ಖಂಡಿತಾ ಸಾಹಸ ಥ್ರಿಲ್ಲರ್ ಪ್ರಿಯರಿಗೆ ಇದೊಂದು ರಸದೌತಣ. ಕಥೆ ಎಷ್ಟು ಅನೂಹ್ಯ ಅಥವಾ ಅಸಂಭವ ಎನಿಸಿದರೂ ಮುಂದೊಂದು ದಿನ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಮನುಕುಲಕ್ಕೆ ಏನೇನು ಅಪಾಯ ತಂದೊಡ್ಡಲಿದೆಯೋ ಎನಿಸದಿರದು.
ಇಲ್ಲಿ ‘ಕೀಲಿಕೈ’ (ಚಾವಿ) ಎನ್ನುವುದನ್ನು ನಾನು ‘ಲಿಟರಲೀ’ ಬಳಸಿದ್ದೇನೆ. ಕೃತಕ ಬುದ್ಧಿಮತ್ತೆಯುಳ್ಳ ವೈರಸ್ ಪ್ರೋಗ್ರಾಂ ಒಂದಕ್ಕೆ ತನಗೆ ತಾನೇ ವಿವೇಕ, ಅರಿವು ಪಡೆದು ಇಡೀ ಭೂಮಿಗೆ ಕಂಟಕವಾಗುವ ಶಕ್ತಿ ಬಂದುಬಿಟ್ಟಿದೆ. ವಿಶ್ವವ್ಯಾಪಿಯಾಗಿ ಎಲ್ಲಾ ದೇಶಗಳ ನೆಟ್ವರ್ಕ್ ತೂರಿಕೊಂಡು ತನ್ನ ನಿಯಂತ್ರಣಕ್ಕೆ ಪಡೆದು ಒಂದು ಅಗೋಚರ ದೈತ್ಯನಾಗಿ ಅಪಾಯ ತಂದೊಡ್ಡಿದೆಯಂತೆ. ಇನ್ನು ಅದನ್ನು ನಿಯಂತ್ರಣ ಮಾಡಲು ‘ಡಬಲ್ ಕೀ’ ಒಂದು ಇದೆ. ಅವನ್ನು ಪಡೆದರೆ ಈ ಅಗೋಚರ ದೈತ್ಯ AE ಅನ್ನು ಹದ್ದುಬಸ್ತಿನಲ್ಲಿಡಬಹುದು. ಅದಕ್ಕೆ ವಿಶ್ವದ ಎಲ್ಲಾ ರಾಷ್ಟ್ರೀಯ ರಕ್ಷಣಾ ಏಜೆನ್ಸಿಗಳೂ ನಾ ಮುಂದು ತಾ ಮುಂದು ಎನ್ನುವಂತೆ ಸ್ಪರ್ಧೆಯಲ್ಲಿವೆ. ಆಗ ನಮ್ಮ ಟಾಮ್ ಕ್ರ್ಯೂಸ್ ನಾಯಕತ್ವದ IMF ಪಡೆ ಮಾಡು ಇಲ್ಲವೇ ಮಡಿ ಮಿಷನ್ನೊಂದಿಗೆ ಕಾಲಿಟ್ಟಿದೆ.
ಆ ಕೀಲಿ ಕೈ ಏನನ್ನು ತೆರೆಯುತ್ತದೆ ಎಂಬುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಆದರೆ ನಾಗಾಲೋಟದಲ್ಲಿ ಅಬುದಾಬಿ, ರೋಮ್, ವೆನಿಸ್ ಮತ್ತು ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಅದರ ಹುಡುಕಾಟ, ವಿರೋಧಿಗಳ ಸಂಚು, ಸಾಹಸ, ಥ್ರಿಲ್, ಚೇಸ್ ಎಲ್ಲವೂ ಸೀಟಿನ ತುದಿಯಲ್ಲಿ ಕುಳಿತು ಉಗುರು ಕಚ್ಚುವಂತೆ ನಡೆಯುತ್ತದೆ. ಟಾಮ್ ಕ್ರ್ಯೂಸ್ಗೆ ತನ್ನ ಹಿಂದಿನ ಪ್ರಾಜೆಕ್ಟ್ಗಳನ್ನು ಮೀರಿಸುವಂಥ, ಸವಾಲಾಗುವ ಮಿಷನ್. ಅವನ ಮೂವರು ಸಹಚರರಿಗೂ ದುಷ್ಟ ಚಾಣಾಕ್ಷ ಹಂತಕರು ಅಪಾಯಗಳ ಹಾಸಿಗೆ ಹಾಸಿದ್ದಾರೆ. ಬೆಟ್ಟದ ಕಣಿವೆಯ ರೈಲಿಗೆ ನಾಯಕ ಜಿಗಿಯುವ ಕ್ಲೈಮ್ಯಾಕ್ಸ್ ದೃಶ್ಯ ಮೈನವಿರೇಳಿಸುವಂತೆ ಚಿತ್ರಿತವಾಗಿ ಈ ಸಾಹಸ ಸರಣಿಗೆ ಕಿರೀಟಪ್ರಾಯವಾಗಿದೆ.
ಕಥೆಯೂ ಸಾಕಷ್ಟು ಇದೆ, ಅದರ ವಿವರಣೆಯನ್ನು ಸಂಭಾಷಣೆ ಮೂಲಕ ಸರಳವಾಗೇ ನಿರೂಪಿಸಿದ್ದಾರೆ. ಅದನ್ನು ನಾವು ಗಮನವಿಟ್ಟು ಕೇಳಿದರೆ ಎಲ್ಲ ಅರ್ಥವಾಗುವುದು. ಭಾಗ ಎರಡರಲ್ಲಿ ಇದರ ನಿಜವಾದ ಅಂತ್ಯ ಕಾಣಲಿದೆ. ಮುಂದಿನ ವರ್ಷ ಅದು ಬರುವವರೆಗೂ ನಾವು ಚಾತಕ ಪಕ್ಷಿಗಳಂತೆ ಕಾಯಬೇಕು. ಖಂಡಿತಾ ಸಾಹಸ ಥ್ರಿಲ್ಲರ್ ಪ್ರಿಯರಿಗೆ ಇದೊಂದು ರಸದೌತಣ. ಕಥೆ ಎಷ್ಟು ಅನೂಹ್ಯ ಅಥವಾ ಅಸಂಭವ ಎನಿಸಿದರೂ ಮುಂದೊಂದು ದಿನ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಮನುಕುಲಕ್ಕೆ ಏನೇನು ಅಪಾಯ ತಂದೊಡ್ಡಲಿದೆಯೋ ಎನಿಸದಿರದು. ಅಂದಹಾಗೆ, ಡೆಡ್ ರೆಕನಿಂಗ್ ಎಂದರೆ ಸಾಗರದಡಿಯಲ್ಲಿ ದಿಕ್ಕು, ದೂರ ಪತ್ತೆ ಹಚ್ಚಿ ಅನ್ವೇಷಣೆ ಮಾಡುವುದು ಎಂದು. ಈ ಕಥೆಗೆ ಅರ್ಥಪೂರ್ಣ ಸಹ.