ಕಿರಣ್ ಕೊರ್ರಪಾಟಿ ನಿರ್ದೇಶನದಲ್ಲಿ ವರುಣ್ ತೇಜ್ ನಟಿಸಿರುವ ‘ಗನಿ’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಬಾಕ್ಸಿಂಗ್ ಡ್ರಾಮಾ. ಸಾಯಿ ಮಂಜ್ರೇಕರ್, ಜಗಪತಿ ಬಾಬು, ಉಪೇಂದ್ರ, ಸುನೀಲ್ ಶೆಟ್ಟಿ ಅಭಿನಯದ ಸಿನಿಮಾ ಏಪ್ರಿಲ್ 18ರಂದು ತೆರೆಕಾಣಲಿದೆ.
”ಎಮೋಷನ್ ಜೊತೆ ಪ್ಯಾಷನ್ ಜೊತೆಯಾದಾಗ ಅದರ ಪ್ರಭಾವವನ್ನು ಊಹಿಸಲೂ ಸಾಧ್ಯವಿಲ್ಲ. ಪ್ರೇಕ್ಷಕರಿಗೆ ಒಂದೊಳ್ಳೆ ಎಂಟರ್‌ಟೇನರ್ ಆಗಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಪರಿಶ್ರಮ ವಹಿಸಿ ಸಿನಿಮಾ ಮಾಡಿದ್ದೇವೆ. ಇದು ಬಾಕ್ಸಿಂಗ್ ಕುರಿತ ಸಿನಿಮಾ. ಮೂರ್ನಾಲ್ಕು ವಾರ ಬಾಕ್ಸಿಂಗ್ ಟ್ರೈನಿಂಗ್ ಪಡೆದು ನಾನು ಪಾತ್ರದಲ್ಲಿ ತೊಡಗಿಸಿಕೊಳ್ಳಬಹುದಿತ್ತು. ಆದರೆ ನ್ಯಾಷನಲ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ವರ್ಷಗಳ ಕಾಲ ದೇಹ ದಂಡಿಸಿದ್ದೇನೆ” ಎನ್ನುತ್ತಾರೆ ನಟ ವರುಣ್ ತೇಜ್. ಅವರ ಬಹುನಿರೀಕ್ಷಿತ ‘ಗನಿ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಜಗಪತಿ ಬಾಬು, ಉಪೇಂದ್ರ, ಸುನೀಲ್ ಶೆಟ್ಟಿ, ನವೀನ್ ಚಂದ್ರ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟ್ರೈಲರ್ ವೀಕ್ಷಿಸಿದರೆ ಕಾಲೇಜು ಓದುವ ಯುವಕ ಬಾಕ್ಸಿಂಗ್ ಚಾಂಪಿಯನ್ ಆಗುವ ಕನಸು ಕಾಣುವಂತಿದೆ. ಅಮ್ಮನ ಪ್ರೀತಿಯ ಮಗನಿಗೆ ಅಪ್ಪನ ಬಗ್ಗೆ ಕೋಪವಿದೆ. ಸಾಕಷ್ಟು ಅಡೆತಡೆಗಳ ಮಧ್ಯೆ ಬಾಕ್ಸಿಂಗ್ ಚಾಂಪಿಯನ್ ಆಗುವ ಸಾಧಕನಂತೆ ತೋರುವ ಇದು ಒಂದೊಳ್ಳೆಯ ಕ್ರೀಡಾ ಸಿನಿಮಾ ಆಗುವ ಸೂಚನೆ ಸಿಗುತ್ತದೆ. ಬಾಕ್ಸಿಂಗ್ ಕುರಿತಂತೆ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳಲ್ಲಿ ‘ಗನಿ’ ಒಂದು. ಫರ್ಹನ್ ಅಖ್ತರ್ (ತೂಫಾನ್, ಹಿಂದಿ) ಮತ್ತು ಆರ್ಯ (ಸರ್ಪಟ್ಟ ಪರಾಂಬರೈ, ತಮಿಳು) ಬಾಕ್ಸರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕೋವಿಡ್ ಪ್ಯಾಂಡಮಿಕ್‌ನಿಂದಾಗಿ ಈ ಎರಡೂ ಸಿನಿಮಾಗಳು ನೇರವಾಗಿ ಅಮೇಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು. ‘ತೂಫಾನ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ‘ಸರ್ಪಟ್ಟ ಪರಾಂಬರೈ’ಗೆ ವಿಮರ್ಶಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ‘ಘನಿ’ ಸಿನಿಮಾ ಇವೆರೆಡೂ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.