ಗುರುರಾಜ್ ಕುಲಕರ್ಣಿ ನಿರ್ಮಿಸಿ, ನಿರ್ದೇಶನದ ‘ಅಮೃತ್ ಅಪಾರ್ಟ್‌ಮೆಂಟ್ಸ್‌’ ಸಿನಿಮಾ ಇದೇ 26ಕ್ಕೆ ತೆರೆಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ‘ನಾವು ಬಂದೇವ’ ಹಾಡು ಸಿನಿಪ್ರಿಯರಿಗೆ ಇಷ್ಟವಾಗಿದೆ. ಇದೇ ಘೋಷವಾಕ್ಯದ ಒಕ್ಕಣಿಯಿರುವ ಟೀಷರ್ಟ್‌ಗಳನ್ನು ಹಾಕಿಕೊಂಡು ಚಿತ್ರತಂಡ ತೆರೆಗೆ ಬರುವುದಾಗಿ ಹೇಳಿತು.

ತೆರೆಗೆ ಬರುತ್ತಿರುವ ಭರವಸೆಯ ಸಿನಿಮಾಗಳ ಪೈಕಿ ‘ಅಮೃತ್ ಅಪಾರ್ಟ್‌ಮೆಂಟ್ಸ್‌’ ಒಂದು. ಆರಂಭದಿಂದಲೂ ಸುದ್ದಿಯಲ್ಲಿರುವ ಸಿನಿಮಾ ಟ್ರೈಲರ್‌ ಮತ್ತು ಹಾಡುಗಳ ಮೂಲಕವೂ  ಗಮನ ಸೆಳೆದಿದೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ ಈ ವಾರ 26ಕ್ಕೆ ತೆರೆಕಾಣುತ್ತಿದೆ. ಬಿಡುಗಡೆ ‌ಕುರಿತು‌ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. “ಈ ಹಿಂದೆ ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದೇನೆ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದು ನಗರದ ಜೀವನ ಕಥೆ. ‘ಅಮೃತ್ ಅಪಾರ್ಟ್ ಮೆಂಟ್ಸ್’ ಅಂದರೆ ಹಕ್ಕಿಗೆ ತಕ್ಕಂಥ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ಮಾತುಗಳಾಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಮನಮುಟ್ಟುವಂತ ಅಭಿಪ್ರಾಯ ನೀಡಿದ್ದಾರೆ” ಎಂದರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಗುರುರಾಜ್ ಕುಲಕರ್ಣಿ.

https://youtu.be/06KoEEKqFZg

“ಇದು ನಗರದಲ್ಲಿ ವಾಸಿಸುವ ದಂಪತಿಗಳ ಕಥೆ. ನಿರ್ದೇಶಕರು ಕತೆ ಹೆಣೆದಿರುವ ರೀತಿ ಬಹಳ ಚೆನ್ನಾಗಿದೆ. ಎಲ್ಲರ ಅಭಿನಯವೂ ಸೊಗಸಾಗಿದೆ” ಎಂದರು ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ನಟ ಬಾಲಾಜಿ ಮನೋಹರ್. “ಇಎಂಐ ಮೂಲಕ ಮನೆಕೊಳ್ಳುವ ಮಧ್ಯಮವರ್ಗದ ದಂಪತಿಗಳ ಜೀವನದ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ” ಎಂದ ನಾಯಕ ತಾರಕ್ ಪೊನ್ನಪ್ಪ ಚಿತ್ರದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. “ಬಹಳ ದಿನಗಳಿಂದ ನನಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಆ ಆಸೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಪೂರ್ಣಗೊಳಿಸಿದ್ದಾರೆ” ಎಂದು ನಟಿ ಮಾನಸ ಜೋಷಿ ನಿರ್ದೇಶಕರಿಗೆ ಧನ್ಯವಾದ ಹೇಳಿದರು. ಸೀತಾಕೋಟೆ, ಮಹಂತೇಶ್, ರಾಜ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಕಲನಕಾರ ಬಿ.ಎಸ್.ಕೆಂಪರಾಜ್ ಅವರು ಇಲ್ಲಿಯವರೆಗೆ ಮುನ್ನೂರು ಸಿನಿಮಾಗಳಿಗೆ ಸಂಕಲನ ಮಾಡಿದಂತಾಗಿದೆ. ಚಿತ್ರತಂಡ ಕೆಂಪರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು.

LEAVE A REPLY

Connect with

Please enter your comment!
Please enter your name here