KRG ಸ್ಟುಡಿಯೋಸ್‌ ನಿರ್ಮಾಣ, ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣ ವಿಜಯಪುರದಲ್ಲಿ ಆರಂಭವಾಗಿದೆ. ಶಿವರಾಜಕುಮಾರ್‌ ಮತ್ತು ಧನಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರಕ್ಕೆ ಬಾಲಿವುಡ್‌ನ ಅಮಿತ್‌ ತ್ರಿವೇದಿ ಸಂಗೀತ ಸಂಯೋಜಿಸುತ್ತಿದ್ದಾರೆ ಎನ್ನುವುದು ವಿಶೇಷ.

ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು 2022ರಲ್ಲಿ. ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿತ್ತು. ಇದೀಗ ಚಿತ್ರೀಕರಣ ಶುರುವಾಗಿದೆ. ಮೊದಲ ಶೆಡ್ಯೂಲ್‌ನ ಶೂಟಿಂಗ್‌ ವಿಜಯಪುರದಲ್ಲಿ ನಡೆಯುತ್ತಿದೆ. ಚಿತ್ರೀಕರಣ ತಡವಾಗಲು ಕಾರಣವೇನು? ‘ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ,‌ ಹಾಗೂ ಚಿತ್ರವು ಉತ್ತರಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೇ,‌ ಇದೀಗ ಸರ್ವ ಸಿದ್ಧತೆಗಳೊಂದಿಗೆ ಇಂದು ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರ ತಂಡದವರು ಉತ್ಸುಕರಾಗಿದ್ದಾರೆ’ ಎನ್ನುತ್ತಾರೆ ನಿರ್ಮಾಪಕರಾದ ಕಾರ್ತೀಕ್‌ ಗೌಡ ಮತ್ತು ಯೋಗಿ ಜಿ ರಾಜ್‌.

ಚಿತ್ರದ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ‘ಚಿತ್ರವನ್ನು ಆರಂಭಿಸಲು ನಾನು ಉತ್ಸಾಹಿಯಾಗಿದ್ದೇನೆ. ಈ ಚಿತ್ರಕ್ಕೆ ನಿಖರವಾದ ಪ್ಲಾನಿಂಗ್, ತಯಾರಿ ಮತ್ತು ಸಂಶೋಧನೆ ಅಗತ್ಯವಿತ್ತು. ನಾನು ಮತ್ತು ನಿರ್ಮಾಪಕರು ನಿದ್ದೆಗೆಟ್ಟು ಇದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಶ್ರಮಿಸಿದ್ದೇವೆ. ಶಿವಣ್ಣ ಮತ್ತು ಧನಂಜಯ್ ಪಾತ್ರ ವಹಿಸಿರುವ ಬಹುದೊಡ್ಡ ತಾರಾಗಣದ ಚಿತ್ರಕಥೆಯನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ‌ ಕುರಿತು ಕುಂದುಕೊರತೆ ಬರದಂತೆ ನಾನು ಮತ್ತು ಕೆಆರ್‌ಜಿ ಕೆಲಸ ಮಾಡಲಿದ್ದೇವೆ’ ಎನ್ನುತ್ತಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್) ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here