ಮರಳು ಗುಡ್ಡದ ತುದಿಯಲ್ಲಿ ಕಳ್ಳ ಹೂತಿಟ್ಟ ಹಣದ ಚೀಲದ ಮೇಲೆ ಸಂತನ ಸಮಾಧಿ ತಲೆ ಎತ್ತಿರುತ್ತದೆ. ಅವನ ಮುಂದಿನ ದಾರಿ ಏನು? ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ‘ದಿ ಅನ್‌ನೋನ್ ಸೈಂಟ್’ ಅರೆಬಿಕ್ ಸಿನಿಮಾ.
ಕದ್ದಿರುವ ಹಣದೊಂದಿಗೆ ಕಾರಿನಲ್ಲಿ ತಪ್ಪಿಸಿಕೊಂಡು ಹೋಗುವ ಕಳ್ಳ. ನಡುವೆ ಕಾರು ಕೆಟ್ಟು ನಿಲ್ಲುತ್ತದೆ. ಸುತ್ತಲೂ ಮರುಭೂಮಿ. ಅಲ್ಲೊಂದು ಮರಳು ಗುಡ್ಡದ ತುದಿಗೆ ಹೋಗಿ ಹಳ್ಳ ತೋಡಿ ಅಲ್ಲಿ ಹಣದ ಬ್ಯಾಗ್ ಹೂತಿಟ್ಟು ಕಳ್ಳ ಮತ್ತೆ ಕಾರಿನೊಳಗೆ ಬಂದು ಕೂರುತ್ತಾನೆ. ಪೋಲೀಸ್ ಸುತ್ತುವರಿದು ಬಂಧಿಸುತ್ತಾರೆ. ಶಿಕ್ಷೆ ಅನುಭವಿಸಿ ಬಹುದಿನಗಳ ಬಳಿಕ ಬಿಡುಗಡೆಯಾಗಿ ಹಣ ಹೂತಿಟ್ಟ ಜಾಗಕ್ಕೆ ಬರುತ್ತಾನೆ. ಹೂತಿಟ್ಟ ಹಣದೊಂದಿಗೆ ಬದುಕು ಕಟ್ಟಿಕೊಳ್ಳುವ ಕನಸು ಅತನದ್ದು. ಅಲ್ಲಿ ನೋಡಿದರೆ, ಅವನು ಹೂತಿಟ್ಟ ಹಣದ ಬ್ಯಾಗ್ ಸುತ್ತಲೂ ನಾಲಕ್ಕು ಗೋಡೆ, ಮೇಲೊಂದು ಶೀಟು ಹಾಕಲಾಗಿದೆ. ಇದು ಅಪರಿಚಿತ ಸಂತನೋರ್ವನ ಸಮಾಧಿ ಇರುವ ಪವಿತ್ರವಾದ ಸ್ಥಳ ಎಂದು ಅಲ್ಲೊಂದು ಗುಡಿ ಮಾಡಿಟ್ಟಿದ್ದಾರೆ! ಮುಂದೆ ಅವನು ಹಣ ತೆಗೆಯುತ್ತಾನಾ? ಇಲ್ವಾ? ಅನ್ನೋದು ಕತೆ.
ಸಿನಿಮಾ ಮುಗಿಯುವಾಗ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎನಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಆಳವಾದ ಹಲವಾರು ಮೂಢ ಆಚರಣೆಗಳನ್ನು ಲಗು ಹಾಸ್ಯದ ಮೂಲಕ ನಿರೂಪಿಸುವುದು ಅರಿವಿಗೆ ಬರುತ್ತದೆ. ಆ ಸನ್ನಿದಿಗೆ ಹೋದರೆ ಸಾಕು ಎಲ್ಲಾ ಖಾಯಿಲೆ ವಾಸಿಯಾಗುತ್ತೆ ಅನ್ನೋದು ಜನರ ನಂಬಿಕೆ. ಅಲ್ಲಿರೋದು ತಾನೇ ಹೂತಿಟ್ಟ ಬ್ಯಾಗ್, ಅಲ್ಲಿ ಯಾವ ಸಂತನ ದೇಹವೂ ಇಲ್ಲ, ಅದು ಪವಿತ್ರ ಸ್ಥಳವೂ ಅಲ್ಲ ಅನ್ನೋದು ಕಳ್ಳನಿಗೆ ಚೆನ್ನಾಗಿ ಗೊತ್ತು. ಆದರೂ ಜನರ ಭಯ, ಭಕ್ತಿಯ್ನು ನೋಡಿ ಆ ಜಾಗವನ್ನು ಅಗೆಯಲು ಅವನು ಅಂಜುತ್ತಾನೆ. ಹಾಗಾದರೆ, ಇಲ್ಲಿ ನಾಸ್ತಿಕ ವಾದ ಇದೆಯೇ? ಖಂಡಿತ ಇಲ್ಲ. ದೇವರು ಅನ್ನೋದು ನಂಬಿಕೆ ಎನ್ನುವ ಅಭಿಪ್ರಾಯ ನಿರ್ದೇಶಕರದ್ದು. ಕಳ್ಳನ ಕತೆಯ ಜೊತೆ ಚಿತ್ರದಲ್ಲಿ ಮತ್ತಷ್ಟು ಉಪಕತೆಗಳಿವೆ. ಅದೊಂದು ಮಳೆ ಇಲ್ಲದ ಊರು. ಅಲ್ಲಿ ಬೇಸಾಯ ಮಾಡಬೇಕು ಅನ್ನೋದು ಆ ಮುದುಕನ ಕನಸು. ಮೊದಲಿನ ಹಾಗೆ ಈಗ ಊರಿನಲ್ಲಿ ಜನರಿಲ್ಲ. ಬರದಿಂದ ಎಲ್ಲರೂ ಬೇರೆಡೆ ವಲಸೆ ಹೋಗಿದ್ದಾರೆ. ಜನರು ಮತ್ತೆ ಈ ಊರಿಗೆ ಬರಬೇಕು ಅನ್ನೋದು ಮುದುಕನ ಆಸೆ. ಮೋಡವನ್ನು ದಿಟ್ಟಿಸುತ್ತಾ ಕುಳಿತುಕೊಳ್ಳುವ ಮುದುಕ, ಜೊತೆಗೆ ರೇಡಿಯೋದಲ್ಲಿ ಹವಾಮಾನ ವರದಿ, ದೇವರ ಅನುಗ್ರಹಕ್ಕಾಗಿ ಬರಡು ಭೂಮಿಯ ಮೇಲೆ ನಿಂತು ಪ್ರಾರ್ಥಿಸುವುದು… ಹೀಗೆ ನಿರ್ದೇಶಕರು ಅನೇಕ ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ.
ಸಿನಿಮಾ : ದಿ ಅನ್‌ನೋನ್ ಸೈಂಟ್ | ನಿರ್ದೇಶಕ : ಅಲಾ ಎದ್ದೀನ್ ಅಲ್ಜೆಮ್ | ದೇಶ : ಮೊರೆಕ್ಕೊ | ಭಾಷೆ : ಅರೆಬಿಕ್