ಹುಬ್ಬಳ್ಳಿಯ ವರೂರಿನಲ್ಲಿ ನಿನ್ನೆ ‘ವಿಜಯಾನಂದ’ ಬಯೋಪಿಕ್‌ಗೆ ಮುಹೂರ್ತ ನೆರವೇರಿದೆ. ಸಾರಿಗೆ ಮತ್ತು ಪತ್ರಿಕೋದ್ಯಮದಲ್ಲಿ ಜಾಗತಿಕ ಮನ್ನಣೆ ಪಡೆದ ವಿಜಯ ಸಂಕೇಶ್ವರ ಅವರ ಜೀವನಗಾಥೆಯಿದು. ರಿಶಿಕಾ ಶರ್ಮಾ ನಿರ್ದೇಶನದಲ್ಲಿ ಸಿನಿಮಾ ತಯಾರಾಗಲಿದ್ದು, ವೆಬ್ ಸರಣಿಯಾಗಿಯೂ ಸ್ಟ್ರೀಮ್ ಆಗಲಿದೆ.
ಕಳೆದೆರಡು ತಿಂಗಳಿನಿಂದ ‘ವಿಜಯಾನಂದ’ ಬಯೋಪಿಕ್ ಸಿನಿಮಾ ಸುದ್ದಿಯಾಗಿತ್ತು. ನಿನ್ನೆ ಹುಬ್ಬಳ್ಳಿಯ ವರೂರಿನಲ್ಲಿ ಸಿನಿಮಾಗೆ ಮುಹೂರ್ತ ನೆರವೇರಿದ್ದು, ಅಧಿಕೃತ ಚಾಲನೆ ಸಿಕ್ಕಿದೆ. ಅನಂತನಾಗ್ ಮತ್ತು ನಿಹಾಲ್ ರಜಪೂತ್ ನಟನೆಯ ಮೊದಲ ದೃಶ್ಯಕ್ಕೆ ನಟ ಗಣೇಶ್ ಕ್ಲ್ಯಾಪ್ ಮಾಡಿದರೆ, ವಿಜಯ ಸಂಕೇಶ್ವರ ಅವರು ಕ್ಯಾಮೆರಾ ಚಾಲನೆ ಮಾಡಿದರು. ನಿಶಿಕಾ ಶರ್ಮಾ ನಿರ್ದೇಶನದ ಸಿನಿಮಾದಲ್ಲಿ ನಾಯಕನಟನಾಗಿ ನಿಹಾಲ್ ರಜಪೂತ್ (ವಿಜಯ ಸಂಕೇಶ್ವರ) ನಟಿಸುತ್ತಿದ್ದಾರೆ. ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ.ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತನಾಗ್ ಮತ್ತು ಗಣೇಶ್ ಮನ್ಷಾ ಪಾತ್ರದಲ್ಲಿ ರವಿಚಂದ್ರನ್ ಅವರು ಅಭಿನಯಿಸುತ್ತಿರುವುದು ವಿಶೇಷ. ವಿನಯಾ ಪ್ರಸಾದ್ (ಚಂದ್ರಮ್ಮ ಸಂಕೇಶ್ವರ್), ಭರತ್ ಬೋಪಣ್ಣ (ಆನಂದ ಸಂಕೇಶ್ವರ್) ಇತರೆ ಪ್ರಮುಖ ಕಲಾವಿದರು.
ಸಾರಿಗೆ ಮತ್ತು ಪತ್ರಿಕೋದ್ಯಮ ರಂಗದಲ್ಲಿ ವಿಜಯ ಸಂಕೇಶ್ವರ ಅವರದ್ದು ಬಹುದೊಡ್ಡ ಹೆಸರು. ಇದೀಗ ವಿಆರ್‌ಎಲ್ ಸಂಸ್ಥೆ ಚಿತ್ರನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದೆ. ನಿನ್ನೆ ಮುಹೂರ್ತದಂದು ವಿಆರ್‌ಎಲ್ ಪ್ರೊಡಕ್ಷನ್ಸ್ ಬ್ಯಾನರ್ ಲೋಗೋ ಬಿಡುಗಡೆ ಮಾಡಲಾಯ್ತು. ಸಂಸ್ಥೆಯ ಮೊದಲ ಚಿತ್ರವಾಗಿ ‘ವಿಜಯಾನಂದ’ ಬಯೋಪಿಕ್ ಸಿದ್ಧವಾಗಲಿದೆ. “ನಮ್ಮ ಚಿತ್ರನಿರ್ಮಾಣಸಂಸ್ಥೆಯಡಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸುವ ಗುರಿಯಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರನ್ನು ಸಿನಿಮಾರಂಗಕ್ಕೆ ಪರಿಚಯಿಸುವ ವೇದಿಕೆಯಾಗಿ ಕೆಲಸ ಮಾಡಲಿದ್ದೇವೆ. ಪುತ್ರ ಆನಂದ ಸಂಕೇಶ್ವರ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸವಿದೆ” ಎನ್ನುತ್ತಾರೆ ವಿಜಯ ಸಂಕೇಶ್ವರ್.
‘ವಿಜಯಾನಂದ’ ಚಿತ್ರಕ್ಕೆ ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕಾಗಿ 60ರ ದಶಕವನ್ನು ಮರುಸೃಷ್ಟಿಸುತ್ತಿದ್ದಾರೆ ನಿರ್ದೇಶಕರು. ಕೆಲವು ಭಾಗಗಳನ್ನು ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರಿಸುವ ಗುರಿಯೂ ಇದೆ. “ವಿಜಯ ಸಂಕೇಶ್ವರ ಅವರ ಬದುಕು, ಸಾಧನೆ ಸ್ಫೂರ್ತಿದಾಯಕವಾದದ್ದು. ಹಾಗಾಗಿ ಅವರ ಬಯೋಪಿಕ್ ಮಾಡಬೇಕೆಂದು ನಿರ್ಧರಿಸಿದೆ. ಅವರಲ್ಲಿ ವಿಷಯ ಪ್ರಸ್ತಾಪಿಸಿದಾಗ ಖುಷಿಯಿಂದ ಚಿತ್ರನಿರ್ಮಾಣಕ್ಕೆ ಮುಂದಾದರು. ಎರಡು ಗಂಟೆಯ ಸಿನಿಮಾದಲ್ಲಿ ಅವರ ಸಾಧನೆಯನ್ನು ಹಿಡಿದಿಡುವುದು ಕಷ್ಟ. ಹಾಗಾಗಿ ವೆಬ್ ಸರಣಿಯಾಗಿಯೂ ಕತೆಯನ್ನು ನಿರೂಪಿಸಲಿದ್ದೇವೆ” ಎನ್ನುತ್ತಾರೆ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ. ನಿರಂತರವಾಗಿ ಚಿತ್ರೀಕರಣ ನಡೆಸಲಿದ್ದು ಮುಂದಿನ ಆರೇಳು ತಿಂಗಳಲ್ಲಿ ಸಿನಿಮಾ ತೆರೆಗೆ ತರುವುದು ಅವರ ಯೋಜನೆ.