ಉಪೇಂದ್ರ ನಾಯಕನಟನಾಗಿ ಅಭಿನಯಿಸಿದ್ದ ‘A’ ಸಂಚಲನ ಸೃಷ್ಟಿಸಿದ್ದ ಚಿತ್ರ. 1998ರಲ್ಲಿ ತೆರೆಕಂಡ ಚಿತ್ರ ಇಂದು (ಮೇ 17) ರೀ ರಿಲೀಸ್‌ ಆಗುತ್ತಿದೆ. ಚಿತ್ರದ ನಾಯಕಿ ಚಾಂದಿನಿ ಹಳೆದ ನೆನಪುಗಳಿಗೆ ಜಾರಿದ್ದಾರೆ. ‘ಕಾಲಘಟ್ಟವನ್ನೂ ಮೀರಿದ ಅಪ್ರತಿಮ ಪ್ರೇಮಕಥೆಯಿದು’ ಎನ್ನುತ್ತಾರವರು.

‘ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗು ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ ‘god is great’ ಎನ್ನುವ ಹಾಗೆ, ಈ ಎರೆಡರ ಆಶೀರ್ವಾದದಿಂದ ನಾನು ಇವತ್ತಿಗೂ ‘A’ ಚಾಂದಿನಿ ರೀತಿಯಲ್ಲೇ ಇದ್ದೇನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮಕತೆಯಿದು’ ಎನ್ನುತ್ತಾರೆ ‘A’ ಚಿತ್ರದ ನಾಯಕಿ ಚಾಂದಿನಿ. ಸಿನಿಮಾದ ನಿರೂಪಣೆ ಹೀಗೂ ಇರಬಹುದು ಎಂದು ತೋರಿಸಿಕೊಟ್ಟ ಚಿತ್ರವಿದು. ಉಪೇಂದ್ರ ನಟಿಸಿ, ನಿರ್ದೇಶಿಸಿದ ಸಿನಿಮಾ ಬಗ್ಗೆ ಮೆಚ್ಚುಗೆ, ಟೀಕೆಗಳು ಸೇರಿದಂತೆ ನಾನಾ ರೀತಿಯ ವ್ಯಾಖ್ಯಾನಗಳು ಬಂದಿದ್ದವು. ಅದೇನೇ ಇದ್ದರೂ ಈ ಸಿನಿಮಾ ಕನ್ನಡ ಚಿತ್ರರಂಗದ ಮೈಲುಗಲ್ಲು ಎಂದು ಗುರುತಿಸಿಕೊಂಡಿತು.

ಉಪೇಂದ್ರರ ಈ ಸೂಪರ್‌ಹಿಟ್‌ ಸಿನಿಮಾ ಇಂದು (ಮೇ 17) ರೀ ರಿಲೀಸ್‌ ಆಗುತ್ತಿದೆ. ‘A’ ಚಿತ್ರದ ದೊಡ್ಡ ಯಶಸ್ಸು ಚಾಂದಿನಿ ಅವರಿಗೆ ಮುಂದೆ ಹಲವು ಅವಕಾಶಗಳನ್ನು ತಂದುಕೊಟ್ಟಿತು. ಹಾಗಾಗಿ ಅವರಿಗೆ ಈ ಚಿತ್ರದ ಮೇಲೆ ಹೆಚ್ಚು ಪ್ರೀತಿ. ‘ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ‌. ಅಂದಿಗೂ, ಇಂದಿಗೂ ಅವರು ನನ್ನ ಮೆಚ್ಚಿನ ನಿರ್ದೇಶಕ. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು ‘A’ ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ರೀರಿಲೀಸ್‌ ಆಗುತ್ತಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಗಲಿ’ ಎಂದು ಆಶಿಸುತ್ತಾರೆ ನಟಿ ಚಾಂದಿನಿ.

LEAVE A REPLY

Connect with

Please enter your comment!
Please enter your name here