ಚಂದ್ರಕಾಂತ್‌ ನಿರ್ದೇಶನದ ‘ತ್ರಿಕೋನ’, ‘ಕಂಟೆಂಟ್‌ ಸಿನಿಮಾ’ ಎನ್ನುವ ವಿಶೇಷಣದೊಂದಿಗೆ ತೆರೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಅನುಭವಿ ನಿರ್ದೇಶಕ ರಾಜಶೇಖರ್‌ ಕತೆ ಬರೆದು ನಿರ್ಮಿಸಿರುವ ಸಿನಿಮಾ ಏಪ್ರಿಲ್‌ 1ರಂದು ತೆರೆಕಾಣಲಿದೆ.

ಕೊರೋನಾ ಹಾವಳಿ ಕಡಿಮೆಯಾದ ನಂತರ ತೆರೆಕಾಣುತ್ತಿರುವ ಸಾಲು ಸಿನಿಮಾಗಳ ಪಟ್ಟಿಯಲ್ಲಿ ‘ತ್ರಿಕೋನ’ವೂ ಒಂದು. “ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಿರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಎಂದು ನೋಡಲು ನೀವು ನಮ್ಮ ಸಿನಿಮಾ ನೋಡಬೇಕು” ಎಂದು ತಮ್ಮ ಸಿನಿಮಾ ಕುರಿತು ನಿರ್ದೇಶಕ ಚಂದ್ರಕಾಂತ್‌ ವಿವರಣೆ ನೀಡಿದರು. ಈ ಮೂಲಕ ಇದು ಹೊಸ ತಲೆಮಾರಿನ ಪ್ರೇಕ್ಷಕರು ಇಷ್ಟಪಡುವಂತಹ ‘ಕಂಟೆಂಟ್‌ ಸಿನಿಮಾ’ ಎನ್ನುವ ಸುಳಿವು ನೀಡಿದರು.

ಕನ್ನಡ ಚಿತ್ರರಂಗದ ಅನುಭವಿ ನಿರ್ದೇಶಕ ರಾಜಶೇಖರ್‌ ಈ ಸಿನಿಮಾ ನಿರ್ಮಿಸಿದ್ದಾರೆ. ಕತೆಯೂ ಅವರದೆ. “ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೇ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ” ಎಂದರು ರಾಜಶೇಖರ್‌.

ಅವರ ಆಪ್ತ ಸ್ನೇಹಿತರಾದ ನಟ ಸುಚೇಂದ್ರ ಪ್ರಸಾದ್‌ ಅವರು ಈ ಚಿತ್ರದ ಪ್ರಚಾರ ರಾಯಭಾರಿಯಾಗಿರುತ್ತಾರೆ. ಸುರೇಶ್‌ ಹೆಬ್ಳೀಕರ್‌, ಲಕ್ಷ್ಮೀ, ಅಚ್ಯುತ್‌ ಕುಮಾರ್‌, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here