‘ಪುಷ್ಪ’ ಸಿನಿಮಾದ ಐಟಂ ಹಾಡಿಗೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿದ್ದವು. ಈ ಹಾಡಿಗೆ ನರ್ತಿಸಿದ್ದ ನಟಿ ಸಮಂತಾ ಮೊದಲ ಬಾರಿ ಮೌನ ಮುರಿದು ದಿಟ್ಟ ಉತ್ತರ ನೀಡಿದ್ದು, ಹಾಡನ್ನು ಯಶಸ್ವಿಗೊಳಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸುಕುಮಾರ್‌ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟಾವ’ ಐಟಂ ನಂಬರ್‌ ಹೆಸರು ಮಾಡುತ್ತಿದೆ. ಸಮಂತಾ ಸಿನಿಮಾ ಬದುಕಿನಲ್ಲಿ ಇದು ಅವರ ಮೊಲದ ಐಟಂ ಸಾಂಗ್‌. ಈ ಸಾಂಗ್‌ನ ಟೀಸರ್‌ ಬಿಡುಗಡೆಯಾಗಿದ್ದಾಗಲೇ ಕೆಲವು ತಕರಾರು ಎದ್ದಿದ್ದವು. ಮುಂದೆ ಸಿನಿಮಾ ತೆರೆಕಂಡ ನಂತರ ವಿಚಿತ್ರ ಕಾರಣಗಳೊಂದಿಗೆ ಈ ಹಾಡನ್ನು ನಿಷೇಧಿಸುವಂತೆ ಒತ್ತಡ ಹೇರಲಾಗಿತ್ತು. ವೈಯಕ್ತಿಕವಾಗಿ ನಟಿ ಸಮಂತಾ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ನಿಂದನೆಗಳು ಬಂದಿದ್ದವು. ಇಲ್ಲಿಯವರೆಗೆ ಈ ಕುರಿತಾಗಿ ಏನೊಂದೂ ಪ್ರತಿಕ್ರಿಯಿಸದ ಸಮಂತಾ ಇಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. “ತೆರೆ ಮೇಲೆ ಒಳ್ಳೆಯವಳಾಗಿ ನಟಿಸಿದ್ದೇನೆ. ಕೆಟ್ಟವಳಾಗಿಯೂ ನಟಿಸಿದ್ದೇನೆ. ತಮಾಷೆ, ಗಂಭೀರ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದೇನೆ. ಚಾಟ್‌ ಶೋ ನಿರೂಪಣೆ ಮಾಡಿದ್ದೇನೆ. ಕಠಿಣ ಪರಿಶ್ರಮದಿಂದ ಇದೆಲ್ಲಾ ಸಾಧ್ಯವಾಗಿದೆ. ಆದರೆ ಸೆಕ್ಸೀ ಆಗಿ ಕಾಣಿಸಿಕೊಳ್ಳುವುದು ನೆಕ್ಸ್ಟ್‌ ಲೆವೆಲ್‌ ಹಾರ್ಡ್‌ವರ್ಕ್‌” ಎಂದಿದ್ದಾರೆ.

ಐಟಂ ಹಾಡಿನ ಸ್ಟಿಲ್‌ವೊಂದನ್ನು ಶೇರ್‌ ಮಾಡಿರುವ ನಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಾಡಿನ ಯಶಸ್ಸಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅವರ ಪೋಸ್ಟ್‌ಗೆ ಸಮಂತಾರ ತಾರಾ ಗೆಳತಿಯರಾದ ತಮನ್ನಾ ಭಾಟಿಯಾ, ಮಾಳವಿಕಾ ಮೋಹನನ್‌, ಕ್ರೇಶಾ ಬಜಾಜ್‌ ಮತ್ತಿತರರು ಮೆಚ್ಚುಗೆ ಕಮೆಂಟ್‌ಗಳನ್ನು ಮಾಡಿದ್ದಾರೆ. ಈ ಹಿಂದಿನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಅವರು ‘ಪುಷ್ಪ’ ಚಿತ್ರದ ಹೀರೋ ಅಲ್ಲು ಅರ್ಜುನ್‌ ನಟನೆಯ ಕುರಿತು ಮೆಚ್ಚಿಗೆಯ ಮಾತುಗಳನ್ನಾಡಿ ಅಭಿನಂದಿಸಿದ್ದರು. ಈ ಹಿಂದೆ ‘ಸನ್‌ ಆಫ್‌ ಸತ್ಯಮೂರ್ತಿ’ ತೆಲುಗು ಚಿತ್ರದಲ್ಲಿ ಅಲ್ಲುಅರ್ಜುನ್‌ಗೆ ನಾಯಕಿಯಾಗಿದ್ದ ಅವರು ಈ ಚಿತ್ರದಲ್ಲಿ ಐಟಂಗೆ ಜೊತೆಯಾಗಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ‘ಪುಷ್ಪ’ ಸಿನಿಮಾ ವಾರಾಂತ್ಯದ ಹೊತ್ತಿಗೆ ನೂರು ಕೋಟಿ ವಹಿವಾಟು ದಾಖಲಿಸಿ ಸುದ್ದಿಯಾಗಿದೆ.

LEAVE A REPLY

Connect with

Please enter your comment!
Please enter your name here