ಅರ್ಥವಿಲ್ಲದ ಟ್ರೋಲು, ಕಾಮಿಕ್‌ ಮೀಮ್ಸ್ ಮೋಜುಗಳಲ್ಲಿ ಬದುಕುತ್ತಿರುವವರ ಹುಡುಗಾಟಗಳು ಎಂತಹ ತೊಂದರೆ ತಂದಿಡುತ್ತವೆ ಎನ್ನುವುದಕ್ಕೆ ಈ ಸಿನಿಮಾ ಕನ್ನಡಿ ಹಿಡಿಯುತ್ತದೆ. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ವಿಕೃತಿ’.

ನಾಗರೀಕರು ಎಂದು ಕರೆಸಿಕೊಳ್ಳುವವರು ಸೂಕ್ಷ್ಮತೆಗಳನ್ನು ಕಳೆದುಕೊಂಡಂತೆ ವರ್ತಿಸಿದರೆ ಏನೆಲ್ಲಾ ತೊಂದರೆಗಳಾಗುತ್ತವೆ ಎನ್ನುವುದನ್ನು ಈ ಸಿನಿಮಾದಲ್ಲಿ ನೋಡಬಹುದು. ಅರ್ಥವಿಲ್ಲದ ಟ್ರೋಲು, ಕಾಮಿಕ್‌ ಮೀಮ್ಸ್ ಮೋಜುಗಳಲ್ಲಿ ಬದುಕುತ್ತಿರುವವರ ಹುಡುಗಾಟಗಳು ಎಂತಹ ತೊಂದರೆ ತಂದಿಡುತ್ತವೆ, ಗುರುತು ಪರಿಚಯವಿಲ್ಲದ ವ್ಯಕ್ತಿಯ ಫೋಟೊ – ವೀಡಿಯೋ ತೆಗೆದು ಮಾಡುವ ಟ್ರೊಲ್‌, ಮೆಮ್ಸ್‌ಗಳು ಅವರ ಜೀವನದ ಮೇಲೆ ಏನೆಲ್ಲ ಪರಿಮಾಣ ಬೀರಬಹುದು ಎನ್ನುವುದಕ್ಕೆ ಈ ‘ವಿಕೃತಿ’ ಕನ್ನಡಿ ಹಿಡಿಯುತ್ತದೆ.

ಕೊಚ್ಚಿಯ ಖಾಸಗಿ ಶಾಲೆಯೊಂದರಲ್ಲಿ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸುವಂತ ವ್ಯಕ್ತಿ ಎಲ್ದೋ, ಮತ್ತು ಆತನ ಪತ್ನಿ ಎಲ್ಸಿ. ಇಬ್ಬರೂ ಮಾತುಬಾರದವರು. ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷಮಯ ಸಾಮಾನ್ಯ ಜೀವನ ನಡೆಸುತ್ತಿರುವ ಮಧ್ಯಮ ವರ್ಗದ ಕುಟುಂಬ. ಒಂದು ದಿನ ಎಲ್ದೊ ತನ್ನ ಮಗಳ ಅನಾರೋಗ್ಯ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ನಿದ್ರೆ ಇಲ್ಲದೆ ಎರಡು ರಾತ್ರಿಗಳನ್ನು ಆಸ್ಪತ್ರೆಯಲ್ಲೇ ಕಳೆದಿರುತ್ತಾನೆ. ಮರುದಿನ ಮೆಟ್ರೊ ರೈಲಿನಲ್ಲಿ ಮನೆಗೆ ಹಿಂದಿರುಗುವಾಗ ನಿದ್ರೆ ತಡೆಯಲಾಗದೆ ಸೀಟಿನ ಮೇಲೆ ಅಡ್ಡಾದಿಡ್ಡಿಯಾಗಿ ಮಲಗಿಬಿಟ್ಟಿರುತ್ತಾನೆ.

ಚಿತ್ರದ ಇನ್ನೊಂದು ಮುಖ್ಯಪಾತ್ರವಾಗಿರುವ ಸಮೀರ್ ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚು ಕಾಲ ಕಳೆಯುವಂತಹ ವ್ಯಕ್ತಿ. ದೂರದ ಗಲ್ಫ್‌ ದೇಶದಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳ ರಜೆಗೆ ಆತ ತನ್ನ ನಾಡಿಗೆ ಬಂದಿದ್ದಾನೆ. ಆ ದಿನ ಆತನೂ ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದು, ಎಲ್ದೊ ಮಲಗಿರುವ ಫೋಟೋವನ್ನು ಕ್ಲಿಕ್ ಮಾಡಿ, ಮದ್ಯಪಾನ ಮಾಡಿ ಮಲಗಿದ್ದಾನೆ ಎಂಬುದಾಗಿ ಟ್ರೋಲ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾನೆ. ನಂತರದಲ್ಲಿ ಆ ಟ್ರೋಲ್ ಎಲ್ದೋ ಜೀವನದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತದೆ? ಆತ ಏನೆಲ್ಲಾ ತೊಂದರೆ ಅನುಭವಿಸುತ್ತಾನೆ? ಹಾಗೆ, ಸಮೀರ್‌ನ ಪ್ರೇಮಕತೆಯೊಂದಿಗೆ ಶುರುವಾಗುವ ಕಥೆ ಆ ಟ್ರೋಲ್ ನಂತರ ಅವನನ್ನು ಎಂತಹ ಬಿಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದು ಚಿತ್ರಕಥೆ.

ಇದು ಸುಖಾಂತ್ಯ ಕಾಣುವ ಕಥೆಯುಳ್ಳ ಸಿನಿಮಾ ಆಗಿದ್ದು, ಸಮೀರನಿಗೆ ತನ್ನ ತಪ್ಪಿನಿಂದಾದ ಅನಾಹುತದ ಅರಿವು ಮೂಡುವುದನ್ನು ತೋರುವುದರ ಜೊತೆಗೆ ಎಲ್ಧೊನ ಮಾನವೀಯತೆ ಮತ್ತು ಮುಗ್ಧತೆಯನ್ನು ತಿಳಿಸುವುದರಲ್ಲಿ ಕೊನೆಗೊಳ್ಳುತ್ತದೆ. ಎಲ್ದೋ ಪಾತ್ರ ಚಿತ್ರ ವೀಕ್ಷಿಸಿದ ನಂತರವೂ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತದೆ. ಎಲ್ದೋ ಪಾತ್ರದಲ್ಲಿ ಸೂರಜ್ ವೆಂಜರಮೂಡು ಮತ್ತು ಆತನ ಪತ್ನಿ ಎಲ್ಸಿಯಾಗಿ ಸುರಭಿ ಲಕ್ಷ್ಮಿ ಇಬ್ಬರದ್ದೂ ಮನೋಜ್ಞ ಅಭಿನಯ. ಚಿತ್ರ ತಾಂತ್ರಿಕವಾಗಿಯೂ ಅಚ್ಚುಕಟ್ಟಾಗಿದ್ದು, ತಂತ್ರಜ್ಞರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಲಾವಿದರು ಸಹಜಾಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಮತ್ತೊಬ್ಬ ವ್ಯಕ್ತಿಯನ್ನು ತುಚ್ಛ ಭಾವದಿಂದ ನೋಡದೆ ಮನುಷ್ಯತ್ವದಿಂದ ನಡೆದುಕೊಳ್ಳುಬೇಕು, ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ ಎಂಬುದರ ಸಣ್ಣ ಸೂಕ್ಷ್ಮ ಅರಿವಿನೊಂದಿಗೆ ಪ್ರತಿಯೊಬ್ಬರನ್ನೂ ಗೌರವ ಮನೋಭಾವದಿಂದ ನೋಡಬೇಕೆನ್ನುವ ಸಂದೇಶ ಚಿತ್ರದ್ದು. ಸಿನಿಮಾ ವೀಕ್ಷಿಸುವವರಲ್ಲೂ ಸದಭಿಪ್ರಾಯ ಮೂಡಬಹುದಾದ ಉತ್ತಮ ಪ್ರಯೋಗ. ಪ್ರಸ್ತುತ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleಕಳೆದುಹೋಗಿಯೇ ಕಂಡುಕೊಳ್ಳುವ ಚಡಪಡಿಕೆಯ ಕುಂಭಮೇಳ
Next articleನೆಟ್‌ಫ್ಲಿಕ್ಸ್‌, ಅಮೇಜಾನ್‌ ಜೊತೆ ನಟಿ ಅನುಷ್ಕಾರ ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್‌ 400 ಕೋಟಿ ರೂ. ಒಪ್ಪಂದ

LEAVE A REPLY

Connect with

Please enter your comment!
Please enter your name here