ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ‘ಉಡಾಳ’ ನೂತನ ಸಿನಿಮಾ ಘೋಷಣೆಯಾಗಿದೆ. ಇದು ಸಂಪೂರ್ಣ ಉತ್ತರ ಕರ್ನಾಟಕ ನೇಟಿವಿಟಿಯ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಅಮೋಲ್. ಪೃಥ್ವಿ ಶಾಮನೂರು ಮತ್ತು ಹೃತಿಕ ಶ್ರೀನಿವಾಸ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಇದೇ ತಿಂಗಳ ಕೊನೆಗೆ ವಿಜಾಪುರದಲ್ಲಿ ಶೂಟಿಂಗ್ ಶುರುವಾಗಲಿದೆ.
‘ಪದವಿಪೂರ್ವ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಪೃಥ್ವಿ ಶಾಮನೂರು ಅಭಿನಯದ ನೂತನ ಸಿನಿಮಾ ‘ಉಡಾಳ’ ಘೋಷಣೆಯಾಗಿದೆ. ನಟ ಡಾಲಿ ಧನಂಜಯ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣದ ಈ ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ಅಮೋಲ್ ಪಾಟೀಲ್ ನಿರ್ದೇಶಿಸುತ್ತಿದ್ದಾರೆ. ಪೃಥ್ವಿ ಅವರಿಗೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ. ಡಾಲಿ ಧನಂಜಯ್, ‘ಯೋಗರಾಜ್ ಭಟ್ ಅವರು ನಮ್ಮ ಸಂಸ್ಥೆಯ ಮೊದಲ ಚಿತ್ರಕ್ಕೆ ‘ಬಡವ ರಾಸ್ಕಲ್’ ಶೀರ್ಷಿಕೆ ಕೊಟ್ಟಿದ್ದರು. ಅವರಿಗೆ ಧನ್ಯವಾದ. ಈಗ ಉಡಾಳ ಸಿನಿಮಾ ನಿರ್ಮಿಸುತ್ತಿದ್ದಾರೆ. ಲವಲವಿಕೆಯ ಹುಡುಗ ಪೃಥ್ವಿ ಶಾಮನೂರು ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.
‘ನಿರ್ದೇಶಕ ಅಮೋಲ್ ಪಾಟೀಲ್ ವಿಜಾಪುರದ ಹುಡುಗ. ನನ್ನ ಜೊತೆ ಬಹಳ ಚಿತ್ರಗಳಿಗೆ ಕೆಲಸ ಮಾಡಿದ್ದಾನೆ. ಚೆನ್ನಾಗಿ ಓದಿಕೊಂಡಿದ್ದಾನೆ. ಆತನಿಗೆ ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರ ಮಾಡಬೇಕೆಂಬ ಆಸೆ ಇತ್ತು. ಈ ಚಿತ್ರವನ್ನು ನಮ್ಮೊಟ್ಟಿಗೆ ನಿರ್ಮಾಣ ಮಾಡಲು ರವಿ ಶಾಮನೂರು ಮುಂದಾಗಿದ್ದಾರೆ. ʼಉಡಾಳʼ ಶೀರ್ಷಿಕೆ ಪೃಥ್ವಿಗೆ ನಿಜಕ್ಕೂ ಸರಿ ಹೊಂದುತ್ತದೆ’ ಎನ್ನುವುದು ಯೋಗರಾಜ್ ಭಟ್ಟರ ಮಾತು. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅಮೋಲ್ ಪಾಟೀಲ್ ಅವರಿಗೆ ಇದು ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ಅಮೋಲ್ ಚಿತ್ರದ ಬಗ್ಗೆ ಮಾತನಾಡುತ್ತಾ, ‘ನನಗೆ ಈ ಅವಕಾಶ ನೀಡಿರುವ ಗುರುಗಳಾದ ಯೋಗರಾಜ್ ಭಟ್ ಅವರಿಗೆ ಹಾಗೂ ರವಿ ಶಾಮನೂರು ಅವರಿಗೆ ಧನ್ಯವಾದ. ‘ಉಡಾಳ’ ಸಂಪೂರ್ಣ ಉತ್ತರ ಕರ್ನಾಟಕದ ಶೈಲಿಯ ಚಿತ್ರ. ಈ ತಿಂಗಳ ಕೊನೆಗೆ ವಿಜಾಪುರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬಹುತೇಕ ಅಲ್ಲೇ ಚಿತ್ರೀಕರಣ ನಡೆಯಲಿದೆ. ವಿಜಾಪುರದ ಟೂರಿಸ್ಟ್ ಗೈಡ್ ‘ಪಕ್ಯ’ ಪಾತ್ರದಲ್ಲಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. ಸಿನಿಮಾಗೆ ಚೇತನ್ ಸಂಗೀತ ಸಂಯೋಜಿಸುತ್ತಿದ್ದು, ಶಿವಶಂಕರ್ ನೂರಂಬಡ ಛಾಯಾಗ್ರಾಹಣ ನಿರ್ವಹಿಸಲಿದ್ದಾರೆ.