ಎಸ್‌.ಎನ್‌.ಸೇತೂರಾಂ ನಿರ್ದೇಶನದ ‘ಯುಗಾಂತರ’ ಸೇರಿದಂತೆ ‘ರಜಿಯಾ ರಾಮ್‌’ ಮತ್ತು ‘ಮರೆತು ಹೋದವರು’ ನೂತನ ಧಾರಾವಾಹಿಗಳು ಸಿರಿಕನ್ನಡ ವಾಹಿನಿಯಲ್ಲಿ ಟೆಲಿಕಾಸ್ಟ್‌ ಆಗಲಿವೆ. ಮೂರೂ ಭಿನ್ನ ಕಥಾವಸ್ತುವಿನ ಸೀರಿಯಲ್‌ಗಳು. ‘ಯುಗಾಂತರ’ದ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿ ದಿವ್ಯಾ ಕಾರಂತ್‌ ಅಭಿನಯಿಸುತ್ತಿದ್ದಾರೆ.

ಸಿರಿಕನ್ನಡ ಪ್ರಾದೇಶಿಕ ಮನರಂಜನಾ ಚಾನಲ್‌ಗೆ ಈಗ ಮೂರರ ಹರೆಯ. ಈ ವಾಹಿನಿಯ ‘ನಾರಿಗೊಂದು‌ ಸೀರೆ’, ‘ಲೈಫ್ ಓಕೆ’, ‘ಟೂರಿಂಗ್‌ ಟಾಕೀಸ್’ ಶೋಗಳು, ‘ಧ್ರುವ ನಕ್ಷತ್ರ’, ‘ಪ್ರೇಮ್ ಜೊತೆ ಅಂಜಲಿ’ ಧಾರಾವಾಹಿಗಳು ಜನಮೆಚ್ಚುಗೆ ಗಳಿಸಿವೆ. ಇದೀಗ ವಾಹಿನಿ ಮೂರು ನೂತನ ಧಾರಾವಾಹಿಗಳನ್ನು ಆರಂಭಿಸುತ್ತಿದ್ದು, 23ರಿಂದ ಈ ಸೀರಿಯಲ್‌ಗಳು ಟೆಲಿಕಾಸ್ಟ್‌ ಆಗಲಿವೆ.

‘ಮಾಯಾಮೃಗ’ದಲ್ಲಿ ನಾರಾಯಣ ಮೂರ್ತಿ ಪಾತ್ರದ ಮೂಲಕ ಚಿರಪರಿಚಿತರಾಗಿದ್ದ ಎಸ್.ಎನ್ .ಸೇತೂರಾಂ, ‘ಮಂಥನ’ ಸೇರಿದಂತೆ ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಹದುಮೂರು ವರ್ಷಗಳ ನಂತರ ಅವರು ಸಿರಿಕನ್ನಡ ವಾಹಿನಿಗಾಗಿ ‘ಯುಗಾಂತರ’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. “ನಾನು ನಿರ್ದೇಶನ ಮಾಡಿ ಹಲವು ವರ್ಷಗಳೇ ಆಗಿವೆ. ಈ ವಾಹಿನಿಯವರು ನನಗೊಂದು ಧಾರಾವಾಹಿ ನಿರ್ದೇಶಿಸುವಂತೆ ಹೇಳಿದರು. ವಾಹಿನಿಯವರು ಎಲ್ಲಾ ಜವಾಬ್ದಾರಿ ನನಗೆ ನೀಡಿದ್ದಾರೆ. ಇದರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಅರುಂಧತಿ ಎಂಬ ಜಿಲ್ಲಾಧಿಕಾರಿ ಪಾತ್ರದ ಸುತ್ತ ನಡೆಯುವ ಸಾಮಾಜಿಕ ಹಾಗೂ ಭಾವ ಸಂಘರ್ಷದ ಸುತ್ತ ನಡೆಯುವ ಕತೆಯನ್ನು ವಾಹಿನಿಗೆ ಮಾಡುತ್ತಿದ್ದೇವೆ” ಎನ್ನುತ್ತಾರೆ ಸೇತೂರಾಂ. ಧಾರಾವಾಹಿ ಇದೇ 23ರಿಂದ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ. ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿ ದಿವ್ಯಾ ಕಾರಂತ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಧರ್ಮ ಎಲ್ಲಕ್ಕೂ ಮಿಗಿಲು ಎಂಬ ಭಾವ ಭಾರತದ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಆದರೆ ಧರ್ಮಕ್ಕೂ ಮಿಗಿಲಾದ ವಿಶಿಷ್ಟ ಪ್ರೇಮಕಥೆಯ ‘ರಜಿಯಾ ರಾಮ್’ ಮೆಗಾ ಧಾರಾವಾಹಿಯಾಗಿ ಇದೇ 23ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ 20 ದಿನಗಳ ಕಾಲ ಮೈಸೂರು, ಮಂಡ್ಯ, ಮೇಲುಕೋಟೆಯಲ್ಲಿ ದಾರಾವಾಹಿಗೆ ಚಿತ್ರೀಕರಣ ನಡೆದಿದೆ. ಅಥರ್ವ ಮತ್ತು ಶಿಲ್ಪ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಧಾರಾವಾಹಿಯನ್ನು ಸುಧಾಕರ್‌ ರೆಡ್ಡಿ ನಿರ್ದೇಶಿಸುತ್ತಿದ್ದಾರೆ.

ವಾಹಿನಿಯ ಮತ್ತೊಂದು ಹೊಸ ಧಾರಾವಾಹಿ ‘ಮರೆತು ಹೋದವರು’. ನಿರ್ದೇಶಕ ಮಧುಸೂದನ್‌ ಈ ಬಗ್ಗೆ ಮಾತನಾಡಿ, “ಈಗಿನ ಯುವಕರಿಗೆ ಸಂಬಂಧಿಕರು ಯಾರು ಎಂಬುದು ಹೆಚ್ಚಾಗಿ ಗೊತ್ತಿರಲ್ಲ. ಎಷ್ಟೋ ದಿನಗಳು ಒಬ್ಬರನ್ನೊಬ್ಬರು ನೋಡಿರುವುದಿಲ್ಲ. ಸಂಬಂಧಗಳೇ ಇಲ್ಲ ಅಂದ ಮೇಲೆ ಸಂಭ್ರಮ ಎಲ್ಲಿರತ್ತೆ? ಮರೆಯಾದ ಸಂಬಂಧಗಳನ್ನು ಒಂದುಗೂಡಿಸಿ ಮದುವೆ ಮಾಡಿಕೊಳ್ಳುವ ಆಶಯ ಇಲ್ಲಿನ ಯುವ ಜೋಡಿಯದು. ಮರೆತು ಹೋದ ಸಂಬಂಧಗಳ ಹುಡುಕಾಟವಿದು” ಎನ್ನುತ್ತಾರೆ. ನಿಖಿಲ್‌ ಮತ್ತು ಸಿರಿ ನಟಿಸುತ್ತಿರುವ ಧಾರಾವಾಹಿ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.

ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್‌ ಶಿಂಧೆ ಅವರು ಮಾತನಾಡಿ, “ಸಿರಿ ಕನ್ನಡ ಟಿವಿ ‘ನಮ್ಮ ಮನುರಂಜನೆ’ ಎಂಬ ಉದ್ದೇಶ ಹೊತ್ತುಕೊಂಡು ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಇರುವ ವಾಹಿನಿ. ಉತ್ತಮ ಧಾರಾವಾಹಿ ಹಾಗೂ ಕಾರ್ಯಕ್ರಮ ನೀಡುವುದೇ ನಮ್ಮ ಧ್ಯೇಯ. ಈ ಮೂರು ಧಾರಾವಾಹಿಗಳ ಕಥೆಗಳು ವಿಭಿನ್ನವಾಗಿದೆ. ಯಾವ ಪಂಗಡಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವುದೇ ರೀತಿಯ ಬೇಸರ ತರುವ ಅಂಶಗಳು ನಮ್ಮ ಧಾರಾವಾಹಿಗಳಲಿಲ್ಲ. ಮನರಂಜನೆಗೆ ಹೆಚ್ಚು ಒತ್ತು ಕೊಡುತ್ತೇವೆ” ಎನ್ನುತ್ತಾರೆ. ರಾಘವೇಂದ್ರ ರಾಜಕುಮಾರ್‌ ಅವರ ನಿರ್ಮಾಣದ ‘ವಿಜಯ ದಶಮಿ’ ಧಾರಾವಾಹಿಯೂ ಸದ್ಯದಲ್ಲೇ ವಾಹಿನಿಯಲ್ಲಿ ಮೂಡಿಬರಲಿದೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here