ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.ನೂರರಷ್ಟು ಸೀಟ್‌ ಭರ್ತಿಗೆ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಸಾಲು, ಸಾಲಾಗಿ ಸಿನಿಮಾಗಳು ತೆರೆಕಾಣುತ್ತಿವೆ. ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ವಿಭಿನ್ನ ಶೀರ್ಷಿಕೆಯ ‘ಇದೇ ಅಂತರಂಗ ಶುದ್ಧಿ’ಯೂ ಒಂದು.

“ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಂಗ ಶುದ್ಧಿ. ಅಂದರೆ ಮನುಷ್ಯನ ಮನಸ್ಸು ಶುದ್ಧಿ ಮಾಡುವಂತ ಕೆಲಸ. ಈ ದಿನದ ಜೀವನ ಶೈಲಿ ಹಾಗೂ ಅವಸರದ ಬದುಕಿನ ಮಧ್ಯೆ ಪ್ರೀತಿ, ಪ್ರೇಮ, ಭಾವನೆಗಳು ಮತ್ತು ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಚಿತ್ರ. ಎಲ್ಲೋ ಒಂದು ಕಡೆ ಮನುಷ್ಯ ತನ್ನ ತಾನು ಕಳೆದುಕೊಂಡು ಸಾಗುತ್ತಿರುವಾಗ ತಾನೇ ತನ್ನ ಕಣ್ಣೆದುರು ಸನ್ನಿವೇಶಗಳ ಮೂಲಕ ಇಲ್ಲಾ ಕೆಲವು ಬದುಕಿನಲ್ಲಿ ಪಾಠದಂತೆ ಬಂದು ಹೋಗೋ ಘಟನೆಗಳ ಮೂಲಕ ಕಲಿಯುವ ಪಾಠ ಈ ಚಿತ್ರದಲ್ಲಿದೆ” ಎಂದು ತಮ್ಮ ಚಿತ್ರದ ಬಗ್ಗೆ ಹೇಳುತ್ತಾರೆ ನಿರ್ದೇಶಕ ಕುಮಾರ್‌ ದತ್‌. ಅಭಿನವ್ ಸ್ಟುಡಿಯೋಸ್ ಲಾಂಛನದಲ್ಲಿ ಅಭಿಲಾಷ್ ಚಕ್ಲಾ ಹಾಗೂ ನವಾಜಿತ್ ಬಲ್ಲರ್ ನಿರ್ಮಿಸಿರುವ ‘ಇದೇ ಅಂತರಂಗ ಶುದ್ಧಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

“ಜೀವನವೇ ಒಂದು ಪಯಣ. ಒಬ್ಬೊಬ್ಬರು ಒಂದೊಂದು ರೀತಿ ಕನಸು, ಅನುಭವ, ಆಸೆ, ಗುರಿ, ಕಾಯಕ ಹೊತ್ತು ಸಾಗುತ್ತಾರೆ. ಆ ಜರ್ನಿ ಮಧ್ಯೆ ಅವರು ಯಾರು ಯಾರನ್ನು ಭೇಟಿ ಆಗುತ್ತಾರೆ? ಏನೇನು ಆಗುತ್ತೆ? ಏನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥಾ ಹಂದರ” ಎನ್ನುವುದು ನಿರ್ದೇಶಕರ ವಿವರಣೆ. ಲವ್ ಪ್ರಾಣ್ ಮೆಹ್ತಾ ಸಂಗೀತ ಸಂಯೋಜನೆ, ವಿನಯ್ ಹೊಸಗೌಡರ್ ಛಾಯಾಗ್ರಹಣ ಚಿತ್ರಕ್ಕಿದೆ. ಆರ್ಯವರ್ಧನ್ ನಾಯಕನಾಗಿ ನಟಿಸಿರುವ ಈ ಚಿತ್ರದ ಇತರೆ ತಾರಾಬಳಗದಲ್ಲಿ ಪ್ರತಿಭ, ಶ್ವೇತ, ರೂಪೇಶ್, ಶ್ರೀಧರ್, ಸೂರಜ್, ರಘು, ಪುನೀತ್, ಮಂಜುಳಾರೆಡ್ಡಿ‌ ಇತರರು ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here