ಸಿನಿಮಾ, ರಂಗಭೂಮಿ ಮತ್ತು ಕಿರುತೆರೆ ನಟ ಟಿ.ಎಸ್‌.ಲೋಹಿತಾಶ್ವ ಅಗಲಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಕಂಚಿನ ಕಂಠ, ವಿಶಿಷ್ಟ ಹಾವಭಾವ, ಕನ್ನಡ ಭಾಷೆಯ ಸ್ಪಷ್ಟ ಉಚ್ಛಾರಣೆಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ನಟ ಲೋಹಿತಾಶ್ವ (80 ವರ್ಷ) ಇನ್ನಿಲ್ಲ. ಪ್ರಾಧ್ಯಾಪಕರಾಗಿದ್ದ ಅವರು ಉತ್ತಮ ಬರಹಗಾರರೂ ಹೌದು. ತುಮಕೂರಿನ ತೊಂಡಗೆರೆ ಅವರ ಹುಟ್ಟೂರು (ಜನನ 1942, ಆಗಸ್ಟ್‌ 5). ತಂದೆ ಸಿದ್ಧವೀರಪ್ಪ, ತಾಯಿ ಭದ್ರಮ್ಮ. ಇಂಗ್ಲಿಷ್‌ ಸಾಹಿತ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮಾಡಿದರು. ಮುಂದೆ 34 ವರ್ಷಗಳ ಕಾಲ ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಗರದ ಕೆ.ಆರ್‌.ಪುರಂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು.

ಲೋಹಿತಾಶ್ವ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರು. 27 ಮಾವಳ್ಳಿ ಸರ್ಕಲ್, ಮುಖ್ಯಮಂತ್ರಿ, ಹುಲಿಯ ನೆರಳು, ಹುತ್ತವ ಬಡಿದರೆ, ಕತ್ತಲೆಯ ದಾರಿ ದೂರ, ಕುಬಿ ಮತ್ತು ಇಯಾಲ, ಬೆಳ್ಚಿ, ಭಾರತ ದರ್ಶನ, ದಂಗೆಯ ಮುಂಚಿನ ದಿನಗಳು, ಮೆರವಣಿಗೆ, ಮೋಟೆ ರಾಮನ ಸತ್ಯಾಗ್ರಹ, ಪಂಚಮ ಮುಂತಾದವು ಲೋಹಿತಾಶ್ವ ಅವರ ನಟನೆಯ ಜನಪ್ರಿಯ ನಾಟಕಗಳು. ದಾಖಲೆ ಪ್ರದರ್ಶನ ಕಂಡ ‘ಮುಖ್ಯಮಂತ್ರಿ’ ಮತ್ತು ‘ಕಬೀರ’ ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ ರೂಪಾಂತರಿಸಿದ ಖ್ಯಾತಿ ಲೋಹಿತಾ‍ಶ್ವ ಅವರಿಗೆ ಸಲ್ಲುತ್ತದೆ.

ಬೆಂಗಳೂರು ಸಮುದಾಯ ತಂಡದ ತಾಯಿ ನಾಟಕದಿಂದ ಲೋಹಿತಾಶ್ವ ಪ್ರಭಾವಿತರಾಗಿದ್ದರು. ಈ ನಾಟಕದ ನಂತರ ತುಮಕೂರಿನಲ್ಲಿ ಸಮುದಾಯ ಘಟಕ ಪ್ರಾರಂಬಿಸಿ, ಸಿಜಿಕೆ ನಿರ್ದೇಶನದ ಪಂಚಮ ಮತ್ತು ಯಾರು ಗೆಳೆಯ ನೀನು ಯಾರು ನಾಟಕಗಳನ್ನು ಪ್ರಯೋಗಿಸಿದ್ದರು. ತುಮಕೂರಿನಲ್ಲಿ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿ, ಕತ್ತಲೆ ದಾರಿ ದೂರ ನಾಟಕ ನಿರ್ದೇಶಿಸಿ ರಾಜ್ಯದ ಹಲವೆಡೆ ಪ್ರದರ್ಶನ ನೀಡಿದ್ದರು. ಸಮುದಾಯ ರಾಜ್ಯ ಸಮಿತಿ ಸಂಯೋಜಿಸುವಲ್ಲಿ, ಸಮುದಾಯ ವಾರ್ತಾಪತ್ರ ಹೊರತರುವಲ್ಲಿ ಲೋಹಿತಾಶ್ವ ಅವರ ಕೊಡುಗೆ ಸಮುದಾಯಕ್ಕೆ ಅಪಾರವಾದದ್ದು. ಕನ್ನಡ ರಂಗಭೂಮಿಯ ಪ್ರಮುಖ ಕಲಾವಿದರು ಹಾಗೂ ನಿರ್ದೇಶಕರೊಂದಿಗೆ ಹತ್ತಿರದ ಒಡನಾಟ ಹೊಂದಿದ್ದರು. ಪ್ರಗತಿಪರ ಚಿಂತನೆಯ ಕ್ರಿಯಾಶೀಲ ವ್ಯಕ್ತಿ.

ರಂಗಭೂಮಿಯ ನಂಟು ಅವರನ್ನು ಸಿನಿಮಾರಂಗದತ್ತ ಕರೆತರಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಲೋಹಿತಾಶ್ವ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಭಿಮನ್ಯು, AK47, ದಾದಾ, ದೇವಾ, ಎಲ್ಲರಂಥಲ್ಲ ನನ್ನ ಗಂಡ, ಏಕಲವ್ಯ, ಹೊಸ ನೀರು, ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಒಂದು ಊರಿನ ಕಥೆ, ಪ್ರೀತಿ ವಾತ್ಸಲ್ಯ, ಸಾಂಗ್ಲಿಯಾನ, ಸಮಯದ ಗೊಂಬೆ.. ಅವರ ಕೆಲವು ಪ್ರಮುಖ ಸಿನಿಮಾಗಳು. ಕನ್ನಡ ಚಿತ್ರರಂಗ ಕಂಡ ಪ್ರಮುಖ ಪೋಷಕ ಕಲಾವಿದರಲ್ಲೊಬ್ಬರು ಲೋಹಿತಾಶ್ವ. ಕಿರುತೆರೆಯಲ್ಲೂ ಅವರ ಹೆಜ್ಜೆ ಗುರುತು ಇದೆ. ಎಂ.ಎಸ್‌.ಸತ್ಯು ನಿರ್ದೇಶನದ ಅಂತಿಮ ರಾಜಾ, ಪ್ರತಿಧ್ವನಿ, ಗಿರೀಶ್‌ ಕಾಸರವಳ್ಳಿ ಅವರ ಗೃಹಭಂಗ, ಶಂಕರನಾಗ್‌ ನಿರ್ದೇಶನದ ಜನಪ್ರಿಯ ಸರಣಿ ಮಾಲ್ಗುಡಿ ಡೇಸ್‌, ಜಿ.ವಿ.ಅಯ್ಯರ್‌ ನಿರ್ದೇಶನದ ನಾಟ್ಯರಾಣಿ ಶಾಂತಲಾ ಅವರು ನಟಿಸಿರುವ ಕಿರುತೆರೆ ಸರಣಿಗಳು.

ಲೋಹಿತಾಶ್ವ ಉತ್ತಮ ಬರಹಗಾರರೂ ಹೌದು. ಬಣ್ಣದ ತಗಡಿನ ತುತ್ತೂರಿ, ಅಕ್ಕಡಿ ಸಾಲು (ಅಂಕಣ), ಹೊತ್ತು ಹೋಗುವ ಮುನ್ನ (ಕಾವ್ಯ), ಮಾಡುಸಿಕ್ಕದಲ್ಲ, ಎ ಮಿಲಿಯನ್ ಮಾನ್ಷನ್ಸ್, ಮುಖ್ಯಮಂತ್ರಿ, ಸಲ್ಲಾಪ, ಸಂತೆಯಲ್ಲಿ ನಿಂತ ಕಬೀರ (ಅನುವಾದ), ಸಿದ್ದಾಂಗನೆಯ ಸಿದ್ಧಪುರುಷ ಅವರ ಕೃತಿಗಳು. ಲೋಹಿತಾಶ್ವ ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಗೌರವ ಮತ್ತು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಸಂದಿವೆ. ಪತ್ನಿ, ವತ್ಸಲಾ, ಇಬ್ಬರು ಗಂಡುಮಕ್ಕಳು (ಶರತ್‌ ಮತ್ತು ರಾಹುಲ್‌), ಪುತ್ರಿ ವಿನಯಕುಮಾರಿ ಅವರನ್ನು ಲೋಹಿತಾಶ್ವ ಅಗಲಿದ್ದಾರೆ. ಅವರ ಪುತ್ರ ಶರತ್‌ ಲೋಹಿತಾಶ್ವ ಕನ್ನಡ ಚಿತ್ರರಂಗದ ಜನಪ್ರಿಯ ನಟ.

Previous articleಟ್ರೈಲರ್‌ | ಇಶಾನ್‌ – ಆಶಿಕಾ ಸಿನಿಮಾಗೆ ಶಿವರಾಜಕುಮಾರ್‌ ಶುಭ ಹಾರೈಕೆ
Next articleಟ್ರೈಲರ್‌ | ಮರ್ಡರ್‌ ಮಿಸ್ಟರಿ ಸಿನಿಮಾ ‘ಫ್ಲಾಟ್‌ #9’; ಡಿಸೆಂಬರ್‌ 2ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here