯಾಡಿಸುತ್ತಲೇ ಇದ್ದಾಳೆ.
ಇದು ಪ್ರೇಮದ ಆಸೆಗೆ ಬಿದ್ದು ನಡೆದ ತಪ್ಪು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಮ್ಯಾಟ್ರಿಮನಿ ಆಪ್‌ನಲ್ಲಿ ಮದುವೆ ಸಂಬಂಧ ಬೆಸೆಯಲು ಹೋಗುವಾಗಲೂ ಇಂತಹ ಮೋಸ ಜರುಗಿದ ಕಥೆಗಳಿವೆ. ಸ್ನೇಹಿತರ ನಡುವಿನ ವಂಚನೆಯ ಕತೆ ಇದೆ. ಕಥೆ ಮುಗಿಯುವಾಗ ಪರ್ನಿಲಾ ”ನಾನು ಮತ್ತೆ ಎಂದೂ ಮೊದಲಿನಂತಾಗುವುದಿಲ್ಲ” ಎಂದು ನಿಟ್ಟುಸಿರಿಡುತ್ತಾಳೆ. ಸಿಸಿಲಿ, ”ಏನು ಮಾಡಲಿಕ್ಕಾಗುತ್ತದೆ? ಇಂದಿಗೂ ನಾನು ಟಿಂಡರ್‌ನಲ್ಲಿದ್ದೇನೆ, ಇಂದಿಗೂ ನಾನು ಪ್ರೀತಿಯನ್ನು ನಂಬುತ್ತೇನೆ ಎನ್ನುತ್ತಾಳೆ”. ನನ್ನ ಮಟ್ಟಿಗೆ ಅವಳು ನಿಜಕ್ಕೂ ಗಟ್ಟಿ ಹೃದಯದ ಹೆಣ್ಣು. ಪ್ರತಿ ಸಲ ಪ್ರೀತಿಯನ್ನು ಕಳೆದುಕೊಂಡಾಗಲೂ ನಾವು ನಮ್ಮ ಸುತ್ತಲೂ ಒಂದು ಗೋಡೆ ಕಟ್ಟಿಕೊಳ್ಳುತ್ತೇವೆ. ನಾವು ಎದುರಿಸಿದ ಆಘಾತದ ಆಧಾರದ ಮೇಲೆ ಗೋಡೆಯ ದಪ್ಪ ಎಷ್ಟು ಎನ್ನುವುದು ನಿರ್ಧಾರವಾಗುತ್ತದೆ. ನಮ್ಮನ್ನು ಕಾಪಾಡಿಕೊಳ್ಳಲೆಂದು ಕಟ್ಟಿದ ಅದೇ ಗೋಡೆ ಎಷ್ಟೋ ಸಲ ನಮ್ಮನ್ನು ಗೋಡೆಯಾಚೆಗೆ ಹಾಡುತ್ತಿರುವ ಹಕ್ಕಿಯ ಹಾಡಿಗೆ, ತಂಗಾಳಿಯ ಅಲೆಗೆ ಸಹ ಕಿವುಡಾಗಿಸಿಬಿಡುತ್ತದೆ. ಪ್ರೇಮ ಎಂದರೆ ಹೆದರಿಕೆ … ನಂಬಿಕೆಗೆ ಪೆಟ್ಟಾದ ಮೇಲೂ ಮತ್ತು ನಂಬುವ ಧೈರ್ಯ ಉಳಿಸಿಕೊಳ್ಳಬಲ್ಲ, ಪ್ರೇಮಕ್ಕಾಗಿ ಕಾಯಬಲ್ಲ ಸಿಸಿಲಿಯ ಧೈರ್ಯ ನನಗೆ ಹೆಚ್ಚಿನದಾಗಿ ತೋರುತ್ತದೆ. ಅಂತಹ ಧೈರ್ಯವನ್ನು ತುಂಬಬಲ್ಲ ಪ್ರೇಮಕ್ಕೆ ಶರಣು.
ಅಂಜಿಕೆಯ ಎದೆಯಲ್ಲೂ ಧೈರ್ಯ ತುಂಬುವ, ಅಪನಂಬಿಕೆಗಳ ನಡುವೆಯೂ ನಂಬುವುದಕ್ಕೆ ಪ್ರಚೋದಿಸುವ, ಬದುಕಿಗೆ ಕಾರಣ ಕೊಡುವ, ವಯಸ್ಸಿನ ಪರಿವೆಯನ್ನೂ ಮೀರಿಸಿ ಕಣ್ಣರಳಿಸಬಲ್ಲ, ಎದೆಬಡಿತ ಹೆಚ್ಚಿಸಬಲ್ಲ ಪ್ರೇಮಕ್ಕೆ ಶರಣೆನ್ನುತ್ತಾ, ಹ್ಯಾಪ್ಪಿ ವ್ಯಾಲೆಂಟೈನ್ಸ್ ಡೇ…