ಶಿವರಾಜಕುಮಾರ್‌ ಬೆಳ್ಳಿತೆರೆಗೆ ಪರಿಚಯವಾದ ‘ಆನಂದ್‌’ ಸಿನಿಮಾ ತೆರೆಕಂಡು ಇಂದಿಗೆ (ಜೂನ್‌ 19) ಮೂವತ್ತೆಂಟು ವರ್ಷ. ಸುಧಾರಾಣಿ ಅವರಿಗೂ ನಾಯಕನಟಿಯಾಗಿ ಇದು ಮೊದಲ ಸಿನಿಮಾ. ಪಾರ್ವತಮ್ಮ ರಾಜಕುಮಾರ್‌ ನಿರ್ಮಾಣದ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶಿಸಿದ್ದರು. ಚೊಚ್ಚಲ ಸಿನಿಮಾದ ಭರ್ಜರಿ ಯಶಸ್ಸು ಶಿವರಾಜಕುಮಾರ್‌ ವೃತ್ತಿಬದುಕಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿತು.

‘ಟುವ್ವಿ ಟುವ್ವಿ’ ಎಂದು ಹಾಡಿ ಕುಣಿಯುತ್ತಾ ಶಿವರಾಜಕುಮಾರ್‌ ಬೆಳ್ಳಿತೆರೆಗೆ ಪರಿಚಯವಾದ ‘ಆನಂದ್‌’ ಸಿನಿಮಾ ತೆರೆಕಂಡು ಇಂದಿಗೆ, ಅಂದರೆ ಜೂನ್‌ 19ಕ್ಕೆ 38 ವರ್ಷ! 1986, ಜೂನ್‌ 19ರಂದು ಈ ಸಿನಿಮಾ ಥಿಯೇಟರ್‌ಗೆ ಬಂದಿತ್ತು. ಪಾರ್ವತಮ್ಮ ರಾಜಕುಮಾರ್‌ ತಮ್ಮ ಪುತ್ರನಿಗಾಗಿ ನಿರ್ಮಿಸಿದ್ದ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶಿಸಿದ್ದರು. ಶಿವರಾಜಕುಮಾರ್‌ ಲವಲವಿಕೆಯ ನಟನೆ, ಇಂಪಾದ ಸಂಗೀತ, ತಾಜಾತನ ಮತ್ತು ಅಚ್ಚುಕಟ್ಟಾದ ನಿರೂಪಣೆಯಿಂದ ಸಿನಿಮಾ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಜಕುಮಾರ್‌ ಪುತ್ರ ಎನ್ನುವ ಟ್ಯಾಗ್‌ಲೈನ್‌ ಇದ್ದರೂ ಶಿವರಾಜಕುಮಾರ್‌ ತಮ್ಮ ಮೊದಲ ಸಿನಿಮಾದಲ್ಲೇ ಉತ್ತಮ ಸ್ಕ್ರೀನ್‌ ಪ್ರಸೆನ್ಸ್‌ನಿಂದ ಗಮನ ಸೆಳೆದಿದ್ದರು. ಡಾ ರಾಜ್‌, ಪಾರ್ವತಮ್ಮ ರಾಜಕುಮಾರ್‌ ಮತ್ತು ರಾಜ್‌ ಸಹೋದರ ವರದಪ್ಪ ಅವರ ಸಿನಿಮಾನುಭವ, ‘ಆನಂದ್‌’ ಒಂದೊಳ್ಳೆಯ ಸಿನಿಮಾ ಆಗಿ ರೂಪುಗೊಳ್ಳವುಲ್ಲಿ ನೆರವಾಯ್ತು. ಅನುಭವಿ ತಂತ್ರಜ್ಞರು ಚಿತ್ರವನ್ನು ಚೆಂದಗಾಣಿಸಿದ್ದರು. ‘ಆನಂದ್‌’ ಸಿನಿಮಾದ ಯಶಸ್ಸಿನ ಪಾಲು ಗೀತರಚನೆಕಾರ ಚಿ ಉದಯಶಂಕರ್‌, ಸಂಗೀತ ಸಂಯೋಜಿಸಿದ್ದ ಶಂಕರ್‌ – ಗಣೇಶ್‌, ಛಾಯಾಗ್ರಹಣ ಮಾಡಿದ್ದ ಬಿ ಸಿ ಗೌರಿಶಂಕರ್‌, ಸಂಕಲನಕಾರ ಭಕ್ತವತ್ಸಲಂ, ಹಿನ್ನೆಲೆ ಗಾಯಕರಾದ ಎಸ್‌ ಪಿ ಬಾಲಸುಬ್ರಹ್ಮಣ್ಯ, ಎಸ್‌ ಜಾನಕಿ, ವಾಣಿ ಜಯರಾಂ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರಾದ ರಾಜೇಶ್‌, ಜಯಂತಿ, ತೂಗುದೀಪ ಶ್ರೀನಿವಾಸ್‌… ಇವರೆಲ್ಲರಿಗೂ ಸಲ್ಲಬೇಕು.

ಇನ್ನು ನಟಿ ಸುಧಾರಾಣಿ ಅವರಿಗೂ ನಾಯಕಿಯಾಗಿ ಇದು ಮೊದಲ ಸಿನಿಮಾ. ನಾಯಕಿಯಾಗುವ ಮುನ್ನ ಅವರು ಬಾಲನಟಿಯಾಗಿ ಕೆಲ ಸಿನಿಮಾಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಹಾಗೆ ನೋಡಿದರೆ ‘ಆನಂದ್‌’ಗೆ ನಾಯಕಿಯಾಗಿ ನಟಿಸುವ ಹುಡುಗಿಯರ ಪಟ್ಟಿಯಲ್ಲಿ ಮೊನಿಷಾ, ನಯನ ಕೂಡ ಇದ್ದರು. ಕೊನೆಯ ಹಂತದಲ್ಲಿ ಜಯಶ್ರೀ ಅವರು ‘ಸುಧಾರಾಣಿ’ ಹೆಸರಿನೊಂದಿಗೆ ನಾಯಕನಟಿಯಾಗಿ ಆಯ್ಕೆಯಾದರು. ಆಗ ಸುಧಾರಾಣಿ ಅವರಿಗೆ 12 ವರ್ಷವಷ್ಟೆ! ಇದು ಅವರಿಗೆ ನಾಯಕಿಯಾಗಿ ಅತ್ಯುತ್ತಮ ಡೆಬ್ಯೂ ಸಿನಿಮಾ ಆಯ್ತು. ಮುಂದೆ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿಯಾಗಿ ಅವರು ಮಿಂಚಿದರು. ಚಿತ್ರಸಾಹಿತಿ ಚಿ ಉದಯಶಂಕರ್‌ ಪುತ್ರ ಚಿ ಗುರುದತ್‌ ಅವರಿಗೂ ‘ಆನಂದ್‌’ ಮೊದಲ ಸಿನಿಮಾ ಎನ್ನುವುದು ವಿಶೇಷ.

ಶಿವರಾಜಕುಮಾರ್‌ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು. ವಿಶೇಷವಾಗಿ ಯುವಪೀಳಿಗೆಗೆ ಅವರ ಡ್ಯಾನ್ಸ್‌ ಇಷ್ಟವಾಗಿತ್ತು. ಈ ಸಿನಿಮಾ ಬಿಡುಗಡೆಯಾದ ನಂತರ ಶಿವರಾಜಕುಮಾರ್‌ ಹೇರ್‌ಸ್ಟೈಲ್‌ ಟ್ರೆಂಡ್‌ ಆಗಿದ್ದು ಹೌದು. ಬೆಳ್ಳಿತೆರೆಗೆ ಯುವ ನಟ – ನಟಿಯರು ಬೇಕು ಎನ್ನುವಂತಹ ವಾತಾವರಣ ಇದ್ದ ಸಮಯ ಅದು. ಶಿವರಾಜಕುಮಾರ್‌ ಮತ್ತು ಸುಧಾರಾಣಿ ಅವರಿಗೆ ಇದು ವರವಾಯ್ತು. ಪ್ರೇಕ್ಷಕರು ಇವರ ಉತ್ಸಾಹ – ಹುಮ್ಮಸ್ಸಿನ ನಟನೆಗೆ ಮನಸೋತರು. ಚಿತ್ರದಲ್ಲೊಂದು ಫ್ರೆಶ್‌ನೆಸ್‌ ಇತ್ತು. ಹಾಗಾಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಒಂಬತ್ತು ಸೆಂಟರ್‌ಗಳ ಹನ್ನೊಂದು ಥಿಯೇಟರ್‌ಗಳಲ್ಲಿ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತು. ಇಂಥದ್ದೊಂದು ದಾಖಲೆ ಮಾಡಿದ ಕನ್ನಡದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ಆನಂದ್‌, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಸಿನಿಮಾಗಳ ಯಶಸ್ಸಿನೊಂದಿಗೆ ಹ್ಯಾಟ್ರಿಕ್‌ ಹೀರೋ ಆದ ಶಿವರಾಜಕುಮಾರ್‌ ಭಿನ್ನ ಪಾತ್ರಗಳಲ್ಲಿ ಕನ್ನಡಿಗರನ್ನು ರಂಜಿಸುತ್ತಾ ಬಂದಿದ್ದಾರೆ. 38 ವರ್ಷಗಳ ಹಿಂದೆ ಬೆಳ್ಳಿತೆರೆಗೆ ಬಂದ ಶಿವರಾಜಕುಮಾರ್‌ ಇಂದಿಗೂ ಬೇಡಿಕೆಯ ನಾಯಕನಟ ಎನ್ನುವುದು ವಿಶೇಷ. ಯುವ ನಿರ್ದೇಶಕರು ಹಾಗೂ ತಂತ್ರಜ್ಞರು ಶಿವರಾಜಕುಮಾರ್‌ ಅವರಿಗೆಂದೇ ಚಿತ್ರಕಥೆ ಮಾಡುತ್ತಿದ್ದಾರೆ. ನಿರ್ಮಾಪಕ ಸ್ನೇಹಿ ಹೀರೋ ಎನ್ನುವ ಮೆಚ್ಚುಗೆಯ ಮಾತುಗಳೂ ಅವರ ಬಗ್ಗೆ ಕೇಳಬರುತ್ತವೆ. ‘ಆನಂದ್‌’ ಸಿನಿಮಾ ಹಾಕಿಕೊಟ್ಟ ಭದ್ರ ಅಡಿಪಾಯ ಅವರ ವೃತ್ತಿಬದುಕಿನ ಯಶಸ್ಸಿಗೆ ವರವಾಯ್ತು ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಡುವುದೂ ಇದೆ. ಈ ಹೊತ್ತಿಗೂ ಶಿವರಾಜಕುಮಾರ್‌ ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡುತ್ತಾರೆ. ಹಿರಿಯಣ್ಣನಂತೆ ಕನ್ನಡ ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.

LEAVE A REPLY

Connect with

Please enter your comment!
Please enter your name here