ನಿಗೂಢತೆ, ರಹಸ್ಯ ಮತ್ತು ಭಾವುಕತೆಯ ಮಿಶ್ರಣವಾದ ಡ್ರ್ಯಾಗನ್ ಪಾತ್ರ ಕಥೆಯ ಆಯಾಮವನ್ನು ಪರಿಣಾಮಕಾರಿಯಾಗಿ ಮಾಡಿದೆ. ಶುರುವಿನಲ್ಲಿ ನಾಯಕಿಯನ್ನು ಕಾಡುವ, ಕಂಗೆಡಿಸುವ ವಿಧ್ವಂಸಕ ಪಾತ್ರವಾಗಿ ಪರಿಚಯವಾದರೂ ಬರುಬರುತ್ತಾ ಆ ಪಾತ್ರ ತೆರೆದುಕೊಳ್ಳುವ ರೀತಿ ಮನಮುಟ್ಟುವಂತಿದೆ. ತನ್ನೊಳಗೆ ಇಷ್ಟೊಂದು ಸೇಡು ಮತ್ತು ಕೋಪವನ್ನು ಇಟ್ಟುಕೊಂಡಿರುವ ಡ್ರ್ಯಾಗನ್ ಪಾತ್ರದ ಅಂತರಂಗದಲ್ಲಿ ಇರುವ ನೋವಿನ ಕಥೆಯಾದರೂ ಏನು ಎಂಬ ಕುತೂಹಲವನ್ನು ವೀಕ್ಷಕರಲ್ಲಿ ಹುಟ್ಟಿಸುವಂತಿದೆ ಆ ಪಾತ್ರದ ನಿರೂಪಣೆ ಮತ್ತು ಬೆಳವಣಿಗೆ. ‘ಡ್ಯಾಮ್ಸೇಲ್’ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಬಾಬಿ ಬ್ರೌನ್ ಮುಖ್ಯಭೂಮಿಕೆಯ ಮೆಡಿವಲ್ ಕಾಲಘಟ್ಟದ ಫ್ಯಾಂಟಸಿ ಮಾದರಿಯ ಕಥಾನಕವೇ ‘ಡ್ಯಾಮ್ಸೇಲ್’. ಕೋಪ, ದೌರ್ಬಲ್ಯ ಮತ್ತು ಇಡೀ ಚಿತ್ರವನ್ನೇ ಬುಡಮೇಲು ಮಾಡಿಬಿಡುವಷ್ಟು ರೋಷದ ಕಥೆ ಇದು. ಕಥೆಯಲ್ಲಿ ಬರುವ ರಾಕ್ಷಸನ ಎದುರು ಹಾಕಿಕೊಳ್ಳುವ ನಮ್ಮ ಕಥಾನಾಯಕಿಯ ಪಾತ್ರಪೋಷಣೆಗೆ ಇದು ಅಗತ್ಯವೂ ಕೂಡ. ಎಲೋಡಿ ಈ ಚಿತ್ರದ ಕಥಾನಾಯಕಿ. ಚಿಕ್ಕವಯಸ್ಸಿನ ದಿಟ್ಟ ನಿಲುವುಗಳ ಯುವತಿ. ಹಸಿವಿನಿಂದ, ಬಡತನದಿಂದ ಕಂಗೆಟ್ಟ ಶೋಷಿತ ಪ್ರದೇಶಕ್ಕೆ ಸೇರಿದವಳು. ಈಕೆಯ ಕೈ ಹಿಡಿದಿರುವವನೇ ಸ್ಫುರದ್ರೂಪಿಯಾದ ರಾಜಕುಮಾರ ಹೆನ್ರಿ. ಆರಿಯಾ ರಾಜಧಾನಿಯ ವಾರಸುದಾರ. ಅದೊಂದು ಸಮುದ್ರದ ಆಚೆಯಿರುವ ಸಂಪದ್ಭರಿತ ರಾಜಧಾನಿ.

ಎಲೋಡಿಗೆ ಈ ವಿವಾಹ ಇಷ್ಟವಿಲ್ಲದಿದ್ದರೂ ತನ್ನ ತಂದೆಯ ಒತ್ತಾಯಕ್ಕೆ ತಲೆಬಾಗಿ ತನ್ನ ಪ್ರದೇಶದ ಜನರ ಒಳಿತಿಗಾಗಿ ರಾಜಕುಮಾರ ಹೆನ್ರಿಯ ಕೈ ಹಿಡಿಯಲು ಒಪ್ಪುತ್ತಾಳೆ. ತನ್ನ ಹಣೆಬರಹದಲ್ಲಿ ಇದೇ ಬರೆದಿರುವುದು ಎಂದು ತಂದೆಯ ನಿರ್ಧಾರಕ್ಕೆ ತಲೆಬಾಗುತ್ತಾಳೆ. ಈ ವಿವಾಹದ ನಂತರದ ದಿನಗಳು ಹೇಗೆ ಎಲೋಡಿಗೆ ಅಷ್ಟೇನೂ ಸಂತೋಷ ತರುವುದಿಲ್ಲವೆಂಬ ಸುಳಿವು ಸಿಕ್ಕಿದರೂ ಎಲೋಡಿ ಈ ಮದುವೆಯಿಂದ ಆಗಬಲ್ಲ ಒಳ್ಳೆಯ ಅಂಶಗಳನ್ನು ಆದಷ್ಟೂ ಬಳಸಿಕೊಳ್ಳಲು ನಿರ್ಧರಿಸುತ್ತಾಳೆ. ನಿರೀಕ್ಷೆಯಂತೆಯೇ ಮದುವೆಯಾದ ಮರುಕ್ಷಣದಲ್ಲೇ ರಾಜಕುಮಾರ ಹ್ಯಾರಿಸ್, ಎಲೋಡಿಗೆ ಕರಾಳರೂಪ ದರ್ಶನ ಮಾಡಿಸುತ್ತಾನೆ. ಆರಿಯಾ ರಾಜಧಾನಿ ಸಂಪದ್ಭರಿತವಾಗಿ ಇರಬೇಕಾದರೆ ಹೊಸದಾಗಿ ಮದುವೆಯಾದ ರಾಜಕುಮಾರಿಯನ್ನು ಒಂದು ಭೀಕರ ಡ್ರ್ಯಾಗನ್‌ಗೆ ಬಲಿ ನೀಡಬೇಕು ಎನ್ನುವ ಕರಾಳ ಸಂಪ್ರದಾಯ ಎಲೋಡಿಯನ್ನು ಬಡಿಯುತ್ತದೆ. ಹೀಗೆ ಬಲಿಯಾದ ಅವೆಷ್ಟೋ ಅಮಾಯಕ ಯುವತಿಯರಲ್ಲಿ ಎಲೋಡಿಯೂ ಒಬ್ಬಳು.

ಈ ಕಥೆಯನ್ನು ನೆಟ್‌ಫ್ಲಿಕ್ಸ್‌ ತಂಡವೇ ನಿರ್ಮಾಣ ಮಾಡಿದ್ದು ಮಾಮೂಲು ಪುರುಷಪ್ರಧಾನ ವ್ಯವಸ್ಥೆಯ ಫ್ಯಾಂಟಸಿ ಕಥೆಯೊಂದನ್ನು ಆಯ್ಕೆ ಮಾಡಿ ಅದಕ್ಕೆ ಹೊಸ ಆಯಾಮವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಇದು ದಂತಕತೆಯಲ್ಲ ಎಂಬ ಟ್ಯಾಗ್ ಲೈನ್‌ನೊಂದಿಗೆ ಚಿತ್ರ ಶುರುವಾಗುತ್ತದೆ. ಪುರುಷಪ್ರಧಾನ ವ್ಯವಸ್ಥೆಗೆ ಬಲಿಯಾಗುವ ಹೆಣ್ಣುಮಕ್ಕಳ ನಡುವೆಯೇ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲುವ ಹೆಣ್ಣುಮಕ್ಕಳ ಕಥೆಗಳು ಹೊರಬಂದು ಒಂದಷ್ಟು ಕಾಲವೇ ಆಗಿದೆಯೇನೋ. ಈ ಚಿತ್ರ ಆ ನಿಟ್ಟಿನಲ್ಲಿ ಗಮನ ಸೆಳೆಯುತ್ತದೆ.

‘ಡ್ಯಾಮ್ಸೇಲ್’ ಕಥೆ ತನ್ನ ಕಥಾಹಂದರ ಮಾತ್ರವಲ್ಲದೇ ತನ್ನ ಕಥಾನಿರೂಪಣೆಯ ಶೈಲಿಯಿಂದಲೂ ಗಮನ ಸೆಳೆಯುತ್ತದೆ. ಹಾರರ್ ಚಿತ್ರಗಳಿಂದ ಹೆಸರು ಮಾಡಿದ ನಿರ್ದೇಶಕ ಹುವಾನ್ ಕಾರ್ಲೊಸ್ ಫ್ರೆಸ್ನಡಿಲ್ಲೋಸ್ ತನ್ನ ಅದ್ಭುತವಾದ ದೃಶ್ಯವಿನ್ಯಾಸಕ್ಕೆ ಹೆಸರುವಾಸಿ. ದೃಶ್ಯಗಳಲ್ಲೇ ಪರಿಣಾಮಕಾರಿಯಾಗಿ ಕಥೆ ಕಟ್ಟುವ ಪರಿಣತಿ ಇರುವ ಈತ ಇಲ್ಲೂ ಎಲೋಡಿ ಪಾತ್ರದ ಆಳಕ್ಕೆ ಇಳಿದು ಮನಮುಟ್ಟುವಂತೆ ನಿರೂಪಿಸಿದ್ದಾನೆ. ಅದರಲ್ಲೂ ಕರಾಳವಾದ ಗುಹೆಯಲ್ಲಿ ಭೀಕರ ಅಂತ್ಯವನ್ನು ಎದುರುನೋಡುತ್ತಿರುವಾಗ ಎಲೋಡಿ ಹೇಗೆ ಸೋಲನ್ನು ಒಪ್ಪದೇ ಹೋರಾಟ ನಡೆಸುತ್ತಾ ತನ್ನ ಅಸಹಾಯಕತೆಯ ನಡುವಿನಲ್ಲೇ ಮಿಕ್ಕ ಅಮಾಯಕ ಯುವತಿಯರಿಗೆ ಏನಾಗಿರಬಹುದೆಂದು ರಹಸ್ಯ ಭೇದಿಸುವ ಪ್ರಯತ್ನವೆಲ್ಲ ಬಹಳ ಮನಮುಟ್ಟುವಂತೆ ನಿರೂಪಿತವಾಗಿವೆ.

ನಿಗೂಢತೆ, ರಹಸ್ಯ ಮತ್ತು ಭಾವುಕತೆಯ ಮಿಶ್ರಣವಾದ ಡ್ರ್ಯಾಗನ್ ಪಾತ್ರ ಕಥೆಯ ಆಯಾಮವನ್ನು ಮತ್ತೂ ಪರಿಣಾಮಕಾರಿಯಾಗಿ ಮಾಡಿದೆ. ಶುರುವಿನಲ್ಲಿ ನಾಯಕಿಯನ್ನು ಕಾಡುವ, ಕಂಗೆಡಿಸುವ ವಿಧ್ವಂಸಕ ಪಾತ್ರವಾಗಿ ಪರಿಚಯವಾದರೂ ಬರುಬರುತ್ತಾ ಆ ಪಾತ್ರ ತೆರೆದುಕೊಳ್ಳುವ ರೀತಿ ಮನಮುಟ್ಟುವಂತಿದೆ. VFX ತಂತ್ರಜ್ಞಾನ ಬಳಸಿ ಮಾಡಿರುವ ದೃಶ್ಯಗಳಂತೂ ಕಣ್ಣಿಗೆ ಕಟ್ಟುವ ಹಾಗಿವೆ. ಶುರುವಿನಲ್ಲಿ ಡ್ರ್ಯಾಗನ್ ಹೇಗಿದೆ ಎಂಬ ಸುಳಿವನ್ನೇ ಬಿಟ್ಟುಕೊಡದೆ ಚಿತ್ರಿಸಿರುವ ರೀತಿ ಪರಿಣಾಮಕಾರಿಯಾಗಿದೆ. ಡ್ರ್ಯಾಗನ್ ಪಾತ್ರಕ್ಕೆ ಧ್ವನಿ ನೀಡಿರುವ ಅಘಡ್ಯಾಶ್ಲೂ, ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ. ತನ್ನೊಳಗೆ ಇಷ್ಟೊಂದು ಸೇಡು ಮತ್ತು ಕೋಪವನ್ನು ಇಟ್ಟುಕೊಂಡಿರುವ ಡ್ರ್ಯಾಗನ್ ಪಾತ್ರದ ಅಂತರಂಗದಲ್ಲಿ ಇರುವ ನೋವಿನ ಕಥೆಯಾದರೂ ಏನು ಎಂಬ ಕುತೂಹಲವನ್ನು ವೀಕ್ಷಕರಲ್ಲಿ ಹುಟ್ಟಿಸುವಂತಿದೆ ಆ ಪಾತ್ರದ ನಿರೂಪಣೆ ಮತ್ತು ಬೆಳವಣಿಗೆ.

ಡ್ರ್ಯಾಗನ್ ಪಾತ್ರದ ಧ್ವನಿ ಕಲಾವಿದೆ ಆಘಡ್ಯಾಶ್ಲೂ ಅವರ ಧ್ವನಿಯ ಏರಿಳಿತಗಳು ನೋಡುಗರಲ್ಲಿ ಸಂಚಲನವನ್ನು ಉಂಟುಮಾಡುತ್ತವೆ. ಆ ಪಾತ್ರದ ಆಳವನ್ನು ವಿಸ್ತರಿಸುತ್ತವೆ. ವೀಕ್ಷಕರ ಅನುಕಂಪ ಎಲೋಡಿಯಿಂದ ಡ್ರ್ಯಾಗನ್ ಕಡೆಗೆ ವಾಲುವಂತೆ ಮಾಡುತ್ತವೆ. ನಿರ್ದೇಶಕರ ಈ ಕಥಾನಿರೂಪಣೆಯ ತಂತ್ರ ಅಂದುಕೊಂಡ ಹಾಗೇ ಕೆಲಸ ಮಾಡಿದೆ. ಕೇವಲ ಖಳಪಾತ್ರಕ್ಕೆ ಡ್ರ್ಯಾಗನ್ ಅನ್ನು ಸೀಮಿತ ಮಾಡದೇ ಅದರ ಅಂತರಂಗದ ಪರಿಚಯ ಮಾಡಿಕೊಡಲು ಮಾಡಿರುವ ಪ್ರಯತ್ನ ಪ್ರಶಂಸೆಗೆ ಅರ್ಹವಾಗಿದೆ. ಬ್ರೌನ್ ಎಲೋಡಿ ಪಾತ್ರಕ್ಕೆ ಎಂದಿನಂತೆ ಉತ್ತಮವಾಗೇ ಧ್ವನಿ ತುಂಬಿ ಮೂಡಿಬರುವ ಹಾಗೆ ಮಾಡಿದ್ದರೂ ಎಲೋಡಿ ಪಾತ್ರಕ್ಕೆ ಇನ್ನೊಂದು ಸ್ವಲ್ಪ ಹುಡುಗಾಟಿಕೆಯ ಲೇಪವನ್ನು ಕಟ್ಟಿಕೊಟ್ಟಿದ್ದರೆ ಇನ್ನೂ ಪರಿಣಾಮಕಾರಿಯಾಗಿ ಇರಬಹುದಾಗಿತ್ತು ಎನಿಸುವುದು ಹೌದು. ಒಟ್ಟಾರೆಯಾಗಿ ‘ಡ್ಯಾಮ್ಸೇಲ್’ ಚಿತ್ರ ಕೇವಲ ಒಂದು ಫ್ಯಾಂಟಸಿ ಕಥಾನಕವಾಗಿ ಮಾತ್ರ ನಿಲ್ಲದೆ ಅಳಿವು-ಉಳಿವಿಗಾಗಿ ನಡೆಸುವ ಹೋರಾಟದ ಭಾವುಕ ಕಥೆಯಾಗಿ ನಿರೂಪಿತವಾಗಿರುವುದು ಅಭಿನಂದನಾರ್ಹ. ‘ಡ್ಯಾಮ್ಸೇಲ್’ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here