ಇಡೀ ಚಿತ್ರವನ್ನು ಗುಲ್ಜಾರ್ ಕವಿತೆಯಾಗಿಸಿದ್ದರೆ, ಅರ್.ಡಿ.ಬರ್ಮನ್ ಅದನ್ನೊಂದು ವಿಷಾದದ ರಾಗವಾಗಿಸುತ್ತಾರೆ, ಹಾಡಾಗಿಸುತ್ತಾರೆ. ಮತ್ತು ಈ ಹಾಡು 35 ವರ್ಷಗಳ ನಂತರವೂ ನಮ್ಮನ್ನು ಕಾಡುತ್ತಲೇ ಇದೆ. ‘ಇಜಾಸತ್’ ಹಿಂದಿ ಸಿನಿಮಾ Sun NXT ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಪ್ರೇಮ ಎಂದರೆ ಏನು? ಅರ್ಥ ಮಾಡಿಕೊಳ್ಳಬೇಕಾದ ಅನುಬಂಧವೇ? ನಿಭಾಯಿಸಬೇಕಾದ ಜವಾಬ್ದಾರಿಯೇ? ಹಂಚಿಕೊಂಡಾದರು ಉಳಿಸಿಕೊಳ್ಳಬೇಕಾದ್ದೆ? ಅಥವಾ ಬಿಟ್ಟುಕೊಟ್ಟು ಉಳಿಸಿಕೊಳ್ಳುವುದೆ? ಚೌಕಟ್ಟುಗಳನ್ನು ಒಪ್ಪಿಕೊಂಡು ಗೌರವಿಸುವುದೋ ಅಥವಾ ಚೌಕಟ್ಟುಗಳನ್ನು ಮೀರುವುದೋ? ಹಾಗೆ ಮೀರಿದ್ದೇ ಆದರೆ ಇನ್ನೊಂದು ಮನೆಯಂಗಳದಲ್ಲಿ ಉಳಿಸುವ ಹೆಜ್ಜೆ ಗುರುತಿಗೊಂದು ವಿಳಾಸ ಸಿಗಬಹುದೆ? ವಿಳಾಸದ ಮಾತಿರಲಿ ಆ ಇನ್ನೊಂದು ಅಂಗಳದಲ್ಲಿ ಆ ಹೆಜ್ಜೆ ಗುರುತು ಮೂಡಬಹುದೆ ಹಾಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. 1987ರಲ್ಲಿ ಬಿಡುಗಡೆಯಾದ ಚಿತ್ರ ಇದು. ಆ ಚಿತ್ರ ಬಂದ ಕಾಲವನ್ನು ಗಣನೆಗೆ ತೆಗೆದುಕೊಂಡರೆ ಅವುಗಳ ನಿರ್ವಹಣೆ ಸಹ ಸುಲಭವಾಗಿರಲಿಕ್ಕಿಲ್ಲ. ಇಲ್ಲಿ ಮದುವೆಯಾಚೆಗಿನ ಸಂಬಂಧ ಇದೆ. ವಿಚ್ಛೇದನ ಇದೆ. ಆದರೆ ಹೆಂಡತಿಯನ್ನು ಕೆಟ್ಟವಳನ್ನಾಗಿಸಿ ಅಥವಾ ಸ್ನೇಹಿತೆಯನ್ನು ಪಾಪದವಳನ್ನಾಗಿಸಿ, ಗಂಡನ ನಡವಳಿಕೆಯನ್ನು ಸಮರ್ಥಿಸಿಕೊಂಡಿಲ್ಲ.
ಈ ಕಥೆಯಲ್ಲಿ ಯಾವುದೇ ‘ವಿಲನ್’ ಪಾತ್ರವಿಲ್ಲ. ಪ್ರತಿ ಪಾತ್ರದ ನಡವಳಿಕೆಗಳಿಗೂ ಅದರದೇ ಆದ ಕಾರಣವಿದೆ ಮತ್ತು ಕಥೆಯಲ್ಲಿ ಪ್ರತಿ ಪಾತ್ರಕ್ಕೂ ಒಂದು ‘ಸ್ಪೇಸ್’ ಇದೆ. ಬಹುಶಃ ಅದೇ ಕಾರಣಕ್ಕಿರಬೇಕು ಗುಲ್ಜಾರ್ ಇದನ್ನೊಂದು ಕಥೆಯನ್ನಾಗಿಸಿ ಹೇಳದೆ ಕವಿತೆಯಂತೆ ಹೇಳುತ್ತಾರೆ. ಈ ಕಥೆಯ ಒಬ್ಬ ನಾಯಕಿ ಥೇಟ್ ಕವಿತೆಯಂಥವಳು, ಯಾವುದೋ ಕರವಸ್ತ್ರದ ಮೇಲೆ ಸಾಲುಗಳಾಗಿ, ಕೋಟಿನ ಜೇಬಿನಲ್ಲಿ ಓಲೆಯಾಗಿ, ಶರ್ಟ್ ಕಾಲರ್ ಮೇಲೆ ಲಿಪ್‌ಸ್ಟಿಕ್ ಗುರುತಾಗಿ, ನಿಲುವುಗನ್ನಡಿಯ ಮೇಲೆ ಕವಿತೆಯ ಸಾಲಾಗಿ ಮೈದಳೆಯುವಂಥವಳು. ಅತ್ಯಾಕರ್ಷಕ ಹೌದು, ಆದರೆ ಆ ಮಾಯೆಯನ್ನು ವಾಸ್ತವಕ್ಕಿಳಿಸಲಾಗುವುದಿಲ್ಲ, ಅವಳ ಹೆಸರು ಸಹ ‘ಮಾಯಾ’ ಎಂದಿರುತ್ತದೆ. ಇನ್ನೊಬ್ಬ ನಾಯಕಿ ತೆರೆದಿಟ್ಟ ಪತ್ರದಂತವಳು, ಕರಾರುವಾಕ್, ನೇರ ಮತ್ತು ಮುಚ್ಚುಮರೆ ಮಾಡುವ ಏನೂ ಇಲ್ಲದವಳು. ಇನ್ನು ಅವನು ಆ ಇಬ್ಬರಿಗೂ ಕಾಗದವಾದವನು. ಬದುಕಿಗೆ ರಮ್ಯತೆ ಮತ್ತು ಭದ್ರತೆ ಎರಡೂ ಬೇಕೆನ್ನುತ್ತಾ, ಎರಡಕ್ಕೂ ಹೋರಾಡುತ್ತಾ, ಯಾವುದನ್ನೂ ಬಿಡಲಾಗದೆ, ಖಾಲಿ ಹಾಳೆಯಾಗಿ ಉಳಿದವನು.
ಸುಬೋಧ್ ಘೋಷ್ ಅವರು ಬರೆದ ಬೆಂಗಾಲಿ ಕಥೆ ‘ಜಾತುಗೃಹ’ವನ್ನು ಗುಲ್ಜಾರ್ ‘ಇಜಾಸತ್’ ಎನ್ನುವ ಚಿತ್ರಕಾವ್ಯವನ್ನಾಗಿಸಿದ್ದಾರೆ. ‘ಜಾತುಗೃಹ’ ಎಂದರೆ ‘ಅರಗಿನ ಮನೆ’ ಎಂದು ಗೂಗಲ್ ಹೇಳುತ್ತದೆ. ಉರಿಯಬಹುದಾದ ಎಲ್ಲದರಿಂದ ಕಟ್ಟಲ್ಪಟ್ಟ, ಉರಿಯ ಒಂದು ಕಿಡಿಗಾಗಿ ಕಾಯುತ್ತಿರುವ ಮನೆ ಎಂದು ಯಾವುದೇ ದಾಂಪತ್ಯಕ್ಕೆ ಅಥವಾ ಸಂಬಂಧಕ್ಕೆ ಹೋಲಿಸುವುದು ಅದೆಷ್ಟು ಭಯಂಕರ ಮತ್ತು ಧ್ವನಿಪೂರ್ಣ. ಈ ಚಿತ್ರದಲ್ಲಿ ಗುಲ್ಜಾರ್ ರೈಲ್ವೇ ನಿಲ್ದಾಣವನ್ನು ಕಥೆಯ ಪಾತಳಿಯನ್ನಾಗಿ ಮಾಡಿಕೊಳ್ಳುತ್ತಾರೆ. ಐದು ವರ್ಷಗಳ ಹಿಂದೆ ಬೇರೆಯಾದ ಗಂಡ ಹೆಂಡತಿಯರಿಬ್ಬರೂ ಸಮಾನಾಂತರ ರೇಖೆಗಳಾಗಿ ಎಂದೂ ಸಂಧಿಸದ ರೈಲ್ವೇ ಹಳಿಗಳ ವೇಯ್ಟಿಂಗ್ ರೂಂನಲ್ಲಿ ಸಂಧಿಸುವುದರಿಂದ ಕಥೆ ಶುರು ಆಗುತ್ತದೆ. ವರ್ತಮಾನ ಭೂತಗಳೆರಡೂ ಪರಸ್ಪರ ಡಿಕ್ಕಿ ಹೊಡೆಯುತ್ತಾ, ಪರಸ್ಪರರನ್ನು ಸಮಾಧಾನಿಸುತ್ತಾ, ಪರಸ್ಪರರೊಡನೆ ಸಂವಾದಿಸುತ್ತಾ, ಅಲ್ಲಿಯವರೆಗೂ ದಕ್ಕದ ಒಂದು ಮುಗಿತಾಯವನ್ನು ತಲುಪುತ್ತವೆ. ಆದರೆ ಅವೆರಡೂ ಸಂಧಿಸುವುದು ಮಾತ್ರ ಯಾವುದೇ ಶಾಶ್ವತತೆಯ ಕುರುಹಿಲ್ಲದ ವೇಯ್ಟಿಂಗ್ ರೂಮಿನಲ್ಲಿ. ಎಲ್ಲೆಲ್ಲಿಂದಾದರೂ ಜನ ಅಲ್ಲಿಗೆ ಬರಬಹುದು, ಅಲ್ಲಿಂದ ಎಲ್ಲೆಲ್ಲಿಗಾದರೂ ಹೋಗಬಹುದು, ಅಲ್ಲಿ ತಂಗಿರುವಷ್ಟು ಕಾಲ ಮಾತ್ರ ಸತ್ಯ…
ಮಹೇನ್ (ನಾಸಿರುದ್ದೀನ್ ಶಾ) ಮತ್ತು ಸುಧಾ (ರೇಖಾ) ಹೀಗೆ ಮಳೆ ಜೋರಾಗಿ, ಹಲವು ರೈಲುಗಳು ಕ್ಯಾನ್ಸಲ್ ಆದ ರಾತ್ರಿಯೊಂದರಲ್ಲಿ, ರೈಲ್ವೆ ನಿಲ್ದಾಣದ ವೇಯ್ಟಿಂಗ್ ರೂಮಿನಲ್ಲಿ ಸಂಧಿಸುತ್ತಾರೆ. ಮೊದಲಿಗೆ ಆಕೆ ಅವನನ್ನು ಅವಾಯ್ಡ್ ಮಾಡಲು ಪ್ರಯತ್ನಿಸುತ್ತಾಳೆ, ಆದರೆ ಹೋಗುವುದೆಲ್ಲಿಗೆ? ಆ ಕಾಯುವ ಕೊಠಡಿಯಲ್ಲಿದ್ದ ಇನ್ನೊಂದು ಕುಟುಂಬವೂ ಹೋದ ಮೇಲೆ ಉಳಿಯುವುದು ಇವರಿಬ್ಬರೆ. ಆಗ ಅವರು ನಿನ್ನೆಗಳಿಗೆ ಮುಖಾಮುಖಿಯಾಗುತ್ತಾರೆ. ಫ್ಲಾಷ್ ಬ್ಯಾಕಿನಲ್ಲಿ ಕಥೆ ಬಿಚ್ಚಿಕೊಳ್ಳುತ್ತದೆ. ಇವರಿಬ್ಬರಿಗೂ ಮದುವೆ ನಿಶ್ಚಯವಾಗಿ 5 ವರ್ಷಗಳಾಗಿದೆ. ಆದರೆ 2 ವರ್ಷಗಳಿಂದೀಚೆಗೆ ಅವನಿಗೆ ಮಾಯಾ ಎನ್ನುವ ಜಲಪಾತದೊಂದಿಗೆ ಪ್ರೀತಿಯಾಗಿದೆ. ಮದುವೆಗೆ ಒತ್ತಾಯ ಜೋರಾದಾಗ ಅವನು ನೇರವಾಗಿ ಅವಳನ್ನೇ ಸಂಧಿಸಿ ವಿಷಯ ತಿಳಿಸುತ್ತಾನೆ. ಸರಿ ಮಾಯಾಳನ್ನು ಕರೆದುಕೊಂಡು ಹೋಗೋಣ ಎಂದುಕೊಂಡರೆ ಮಾಯಾ ಎಂದಿನಂತೆ ಹೇಳದೆ ಕೇಳದೆ ಎಲ್ಲಿಗೋ ಹೋಗಿಬಿಟ್ಟಿದ್ದಾಳೆ. ಅವಳು ಯಾವಾಗ ಬರುತ್ತಾಳೆ, ಬರುತ್ತಾಳೋ ಇಲ್ಲವೋ ಎನ್ನುವ ನೆಚ್ಚಿಗೆ ಇಲ್ಲ.
ಮತ್ತೆ ವಾಪಸ್ಸಾಗಿ ಸುಧಾಳ ಬಳಿ ಹೇಳಿಕೊಂಡು ಮದುವೆಯಾಗುವೆಯಾ ಎನ್ನುತ್ತಾನೆ. ಅವಳೂ ಹೂ ಅನ್ನುತ್ತಾಳೆ, ಮದುವೆಯಾಗಿ ಇವನ ಮನೆಗೂ ಬರುತ್ತಾಳೆ. ಆದರೆ ಮನೆಯ ಮೂಲೆಮೂಲೆಯಲ್ಲೂ ಮಾಯಾಳ ಗುರುತು ಹಾಗೆಯೇ ಉಳಿದಿದೆ. ಎಲ್ಲೋ ಇರುವ ದುಪ್ಪಟ್ಟಾ, ಅವಳ ಪ್ರೇಮಪತ್ರಗಳು, ಗಾಗಲ್ಸ್, ಜೀನ್ಸ್, ಅವನ ಪರ್ಸಿನಲ್ಲಿ ಅವಳ ಫೋಟೋ… ‘ಈ ಮನೆಯಲ್ಲಿ ಏನು ಮುಟ್ಟಿದರೂ ಹಂಚಿಕೊಂಡಂತೆ ಅನ್ನಿಸುತ್ತದೆ. ಪೂರ್ತಿಯಾಗಿ ಯಾವುದೂ ನನ್ನದು ಅನ್ನಿಸುತ್ತಿಲ್ಲ’ ಅನ್ನುತ್ತಾಳೆ. ಅವಳ ಮಾತು ಚುಚ್ಚಿದಂತಾಗಿ ಅವನು ಪರ್ಸಿನ ಪ್ಲಾಸ್ಟಿಕ್ ಕವಚದಿಂದ ಮಾಯಾಳ ಫೋಟೋ ತೆಗೆಯುತ್ತಾನೆ, ಆದರೆ ಅದನ್ನು ಎಸೆಯುವುದಿಲ್ಲ, ಪರ್ಸಿನ ಇನ್ನೊಂದು ಅರೆಯಲ್ಲಿಡುತ್ತಾನೆ. ಅದನ್ನು ನೋಡಿದ ಅವಳು ಅದನ್ನು ಮತ್ತೆ ಅದೇ ಪ್ಲ್ಯಾಸ್ಟಿಕ್ ಕವಚಕ್ಕೆ ಸೇರಿಸುತ್ತಾಳೆ. 5 ವರ್ಷಗಳ ನಂತರ, ರೈಲ್ವೇ ಸ್ಟೇಷನ್ನಿನಲ್ಲಿ ಹಾಗೆ ಭೇಟಿಯಾದಾಗ, ಅವಕಾಶ ದೊರಕಿದಾಗ ಪಟ್ಟನೆ ಪರ್ಸ್ ತೆಗೆದು ಫೋಟೋ ಇನ್ನೂ ಇದೆಯೇ ಎಂದು ನೋಡುತ್ತಾಳೆ!
ಆದರೆ ಅದಿತ್ತೇ ಇಲ್ಲವೇ ಎನ್ನುವುದನ್ನು ಗುಲ್ಜಾರ್ ನಮಗೆ ತೋರಿಸುವುದಿಲ್ಲ. ಬಹುಶಃ ಅವರು ಆಗ ಹೇಳಬೇಕಾಗಿದ್ದು ಕಳಚಿಕೊಂಡೆ ಎಂದುಕೊಂಡರೂ ಕಳಚಿಕೊಳ್ಳದ ಸಂಬಂಧಗಳ ಬಗ್ಗೆ ಅನ್ನಿಸುತ್ತದೆ. ಮನೆಯಲ್ಲಿ ಅಳಿದುಳಿದ ಮಾಯಾಳ ಸಾಮಾನುಗಳೆಲ್ಲವನ್ನೂ ಗಂಟು ಕಟ್ಟಿ ಸುಧಾ ವಾಪಸ್ ಕಳಿಸುತ್ತಾಳೆ, ಉತ್ತರವಾಗಿ ಮಾಯಾಳ ಒಂದು ಕವಿತೆ ಬರುತ್ತದೆ. ಅದೇ ಇಂದಿಗೂ ನಮ್ಮನ್ನು ಕಾಡುವ, ‘ಮೇರಾ ಕುಚ್ ಸಾಮಾನ್, ತುಮ್ಹಾರೆ ಪಾಸ್ ಪಡಾ ಹೈ..’ – ಒಂದೇ ಛತ್ರಿಯಡಿಯಲ್ಲಿ ಅಂದು ಅರ್ಧ ಒದ್ದೆಯಾಗಿ, ಅರ್ಧ ನೆನೆಯದೆ ಹೋಗಿದ್ದೆವಲ್ಲಾ, ಆ ಒಣಒಣ ಭಾಗ ನನ್ನಲ್ಲಿದೆ. ಆ ಒದ್ದೆ ಭಾಗ ಅಲ್ಲೇ ಹಾಸಿಗೆಯ ಪಕ್ಕ ಎಲ್ಲೋ ಬಿದ್ದಿರಬೇಕು, ಅದನ್ನು ಕಳಿಸುವೆಯಾ? ಚಂದಿರನೊಡನೆ ಕಳೆದ ಆ ಒಂದು ನೂರ ಹದಿನಾರು ರಾತ್ರಿಗಳು, ನಿನ್ನ ಭುಜದ ಮೇಲಿನ ಆ ಒಂದು ಮಚ್ಚೆ, ಹಾಕಿದ ಭಾಷೆ, ಮಾಡಿಕೊಂಡ ಪ್ರಮಾಣ…. ಎಂದೆಲ್ಲಾ ಆಕೆ ಪಟ್ಟಿ ಮಾಡಿ, ಅವನ್ನೂ ಕಳಿಸಿಬಿಡು, ಅವೆಲ್ಲವನ್ನೂ ಸುಟ್ಟು, ನಾನೂ ಅಲ್ಲೇ ಒರಗಿಬಿಡುತ್ತೇನೆ ಎಂದು ಬರೆದಿರುತ್ತಾಳೆ.
‘ಛೇ ಯಾಕಾದರೂ ವಾಪಸ್ ಕಳಿಸಿ ಅವಳನ್ನು ನೋಯಿಸಿದೆ, ಹೇಗೂ ಅವಳು ಇಲ್ಲಿ ನಮ್ಮ ನಡುವೆ ಇದ್ದೇ ಇದ್ದಾಳೆ, ಇದನ್ನೂ ಇಟ್ಟುಕೊಳ್ಳಬಹುದಿತ್ತು’ ಎಂದು ಹೆಂಡತಿ ನಿಟ್ಟುಸಿರಿಡುತ್ತಾಳೆ. ಆ ಪ್ರೀತಿಯ ಪ್ರವಾಹದಿಂದ ತನ್ನನ್ನು ತಾನು ಕಾಪಾಡಿಕೊಳ್ಳಲೇನೋ ಎನ್ನುವಂತೆ ಅವನು ಹೆಂಡತಿಯನ್ನು ಅವಸರವಸರವಾಗಿ ಹನಿಮೂನ್‌ಗೆ ಹೊರಡಿಸುತ್ತಾನೆ. ಪ್ಲೇನಿನವರೊಂದಿಗೆ ಮಾತಾಡಿ ಮಾಯಾ ಅವನಿಗೆ ಅಲ್ಲೇ ಹುಟ್ಟುಹಬ್ಬದ ಗಿಫ್ಟ್ ತಲುಪಿಸುತ್ತಾಳೆ. ಹೆಂಡತಿಗೆ ಅವನ ಹುಟ್ಟುಹಬ್ಬ ಎನ್ನುವುದು ಗೊತ್ತೂ ಇರುವುದಿಲ್ಲ. ಪಾಪ ಅವಳು ಹೇಗೆ ಸ್ಪರ್ಧಿಸಬೇಕು ಇಂತಹ ಪ್ರೀತಿಯ ಜೊತೆ? ಮಾಯಾ ಅವನ ಮೇಲೆ ಎಷ್ಟು ಅವಲಂಬಿತಳಾಗಿರುತ್ತಾಳೆ ಎಂದರೆ, ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡುತ್ತಾಳೆ. ಮಹೇನ್ ಅವಳ ಜವಾಬ್ದಾರಿ ತನ್ನದು ಎಂದು ಭಾವಿಸುತ್ತಾನೆ. ಅವಳು ಸಮಾಧಾನವಾಗುವವರೆಗೂ ಜೊತೆಗಿರುತ್ತೇನೆ ಎಂದುಕೊಂಡು ಅವಳ ಜೊತೆ ಕಾಲಕಳೆಯುತ್ತಾನೆ. ಆದರೆ ಹೆಂಡತಿಗೆ ಹೇಳುವುದಿಲ್ಲ.
ಅವರಿಬ್ಬರ ನಡುವಿನ ಘಳಿಗೆಗಳ ಸಾಕ್ಷಿ ಹೆಂಡತಿಗೆ ಸಿಕ್ಕುತ್ತಾ ಹೋಗುತ್ತದೆ. ಗೆಳೆಯನು ಕರವಸ್ತ್ರದ ಮೇಲೆ ಕವಿತೆ ಬರೆಯುವುದಷ್ಟೇ ಅಲ್ಲದೆ, ಕೆಳಗೆ ತನ್ನ ಹೆಸರನ್ನೂ ಬರೆಯುವ ಮಾಯಾ ನಿಜಕ್ಕೂ ಅದರ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲಾರಳೆ? ಗೊತ್ತಿಲ್ಲ. ಅವಳನ್ನು ಮನೆಗೆ ಕರೆತರುತ್ತೇನೆ ಎಂದು ಹಟ ಮಾಡುವ ಮಹೇನ್ ಹೆಂಡತಿಯ ಮನಸ್ಸು ಹೇಗಿರಬಹುದು ಎಂದು ಊಹಿಸಲಾರನೆ? ಹಾಗೆ ನೋಡಿದರೆ ಸಾಕಷ್ಟು ಪ್ರಬುದ್ಧತೆಯಿಂದಲೇ ಅವರಿಬ್ಬರ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸುಧಾಳಿಂದ ಇನ್ನೂ ಏನನ್ನು ನಿರೀಕ್ಷಿಸುತ್ತಿರುತ್ತಾನೆ ಅವನು? ‘ಕತ್ರಾ ಕತ್ರಾ ಮಿಲ್ತಾ ಹೈ, ಕತ್ರಾ ಕತ್ರಾ ಜೀನೆದೋ’ ಎಂದು ಅವರಿಬ್ಬರೂ ಬದುಕು ಶುರು ಮಾಡಿರುತ್ತಾರೆ. ಈಗ ಅವಳು ಒಂಟಿ ಸಂಜೆಗಳು ಮನೆಯಲ್ಲಿ ಕುಳಿತು, ‘ಖಾಲಿ ಹಾಥ್ ಶ್ಯಾಮ್ ಆಯೀ ಹೈ, ಖಾಲಿ ಹಾಥ್ ಜಾಯೇಗಿ’ ಎಂದು ಹಾಡುತ್ತಿದ್ದಾಳೆ. ಸುಧಾ ಮನೆಬಿಟ್ಟು ಹೊರಡುತ್ತಾಳೆ. ಅವನಿಗೆ ಹೃದಯಾಘಾತವಾಗುತ್ತದೆ. ಮಾಯ ಬಂದು ಅವನನ್ನು ನೋಡಿಕೊಳ್ಳುತ್ತಾಳೆ. ಆದರೆ ಸಮಯ ಉರುಳುತ್ತಲೇ ಇರುತ್ತದೆ. ದಿನ, ವಾರ, ತಿಂಗಳು ಕಳೆದಂತೆ ಸುಧಾಗೆ ತಾನು ಮದುವೆಯಾಗಿ ತಪ್ಪು ಮಾಡಿದೆ ಅನ್ನಿಸುತ್ತದೆ. 3-4 ತಿಂಗಳಾಗುತ್ತದೆ. ನಿನಗೆ ಬಿಡುಗಡೆ ಕೊಟ್ಟಿದ್ದೇನೆ ಎಂದು ಹೇಳಿ ಸುಧಾ ತಾನಿರುವ ವಿಳಾಸವನ್ನೂ ಕೊಡದೆ ಹೊರಟುಬಿಡುತ್ತಾಳೆ. ಅವಳನ್ನು ಮತ್ತೆ ಕರೆತರುತ್ತೇನೆ ಎಂದು ನಡುರಾತ್ರಿಯಲ್ಲಿ ಹೊರಡುವ ಮಾಯಾ ಅಪಘಾತವೊಂದರಲಿ ಸಾಯುತ್ತಾಳೆ. ಸಂಬಂಧಗಳು ಅದೆಷ್ಟು ಸಂಕೀರ್ಣ..
ಐದು ವರ್ಷಗಳ ನಂತರ ಸಿಕ್ಕಾಗ ಸಹ ಕಷ್ಟವೇ ಇಲ್ಲದಂತೆ ಅವನು ಗಂಡನ ಪಾತ್ರದೊಳಗೆ, ಅವಳು ಹೆಂಡತಿಯ ಪಾತ್ರದೊಳಗೆ ಹೋಗಿಬಿಡುತ್ತಾರೆ. ಅವಳಿದ್ದಾಳಲ್ಲ ಎಂದು ಅವನು ಬಾತ್ರೂಮಿಗೆ ಹೋಗುವಾಗ ತನ್ನ ಪರ್ಸ್, ಗಡಿಯಾರ ಎಲ್ಲವನ್ನೂ ತೆರೆದ ಸೂಟ್ಕೇಸಿನೊಳಗೆ ಎಸೆದು ಹೋಗುತ್ತಾನೆ. ಅವಳು ಅದನ್ನು ಕಾಯುತ್ತಾಳೆ. ಸ್ಟೇಷನ್ ಮಾಸ್ಟರ್ ಗುಂಡು ಹಾಕುತ್ತಿರುವುದನ್ನು ನೋಡಿ, ಛಳಿಗೆ ನನಗೊಂದಿಷ್ಟು ಎನ್ನುವಾಗ ಜೋರು ದನಿಯಲ್ಲಿ ಅವಳು ಕುಡಿಯುವ ಹಂಗಿಲ್ಲ ಎನ್ನುತ್ತಾಳೆ ಮತ್ತು ಆ ಅಧಿಕಾರದ ಚಲಾವಣೆ ಆಪ್ಯಾಯಮಾನವಾಗಿದೆ ಎನ್ನುವಂತೆ ಅವನು ಕುಡಿಯದೆ ಉಳಿಯುತ್ತಾನೆ. ಸಿಗರೇಟ್ ಬಾಯಲ್ಲಿಟ್ಟುಕೊಂಡು ಅವನು ಎಂದಿನಂತೆ ಮ್ಯಾಚ್ ಬಾಕ್ಸ್ ಗಾಗಿ ತಡಕುವಾಗ ಎಂದಿನಂತೇ ಅವಳು ಬ್ಯಾಗಿನಿಂದ ಬೆಂಕಿಪೊಟ್ಟಣ ತೆಗೆದುಕೊಡುತ್ತಾಳೆ. ‘ಆಗಂತೂ ನನಗಾಗಿ ಇಟ್ಟುಕೊಳ್ಳುತ್ತಿದ್ದೆ, ಈಗ?’ ಎಂದು ಅವನು ಕೇಳಿದರೆ ನಕ್ಕು ಮಾತು ಮರೆಸುತ್ತಾಳೆ.
ಅವಳಿಗಾಗಿ ಮಳೆಯಲ್ಲಿ ಸೈಕಲ್ ತುಳಿಯುತ್ತಾ ಹೋಗಿ ಊಟ ತರುತ್ತಾನೆ, ಅವನು ಹೇಳಿದ ಎಂದು ಯಾವತ್ತೂ ಚಹಾ ಕುಡಿಯದ ಅವಳು ಚಹಾ ಕುಡಿಯುತ್ತಾಳೆ. ಕರೆಂಟ್ ಹೋಗಿ ಕತ್ತಲಾದಾಗ, ‘ಇಲ್ಲೇ ಕೂತಿರು’ ಎಂದು ಅವನು ಹೇಳಿದರೂ ಕೇಳದೆ ಅವನ ಹಿಂದೆ ಹೋಗಿ ಮೊಣಕಾಲು ಬಡಿಸಿಕೊಂಡು ಗಾಯ ಮಾಡಿಕೊಳ್ಳುತ್ತಾಳೆ. ‘ಕೂತಿರು ಎಂದರೆ ಕೂರಲಾಗುವುದಿಲ್ಲವಾ’ ಎಂದು ರೇಗಿದ ಅವನು ಮತ್ತೆ ಸಾರಿ ಕೇಳಿ, ‘ಅಭ್ಯಾಸ ಹೋಗುವುದಿಲ್ಲ…’ ಎನ್ನುತ್ತಾನೆ. ‘ಅಭ್ಯಾಸವೂ ಹೋಗುತ್ತದೆ, ಆದರೆ ಅಧಿಕಾರ ಹೋಗುವುದಿಲ್ಲ’ ಎಂದು ಅವಳು ತಣ್ಣನೆಯ ದನಿಯಲ್ಲಿ ಹೇಳುತ್ತಾಳೆ. ಈ ಭೇಟಿಯ ಶುರುವಿನಲ್ಲಿ ಅವನು ‘ಮನೆಯೂ ಒಂದು ವೇಯ್ಟಿಂಗ್ ರೂಂ ನಂತೆಯೇ ಇತ್ತು’ ಎಂದು ಗೊಣಗಿದರೆ, ಈಗ ‘ವೇಯ್ಟಿಂಗ್ ರೂಂ ಸಹ ಮನೆ ಅನ್ನಿಸುತ್ತಿತ್ತು’ ಎನ್ನುತ್ತಾನೆ. ಆಯುಷ್ಯದ ಕಾಲಪ್ರವಾಹದಲ್ಲಿ ಅವರಿಬ್ಬರಿಗಾಗಿಯೇ ಸಿಕ್ಕ ಒಂದು ಮುಷ್ಟಿ ಸಮಯದ ‘ವೇಯ್ಟಿಂಗ್ ರೂಂ’ ಅದು. ಬಹುಶಃ ಮುರಿದ ಸಂಬಂಧಗಳೂ ಸಹ ಚೂರಾಗಿ ಧೂಳಾಗುವುದಿಲ್ಲ, ಅದು ಎಲ್ಲೋ ನಮ್ಮ ಭಾಗವಾಗಿ ಉಳಿದುಬಿಡುತ್ತದೆ. ನಮ್ಮನ್ನು ಆ ಮಟ್ಟಿಗೆ ತುಂಬಿಕೊಂಡಿರುತ್ತದೆ ಅಥವಾ ಖಾಲಿಗೊಳಿಸಿರುತ್ತದೆ. ಆ ವೇಯ್ಟಿಂಗ್ ರೂಮಿನಲ್ಲಿ ಹಳೆಯ ಕಥೆ ಅನಾವರಣಗೊಳ್ಳುತ್ತಿದ್ದಂತೆ ಇಂದಿನ ಸನ್ನಿವೇಶವೂ ಅನಾವರಣಗೊಳ್ಳುತ್ತಿರುತ್ತದೆ. ಮನಸ್ಸಿಗೆ, ದೇಹಕ್ಕೆ ಸ್ಪರ್ಷದ ನೆನಪು ಬಹುಶಃ ಮಾಸುವುದಿಲ್ಲ.
ರಾತ್ರಿಯೆಲ್ಲಾ ಮಾತಾಡಿದ ಮಹೇನ್ ಬರೀ ನಾನೇ ಮಾತಾಡಿದೆ ನಿನ್ನ ವಿಷಯ ಹೇಳು ಅನ್ನುತ್ತಾನೆ. ವೇಯ್ಟಿಂಗ್ ರೂಂ ಬಾಗಿಲಲ್ಲಿ ಆಕರ್ಷಕ ಪೆಪ್ಪರ್ ಸಾಲ್ಟ್ ತಲೆಗೂದಲಿನ, ಮುದ್ದು ಮುದ್ದು ಶಶಿಕಪೂರ್ ನಿಂತಿರುತ್ತಾನೆ. ಧಾವಿಸಿ ಬಂದವನೇ ಅವಳನ್ನು ಅಪ್ಪಿ ‘ಅಬ್ಬಾ ನನ್ನ ಜೀವವೇ ಹೋಗಿತ್ತು’ ಎಂದು ಖುಷಿಯಲ್ಲಿ ಹೇಳುವಾಗ ಅವಳು ಮರುಮದುವೆಯಾಗಿದ್ದಾಳೆ ಎನ್ನುವುದು ಮಹೇನ್‌ಗೆ ಗೊತ್ತಾಗುತ್ತದೆ. ಅವಳು ಬ್ಯಾಗಿನಿಂದ ಸಿಗರೇಟು, ಬೆಂಕಿಪೊಟ್ಟಣ ತೆಗೆದು ಅವನಿಗೆ ಕೊಡುತ್ತಾಳೆ. ‘ಅರೆ, ನಿನ್ನಂಥೆ ಅರ್ಥ ಮಾಡಿಕೊಳ್ಳುವ, ಸುಂದರ ಹೆಂಡತಿ ಸಿಕ್ಕಿರುವುದು ನನ್ನ ಪುಣ್ಯ’ ಎಂದು ಅವನು ಖುಷಿಯಲ್ಲಿ ಹೇಳುತ್ತಾನೆ. ಮಹೇನ್ ಅವಳನ್ನು ಮತ್ತೊಮ್ಮೆ ಕಳೆದುಕೊಂಡಿರುತ್ತಾನೆ. ಅದ್ಭುತ ಪೇಂಟಿಂಗ್‌ನಂತೆ ಮನಮೋಹಕ ರಾಗವೊಂದರಂತೆ ಕಾಣುವ ಈ ಚಿತ್ರದಲ್ಲಿ ನಾನು ಒಪ್ಪಿಕೊಳ್ಳಲಾಗದ ದೃಶ್ಯವೊಂದಿದ್ದರೆ ಅದು ಕಡೆಯಲ್ಲಿ ಬರುತ್ತದೆ. ಕಡೆಯಲ್ಲಿ ರೇಖಾ, ನಾಸಿರುದ್ದೀನ್ ಶಾ ಕಾಲಿಗೆ ನಮಸ್ಕರಿಸಿ ‘ಕ್ಷಮಿಸಿ, ಕಳೆದ ಬಾರಿ ನಿಮ್ಮನ್ನು ಕೇಳದೆ ಹೊರಟುಬಿಟ್ಟಿದ್ದೆ, ಈಗ ದಯವಿಟ್ಟು ಇಜಾಸತ್ – ಅನುಮತಿ – ಕೊಡಿ’ ಎಂದು ಕೇಳುತ್ತಾಳೆ. ಅವನು ಇನ್ನೊಂದು ಸಂಬಂಧದಲ್ಲಿದ್ದರೆ, ಇವಳು ಯಾಕೆ ಕ್ಷಮೆ ಕೇಳಬೇಕು?! ಬೇರೆ ಯಾವುದೇ ನಿರ್ದೇಶಕರು ಈ ದೃಶ್ಯ ಸೇರಿಸಿದ್ದರೆ ಸುಮ್ಮನಾಗಿಬಿಡಬಹುದಿತ್ತು, ಆದರೆ ಗುಲ್ಜಾರ್?! ಗುಲ್ಜಾರ್ ಸಾಬ್, ಆಪ್ ಸೆ ತೊ ಏ ಉಮ್ಮೀದ್ ನಹಿ ಥೀ!
ಇಡೀ ಚಿತ್ರವನ್ನು ಗುಲ್ಜಾರ್ ಕವಿತೆಯಾಗಿಸಿದ್ದರೆ, ಅರ್.ಡಿ.ಬರ್ಮನ್ ಅದನ್ನೊಂದು ವಿಷಾದದ ರಾಗವಾಗಿಸುತ್ತಾರೆ, ಹಾಡಾಗಿಸುತ್ತಾರೆ. ಮತ್ತು ಈ ಹಾಡು 35 ವರ್ಷಗಳ ನಂತರವೂ ನಮ್ಮನ್ನು ಕಾಡುತ್ತಲೇ ಇದೆ. ಇನ್ನೊಮ್ಮೆ ಕೇಳಿ, ನಿಮಗೆ ಅದರ ಗುಂಗು ಹಿಡಿಯದಿದ್ದರೆ ನೋಡಿ!