ಉದಾರೀಕರಣ ನೀತಿಯ ನಂತರ ನಮ್ಮಲ್ಲಿ ಟಿವಿ ಮಾಧ್ಯಮ ನಡೆದು ಬಂದ ದಾರಿ ಮತ್ತು ಇತ್ತೀಚೆಗೆ ಒಟಿಟಿ‌ ಮಾಡಿಕೊಂಡ ದಾರಿಯ ಬಗೆಗೆ‌ ಒಂದು ವಿಶ್ಲೇಷಣೆ. ನಿರ್ಮಾಪಕರಿಗೆ ಮೊದಲು ಸೀಮಿತವಾಗಿದ್ದ ಅವಕಾಶದ ಬಾಗಿಲು ಇಂದು ಹೆಬ್ಬಾಗಿಲಾಗಿ ಇರುವುದರ ಬಗ್ಗೆ ಪುಟ್ಟ ವಿವರಣೆ.

ಎರಡೂವರೆ ದಶಕದ ಮೊದಲು ಟಿವಿಯೋ? ಥಿಯೇಟರೋ? ಎಂದು ಆರಂಭವಾದ ಚರ್ಚೆಗೆ ಈಗ ಒಟಿಟಿಯೂ ಸೇರಿ ಆರು ಹಿತವರು ನಿನಗೆ ಈ ಮೂವರೊಳಗೆ ಎಂದು ಕೇಳುತ್ತಿದೆ. ಮೊದಲು ನಮ್ಮಲ್ಲಿ ಟಿವಿ ಮಾಧ್ಯಮ ವಿಕಸನ ಹೊಂದಿದ ಬಗೆಯ ಕಡೆ ಗಮನ ಹರಿಸಿದರೆ ಮುಂದೆ ಒಟಿಟಿ ಯಾವ ರೂಪ ಪಡೆಯಲಿದೆ‌ ಎಂಬುದನ್ನು ಗ್ರಹಿಸಲು ಸುಲಭವಾಗುತ್ತದೆ.

ಪಿ.ವಿ. ನರಸಿಂಹರಾವ್ ಸರ್ಕಾರ 1991ರಲ್ಲಿ ಉದಾರೀಕರಣ ನೀತಿ ಜಾರಿಗೆ ತರುವವರೆಗೆ ದೇಶದಲ್ಲಿ ಖಾಸಗಿ ಹೂಡಿಕೆಗೆ ನಿಷಿದ್ಧವಾಗಿದ್ದ ಹಲವು ರಂಗಗಳ ಪೈಕಿ ಮಾಧ್ಯಮ ರಂಗವೂ ಒಂದು. ಹೊಸ ನೀತಿ ಜಾರಿಗೆ ಬಂದ ಮರುವರ್ಷವೇ ಝೀಟಿವಿ ದೇಶದ ಪ್ರಥಮ ಖಾಸಗಿ ಟಿವಿ ಚಾನಲ್ ಆಗಿ ಹೊರಹೊಮ್ಮಿತು. ಕರ್ನಾಟಕದ ಮಟ್ಟಿಗೆ ಪ್ರಥಮ ಖಾಸಗಿ ಚಾನಲ್ 1994ರಲ್ಲಿ ಆರಂಭವಾದ ಉದಯ ಟಿವಿ. 2000ದಲ್ಲಿ ಈಟಿವಿ ಕನ್ನಡ ಸೇರ್ಪಡೆಯಾಯಿತು. ದಿನದ ಇಪ್ಪತ್ತನಾಲ್ಕು ಗಂಟೆ ಪೈಕಿ ಇಪ್ಪತ್ತಮೂರೂವರೆ ಗಂಟೆ ಮನರಂಜನೆ ಮತ್ತು ಅರ್ಧ ಗಂಟೆ ನ್ಯೂಸು ಎಂಬ ಫಾರ್ಮುಲಾದಲ್ಲಿ ಆರಂಭವಾದ ಇನ್ಫೋಟೇನ್ಮೆಂಟ್ ಚಾನಲ್ಲುಗಳವು. ಇವತ್ತು ದಿನದ ಇಪ್ಪತ್ನಾಲ್ಕೂ ಗಂಟೆ ನ್ಯೂಸೇ ಮನರಂಜನೆಯಾಗಿದೆ ಎಂಬುದು ಪ್ರತ್ಯೇಕ ವಿಚಾರ.

ಖಾಸಗಿ ಚಾನಲ್‌ಗಳಿಂದಾಗಿ ವಿವಿಧ ಕಾರ್ಯಕ್ರಮ ಯೋಜಿಸುವ ಅವಕಾಶ ಕ್ರಿಯಾಶೀಲ ಮನಸುಗಳಿಗೆ ಸಿಕ್ಕಿತು. ಹೆಚ್ಚಾಗಿ ಇವು ಧಾರಾವಾಹಿಗಳೇ ಆಗಿದ್ದ ಕಾರಣ ಒಂದಷ್ಟು ಧಾರಾವಾಹಿ ಹೆಣೆಯುವವರು ಹೊಸದಾಗಿ ತಯಾರಾದರೆ‌‌ ಮತ್ತೊಂದೆಡೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಫಣಿ ರಾಮಚಂದ್ರ, ಎಸ್. ನಾರಾಯಣ್, ನಾಗತಿಹಳ್ಳಿ ಚಂದ್ರಶೇಖರ್‌ ಅಂಥವರನ್ನು ಕರೆದು ಧಾರಾವಾಹಿ ಮಾಡಿಕೊಡಿ ಎಂದು ಚಾನಲ್ ಕಡೆಯಿಂದ ಬೇಡಿಕೆ ಬಂತು. ನಿರ್ಮಾಪಕರ ಪಾಲಿಗೆ ಟಿವಿ ಚಾನಲ್‌ಗಳು ಹೊಸ ಅವಕಾಶವಾದವು. ಅದುವರೆಗೆ ಥಿಯೇಟರ್ ಪ್ರದರ್ಶನದಿಂದ ಮಾತ್ರವೇ ದುಡ್ಡು ದುಡಿಯಬೇಕಿದ್ದ ನಿರ್ಮಾಪಕರಿಗೆ ಸ್ಯಾಟಲೈಟ್ ರೈಟ್ಸ್ ಎಂಬ ಹೊಸ ಒಸರು ಸಿಗಲು ಆರಂಭವಾಯಿತು.

ಆದರೆ ಟಿವಿ ಹಕ್ಕುಗಳ ವಿಚಾರದಲ್ಲಿ ಒಂದು ಬಹುದೊಡ್ಡ ಸಮಸ್ಯೆ ಇದೆ, ಅದು ಮಾರಾಟ ಮೊತ್ತವನ್ನು ತೀರ್ಮಾನಿಸುವ ಬಗೆ. ಟಿವಿ ಹಕ್ಕು ಮಾರಾಟ ಮೊತ್ತ ನಿರ್ಧಾರ ಮಾಡಲು ಮಾನದಂಡವೇ ಥಿಯೇಟರ್ ಪ್ರದರ್ಶನ. ಥಿಯೇಟರುಗಳಲ್ಲಿ ಹಿಟ್ ಆದ ಸಿನಿಮಾಗಳನ್ನು ಟಿವಿಯವರೂ ಹೆಚ್ಚಿನ ಮೊತ್ತ ನೀಡಿ ಖರೀದಿಸುತ್ತಿದ್ದರು. ಆದರೆ ಕಾರಣಾಂತರದಿಂದ ಥಿಯೇಟರ್ ಪ್ರದರ್ಶನ ವೇಳೆ ಒಳ್ಳೆಯ ಹಣ ಸಂಗ್ರಹ ಮಾಡದಿದ್ದ ಸಿನಿಮಾಗಳಿಗೆ ಟಿವಿ ಹಕ್ಕೂ ಕಡಿಮೆ. ಥಿಯೇಟರುಗಳಲ್ಲಿ ಓಡದ ಅಂಥ ಕೆಲವು ಸಿನಿಮಾಗಳು ಟಿವಿ ಪ್ರಸಾರದಲ್ಲಿ ಜನರಿಗೆ ಹತ್ತಿರವಾದ ಉದಾಹರಣೆಗಳಿವೆ. ಬಿಡುಗಡೆಯಾದ ಸಂದರ್ಭ ಸರಿಯಿಲ್ಲದೆ, ಸ್ಟಾರ್ ಚಿತ್ರದ ಜತೆ ಸ್ಪರ್ಧೆಗೆ ಬಿದ್ದು, ಅಥವಾ ಕ್ಯಾಸೆಟ್ ಮಾಫಿಯಾದ ಕೈಗೆ ಸಿಕ್ಕು ಗಲ್ಲಾಪೆಟ್ಟಿಗೆ ತುಂಬಲು ಸೋತ ಹೆಚ್ಚಿನವು 1995ರ ನಂತರದ ಸಿನಿಮಾಗಳು. ಫಣಿ ರಾಮಚಂದ್ರ ನಿರ್ದೇಶನದ ಗಣೇಶನ ಗಲಾಟೆ 1995ರಲ್ಲಿ ಥಿಯೇಟರ್‌ಗೆ ಬರುವ ಮೊದಲೇ ಪೈರೇಟೆಡ್ ಕ್ಯಾಸೆಟ್ ಬಂದು ಮಾರುಕಟ್ಟೆ ಕಬ್ಜಾ ಮಾಡಿತ್ತು. ಇಂಥಲ್ಲೆಲ್ಲ ಸೋಲು ಕಾಣುತ್ತಿದ್ದವ ನಿರ್ಮಾಪಕ.

ಪರಿಸ್ಥಿತಿ ಹೀಗಿದ್ದಾಗ ಟಿವಿ ಚಾನಲ್‌ಗಳು ಒಂದು ಅವಕಾಶವನ್ನು ಕಳೆದುಕೊಂಡಿವೆ ಎಂದು ಈಗ ಹಿಂದಿರುಗಿ ನೋಡಿದಾಗ ಅನಿಸುತ್ತದೆ. ಹಳೆಯ ಸಿನಿಮಾಗಳಿಗೆ ಪ್ರೇಕ್ಷಕರು ಇಳಿಮುಖವಾದಾಗ, ಧಾರಾವಾಹಿಗಳು ಬೋರು ಅನಿಸಲು ಶುರುವಾದಾಗ ಚಾನಲ್‌ಗಳು ರಿಯಾಲಿಟಿ ಶೋ ನಿರ್ಮಾಣಕ್ಕೆ‌ ಕೈ ಹಾಕಿದವೇ ವಿನಃ ಇವತ್ತು ಒಟಿಟಿ ತನ್ನ ತೆಕ್ಕೆಗೆ ಹಾಕಿಕೊಂಡ ಮಾರುಕಟ್ಟೆಯನ್ನು ಮುಟ್ಟಲೇ ಇಲ್ಲ. ಡಿಟಿಎಚ್ ಬಂದಾಗ ದುಡ್ಡು ಕಟ್ಟಿ ಕೆಲವು ಆಯ್ದ ಸಿನಿಮಾಗಳನ್ನು ನೋಡುವ ಅವಕಾಶವನ್ನು ಡಿಟಿಎಚ್ ಆಪರೇಟರ್‌ಗಳು ನೀಡಿದವು. ಆದರೆ ಅಲ್ಲಿ ಆಯ್ಕೆಯ ಸ್ವಾತಂತ್ರ್ಯ ಸೀಮಿತ. ಮೇಲಾಗಿ ಸಿನಿಮಾ ವೀಕ್ಷಣೆಗೆ ಪ್ರತ್ಯೇಕ ಹಣ ನೀಡಬೇಕಿತ್ತೇ ವಿನಃ ಡಿಟಿಎಚ್‌ನ ತಿಂಗಳ ಪ್ಯಾಕೇಜ್‌ನಲ್ಲಿ ಅವು ಬರುತ್ತಿರಲಿಲ್ಲ. ಸಿನಿಮಾಗಳನ್ನು ನೇರವಾಗಿ ಡಿಟಿಎಚ್ ಮೂಲಕವೇ ತೆರೆ ಕಾಣಿಸಲು ಥಿಯೇಟರ್ ಕೂಟದ ಪ್ರಬಲ ವಿರೋಧವೂ ಇತ್ತು. ಆ ಪ್ರಯತ್ನ ನಡೆದದ್ದೂ 2013ರಲ್ಲಿ. ಕಮಲ್ ಹಾಸನ್ ನಿರ್ದೇಶನ-ನಿರ್ಮಾಣದ ವಿಶ್ವರೂಪಂ ನೇರವಾಗಿ ಡಿಟಿಎಚ್ ಮೂಲಕ ತೆರೆ ಕಾಣಲು ಪ್ರಯತ್ನಪಟ್ಟ ಮೊದಲ ಭಾರತೀಯ ಸಿನಿಮಾ. ಆದರೆ ಆ ಯೋಜನೆ ಥಿಯೇಟರ್ ಮಾಲೀಕರ ವಿರೋಧದಿಂದ ಯಶ ಕಾಣಲಿಲ್ಲ.

ಈ ಎಲ್ಲಾ ವಿರೋಧ-ಲಾಬಿಗಳಿಗೂ ಪರೋಕ್ಷ ಕಾರಣ ಟಿವಿ ಪ್ರಸಾರ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಇದ್ದ ಮಿತಿ. ಇಂದಿಗೂ ಶೇ. 100 ಒಡೆತನದ ವಿದೇಶಿ ಕಂಪನಿಗಳು ಭಾರತದಲ್ಲಿ ಪ್ರಸಾರ ನೀಡಬಹುದೇ ವಿನಃ ವ್ಯವಹಾರ ನಡೆಸುವಂತಿಲ್ಲ. ಆದರೆ ಯಾವಾಗ ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋ ತಮ್ಮ ವಹಿವಾಟನ್ನು ಭಾರತಕ್ಕೂ ವಿಸ್ತರಿಸಿದವೋ ಅಲ್ಲಿಂದ ಲಾಬಿ ಲೆಕ್ಕಾಚಾರಗಳು ಬುಡಮೇಲಾದವು. ಆ ಕಂಪನಿಗಳ ಮೇಲೆ ನಮ್ಮವರಿಗೆ ಯಾವುದೇ ಹಿಡಿತವಿಲ್ಲ, ಯಾವುದೇ ಬೆದರಿಕೆ ತಂತ್ರ ನಡೆಯುವುದಿಲ್ಲ. ನಿಮ್ಮ ಸಿನಿಮಾ ನಮ್ಮಲ್ಲಿ ಹಾಕುವುದಿಲ್ಲ‌ ಎನ್ನುವಂತಿಲ್ಲ, ಅವರಿಗೆ ವಿಶ್ವವೇ ಮಾರುಕಟ್ಟೆ. ಹಾಗಾಗಿ 2016ರ ನಂತರ ಲಾಬಿಯ ಜಾಗದಲ್ಲಿ ಸ್ಪರ್ಧೆಯೇ ಅನಿವಾರ್ಯವಾಯಿತು. ಜತೆಗೆ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಿದ 4ಜಿ ಮತ್ತು ಪಸರಿಸಿದ ಕೋವಿಡ್ ಹೆಚ್ಚೆಚ್ಚು ಮಂದಿಯನ್ನು ಒಟಿಟಿ ಕಡೆಗೆ ಸೆಳೆದಿದೆ.

ಈ ಒಟಿಟಿಗಳೂ ಹೊಸ ಸಿನಿಮಾ ಬಿಡುಗಡೆಗಿಂತ ಮೊದಲು ಕೈ ಹಾಕಿದ್ದು ಟಿವಿ ಮಾರುಕಟ್ಟೆಗೇ. ಅಮೆರಿಕದಲ್ಲಿ ಕ್ರಮವಾಗಿ 2007 ಮತ್ತು 2013ರಿಂದ ಸ್ಟ್ರೀಮಿಂಗ್ ಸೇವೆಗೆ ಇಳಿದ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ (ಅಮೆಜಾನ್ ಇನ್ಸ್ಟೆಂಡ್ ವೀಡಿಯೋ) ಆರಂಭದಲ್ಲಿ ಒಡಂಬಡಿಕೆ ಮಾಡಿಕೊಂಡದ್ದು ಟಿವಿ ಚಾನಲ್‌ಗಳ ಜತೆಗೇ. ಸಿಡಿ-ಡಿವಿಡಿ ಕಾಲದಿಂದಲೇ ಸಿನಿಮಾ ವ್ಯವಹಾರದಲ್ಲಿದ್ದರೂ ಜನರನ್ನು ಬಹುವಾಗಿ ಸೆಳೆದದ್ದು ಅದಾಗಲೇ ಪ್ರಸಾರವಾಗುತ್ತಿದ್ದ ಟಿವಿ ಸೀರೀಸ್ ಹಾಗೂ ಡಿಸ್ಕವರಿಯಲ್ಲಿ ಬಿತ್ತರವಾಗುತ್ತಿದ್ದ ಡಾಕ್ಯುಮೆಂಟರಿಗಳು. ಅವುಗಳನ್ನು ಎಲ್ಲಿ ಮತ್ತು ಯಾವಾಗ ಬೇಕಾದರೂ ನೋಡಬಹುದು ಎಂಬ ಅಂಶ.

ಈಗ ನಮ್ಮಲ್ಲಿನ ಝೀ5, ವೂಟ್ ಆ್ಯಪ್‌ಗಳು ಹೆಚ್ಚಾಗಿ ಟಿವಿಯ ಕಂಟೆಟನ್ನೇ ನೀಡುತ್ತಾ ಸಿನಿಮಾವನ್ನೂ ತೆಕ್ಕೆಗೆ ಹಾಕಿಕೊಂಡಿವೆ. ಮತ್ತೊಂದು ಮಗ್ಗುಲಲ್ಲಿ ಮಲಯಾಳದ ನೀ ಸ್ಟ್ರೀಂ, ಬಂಗಾಳಿ ಹೊಯ್‌ಚೊಯ್, ತೆಲುಗಿನ ಆಹಾ ಒಟಿಟಿಗಳು ಸಿನಿಮಾ ಹಾಗೂ ಸೀರೀಸ್‌ಗಳ ಪ್ರದರ್ಶನದ ಜತೆಗೆ ನಿರ್ಮಾಣಕ್ಕೂ ಕೈ ಹಾಕಿವೆ. ಕನ್ನಡದಲ್ಲಿ Aneka Plus ಹೊಸ ಸೇರ್ಪಡೆ. ಈ ಎಲ್ಲಾ ಬೆಳವಣಿಗೆಯಲ್ಲಿ ಮೊದಲು ಗೆಲ್ಲುವವ ಪ್ರೇಕ್ಷಕ, ಅವನಿಗೆ ಆಯ್ಕೆಯ ಲಾಭ. ಎರಡನೆಯದಾಗಿ ಕಂಟೆಂಟ್ ತಯಾರಕರಿಗಿಂತಲೂ ಹೆಚ್ಚು ನಿರ್ಮಾಪಕರಿಗೆ ಲಾಭ. ಗಲ್ಲಾಪೆಟ್ಟಿಗೆಯಲ್ಲಿ ಬಂದಷ್ಟಕ್ಕೆ, ಚಾನಲ್ ರೈಟ್ಸ್‌ಗೆ ಅವರು ಕೊಟ್ಟಷ್ಟಕ್ಕೆ ತೃಪ್ತಿ ಪಡಬೇಕಿದ್ದ ನಿರ್ಮಾಪಕರು ಒಟಿಟಿ ಮೂಲಕ ಎಷ್ಟು ಸಮಯ ಬೇಕಾದರೂ ಸಿನಿಮಾವನ್ನು ಪ್ರೇಕ್ಷಕರಿಗೆ ತೆರೆದಿಡಬಹುದು. ಅದರಲ್ಲೂ ಪೂರ್ತಿ ಹಕ್ಕನ್ನು ಮಾರಿಬಿಡುವುದು ಬೇಡ ಎಂದಾದರೆ ಪ್ರತಿ ಪ್ರಸಾರಕ್ಕೆ ಇಂತಿಷ್ಟು ಎಂದು ಒಟಿಟಿ ವೇದಿಕೆಗಳ ಜತೆ ವ್ಯವಹಾರ ನಡೆಸಬಹುದು.

ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿರುವ Aneka Plus ಓಟಿಟಿ ಮುಖ್ಯಸ್ಥರಾದ ಅರವಿಂದ ಮೋತಿ ಅವರು ಹೇಳುವುದು ಹೀಗೆ – “ಕಂಟೆಂಟ್‌ ತಯಾರಿಸುವರು ಮತ್ತು ವೀಕ್ಷಕರು ಎರಡೂ ವರ್ಗದವರಿಗೂ OTT ಮಾಧ್ಯಮದಲ್ಲಿ ಸ್ವಾತಂತ್ರ್ಯ, ಯತೇಚ್ಛ ಅವಕಾಶಗಳಿವೆ. ವೀಕ್ಷಕರು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ತಮಗೆ ಇಷ್ಟವಾಗುವ, ಯಾವುದೇ ಭಾಷೆಯ ಕಂಟೆಂಟ್‌ ನೋಡಬಹುದು. ಮತ್ತೊಂದೆಡೆ ಕಂಟೆಂಟ್‌ ತಯಾರಕರ ಸೃಜನಶೀಲತೆಗೆ ಇಲ್ಲಿ ಸಾಕಷ್ಟು ಅವಕಾಶಗಳಿದ್ದು, ಜಾಗತಿಕ ವೀಕ್ಷಕರನ್ನು ಅವರು ತಲುಪಬಹುದು. ಸಿನಿಮಾ ವಿಚಾರಕ್ಕೆ ಬಂದರೆ, ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾಗಳಿಗೆ ಓಟಿಟಿ ಅತ್ಯುತ್ತಮ ವೇದಿಕೆ”

ಓಟಿಟಿ ಎಮರ್ಜ್‌ ಆಗುತ್ತಿರುವ ಈ ಹೊತ್ತಿನಲ್ಲಿ ನಿರ್ಮಾಪಕ ತನ್ನ ಹೂಡಿಕೆಗೆ ಮಿನಿಮಮ್ ಗ್ಯಾರೆಂಟಿ ಪಡೆಯುವುದು‌ ಸುಲಭ. ಖಾಸಗಿ ಟಿವಿ ಚಾನಲ್ ಬಂದಾಗಲೇ ನಿರ್ಮಾಪಕರು ಗೆಲ್ಲಬೇಕಿತ್ತಾದರೂ ಒಂದು ಹೊತ್ತಿಗೆ ಒಂದೇ ಸಿನಿಮಾ ಪ್ರದರ್ಶಿಸಬೇಕಾದ ಮಿತಿ ಚಾನಲ್‌ಗಳಿಗೂ ಇದ್ದ ಕಾರಣ ನಿರ್ಮಾಪಕನ ಅವಕಾಶದ ಬಾಗಿಲು ಇಷ್ಟು ಅಗಲವಾಗಿ ತೆರೆದಿರಲಿಲ್ಲ. ಈಗ ಜಾಗತಿಕ ಮಟ್ಟದ ನೆಟ್‌ಫ್ಲಿಕ್ಸ್, ಅಮೆಜಾನ್ ಜತೆ ಪ್ರಾದೇಶಿಕ ಮಟ್ಟದ ಒಟಿಟಿಗಳೂ ಕಂಟೆಂಟ್ ವಿಚಾರದಲ್ಲಿ ಗೆಲ್ಲಬಹುದಾದ ಕಾರಣ ನಮ್ಮ ಮಣ್ಣಿನ ವಾಸನೆ, ಭಾಷೆ, ಸಂಸ್ಕೃತಿ ಉಳಿಸಲು ಬೀದಿ ಹೋರಾಟ ಮಾಡುವ ಬದಲು ನಮ್ಮೂರ ಕತೆಗಳಿಗೆ ನಾವೇ ದೃಶ್ಯ ರೂಪ ಕೊಡುವ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ನಿರ್ಮಾಪಕರು ಮುಂದೆ ಹೋಗುತ್ತಾರೆ. ಇದಮಿತ್ತಂ ಎಂದು ಕೂರುವವರು ಹಿಂದುಳಿಯುತ್ತಾರೆ.

ಈ ನಡುವೆ ಟಿವಿ-ಒಟಿಟಿ-ಥಿಯೇಟರ್ ಇವುಗಳ ನಡುವೆ ಯಾರು ಉಳಿಯುತ್ತಾರೆ ಎಂಬುದು ಅಪ್ರಸ್ತುತ. ಮನರಂಜನಾ ಕ್ಷೇತ್ರ ವಿಶಾಲ ಸಾಗರ. ಇಲ್ಲಿ ತಿಮಿಂಗಲಕ್ಕೆ ಈಜಲು ಜಾಗವಿದೆ, ಬಂಗುಡೆ-ಭೂತಾಯಿಗೂ ಅಸ್ತಿತ್ವಕ್ಕೆ ಸ್ಥಳವಿದೆ.

LEAVE A REPLY

Connect with

Please enter your comment!
Please enter your name here