ಆಧುನಿಕ ಕಾಲದ ಕುಟುಂಬವೊಂದರ ಬಂಧ ಮತ್ತು ಸಂಕೀರ್ಣ ಸಂಬಂಧಗಳ ಭಾವನಾತ್ಮಕ ಪಯಣ ‘ಟ್ರಯಲ್ ಪೀರಿಯಡ್’. ಜೆನಿಲಿಯಾ ದೇಶಮುಖ್ ಮತ್ತು ಮಾನವ್ ಕೌಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಿಂದಿ ಸಿನಿಮಾ ಜುಲೈ 21ರಿಂದ JioCinemaದಲ್ಲಿ ಸ್ಟ್ರೀಮ್ ಆಗಲಿದೆ.
ಜೆನೆಲಿಯಾ ದೇಶಮುಖ್ ಮತ್ತು ಮಾನವ್ ಕೌಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಟ್ರಯಲ್ ಪೀರಿಯಡ್’ ಹಿಂದಿ ಸಿನಿಮಾ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಸಿಂಗಲ್ ಮದರ್ ಆನಾಳ ಬದುಕಿನ ಕತೆ ಈ ಸಿನಿಮಾದ ತಿರುಳು. ನಟಿ ಜೆನೆಲಿಯಾ ದೇಶಮುಖ್ ಆನಾಳ ಪಾತ್ರದಲ್ಲಿ ನಟಿಸಿದ್ದಾರೆ. ಮಗ, ‘ಮೂವತ್ತು ದಿನಗಳ ಟ್ರಯಲ್ ಪೀರಿಯಡ್‌ಗೆ ನನಗೊಬ್ಬ ತಂದೆ ಬೇಕು’ ಎಂಬ ವಿಕ್ಷಿಪ್ತ ಬೇಡಿಕೆಯನ್ನು ಮುಂದಿಟ್ಟಾಗ ಆನಾಳ ಬದುಕಿನಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಮಗನ ಬೇಡಿಕೆಯ ಈಡೇರಿಕೆಯ ದಾರಿಯಲ್ಲಿ ಅವರ ಬದುಕಿನಲ್ಲಿ ಪಿಡಿ ಅಲಿಯಾಸ್ ಪ್ರಜಾಪತಿ ದ್ವಿವೇದಿಯ ಆಗಮನವಾಗುತ್ತದೆ. ಇಂಥದ್ದೊಂದು ಅನ್‌ಕನ್ವೆನ್‌ಷನಲ್ ಕುಟುಂಬದಲ್ಲಿ ಎದುರಾಗುವ ಸವಾಲುಗಳು, ವೈಯಕ್ತಿಕ ಸಂಘರ್ಷಗಳ ಕಿಡಿ, ಅನಿರಿಕ್ಷಿತವಾಗಿ ಹುಟ್ಟಿಕೊಳ್ಳುವ ಸಂಬಂಧಗಳ ನವಿರುತನ, ಪ್ರೇಮ ಮತ್ತು ಸ್ನೇಹದ ತಾಜಾತನ ಚಿತ್ರದ ವಸ್ತು.
ಜ್ಯೋತಿ ದೇಶಪಾಂಡೆ ನಿರ್ಮಿಸಿರುವ ಈ ಸಿನಿಮಾವನ್ನು ಜಿಯೊ ಸ್ಟೂಡಿಯೊಸ್ ಪ್ರಸ್ತುತಪಡಿಸುತ್ತಿದೆ. ಕ್ರೋಮ್ ಪಿಕ್ಚರ್ಸ್ ನಿರ್ಮಾಣದಲ್ಲಿ ಕೈಜೋಡಿಸಿದೆ. ಸಿನಿಮಾ ಬಗ್ಗೆ ಮಾತನಾಡುವ, ಜೆನಿಲಿಯಾ, ‘ಸಿನಿಮಾಗಳ ಸಂಖ್ಯೆಗಿಂತ ಗುಣಮಟ್ಟವನ್ನೇ ನೆಚ್ಚಿಕೊಂಡು ಸಿನಿಮಾವನ್ನು ಆಯ್ದುಕೊಳ್ಳಬೇಕಾದ ಹಂತಕ್ಕೆ ನನ್ನ ವೃತ್ತಿಜೀವನ ಬಂದು ನಿಂತಿದೆ. ಡೈರೆಕ್ಟರ್ ಅಲೆಯಾ ಸೆನ್ ಮತ್ತು ಕ್ರೋಮ್, ಚಿತ್ರದಲ್ಲಿ ನಟಿಸುವ ಆಫರ್ ತೆಗೆದುಕೊಂಡು ಬಂದಾಗ ಕತೆ ಕೇಳಿದೆ. ಇದೊಂದು ತಾಯಿಯ ಕಥೆ. ಜೊತೆಗೆ, ಹೆಣ್ಣೊಬ್ಬಳು ತಾಯ್ತನದ ದಾರಿಯಲ್ಲಿ ಹಾದುಹೋಗಬೇಕಾಗುವ ಸಂಬಂಧಗಳ ಕಥೆಯೂ ಹೌದು. ನಾನೂ ಇಂಥದ್ದೇ ಒಂದು ಭಿನ್ನಪಾತ್ರದ ನಿರೀಕ್ಷೆಯಲ್ಲಿದ್ದೆ. ನಮ್ಮ ಪ್ರಾಮಾಣಿಕ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
ನಟ ಮಾನವ್ ಕೌಲ್ ಅವರಿಗೂ ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇದೆ. ‘ಟ್ರಯಲ್ ಪೀರಿಯಡ್ ಸಿನಿಮಾದಲ್ಲಿ ಹಲವು ವಿಶೇಷಗಳಿವೆ. ಹೃದಯಕರಗಿಸುವ ಈ ಸಿನಿಮಾದಲ್ಲಿ ಭಾವನಾತ್ಮಕ ಏಳುಬೀಳಿನ ಜರ್ನಿಯಿದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟೊಂದು ಅದ್ಭುತವಾದ ಪ್ರತಿಭಾವಂತ ನಟರು ಮತ್ತು ಕ್ರೋಮ್ ಪಿಕ್ಚರ್ಸ್ ತಂಡದ ಜೊತೆಗೆ ಕೆಲಸ ಮಾಡಿದ್ದು ನನಗೊಂದು ಮರೆಯಲಾರದ ಅನುಭವ. ನಾವೆಲ್ಲರೂ ಈ ಚಿತ್ರವನ್ನು ತುಂಬ ಪ್ರೀತಿಯಿಂದ ಮಾಡಿದ್ದೇವೆ ಮತ್ತು ಇಲ್ಲಿನ ಒಂದೊಂದು ಪಾತ್ರವೂ ವಿಭಿನ್ನತೆಯಿಂದ ನಿಮ್ಮ ಮನಸಲ್ಲಿ ಅಚ್ಚೊತ್ತುತ್ತದೆ. ಇದೇ ಡೈರೆಕ್ಟರ್ ಅಲೆಯಾ ಸೆನ್ ಅವರ ಶಕ್ತಿ’ ಎನ್ನುತ್ತಾರೆ.
ತಮ್ಮ ವಿಶಿಷ್ಟ ಕತೆಯ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕಿ ಅಲೆಯಾ ಸೆನ್, ‘ಈ ಸಿನಿಮಾಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಒಬ್ಬಳು ಫಿಲ್ಮ್‌ಮೇಕ ರ್‍ಆಗಿ, ಮನುಷ್ಯ ಸಂಬಂಧಗಳ ಅಸಂಪ್ರದಾಯಿಕ ಆಯಾಮಗಳನ್ನು ಶೋಧಿಸುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದೆ. ಇಂದಿನ ಜೆನ್ ಆಲ್ಫಾ ತಲೆಮಾರಿನ ಮಕ್ಕಳ ಆಲೋಚನೆಯಲ್ಲಿ ಫಿಲ್ಟರ್ ಇರುವುದಿಲ್ಲ. ಅವರು ಡಿಮ್ಯಾಂಡ್ ಮಾಡುವ ಸಂಗತಿಗಳೂ ಅನಿರೀಕ್ಷಿತವೇ ಆಗಿರುತ್ತವೆ. ಅಂಥ ಪೀಳಿಗೆಯ ಮಗುವೊಂದು ಸಿಂಗಲ್ ಪೇರೆಂಟ್ ಆಗಿರುವ ಅಮ್ಮನ ಬಳಿ ಬಾಡಿಗೆ ತಂದೆಯನ್ನು ಕೇಳಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾದ ಕಥೆ. ಈ ಸಿನಿಮಾ ಇಂದಿನ ವಿಘಟಿತ ಕುಟುಂಬಗಳು ಎದುರಿಸುವ ಸಮಸ್ಯೆಗಳನ್ನು ಬಿಚ್ಚಿಡುತ್ತದೆ’ ಎಂದು ಹೇಳುತ್ತಾರೆ. ‘ಟ್ರಯಲ್ ಪೀರಿಯಡ್’ ಜುಲೈ 21ರಿಂದ JioCinemaದಲ್ಲಿ ಸ್ಟ್ರೀಮ್ ಆಗಲಿದೆ.