ವಾರಿಜಶ್ರೀ ವೇಣುಗೋಪಾಲ್ ಹಾಡಿರುವ ‘ಹರಿವ ಝರಿ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಸಾಹಿತ್ಯವೂ ಅವರದೆ. ಸೂರ್ಯ ಪ್ರವೀಣ್ ಅವರ ನಿರ್ದೇಶನವಿದೆ. ಮೈಕಲ್ ಲೀಗ್ ನಿರ್ಮಾಣದ ಹಾಡು GroundUP Music NYC ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ.
ಕನ್ನಡದ ಪ್ರತಿಭಾನ್ವಿತ ಗಾಯಕಿ ಮತ್ತು ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರ ಹೊಸ ವಿಡಿಯೋ GroundUP Music NYC ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ವಾರಿಜಶ್ರೀ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಮೈಕಲ್ ಲೀಗ್ ನಿರ್ಮಾಣದಲ್ಲಿ ಈ ಆಲ್ಬಂ ತಯಾರಾಗಿದೆ. ವಾರಿಜಶ್ರೀ ವೇಣುಗೋಪಾಲ್ ಮತ್ತು ಪ್ರಮಥ್ ಕಿರಣ್ ಸಹನಿರ್ಮಾಣವಿದೆ. ಸೂರ್ಯ ಪ್ರವೀಣ್ ಅವರ ರಚನೆ ಹಾಗೂ ನಿರ್ದೇಶನ ಈ ವಿಡಿಯೋ ಹಾಡಿಗಿದೆ.
ಬೆಂಗಳೂರು ಸೇರಿದಂತೆ ಸ್ಪೇನ್ ಹಾಗೂ ಪೋರ್ಚುಗಲ್‌ನಲ್ಲೂ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನಲ್ಲಿ ಗಾಯಕಿ ವಾರಿಜಶ್ರೀ ನಟಿಸಿದ್ದು, ‘ಮಾಯಾ’ ಪಾತ್ರದಲ್ಲಿ ಪ್ರೀತಿ ಭಾರದ್ವಾಜ್ ಕಾಣಿಸಿಕೊಂಡಿದ್ದಾರೆ. ದಟ್ಟ ಕಾನನದ ನಡುವೆ ಏನನ್ನೋ ಹುಡುಕುತ್ತಾ ಹೊರಟ ನಾಯಕಿಗೆ ಎದುರಾಗುವ ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಅಂಡರ್ ವಾಟರ್ ಶೂಟಿಂಗ್ ಸಹ ಮಾಡಲಾಗಿದೆ.
ವೀಡಿಯೋ ಸಾಂಗ್ ಕುರಿತು ಹೇಳಿಕೊಂಡಿರುವ ವಾರಿಜಶ್ರೀ, ‘ನೀರಿನ ಹರಿಯುವ ಗುಣ ನನ್ನಲ್ಲಿ ಕುತೂಹಲ ಹೆಚ್ಚಿಸುತ್ತದೆ. ಏಳು ಬೀಳು ಏನೇ ಇರಲಿ ತನ್ನ ಪಾಡಿಗೆ ತಾನು ಹರಿಯುತ್ತಾ ಸಾಗುತ್ತದೆ. ಬಿಸಿಲಿರಲಿ-ಬಿರುಗಾಳಿ ಬರಲಿ ಹರಿಯೋದನ್ನ ಮಾತ್ರ ನಿಲ್ಲಿಸೋದಿಲ್ಲ. ನೋಡೋಕೆ ಸೌಮ್ಯವಾಗಿ ಕಾಣುವ ಹರಿವ ನೀರು ತನ್ನೊಳಗಿನ ಶಕ್ತಿಯಿಂದ ಏನನ್ನಾದರೂ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಹಾಡಿನ ಮೂಲಕ ನೀರಿನ ಜೊತೆ ನನ್ನ ವೃತ್ತಿ ಜೀವನದ ಪಯಣವನ್ನ ಹೋಲಿಕೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಮನುಷ್ಯ ಜೀವನ ನಡೆಸುವ ರೀತಿ ಹಾಗೂ ಲಕ್ಷಣಗಳನ್ನು ನೀರಿನ ಲಕ್ಷಣಗಳ ಜೊತೆ ಹೋಲಿಕೆ ಮಾಡಿ ಈ ವಿಡಿಯೋ ಹಾಡಿನಲ್ಲಿ ಚಿತ್ರೀಕರಿಸಲಾಗಿದೆ. ಜೀವನಕ್ಕಿಂತ ಯಾವುದು ದೊಡ್ಡ ಎಂದು ಅರ್ಥ ಮಾಡಿಕೊಳ್ಳುವಲ್ಲಿ ಹಾಡಿನಲ್ಲಿರುವ ನಾಯಕಿ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ನಿರ್ದೇಶಕ ಸೂರ್ಯ ಪ್ರವೀಣ್ ಹಾಡಿನ ಥೀಮ್ ಬಗ್ಗೆ ವಿವರಿಸಿದ್ದಾರೆ.