ಇಲ್ಲಿ ನಿರ್ದೇಶಕಿ ಕಟ್ಟಿಕೊಡುವ ಮತ್ತೊಂದು ಪರಿಕಲ್ಪನೆ ಹೆಣ್ಣುಗಳ ಲೋಕದ್ದು. ಇಲ್ಲಿ ಕಥೆಯನ್ನು ಹೆಣ್ಣು ನೋಟದಲ್ಲಿ ಕಟ್ಟುತ್ತಲೇ ಹೇಗೆ ಹೆಣ್ಣುಗಳಲ್ಲಿ ಒಂದು ಅಗೋಚರ ಸೋದರಿಯತ್ವದ ನೆಲೆ ಇರುತ್ತದೆ ಎನ್ನುವುದನ್ನೂ ಕಥೆ ಹೇಳುತ್ತದೆ. ಜಸ್ಮೀತ್‌ ಕೆ. ರೀನ್‌ ನಿರ್ದೇಶನದ ‘ಡಾರ್ಲಿಂಗ್ಸ್‌’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕೌಟುಂಬಿಕ ಹಿಂಸೆಯ ಸ್ವರೂಪಗಳು ಹಲವಾರು. ಕೆಲವು ಸಲ ಅದು ದೈಹಿಕ ಹಿಂಸೆಯ ಸ್ವರೂಪವನ್ನು ಹೊಂದಿದ್ದರೆ, ಕೆಲವು ಸಲ ಮಾನಸಿಕ ಹಿಂಸೆಯಾಗಿರಬಹುದು. ಕೆಲವು ಸಲ ಮಾತುಗಳು ಸಂಬಂಧಿಸಿದ ವ್ಯಕ್ತಿಯನ್ನು ಹಿಂಸಿಸಿದರೆ, ಕೆಲವು ಸಲ ಮೌನ ಆ ಕೆಲಸವನ್ನು ಮಾಡಬಹುದು. ಕೆಲವು ಸಲ ಅದು ‘ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು’ ಎನ್ನುವಂತೆಯೂ ಇರಬಹುದು. ಸಾಧಾರಣವಾಗಿ ಇಂತಹ ವಿಷಯಗಳನ್ನು ಕೈಗೆತ್ತಿಕೊಂಡಾಗ ಅದನ್ನು ಗಂಭೀರ ದನಿಯಲ್ಲಿ ಅಥವಾ ಸೆಂಟಿಮೆಂಟಲ್ ಸ್ವರೂಪದಲ್ಲಿ ಹೇಳುವುದು ವಾಡಿಕೆ. ಏಕೆಂದರೆ ಕೌಟುಂಬಿಕ ಹಿಂಸೆಯನ್ನು ಅನುಭವಿಸಿದವರಿಗೆ, ಅನುಭವಿಸುತ್ತಿರುವವರಿಗೆ, ಅನುಭವಿಸುತ್ತಿರುವವರ ಹತ್ತಿರದವರಿಗೆ ಅದರ ಕರಾಳತೆ ಗೊತ್ತಿರುತ್ತದೆ. ಆದರೆ ಅದನ್ನು ಹಾಗೆ ಭಾವನಾತ್ಮಕತೆಯಿಂದ ಕಟ್ಟಿಕೊಡುವ ಹಲವಾರು ಚಿತ್ರಗಳು ಈಗಾಗಲೇ ಬಂದಿವೆ. ಅದೇ ಕಥೆಯನ್ನು ಮತ್ತೆ ಹೇಳಬೇಕಾದರೆ, ಹಳೆಯ ಕಥೆಯನ್ನು ಹೊಸತಾಗಿ ಹೇಳುವುದು ಯಾವುದೇ ಕಥೆಗಾರರಿಗೆ, ಸಂಭಾಷಣೆ ಬರೆಯುವವರಿಗೆ, ನಿರ್ದೇಶಕರಿಗೆ ಒಂದು ಸವಾಲೇ ಸರಿ. ಆ ಸವಾಲನ್ನು ಕೈಗೆತ್ತಿಕೊಂಡಿದ್ದು ಶಾರುಖ್ ಖಾನ್ ನ Red chilli Entertainment ಮತ್ತು ಆಲಿಯಾ ಭಟ್‌ಳ Eternal Sunshine ಸಂಸ್ಥೆ. ಚಿತ್ರದ ನಿರ್ದೇಶನ ಜಸ್ಮೀತ್ ಕೆ ರೀನ್. ಕಲಾವಿದರು : ಶೆಫಾಲಿ ಶಾ, ಆಲಿಯಾ ಭಟ್, ವಿಜಯ್ ವರ್ಮ, ರೋಶನ್ ಮ್ಯಾಥ್ಯೂ ಮುಂತಾದವರು.

ಇದು ಆಲಿಯಾಳ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಸಹ ಹೌದು. ಅನುಷ್ಕಾ, ಆಲಿಯಾ, ಮಂಜು ವಾರಿಯರ್ ಮೊದಲಾದ ನಟಿಯರು ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, ಗಂಡಾಳ್ವಿಕೆಯ ಕ್ಷೇತ್ರವನ್ನು ಪ್ರವೇಶಿಸಿದ್ದೇ ಅಲ್ಲದೆ, ಹೊಸ ನಿರ್ದೇಶಕರ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅದಕ್ಕಿಂತ ಗಮನಾರ್ಹ ವಿಷಯ ಎಂದರೆ ಇಲ್ಲಿ ಹೀರೋಗಿರಿ ಅಥವಾ ಹೀರೋಯಿನ್ ಗಿರಿಯನ್ನು ಪ್ರಧಾನವಾಗಿಟ್ಟುಕೊಳ್ಳದೆ ಭಿನ್ನವಾದ ಕಥೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬದಲಾವಣೆ.

ಜಸ್ಮೀತ್ ಮೇಲೆ ಹೇಳಿದ ಸವಾಲನ್ನು ಕೈಗೆತ್ತಿಕೊಂಡಾಗ ಆಕೆ ಕಥೆ ಹೇಳುವುದಕ್ಕಾಗಿ ಆಯ್ದುಕೊಂಡ ಪ್ರಕಾರ ‘ಡಾರ್ಕ್ ಕಾಮಿಡಿ’. ಹಾಗಾಗಿ ಹಳೆಯ ಕಥೆಯನ್ನೇ ಇಲ್ಲಿ ಹೊಸ ರೂಪದಲ್ಲಿ ಹೇಳುತ್ತಾ, ಆ ಮೂಲಕ ತನ್ನ ಹಾದಿಯನ್ನು ಕಥೆ ಸೃಷ್ಟಿಸಿಕೊಳ್ಳುತ್ತದೆ. ಕಥೆ ನಡೆಯುವುದು ಬದ್ರು, ಶಂಶು ಮತ್ತು ಹಂಜಾ ಎನ್ನುವ ಮುಸ್ಲಿಂ ಸಮುದಾಯಕ್ಕೆ ಸೇರಿದವರ ನಡುವೆ. ಆದರೆ ಇಲ್ಲಿ ಅದು ಇನ್ಸಿಡೆಂಟಲ್ ಮಾತ್ರ. ಅದು ಯಾವುದೇ ಕೆಳ ಮಧ್ಯಮ ವರ್ಗದ ಮನೆಯಲ್ಲಿ ನಡೆಯುವ ಘಟನೆಗಳಾಗಿರಬಹುದು. ಕಥೆ ನಡೆಯುವುದು ಒಂದು ಚಾಳ್‌ನಲ್ಲಿ. ಅದೇ ಚಾಳ್‌ನಲ್ಲಿ ಶಂಶು ಮತ್ತು ಬದ್ರುವಿನ ಮನೆಗಳು ಎದುರು ಬದುರಾಗಿರುತ್ತವೆ. ಹಾಗೆ ಮನೆಗಳನ್ನು ಪ್ಲೇಸ್ ಮಾಡುವ ಮೂಲಕ ನಿರ್ದೇಶಕಿ ಮಗಳ ಮನೆಯಲ್ಲಿ ನಡೆಯುವ ಕೌಟುಂಬಿಕ ಹಿಂಸೆ ಬೇರೆ ಮನೆಯಲ್ಲಿದ್ದರೂ ತಾಯಿಯನ್ನೂ ಹೇಗೆ ಬಾಧಿಸುತ್ತದೆ ಎಂದು ಹೇಳುತ್ತಾರೆ. ಮಗಳು ಯಾವ ಕ್ಷಣದಲ್ಲಾದರೂ ಹಿಂಸೆಗೆ ಈಡಾಗುತ್ತಿರಬಹುದು ಎಂದು ತಿಳಿದಿರುವ ಯಾವುದೇ ತಾಯಿ, ತಾಯಿ ಅಷ್ಟೇ ಯಾಕೆ ಆ ಹಿಂಸೆಗೊಳಗಾಗುತ್ತಿರುವವಳ ಯಾವುದೇ ಸಂಬಂಧಿ ಅನುಭವಿಸುವ ಪ್ರತಿಕ್ಷಣದ ನರಕ ಅವರಿಗಷ್ಟೇ ಗೊತ್ತಿರುತ್ತದೆ. ಅದು ತಾಕುವಷ್ಟು ಹತ್ತಿರದಲ್ಲಿ ಅವರಿರುತ್ತಾರೆ, ಆದರೆ ಅವರು ಅಲ್ಲಿಗೆ ಹೋಗಲಾರರು. ಇದರ ನಡುವೆಯೂ ಎದುರು ಬದುರು ಕಿಟಕಿಗಳ ಮೂಲಕ ನಡೆಯುವ ಸಂವಹನ ಗಮನಿಸಲೇಬೇಕು.

ಚಿತ್ರ ಶುರುವಾಗಿ ಬದ್ರು ಮತ್ತು ಹಂಜಾ ಪ್ರೇಮಿಗಳು. ತನಗೆ ಕೆಲಸ ಸಿಕ್ಕಿತು ಎನ್ನುವ ಸಿಹಿಸುದ್ದಿ ಹೇಳುತ್ತಾ ಆತ ಅವಳಿಗೊಂದು ಟೆಡ್ಡಿ ಬೇರ್ ಗಿಫ್ಟ್ ಮಾಡುತ್ತಾನೆ. ಮುಂದಿನ ದೃಶ್ಯದಲ್ಲಿ ಅವರ ಮದುವೆಯಾಗಿ 3 ವರ್ಷಗಳು ಕಳೆದಿವೆ. ಅವನು ಊಟಕ್ಕೆ ಕೂತಿದ್ದಾನೆ, ಅವಳು ಬಡಿಸುತ್ತಾ ಇದ್ದಾಳೆ. ಅದು ಯಾವುದೇ ಮನೆಯ, ಯಾವುದೇ ರಾತ್ರಿಯ ಊಟದ ಸಮಯದಂತೆ ಇದೆ. ‘ಕಟ್’ ಎಂದು ಸದ್ದಾಗುತ್ತದೆ. ಅದು ಅವನ ಹಲ್ಲಿಗೆ ಸಿಕ್ಕ ಒಂದು ಕಲ್ಲಿನ ಸದ್ದು. ಊಟ ಬಡಿಸುತ್ತಿರುವ ಹೆಂಡತಿಯ ಮೈ ಒತ್ತಡಕ್ಕೆ ಸಿಲುಕಿದಂತೆ ಬಿಗಿಯಾಗುತ್ತದೆ. ಮೌನವಾಗಿ ಅವಳು ತನ್ನ ಕೈಚಾಚುತ್ತಾಳೆ, ಅವನು ಬಾಯಲ್ಲಿದ್ದ ಊಟವನ್ನು ಅವಳ ಕೈಮೇಲೆ ಉಗುಳುತ್ತಾನೆ. ಅವಳು ಅದನ್ನು ಕಸದ ಬುಟ್ಟಿಗೆಸೆದು, ಕೈ ತೊಳೆದುಕೊಂಡು ಬಂದು ತಾನೂ ಊಟಕ್ಕೆ ಕೂರುತ್ತಾಳೆ. ಅವಳಲ್ಲಿ ಈಗ ಮೊದಲಿನ ಸರಾಗ ಚಲನೆ ಇಲ್ಲ. ‘ಕಟ್’ ಮತ್ತೊಮ್ಮೆ ಸದ್ದಾಗುತ್ತದೆ. ಅವನ ಕೈಗಳು ಅವಳ ಕುತ್ತಿಗೆಯನ್ನು ಬಿಗಿಯುತ್ತವೆ. ನಮಗೆ ಕೇಳುವುದು ಹೆಂಡತಿಯ ಚೀರಾಟ ಮಾತ್ರ. ಕೆಳಗಿನ ಮನೆಯ ಪಾರ್ಲರ್ ಹೆಣ್ಣು ಮಗಳು ನಿಟ್ಟುಸಿರಿಡುತ್ತಾಳೆ.

ಮರುದಿನ ಹೆಂಡತಿಯ ಕುತ್ತಿಗೆಯ ಮೇಲೆ ಅವನ ಬೆರಳುಗಳ ಕಲೆ. ಮರುದಿನ ಮುಂಜಾನೆ ಇನ್ನೊಂದು ಪೆಗ್ ಕುಡಿದವನು, ಅವಳನ್ನು ಅನುನಯಿಸತೊಡಗುತ್ತಾನೆ. ಸಮಸ್ಯೆ ಇರುವುದು ಇಲ್ಲಿ. ಬಹಳಷ್ಟು ಟಾಕ್ಸಿಕ್ ಸಂಬಂಧಗಳಲ್ಲಿ ಕೇವಲ ಹೊಡೆತ, ಬೈಗುಳ ಮಾತ್ರ ಇರುವುದಿಲ್ಲ. ಅಲ್ಲಿ ಮರುದಿನದ ಈ ಅನುನಯವೂ ಇರುತ್ತದೆ. ‘ದೇವರೇ ನನ್ನಲ್ಲಿನ ಕಟುಕನನ್ನು ಕರೆದುಕೊಂಡು ಬಿಡಪ್ಪಾ’ ಎನ್ನುವ ಅವನ ಆಕ್ರಂದನವೂ ಇರುತ್ತದೆ. ಹೀಗೆ ಅವನು ಕುದಿಕುದಿಯುತ್ತಿರುವ ಮಾಂಸದ ಸಾರಿನತ್ತ ಅವಳ ಮುಖವನ್ನು ಒತ್ತಿ ಹಿಡಿಯುತ್ತಾನೆ, ಹೈಹೀಲ್ಡ್ ಶೂನ ಹೀಲ್ ನಿಂದ, ಟೇಬಲಿನ ಮೇಲಿಟ್ಟ ಅವಳ ಕೈ ಜೊತೆಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಾನೆ. ಗಂಡ ಮನೆಯಲ್ಲಿರುವಾಗ ಪ್ರತಿಕ್ಷಣ ಅವಳು ಬಾಂಬುಗಳನ್ನು ಹುದುಗಿಸಿಟ್ಟ ನೆಲದ ಮೇಲೆ ನಡೆಯುವಂತೆ ನಡೆಯುತ್ತಾಳೆ. ಯಾವ ಘಳಿಗೆಯಲ್ಲಿ ತನ್ನ ಹೆಜ್ಜೆಗಳು ಯಾವ ಬಾಂಬ್ ಅನ್ನು ನಿದ್ದೆಯಿಂದ ಏಳಿಸುವುದೋ.. ಅವನು ಹಿಂಸೆ ಕೊಟ್ಟಾಗ ಅವಳು ಕಿರುಚಿಕೊಂಡರೆ, ಅವನು ನಿಜಕ್ಕೂ ನಿರಾಸೆ ತೋರಿಸುತ್ತಾನೆ! ಇದೆಲ್ಲದರ ನಂತರ ಅವಳ ಬಳಿ ತಪ್ಪದೆ ಕ್ಷಮೆ ಬೇಡುತ್ತಾನೆ. ತನ್ನ ಎಲ್ಲಾ ಕ್ರಿಯೆಗಳಿಗೂ ಕುಡಿತವನ್ನೇ ಹೊಣೆಯಾಗಿಸುತ್ತಾನೆ. ಅದಕ್ಕೊಂದು ಖಚಿತವಾದ ವಿನ್ಯಾಸ ಇರುತ್ತದೆ, ಹಿಂಸೆ ನೀಡುವ ಬಹಳಷ್ಟು ಗಂಡಸರ ಹಾಗೆ. ಬದ್ರು ಒಬ್ಬ ರೊಮಾಂಟಿಕ್, ಗಂಡನನ್ನು ತಾನು ಬದಲಾಯಿಸಬಹುದು ಎಂದು ನಂಬಿರುತ್ತಾಳೆ, ಅವನು ಕ್ಷಮೆ ಕೇಳಿದರೆ ತಾನೇ ಅವನನ್ನು ಸಮಾಧಾನ ಮಾಡುತ್ತಾಳೆ – ಬಹಳಷ್ಟು ಹೆಣ್ಣುಗಳ ಹಾಗೆಯೇ… ಹೆಂಡತಿಯ ಮುಂದೆ ಗರ್ಜಿಸುವ ಈ ಪುರುಷ ಸಿಂಹ ಕಛೇರಿಯಲ್ಲಿ ಪ್ರತಿದಿನ ಬಾಸ್ ಟಾಯ್ಲೆಟ್ ತೊಳೆಯುತ್ತಿರುತ್ತಾನೆ. ಅಂದರೆ ಇವನ ಆತ್ಮಗೌರವ, ಅಹಂ ಯಾವುದೂ ಅವನ ಸಹಜ ಸ್ವಭಾವವಲ್ಲ. ಹೆಂಡತಿ ಕೇಳುತ್ತಾಳೆ ಮತ್ತು ಕೇಳಬೇಕು ಎನ್ನುವುದು ಅವನ ಮನೋಭಾವ.

ಗಂಡ ಆಫೀಸಿಗೆ ಹೋದ ನಂತರ ಅವಳು ಅಮ್ಮನ ಮನೆಗೆ ಬರುತ್ತಾಳೆ. ಅಮ್ಮ ಅವಳ ಮೈಮೇಲಿನ ಗಾಯ ನೋಡಿ, ನೋಡಿ ದಣಿದವಳು. ಅವನನ್ನು ಬಿಡು ಅಥವಾ ಊಟದಲ್ಲಿ ವಿಷ ಹಾಕಿ ಮುಗಿಸಿಬಿಡು ಎಂದು ಹೇಳುತ್ತಾಳೆ. ಅಮ್ಮನ ಪಾತ್ರದಲ್ಲಿ ಶೆಫಾಲಿ ಶಾ ಅಭಿನಯ ಅದ್ಭುತ. ಭಾರತೀಯ ಚಿತ್ರರಂಗದಲ್ಲಿ ನಾಯಕಿಯ ಪಾತ್ರವಹಿಸುವ ಸೋ ಕಾಲ್ಡ್ ವಯಸ್ಸು ದಾಟಿದರೆ ಸಿಗುವ ಪಾತ್ರಗಳು ಒಂದೇ ರೀತಿಯವು ಎನ್ನುವ ಮಾತಿಗೆ ಅಪವಾದವಾಗುವಂತಹ ಹಲವು ಪಾತ್ರಗಳು ದಕ್ಕಿರುವ ಅದೃಷ್ಟ ಶಫಾಲಿ ಅವರದು. ಇದೂ ಸಹ ಅಂತಹುದೇ ಒಂದು ಪಾತ್ರ. ಆಕೆಯ ಕಣ್ಣುಗಳಲ್ಲಿ ಅದೆಷ್ಟು ಮಾತುಗಳು, ಭಾವಗಳು ಮಿನುಗುತ್ತಿರುತ್ತದೆ! ಈಕೆಯ ಪಾತ್ರಕ್ಕೆ ಒಂದು ಗ್ಲಾಮರ್ ಇದೆ, ಆದರೆ ಅದಕ್ಕೆ ಆಕೆ ಯಾವುದೇ ಮೇಕಪ್, ಉಡುಗೆ, ತೊಡುಗೆ ಬಳಸಲಾಗುವುದಿಲ್ಲ. ಆಕೆಯ ಪಾತ್ರ ಹಾಗಿರುತ್ತದೆ. ಆದರೆ ತನ್ನ ಒಂದು ಕಣ್ಣೋಟದಲ್ಲಿ, ಮುಖದ ಭಾವದಲ್ಲಿ ಆಕೆ ಅದನ್ನು ಕಟ್ಟಿಕೊಡುತ್ತಾರೆ.

ಇವರಿಬ್ಬರ ಬದುಕಿನಲ್ಲಿ ಒಬ್ಬ ರೈಟರ್ ಇರುತ್ತಾನೆ. ಅವನ ಬರವಣಿಗೆ ಯಾವುದೇ ಯಶಸ್ಸು ಕಾಣದೆ ಇರುವುದರಿಂದ ಅವನು ಹಳೆ ಮಿಕ್ಸರ್, ಗ್ರಿಲ್ ಓವನ್ ಇತ್ಯಾದಿಗಳನ್ನು ಮಾರುತ್ತಿರುತ್ತಾನೆ. ಬದ್ರು ಮೈಮೇಲಿನ ಗಾಯಗಳನ್ನು ಕಂಡರೆ ಅವನು ಕಂಗಾಲಾಗುತ್ತಿರುತ್ತಾನೆ. ಅಮ್ಮ, ಮಗಳು ಅದನ್ನು ಬಳಸಿಕೊಂಡು ಅವನ ಜೊತೆ ಕಡಿಮೆ ಬೆಲೆಗೆ ವ್ಯಾಪಾರ ಕುದುರಿಸಲು ಒಂದಿಷ್ಟೂ ಯೋಚಿಸುವುದಿಲ್ಲ. ಅವರ ಬದುಕು ಅವರಿಗೆ ಕಲಿಸುಕೊಟ್ಟಿರುವುದು, ಯಾರೂ ಇಲ್ಲದ ಈ ಜಗತ್ತಿನಲ್ಲಿ ಅವರ ಕ್ಷೇಮವನ್ನು ಅವರೇ ನೋಡಿಕೊಳ್ಳಬೇಕು. ಅದಕ್ಕಾಗಿ ಚಿಟಿಕೆ ಹೊಡೆದಂತೆ ಅವರು ಸುಳ್ಳು ಹೇಳುತ್ತಾರೆ, ತಾವು ಮುಳುಗುತ್ತೇವೆ ಎಂದಾಗ, ಹಿಂದೆಮುಂದೆ ನೋಡದೆ, ಇನ್ನೊಬ್ಬರನ್ನು ಮುಂದೆ ತಳ್ಳುತ್ತಾರೆ. ಬದ್ರುವಿನ ಪಾಡು ನೋಡಲಾಗದೆ ಜುಲ್ಫಿ ಪೋಲೀಸ್ ಸ್ಟೇಷನ್‌ನಲ್ಲಿ ಹೇಳಿ, ತಾಯಿ-ಮಗಳನ್ನು ಕರೆಸುತ್ತಾನೆ. ಗಂಡನಿಗೂ ಕರೆ ಹೋಗುತ್ತದೆ. ಹೆಂಡತಿ ಹೇಗೂ ಕಂಪ್ಲೆಂಟ್ ಕೊಡುವುದಿಲ್ಲ ಎನ್ನುವ ಉಡಾಫೆಯಲ್ಲಿರುವ ಅವನಿಗೆ ಹೆಂಡತಿ ಕಂಪ್ಲೆಂಟ್ ಕೊಡುತ್ತೇನೆ ಎಂದಾಗ ನಂಬಲಾಗುವುದಿಲ್ಲ. ಆದರೆ ಹೇಗೋ ತನ್ನ ನುಣುಪಾದ ಮಾತು ಬಳಸಿ ಅವಳನ್ನು ಮತ್ತೊಮ್ಮೆ ಮರಳುಮಾಡುತ್ತಾನೆ. ಅವನ ತರ್ಕ ಅದ್ಭುತ! ‘ನಿನ್ನ ಕಂಡರೆ ಪ್ರೀತಿ ಇದೆ, ಅದಕ್ಕೆ ಹೊಡೀತೀನಿ, ನಿನಗೂ ನನ್ನ ಕಂಡರೆ ಪ್ರೀತಿ ಇದೆ ಕಣೆ, ಅದಕ್ಕೇ ಭರಿಸುತ್ತೀಯ’ ಎನ್ನುತ್ತಾನೆ.

ಮಗಳು ಧೈರ್ಯ ಮಾಡೇಬಿಟ್ಟಳು ಎಂದು ಕಂಪ್ಲೆಂಟ್ ಬರೆಯುತ್ತಿರುವ ತಾಯಿ ‘ಕುಡಿದರೆ ಈ ಗಂಡಸರು ಯಾಕೆ ರಾಕ್ಷಸರಾಗುತ್ತಾರೆ?’ ಎಂದು ಗೊಣಗುತ್ತಾಳೆ. ‘ಯಾಕೆಂದರೆ ಹಾಗಾಗಲು ನೀವು ಬಿಡುತ್ತೀರಿ’ ಎಂದು ಇನ್ಸ್ಪೆಕ್ಟರ್ ಹೇಳುತ್ತಾನೆ. ಆಗ ಶಫಾಲಿ ಕೊಡುವ ಒಂದು ನೋಟ, ಹಾಗೆ ಸುಮ್ಮನಿರಲೇಬೇಕಾದ ಅನಿವಾರ್ಯತೆಗಳನ್ನು ಹೇಳದೆಯೂ ಹೇಳಿಬಿಡುತ್ತದೆ. ಆತ ಬಹಳ ಸಲ ನೋಡಿರುವ ಹಾಗೆ ಈಸಲ ಸಹ ಹೆಂಡತಿ ಕಂಪ್ಲೆಂಟ್ ಕೊಡುವುದಿಲ್ಲ ಅನ್ನುತ್ತಾಳೆ, ಆತ ಸುಮ್ಮನಾಗಬೇಕಾಗುತ್ತದೆ. ಆಗ ಅಮ್ಮ ಮಗಳಿಗೆ ಕಪ್ಪೆ ಮತ್ತು ಚೇಳಿನ ಕಥೆ ಹೇಳುತ್ತಾಳೆ. ನದಿ ದಾಟಿಸು ಎಂದು ಕಪ್ಪೆಯ ಬೆನ್ನೇರುವ ಚೇಳು ತಾನು ಕುಟುಕಿದರೆ ಕಪ್ಪೆ ಮುಳುಗುತ್ತದೆ, ತಾನೂ ಮುಳುಗುತ್ತೇನೆ ಎಂದು ಗೊತ್ತಾದರೂ ಕಾಟು ಹಾಕುವುದನ್ನು ಬಿಡುವುದಿಲ್ಲ, ಏಕೆಂದರೆ ಅದು ಚೇಳಿನ ಗುಣ. ಹಾಗೆಯೇ ಹಿಂಸೆಯನ್ನು ಮೈತುಂಬಾ ಹೊದ್ದ ನಿನ್ನ ಗಂಡ ಬದಲಾಗುವುದಿಲ್ಲ ಎನ್ನುತ್ತಾಳೆ. ಹೆಂಡತಿಯನ್ನು ಮಣಿಸಿದೆ ಎನ್ನುವ ಅಹಂ ಅವನಲ್ಲಿ ಹೇಗಿರುತ್ತದೆ ಎಂದರೆ, ಈ ಸಲ ಅತ್ತೆಯ ಮೇಲೆ ಕೈ ಮಾಡುತ್ತಾನೆ. ಆ ಮೂಲಕ ಹೆಂಡತಿಯನ್ನು ಅವಳಿಗಿರುವ ಏಕೈಕ ಸಂಬಂಧದಿಂದ ದೂರವಾಗಿಸಿ, ಅವಳ ಜಗತ್ತಿನಲ್ಲಿ ತಾನೊಬ್ಬನೇ ಇರುವಂತೆ ಮಾಡಿಕೊಳ್ಳುತ್ತಾನೆ. ಆದರೂ ಹೆಂಡತಿಗೆ ನಂಬಿಕೆ. ಮಗುವಾದರೆ ಅವನು ಬದಲಾಗುತ್ತಾನೆ ಎನ್ನುವ ನಂಬಿಕೆ. ತನ್ನ ಪ್ರೀತಿ ಗೆಲ್ಲುತ್ತದೆ ಎನ್ನುವ ನಂಬಿಕೆ, ತನ್ನ ಗಂಡನಿಂದ ತನಗೆ ಎಂದಾದರೂ ಆತ್ಮಗೌರವ ಸಿಗಬಹುದು ಎನ್ನುವ ನಂಬಿಕೆ.

ಆದರೆ ಪ್ರೇಮದಿಂದ ಮಸುಕಾದ ತನ್ನ ಕಣ್ಣುಗಳ ನೋಟಕ್ಕಿಂತ ಅನುಭವದಲ್ಲಿ ಮಾಗಿದ ಅಮ್ಮನ ನೋಟ ಹೆಚ್ಚು ಸ್ಪಷ್ಟವಾಗಿದೆ ಎನ್ನುವುದು ಅವಳಿಗೆ ಅರಿವಾಗುತ್ತದೆ. ಅವಳು ಆಟದ ನಿಯಮಗಳನ್ನು ಬದಲಾಯಿಸುತ್ತಾಳೆ. ಮೊದಲ ಸಲ ಹೈಹೀಲ್ಡ್ ಶೂ ಅವಳ ಕೈಗೆ ಬರುತ್ತದೆ, ಮೊದಲ ಸಲ ಅವನ ಕಣ್ಣುಗಳಲ್ಲಿ ಕಾಣಿಸುತ್ತದೆ. ಹಿಂಸೆಗೆ ಹಿಂಸೆ ಪರಿಹಾರವಲ್ಲ, ನಿಜ. ಆದರೆ ವರ್ಷಾನುಗಟ್ಟಲೆ ಹಿಂಸೆಯನ್ನು ಅನುಭವಿಸಿ, ಮುಂಜಾನೆ ಎದ್ದು ಗಂಡನಿಗೆ ತಿಂಡಿ ಮಾಡಿಕೊಡುವ, ‘ಪ್ರತಿಸಲ ಇದು ಕಡೆಯ ಸಲ’ ಎಂದುಕೊಳ್ಳುವ, ಅವನು ಮೆಟ್ಟಿಲಿನಿಂದ ದೂಡಿದ ಕಾರಣಕ್ಕೆ ಮಗುವನ್ನು ಕಳೆದುಕೊಂಡ ಹೆಂಡತಿಗೆ ಅದು ಮೊದಲಿಗೆ ಹಾಗೆ ಕಾಣುವುದಿಲ್ಲ. ಆದರೆ ಕಾಲಕಳೆದಂತೆ ಯಾವ ಚೇಳನ್ನು ತಾನು ದ್ವೇಷಿಸುತ್ತಿದ್ದೆನೋ, ತಾನೂ ಅದೇ ಚೇಳಾಗಿಬಿಟ್ಟಿದ್ದೇನೆ ಎನ್ನುವುದು ಅವಳಿಗೆ ಅರಿವಾಗುತ್ತದೆ. ‘ಆತ್ಮಸಮ್ಮಾನ’ವನ್ನು ಇನ್ನೊಬ್ಬರು ಹಾಗೆ ‘ಕೊಡ’ಬೇಕಿಲ್ಲ. ಆ ನಿರೀಕ್ಷೆಯನ್ನು ಬಿಟ್ಟು, ತಾನು ಅದರ ಹೊಣೆಯನ್ನು ಹೊತ್ತ ಮೇಲೆಯೇ ಅದು ತನ್ನದಾಗುವುದು ಎನ್ನುವುದು ಅರಿವಾಗುತ್ತದೆ. ಆದರೆ ಚಿತ್ರ ಅಲ್ಲಿಗೆ ಮುಗಿಯುವುದಿಲ್ಲ. ಚಿತ್ರದ ಕಡೆಯಲ್ಲಿ ತಾಯಿ ಒಂದು ಸತ್ಯವನ್ನು ಅನಾವರಣಗೊಳಿಸುತ್ತಾಳೆ. ಅದು ಕತೆಯನ್ನು ಇನ್ನೊಂದು ಮಜಲಿಗೆ ಕೊಂಡುಹೋಗುತ್ತದೆ.

ಈ ಚಿತ್ರಕ್ಕಾಗಿ ಗುಲ್ಜಾರ್ ಒಂದು ಹಾಡು ಬರೆದಿದ್ದಾರೆ. ವಿಶಾಲ್ ಭಾರದ್ವಾಜ್ ಅದಕ್ಕೆ ಸಂಗೀತ ನೀಡಿದ್ದಾರೆ. ಅರಿಜಿತ್ ಸಿಂಗ್ ಅದನ್ನು ಹಾಡಿದ್ದಾರೆ. ಆಲಿಯಾಳ ಪಾತ್ರವನ್ನು, ಅವಳ ಪ್ರೇಮದ ಅಸಹಾಯಕತೆಯನ್ನು ಅವರು ಆ ಹಾಡಿನ ಮೂಲಕ ಕಟ್ಟುತ್ತಾರೆ. ‘ದಿಲ್ ಹಮಾರ ಲಾ-ಇಲಾಜ್ ಹೈ’. ಮತ್ತೆಮತ್ತೆ ಕೇಳುವ ಹಾಡು ಇದು.

ಇಲ್ಲಿ ನಿರ್ದೇಶಕಿ ಕಟ್ಟಿಕೊಡುವ ಮತ್ತೊಂದು ಪರಿಕಲ್ಪನೆ ಹೆಣ್ಣುಗಳ ಲೋಕದ್ದು. ಇಲ್ಲಿ ಕಥೆಯನ್ನು ಹೆಣ್ಣು ನೋಟದಲ್ಲಿ ಕಟ್ಟುತ್ತಲೇ ಹೇಗೆ ಹೆಣ್ಣುಗಳಲ್ಲಿ ಒಂದು ಅಗೋಚರ ಸೋದರಿಯತ್ವದ ನೆಲೆ ಇರುತ್ತದೆ ಎನ್ನುವುದನ್ನೂ ಕಥೆ ಹೇಳುತ್ತದೆ. ಆಲಿಯಾಳ ಮನೆಯ ಕೆಳಗೆ ಒಂದು ಬ್ಯೂಟಿ ಪಾರ್ಲರ್ ಇರುತ್ತದೆ. ಅಲ್ಲಿನ ಮಾಲಕಿಗೆ ಆಲೀಯಾ ಮೇಲೆ ಆಕೆಯ ಪತಿ ನಡೆಸುತ್ತಿರುವ ಎಲ್ಲಾ ಹಿಂಸೆಯ ಅರಿವಿರುತ್ತದೆ. ಚಿತ್ರದ ಕಡೆಯ ಭಾಗದಲ್ಲಿ ಆಕೆ ಒಂದು ದೃಶ್ಯವನ್ನು ನೋಡುತ್ತಾಳೆ. ಸದ್ದಿಲ್ಲದೆ ಬಾಗಿಲು ಹಾಕಿಕೊಳ್ಳುವ ಮೂಲಕ ಆಕೆ ಆಲಿಯಾಳ ನೋವಿಗೆ ಜೊತೆಯಾಗಿ ನಿಲ್ಲುತ್ತಾಳೆ. ಇಲ್ಲಿನ ತಾಯಿಮಗಳ ನಡುವಿನ ಸಂಬಂಧ ಸಹ ಅಷ್ಟೇ ಗಾಢವಾಗಿದೆ. ಪರಸ್ಪರರ ಕಣ್ಣು ಸನ್ನೆಯಲ್ಲೇ ಒಬ್ಬರು ಇನ್ನೊಬ್ಬರಿಗೆ ಅರ್ಥವಾಗಿ ಬಿಡುತ್ತಾರೆ. ಅವರಿಬ್ಬರ ನಡುವಣ ಪ್ರತಿ ದೃಶ್ಯವೂ ಬಹಳ ಗಟ್ಟಿಯಾಗಿ ರೂಪುಗೊಂಡಿದೆ.

ಹಾಗೆಯೇ ನನ್ನ ಗಮನ ಸೆಳೆದ ಇನ್ನೊಂದು ಅಂಶವೆಂದರೆ ಇಲ್ಲಿ ಕ್ಯಾಮೆರಾ ಕಣ್ಣು ಹೆಣ್ಣಿನ ಮೇಲೆ ನಡೆಯುವ ಆ ಹಿಂಸೆಯನ್ನು ವೈಭವೀಕರಿಸುವುದಿಲ್ಲ. ಅದು ಪ್ರಕಟವಾಗುವುದು ಬ್ಯೂಟಿಪಾರ್ಲರಿನಲ್ಲಿ ಕೇಳುವ ಸದ್ದಿನಲ್ಲಿ ಮತ್ತು ಮರುದಿನ ಆಲಿಯಾಳ ಮೈಮೇಲೆ ಇರುವ ಗುರುತುಗಳಲ್ಲಿ. ಆಫೀಸಿನಿಂದ ಬರುವ ಗಂಡನ ಕೈಲಿರುವ ಲಂಚ್ ಬಾಕ್ಸ್ ಮೆಟ್ಟಿಲುಗಳಿಗೆ ತಾಕಿ ಮಾಡುವ ಸದ್ದು ಕೂಡ ಅದೆಷ್ಟು ಭಯ ಹುಟ್ಟಿಸುತ್ತದೆ… ಮಗಳ ಬಗೆಗೆ ಆತಂಕದ ಜೊತೆಜೊತೆಯಲ್ಲಿಯೇ ಶೆಫಾಲಿ ಪಾತ್ರದ ಕಾಮಿಕ್ ಟೈಮಿಂಗ್ ಚಿತ್ರದ ಹೈಲೈಟ್. ಕಥೆ ಅಲ್ಲಲ್ಲಿ ಜಾರಿದೆ, ಜಾಳಾಗಿದೆ. ಆದರೆ ಪಾತ್ರಧಾರಿಗಳ ನಟನೆ ಮತ್ತು ಸಶಕ್ತ ಸಂಭಾಷಣೆ ಆ ಕಡೆಗೆ ನಮ್ಮ ಗಮನ ಅರಿಯದಂತೆ ನೋಡಿಕೊಳ್ಳುತ್ತವೆ. ವಿಜಯ್ ವರ್ಮಾ ನಟನೆಗೆ ಇಲ್ಲಿ ಸರಿಯಾದ ಅವಕಾಶ ಸಿಕ್ಕಿದೆ. ಚಿತ್ರದ ಮುಖ್ಯ ಪಾತ್ರಗಳಷ್ಟೇ ಅಲ್ಲ, ಮಿಕ್ಕ ಪಾತ್ರಗಳೂ ಸಹ ಚಿತ್ರದ ಬಿಗಿ ತಪ್ಪದಂತೆ ನೋಡಿಕೊಂಡಿದ್ದಾರೆ. ಜುಲ್ಫಿ, ಸ್ಟೇಷನ್ ಮಾಸ್ಟರ್, ಪೋಲಿಸ್ ಇನ್ಸ್ಪೆಕ್ಟರ್ ಎಲ್ಲರೂ ಪಾತ್ರಪೋಷಣೆಗೆ ತಮ್ಮ ದೇಣಿಗೆಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಕಾರಣಗಳೂ ಚಿತ್ರವನ್ನು ನೋಡಬೇಕಾದ ಚಿತ್ರವನ್ನಾಸುತ್ತವೆ.

LEAVE A REPLY

Connect with

Please enter your comment!
Please enter your name here