‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರದೊಂದಿಗೆ ಗಾಯಕ, ಸಂಗೀತ ಸಂಯೋಜಕ ಚಂದನ್‌ ಶೆಟ್ಟಿ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. 80ರ ಕಾಲಘಟ್ಟದ ರೆಟ್ರೋ ಕತೆಗೆ ತಿಳಿಹಾಸ್ಯದ ನಿರೂಪಣೆಯಿರುತ್ತದೆ ಎನ್ನುತ್ತಾರೆ ನಿರ್ದೇಶಕ ಸುಜಯ್‌ ಶಾಸ್ತ್ರಿ.

ಹಾಸ್ಯ ಪಾತ್ರಗಳ ಮೂಲಕ ಹೆಸರು ಮಾಡಿರುವ ಸುಜಯ್ ಶಾಸ್ತ್ರಿ ‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರದೊಂದಿಗೆ ನಿರ್ದೇಶಕರಾಗುತ್ತಿದ್ದು, ಗಾಯಕ ಚಂದನ್‌ ಶೆಟ್ಟಿ ಹೀರೋ ಆಗುತ್ತಿದ್ದಾರೆ. ಇಬ್ಬರಿಗೂ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. “ನಾನು ಮತ್ತು ರಾಜ್ ಗುರು ಸೇರಿ ಕತೆ ಮಾಡಿಕೊಂಡೆವು. ನಿರ್ಮಾಪಕ ಗೋವಿಂದರಾಜು ಅವರ ಮುಂದೆ ಕತೆ ಹೇಳಿದ್ದೆವು. ನಮ್ಮ ಕಥೆಯನ್ನು ಮೆಚ್ಚಿದ ಅವರು ಕೋವಿಡ್‌ ಗಲಾಟೆ ಮುಗಿದ ನಂತರ ಚಿತ್ರ ಆರಂಭಿಸೋಣ ಎಂದಿದ್ದರು. ಈಗ ಚಿತ್ರ ಆರಂಭವಾಗಿದೆ. 1980 ರಿಂದ 90ರ ಕಾಲಘಟ್ಟದಲ್ಲಿ ನಡೆಯುವ ಕತೆಯಿದು” ಎಂದ ಸುಜಯ್‌ ಶಾಸ್ತ್ರಿ ಕತೆಯ ಬಗ್ಗೆ ಹೆಚ್ಚು ಹೇಳುವುದಿಲ್ಲವೆಂದರು. ಚಿತ್ರದಲ್ಲಿ ಅವರೂ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಗಾಯಕ ಚಂದನ್‌ ಶೆಟ್ಟಿ ಇತ್ತೀಚೆಗಷ್ಟೇ ಒಂದು ಮ್ಯೂಸಿಕ್‌ ಆಲ್ಬಂ ಮಾಡಿದ್ದರು. ಅವರು ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದ ಹಾಡಿಗೆ ನಟಿ ರಚಿತಾ ರಾಮ್‌ ಹೆಜ್ಜೆ ಹಾಕಿದ್ದರು. ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಕುರಿತು ಅವರು ಮಾತನಾಡಿ, “ಇಷ್ಟು ದಿನ ನನ್ನ ಹಾಡು, ಸಂಗೀತಕ್ಕೆ ಜನರ ಬೆಂಬಲ ದೊರಕಿದೆ. ಈಗ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ವಿಜಯ್ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಚಂದನ್‌ ಶೆಟ್ಟಿ ಅವಕಾಶ ನೀಡಿದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದರು. ಚಿತ್ರದಲ್ಲಿ ಚಂದನ್‌ ಶೆಟ್ಟಿಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸುತ್ತಿದ್ದಾರೆ. ತಾರಾ, ಮಂಡ್ಯ ರಮೇಶ್, ಮಂಜು ಪಾವಗಡ, ನಾಗರಾಜ್ ಮೂರ್ತಿ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. ಗೋವಿಂದರಾಜು ನಿರ್ಮಾಣದ ಚಿತ್ರಕ್ಕೆ ರಾಜ ಗುರು ಕತೆ ಮತ್ತು ಸಂಭಾಷಣೆ, ಪ್ರದೀಪ – ಪ್ರವೀಣ ಸಂಗೀತ ಸಂಯೋಜನೆ ಇರುತ್ತದೆ.

Previous articleಟ್ರೈಲರ್‌ | ಶ್ರೀನಗರ ಕಿಟ್ಟಿ ಆಕ್ಷನ್‌ – ಥ್ರಿಲ್ಲರ್‌ ‘ಗೌಳಿ’; ಸೂರ ನಿರ್ದೇಶನದ ಸಿನಿಮಾ
Next articleಟ್ರೈಲರ್‌ | ವಿಕ್ರಂ – ಧ್ರುವ್‌ ‘ಮಹಾನ್‌’; ಅಮೇಜಾನ್‌ ಪ್ರೈಮ್‌ನಲ್ಲಿ ಫೆ.10ರಿಂದ ಸಿನಿಮಾ

LEAVE A REPLY

Connect with

Please enter your comment!
Please enter your name here