‘ಅರ್ಜುನ್ ರೆಡ್ಡಿ’ ತೆಲುಗು ಚಿತ್ರದೊಂದಿಗೆ ಟಾಲಿವುಡ್‌ನಲ್ಲಿ ದೊಡ್ಡ ಸದ್ದು ಮಾಡಿದ ನಟ ವಿಜಯ್ ದೇವರಕೊಂಡ. ‘ಲಿಗರ್’ ಚಿತ್ರದೊಂದಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಅವರ ಆಸೆ ಕೈಗೂಡಲಿಲ್ಲ. ಸಾಲು ಸಾಲು ಸಿನಿಮಾಗಳ ಸೋಲಿನ ಬೇಸರದಲ್ಲಿರುವ ವಿಜಯ್ ಬ್ರೇಕ್‌ಗಾಗಿ ಎದುರು ನೋಡುತ್ತಿದ್ದಾರೆ.
ಟಾಲಿವುಡ್‌ನಲ್ಲಿ ‘ರೌಡಿ’ ಎಂದೇ ಖ್ಯಾತರಾಗಿರುವ ನಟ ವಿಜಯ್ ದೇವರಕೊಂಡ. ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ವಿಜಯ್ ದೇವರಕೊಂಡ, ನಂತರದಲ್ಲಿ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಡ್ತಾರೆ. ‘ಎವಡೆ ಸುಬ್ರಹ್ಮಣ್ಯ’ ಸಿನಿಮಾದಲ್ಲಿ ನಾನಿ ನಾಯಕನಾದರೆ, ಪೋಷಕ ಪಾತ್ರದಲ್ಲಿ ವಿಜಯ್ ದೇವಕೊಂಡ ನಟಿಸಿದ್ದಾರೆ. ಇನ್ನೂ ಈ ಸಿನಿಮಾದಲ್ಲಿನ ಪಾತ್ರ ಅವರಿಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ನಂತರ ‘ಪೆಳ್ಳಿಚೂಪುಲು’, ‘ದ್ವಾರಕ’ ಚಿತ್ರಗಳಲ್ಲಿ ಬಣ್ಣ ಹಚ್ಚಿದರು. 2017ರಲ್ಲಿ ರಿಲೀಸ್ ಆದ ‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಅವರಿಗೆ ಒಂದೊಳ್ಳೆ ಬ್ರೇಕ್ ಕೊಟ್ಟ ಚಿತ್ರವಾಯಿತು. ಜೊತೆಗೆ ಆ ಸಿನಿಮಾದಲ್ಲಿನ ಪಾತ್ರವನ್ನ ನೋಡಿದ ಅಭಿಮಾನಿಗಳು ಅವರಿಗೆ ‘ರೌಡಿ’ ಅನ್ನೋ ಪಟ್ಟವನ್ನೂ ಕೊಟ್ಟರು. ನಂತರದಲ್ಲಿ ಅದೇ ಹೆಸರನ್ನೇ ಬ್ರ್ಯಾಂಡ್ ಮಾಡಿಕೊಂಡು ಬಟ್ಟೆ ಉದ್ಯಮಕ್ಕೂ ವಿಜಯ್ ಕಾಲಿಟ್ಟರು.
‘ಅರ್ಜುನ್ ರೆಡ್ಡಿ’ ಸಿನಿಮಾದಿಂದ ಸಿಕ್ಕ ಯಶಸ್ಸು ಮುಂದೆ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ತಂದುಕೊಟ್ಟಿತ್ತು. ‘ಮಹಾನಟಿ’ ಹಾಗೂ ‘ಏ ಮಂತ್ರಂ ಚೇಸ್ಯಾವೆ’ ಸಿನಿಮಾಗಳ ನಂತರ ಬಂದ ‘ಗೀತ ಗೋವಿಂದಂ’ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಮತ್ತೆ ವಿಜಯ್ ಹೆಸರು ಹರಿದಾಡುವಂತೆ ಮಾಡಿತ್ತು. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೋಡಿಯ ಮ್ಯಾಜಿಕ್ ವರ್ಕ್ ಆಗಿತ್ತು. ಆಮೇಲೆ ಆಗಿದ್ದು ನೋಡಿ, ‘ನೋಟಾ’ ಚಿತ್ರ ರಿಲೀಸ್ ಆಗಿ ಸದ್ದಿಲ್ಲದಂತೆ ಮಾಯವಾಯಿತು. ಇಲ್ಲಿಂದಲೇ ವಿಜಯ್‌ಗೆ ಸೋಲಿನ ಯಾತ್ರೆ ಆರಂಭವಾಗಿದ್ದು.
‘ಗೀತ ಗೋವಿಂದಂ’ ನಂತರ ಮತ್ತೆ ಅದೇ ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್ ಹಾಗೂ ರಶ್ಮಿಕಾ ‘ಡಿಯರ್ ಕಾಮ್ರೇಡ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಆದರೆ, ಅಲ್ಲೂ ಅದೃಷ್ಟ ಕೈ ಹಿಡಿಯಲಿಲ್ಲ. ಸಿನಿಮಾ ಹೀನಾಯವಾಗಿ ಸೋತಿತು. 2020ರಲ್ಲಿ ತೆರೆಕಂಡ ‘ವರ್ಲ್ಡ್ ಫೇಮಸ್ ಲವರ್’, 2022ರಲ್ಲಿ ರಿಲೀಸ್ ಆದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಅಭಿಮಾನಿಗಳಿಗೆ ಹಿಡಿಸಲೇ ಇಲ್ಲ. ನಂತರದಲ್ಲಿ ಸಮಂತಾ ಜೊತೆ ಬಂದ ‘ಖುಷಿ’ ಚಿತ್ರ ಸಹ ಗಲ್ಲಾಪೆಟ್ಟಿಗೆಯಲ್ಲಿ ಮಾಡಿದ ಗಳಿಕೆ ಅಷ್ಟಕ್ಕೆ ಅಷ್ಟೆ. ಇನ್ನು ಇತ್ತೀಚೆಗೆ ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ನಟಿ ಮೃನಾಲ್ ಠಾಕೂರ್ ಅಭಿನಯದ ಸಿನಿಮಾ ‘ದಿ ಫ್ಯಾಮಿಲಿ ಸ್ಟಾರ್’ ತೆರೆಕಂಡಿದೆ. ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ರಿಲೀಸ್ ಆದ ಸಿನಿಮಾ ನೆಲಕಚ್ಚಿದೆ.
‘ಗೀತ ಗೋವಿಂದಂ’ ಸಿನಿಮಾದ ನಂತರ ಒಂದು ದೊಡ್ಡ ಹಿಟ್‌ಗಾಗಿ ವಿಜಯ್ ದೇವರಕೊಂಡ 6 ವರ್ಷಗಳಿಂದ ಕಾಯುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಟಾಲಿವುಡ್ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರಿಗೂ ನೆಚ್ಚಿನ ನಟನ ಒಂದೊಳ್ಳೆ ಸಿನಿಮಾ ನೋಡುವಾಸೆ ಆಸೆಯಾಗಿಯೇ ಉಳಿದಿದೆ.