2019ರಲ್ಲಿ ಪ್ರಯಾಗದಲ್ಲಿ ನಡೆದದ್ದು ಅರ್ಧ ಕುಂಭ. ಇಲ್ಲಿಗೆ ಬಂದವರ ಅಂದಾಜು ಸಂಖ್ಯೆ ಸುಮಾರು 220 ಮಿಲಿಯನ್. ಇದು ಲಂಡನ್ ಜನಸಂಖ್ಯೆಯ ದುಪ್ಪಟ್ಟು ಸಂಖ್ಯೆ ಎಂದು ಡಾಕ್ಯುಮೆಂಟರಿ ಹೇಳುತ್ತದೆ. ‘Kumbh : Among the Seekers’ ಡಾಕ್ಯುಮೆಂಟರಿ Discovery Plusನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಎದೆಯಲ್ಲಿ ಗಾಳಿಯ ಚಡಪಡಿಕೆ, ಹಾಯಿದೋಣಿಯೊಂದರ ಪಯಣದ ಕಾತರತೆ ಮತ್ತು ಪ್ರವಾಸಿಯೊಬ್ಬನ ಉತ್ಕಟತೆ ತುಂಬಿಕೊಂಡ ಲಕ್ಷಾಂತರ ಜನರ ಕಣ್ಣೆವೆಯೊಳಗಿನ ಕನಸು ಕುಂಭ ಮೇಳ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲ. ತೀರ್ಥಕ್ಷೇತ್ರವೊಂದನ್ನು ಸಂದರ್ಶಿಸಿ, ಪಾಪಪುಣ್ಯಗಳ ಜಮಾ ಲೆಕ್ಕವನ್ನು ಸರಿಪಡಿಸಿಕೊಳ್ಳುವ ಲೆಕ್ಕಾಚಾರವಲ್ಲ. ಇದೆಲ್ಲದಕ್ಕೂ ಮೀರಿದ ಇನ್ಯಾವುದೋ ಕರೆ ನಮ್ಮನ್ನು ಕುಂಭಮೇಳದೆಡೆಗೆ ಸೆಳೆಯುತ್ತದೆ. ನನ್ನ ಪ್ರವಾಸದ ಬಯಕೆಯ ಹಲವು ಅಪೂರ್ಣ ಕನಸುಗಳಲ್ಲಿ, ತೀರದ ಆಸೆಗಳಲ್ಲಿ ಕುಂಭಮೇಳದಲ್ಲಿ ಭಾಗಿಯಾಗುವುದು ಸಹ ಒಂದು. 2019ರಲ್ಲಿ ಪ್ರಯಾಗದಲ್ಲಿ ನಡೆದ ಅರ್ಧ ಕುಂಭಕ್ಕೆ ಹೋಗುವ ತವಕವಿದ್ದರೂ ಆಗ ಭಾಗಿಯಾಗಿದ್ದ ಯಾವುದೋ ಪ್ರಾಜೆಕ್ಟ್ ಕಾರಣಕ್ಕೆ ಹೋಗಲಾಗಿರಲಿಲ್ಲ. ಮೊನ್ನೆ ’ಡಿಸ್ಕವರಿ ಪ್ಲಸ್’ನಲ್ಲಿ ಒಳ್ಳೆಯ ಡಾಕ್ಯುಮೆಂಟರಿಗಳಿಗಾಗಿ ಹುಡುಕುತ್ತಿದ್ದಾಗ ಇದು ಕಣ್ಣಿಗೆ ಬಿತ್ತು. ಅದೆಂತಹ ದೃಶ್ಯವೈಭವ, ಬಣ್ಣಗಳ ಓಕುಳಿಯಾಟದ ಬಹುತ್ವದ ನಿತ್ಯವಸಂತ ಇಲ್ಲಿತ್ತು!

ಕುಂಭಮೇಳ – ಹನ್ನೆರಡು ವರ್ಷಗಳಲ್ಲಿ ನಾಲ್ಕು ಸಲ, ಗಂಗಾ ದಂಡೆಯ ಹರಿದ್ವಾರ, ಶಿಪ್ರಾ ದಡದ ಉಜ್ಜಯನಿ, ಗೋದಾವರಿ ತಟದ ನಾಸಿಕ ಮತ್ತು ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮದ ಪ್ರಯಾಗ (ಅಲಹಾಬಾದ್) – ಈ ನಾಲ್ಕು ಸ್ಥಳಗಳಲ್ಲಿ ಆವರ್ತವಾಗಿ ನಡೆಯುವ ಈ ಮೇಳ ಜಗತ್ತಿನಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದು ಎಂದು ಹೆಸರು ಪಡೆದಿದೆ. ಇದರ ಮೊದಲ ಉಲ್ಲೇಖವನ್ನು ಹ್ಯುಎನ್ ತ್ಸಾಂಗ್ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಆದಿ ಶಂಕರರ ಹೆಸರೂ ಸಹ ಇದರೊಡನೆ ಹೆಣೆದುಕೊಂಡಿದೆ.

ಈ ಕುಂಭ ಮೇಳಗಳ ಜೊತೆಯಲ್ಲೇ ಅರ್ಧಕುಂಭ ಮೇಳ, ವಾರ್ಷಿಕ ಮಾಘಮೇಳಗಳು ಸಹಾ ನಡೆಯುತ್ತವೆ. 144 ವರ್ಷಗಳಿಗೊಮ್ಮೆ ಪ್ರಯಾಗದಲ್ಲಿ ಮಹಾಕುಂಭಮೇಳವನ್ನು ಆಚರಿಸಲಾಗುತ್ತದೆ. ಕಡೆಯದಾಗಿ ಈ ಮಹಾಕುಂಭ ನಡೆದದ್ದು 2001ರಲ್ಲಿ ಪ್ರಯಾಗದಲ್ಲಿ. ಜಗತ್ತಿನ ಎಲ್ಲೆಡೆಯಿಂದ ಜನ ಈ ಮೇಳ ನೋಡಲು ಸೇರುತ್ತಾರೆ. 2019ರಲ್ಲಿ ಪ್ರಯಾಗದಲ್ಲಿ ನಡೆದದ್ದು ಅರ್ಧ ಕುಂಭ. ಇಲ್ಲಿಗೆ ಬಂದವರ ಅಂದಾಜು ಸಂಖ್ಯೆ ಸುಮಾರು 220 ಮಿಲಿಯನ್. ಇದು ಲಂಡನ್ ಜನಸಂಖ್ಯೆಯ ದುಪ್ಪಟ್ಟು ಸಂಖ್ಯೆ ಎಂದು ಡಾಕ್ಯುಮೆಂಟರಿ ಹೇಳುತ್ತದೆ.

ಸಾಧಾರಣವಾಗಿ ಕುಂಭಮೇಳ ಎಂದೊಡನೇ ನೆನಪಾಗುವುದು ನಾಗಾಸಾಧುಗಳು. ದಿಗಂಬರ – ದಿಕ್ಕುಗಳನ್ನೇ ಅಂಬರ, ವಸ್ತ್ರವಾಗಿ ಧರಿಸಿದವರು. ಈ ನಾಗಾ ಸಾಧುಗಳು ಜಡೆಗಟ್ಟಿದ ತಲೆಕೂದಲು, ಮೈತುಂಬಾ ಧರಿಸಿಕೊಂಡ ವಿಭೂತಿ, ವಿಚಿತ್ರ ತೀಕ್ಷ್ಣತೆಯ ಕಣ್ಣುಗಳು, ರುದ್ರಾಕ್ಷಿ, ಕೈಯಲ್ಲಿನ ತ್ರಿಶೂಲ, ಭಲ್ಲೆ, ಕತ್ತಿ ಇತ್ಯಾದಿಗಳ ಮೂಲಕ ಒಂದೇ ಸಮಯಕ್ಕೆ ನಮ್ಮಲ್ಲಿ ಹೆಡೆ ಆಡಿಸುವ ಸರ್ಪವೊಂದರ ಹೆದರಿಕೆ ಮತ್ತು ಆಕರ್ಷಣೆಯನ್ನು ನಮ್ಮ ಮನಸ್ಸಿನಲ್ಲಿ ಹುಟ್ಟುಹಾಕುತ್ತಾರೆ. ಇವರ ಜೊತೆಗೆ ಕುಂಭದಲ್ಲಿ ಹಿಂದೂ ಸಂಪ್ರದಾಯದ ಹದಿಮೂರು ಅಖಾಡಾ ಸಂಪ್ರದಾಯಗಳಿಗೆ ಸೇರಿದ ಹಲವಾರು ಪರಂಪರೆಗಳು ಭಾಗವಹಿಸುತ್ತವೆ. ಸನ್ಯಾಸಿ ಅಖಾಡ, ಬೈರಾಗಿ ಅಖಾಡಾ, ಉದಾಸಿ ಅಖಾಡ, ಕಲ್ಪವಾಸಿ ಅಖಾಡಾಗಳ ನಡುವೆ ಇಲ್ಲಿ ಸಾಧ್ವಿನಿಯರಿಗಾಗಿ ಇರುವ ‘ಪರಿ ಅಖಾಡಾ’ ಸಹ ಇದೆ. ಅಖಾಡಾಗಳ ವಿಷಯ ಮತ್ತು ಅವುಗಳ ಸ್ನಾನದ ಪಾಳಿಯ ಹಕ್ಕು ಇಲ್ಲಿ ಜೀವನ್ಮರಣದ ಪ್ರಶ್ನೆ. ನಿರ್ಧಾರಿತವಾದ ಪಾಳಿಯಲ್ಲಿಯೇ ಮಕರ ಸಂಕ್ರಾಂತಿಯ ಮಹೂರ್ತದಲ್ಲಿ ಶಾಹಿ ಸ್ನಾನ ನಡೆಯಬೇಕು. ಈ ವಿಷಯದಲ್ಲಿ ಮಾರಾಮಾರಿ ಹೋರಾಟ ಸಹ ನಡೆದ ಉದಾಹರಣೆಗಳಿವೆ.

‘ಶಾಹಿ ಸ್ನಾನ’ – ಇಲ್ಲಿ ಶಾಹಿ ಎಂದರೆ ರಾಯಲ್ ಎನ್ನುವ ಅರ್ಥದಲ್ಲಿ ನೋಡಬಹುದು. ಸಂಕ್ರಾಂತಿಯ ಆ ಶುಭಸಮಯದಲ್ಲಿ, ಮಾಘಮಾಸದ ಚಳಿಯಲ್ಲಿ, ಮಂಜಿನಂತೆ ಕೊರೆಯುವ ನದಿಯ ನೀರಿನಲ್ಲಿ ಮಾಡುವ ಸ್ನಾನವೇ ಶಾಹಿ ಸ್ನಾನ. ಎಲ್ಲಾ ಸಾಧು ಮಹಾರಾಜರ ನಡುವೆಯೂ ಅಗ್ರಪಾಳಿ ನಾಗಾ ಸಾಧುಗಳದು. ಆಮೇಲೆ ಬೇರೆಬೇರೆ ಅಖಾಡಾಗಳದು, ಕಡೆಯಲ್ಲಿ ಜನಸಾಮಾನ್ಯರದ್ದು. ಸಂಕ್ರಾಂತಿಯ ಆ ಮುಹೂರ್ತದಷ್ಟೇ ಮುಖ್ಯವಾದ ಇನ್ನೊಂದು ದಿನ ಮೌನಿ ಅಮಾವಾಸ್ಯೆಯದು. ಈ ಸಲದ ಕುಂಭದ ಮೌನಿ ಅಮಾವಾಸ್ಯೆಯಂದು ಅಲ್ಲಿಗೆ ಬಂದವರ ಸಂಖ್ಯೆ ಸುಮಾರು 50 ದಶಲಕ್ಷ ಎಂದು ಒಂದು ಲೆಕ್ಕ ಹೇಳುತ್ತದೆ.

ಅಲಹಾಬಾದ್ ಅಥವಾ ಪ್ರಯಾಗದಲ್ಲಿ ನಡೆದ ಅರ್ಧ ಕುಂಭ ಈ ಸಾಕ್ಷ್ಯಚಿತ್ರದ ವಸ್ತು. ಇದಕ್ಕಾಗಿ ಮಾಡಿಕೊಂಡ ಸಿದ್ಧತೆಗಳು, ಇದಕ್ಕಾಗಿಯೇ ನಿರ್ಮಾಣವಾದ 32 ಕಿಲೋಮೀಟರ್‌ಗಳಷ್ಟು ಉದ್ದದ ತಾತ್ಕಾಲಿಕ ಟೆಂಟ್ ಪಟ್ಟಣ, 22 ತೇಲುವ ಸೇತುವೆಗಳೊಂದಿಗೆ ಸಜ್ಜಾದ ನಗರ, ಇಡೀ ನಗರವೇ ಒಂದು ಬೃಹತ್ ಆರ್ಟ್ ಇನ್‌ಸ್ಟಾಲೇಷನ್‌ ಆಗುವ ರೀತಿ, ಅಖಾಡಾಗಳ ಪೆಂಡಾಲ್, ರಕ್ಷಣಾ ವ್ಯವಸ್ಥೆ, ಸಾಮುದಾಯಿಕ ಅಡಿಗೆಮನೆಗಳು ಎಲ್ಲದರ ಬಗ್ಗೆ ಈ ಸಾಕ್ಷ್ಯಚಿತ್ರ ಮಾತನಾಡುತ್ತದೆ. ಅನೇಕ ವಿದೇಶಿಯರು ಪ್ರತಿ ಮೇಳಕ್ಕೂ ತಪ್ಪದೆ ಆಗಮಿಸುತ್ತಾರೆ. ಕೆಲವರು ಮುಕ್ತಿಗಾಗಿ ಬಂದರೆ ಕೆಲವರು ಜೀವನದ ಸಾಕ್ಷಾತ್ಕಾರಕ್ಕಾಗಿ.

ಕೆಲವರು ಇಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ಕಳೆದು ಹೋಗುತ್ತವೆ ಎಂದರೆ, ತನ್ನ ಮೂರು ವರ್ಷ ವಯಸ್ಸಿನಿಂದ ಒಂದು ಮೇಳವನ್ನೂ ತಪ್ಪಿಸದ ಪ್ರೌಢ ಛಾಯಾಗ್ರಾಹಕನೊಬ್ಬ ನಾನಿಲ್ಲಿ ಬದುಕಿನ ಕಥೆಗಳಿಗಾಗಿ ಬರುತ್ತೇನೆ ಎನ್ನುತ್ತಾನೆ. ತಮ್ಮ ನೋಟ, ನಿಲುವು, ಇರುವಿಕೆ, ಎಳೆಯುವ ಚಿಲುಮೆ ಎಲ್ಲದರಲ್ಲೂ ಗೂಢತೆಯನ್ನು ಹೊಂದಿದ ಸಾಧುಗಳ ಕಣ್ಣುಗಳಲ್ಲಿ ನಿಗೂಢ ಕುಂಭ ಮೇಳ ಇದ್ದರೆ, ಇನ್ನೂ ಕೆಲವು ಸಾಧುಗಳು ಕಣ್ಣಿಗೆ ಕಪ್ಪು ಕನ್ನಡಕ ಏರಿಸಿ, ನಗುತ್ತಾ ಕ್ಯಾಮೆರಾಕ್ಕೆ ಫೋಸು ಕೊಡುತ್ತಿರುತ್ತಾರೆ.

ಕಳೆದುಹೋದವರ ಬಗ್ಗೆ ಮಾಹಿತಿ ಕೊಡುವ ಕೇಂದ್ರವೊಂದರಲ್ಲಿ ಮಗುವೊಂದು ಅಪ್ಪ ಅಮ್ಮ ಹುಡುಕಿಕೊಂಡು ಬರುತ್ತಾರೆ ಬಿಡು ಎಂದು ತನ್ನಪಾಡಿಗೆ ತಾನು ಆರಾಮಾಗಿ ಮಣ್ಣಿನಲ್ಲಿ ಆಡುತ್ತಿದ್ದರೆ, ತುಂಬು ಪ್ರಾಯದ ಅಜ್ಜನೊಬ್ಬ ಮನೆಯವರು ಬಾರದೆಯೇ ಉಳಿದುಬಿಟ್ಟರೆ, ಹುಡುಕದೆಯೇ ಇದ್ದುಬಿಟ್ಟರೆ ಎನ್ನುವಂತೆ ನಿಂತಲ್ಲೇ ಕಣ್ಣನೀರನ್ನು ಒರೆಸಿಕೊಳ್ಳುತ್ತಿರುತ್ತಾನೆ. ಪ್ರತಿದಿನ ಊಟದ ಹೊತ್ತಿಗೆ ನೂರಾರು ಕೆಜಿ ಅಕ್ಕಿ, ಆಲೂಗಡ್ಡೆ, ಗಜ್ಜರಿ ಬೆಂದು, ಸಾವಿರಗಟ್ಟಲೆ ಪೂರಿಗಳು ಎಣ್ಣೆಯಲ್ಲಿ ಮಿಂದು ಫಳಫಳ ತೇಲುತ್ತಿದ್ದರೆ ಅಲ್ಲೇ ಇನ್ನೊಂದು ಕಡೆ ಅಡುಗೆ ಟ್ರಕ್ ಒಂದರಲ್ಲಿ ಆಲೂ ಫ್ರೈ ಮತ್ತು ಪಾಸ್ತಾ ತಯಾರಾಗುತ್ತಿರುತ್ತದೆ.

2019ರ ಕುಂಭದ ವಿಶೇಷ ಎಂದರೆ, ಮೊದಲ ಸಲ ಇಲ್ಲಿ ತೃತೀಯ ಲಿಂಗೀಯರಿಗಾಗಿ ’ಕಿನ್ನರ ಅಖಾಡ’ ಸಹ ಅನುಮೋದಿತವಾಗಿರುತ್ತದೆ. ಸಾಕ್ಷ್ಯಚಿತ್ರದ ಸಂದರ್ಶಕರೊಂದಿಗೆ ಮಾತನಾಡುವಾಗ ಹಲವಾರು ಮಂದಿ ತೃತೀಯ ಲಿಂಗೀಯರು ಈ ಕುರಿತು ತಮ್ಮ ಹೆಮ್ಮೆಯನ್ನು ಹಂಚಿಕೊಂಡರು. ತಮ್ಮನ್ನು ಅಂಚಿಗೆ ತಳ್ಳಿದ ಅದೇ ವ್ಯವಸ್ಥೆಯ ಅನುಮೋದನೆ ಅಗತ್ಯವಾಗುವ ಈ ಪರಿ ಅಷ್ಟು ಸುಲಭವಾಗಿ ಅರ್ಥವಾಗುವಂಥಾದ್ದಲ್ಲ. ನಿಮ್ಮನ್ನು ಬಹಿಷ್ಕರಿಸುವ ದೇವಸ್ಥಾನವನ್ನು ನೀವೂ ಬಹಿಷ್ಕರಿಸಿ ಎಂದು ಹೇಳುವಷ್ಟು ಸುಲಭವಲ್ಲ ಶತಮಾನಗಳಿಂದ ಆಳವಾಗಿ ಬೇರೂರಿರುವ ನಂಬಿಕೆಗಳಿಗೆ ಪರ್ಯಾಯ ನಂಬಿಕೆಯ ನೆಲೆಯನ್ನು ಸೃಷ್ಟಿಸುವುದು.

ಕುಂಭಮೇಳದ ಬಗ್ಗೆ ಹಲವಾರು ಐತಿಹ್ಯಗಳಿವೆ. ಅಮೃತದ ಹುಡುಕಾಟಕ್ಕಾಗಿ ಕ್ಷೀರಸಾಗರವನ್ನು ಕಡೆಯಲಾಗುತ್ತದೆ. ಇದು ದೇವತೆಗಳೊಬ್ಬರ ಕೈಲಿ ಆಗುವ ಕೆಲಸವಲ್ಲ ಎಂದು, ಅಮೃತವನ್ನು ಹಂಚಿಕೊಳ್ಳೋಣ ಎಂದು ಹೇಳಿ ದಾನವರನ್ನು ಸಹ ಕರೆಯಲಾಗುತ್ತದೆ. ಸಮುದ್ರಮಂಥನ ನಡೆದೇ ನಡೆಯುತ್ತದೆ. ಕಡೆಗೆ ಅಮೃತ ತೇಲಿ ಬಂದಾಗ ಅದನ್ನು ದಾನವರಿಗೆ ಕೊಡದಂತಿರಲು ವಿಷ್ಣು ಆ ಕುಂಭವನ್ನು ಗರುಡನ ಕೈಲಿ ಕೊಟ್ಟು ಹಾರಿಹೋಗಲು ಹೇಳುತ್ತಾನೆ ಎನ್ನುವುದು ಒಂದು ಕಥೆ. ಹಾಗೆ ಹಾರುವಾಗ ಕುಂಭದಿಂದ ಚೆಲ್ಲಿದ ನಾಲ್ಕು ಹನಿಗಳೇ ಇಂದು ನಾಲ್ಕು ಕುಂಭಮೇಳ ನಡೆಯುವ ಸ್ಥಳಗಳು. ಮೊದಲೆಲ್ಲಾ ಈ ಕಥೆಯನ್ನು ಕೇಳುವಾಗ ನಮಗೇ ತಿಳಿಯದಂತೆ ನಾವು ದೇವತೆಗಳ ಪಕ್ಷ ವಹಿಸಿಕೊಂಡುಬಿಡುತ್ತಿದ್ದೆವು. ಆದರೆ ಈಗ ಅರ್ಧರ್ಧ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡು, ಅದನ್ನು ಮುರಿದವರು ದೇವತೆಗಳಲ್ಲವೆ ಎಂದು ಮನಸ್ಸು ಪ್ರಶ್ನೆ ಕೇಳುತ್ತದೆ.

ನೋಡಲು ಕಣ್ಣಿಗೆ ಹಬ್ಬದಂತಿರುವ ಈ ಸಾಕ್ಷ್ಯಚಿತ್ರ ನೋಡಿದ ಮೇಲೆ ನಮ್ಮೊಳಗೆ ಏನನ್ನು ಉಳಿಸುತ್ತದೆ ಎಂದು ಹುಡುಕಿದರೆ ಅರಿವಾಗುವುದು, ಅದು ಉಳಿಸುವುದು ದೃಶ್ಯಗಳನ್ನುಮಾತ್ರ. ಈ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಸುಮಾರು ಒಂದು ವರ್ಷ ತೆಗೆದುಕೊಳ್ಳಲಾಗಿದೆ. ಅತ್ಯುತ್ತಮ ಕ್ಯಾಮೆರಾಗಳನ್ನು ಬಳಸಿ, ವೈಭವೋಪೇತವಾಗಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಆದರೆ ಈ ತಾಂತ್ರಿಕ ಶ್ರೀಮಂತಿಕೆಯೇ ಅದಕ್ಕೊಂದು ಮಿತಿ ಸಹ ಆಗಿರುವುದು ವಿಷಾದನೀಯ. ಎಲ್ಲವನ್ನೂ ಚಂದಗೊಳಿಸುವ ಹಂಬಲದಲ್ಲಿ, ಚೆಂದವಾದದ್ದನ್ನೇ ‘ತೋರಿಸು’ವ ಹಪಾಹಪಿಯಲ್ಲಿ ಈ ಸಾಕ್ಷ್ಯಚಿತ್ರಕ್ಕೆ ಕುಂಭಮೇಳದ ಆತ್ಮ ದಕ್ಕುವುದೇ ಇಲ್ಲ. ಡ್ರೋನ್‌ನಿಂದ ಚಿತ್ರೀಕರಿಸಿದ ‘ಶಾಹಿ ಸ್ನಾನ’ದ ಓಟ, ನಾಗಾಸಾಧುಗಳ ನಿಗೂಢ ಚಿತ್ರಗಳು, ಕಗ್ಗತ್ತಲ ರಾತ್ರಿಯಲ್ಲಿ ದೀಪಗಳ ನಡುವೆ ನದಿ, ಹೊಳೆಹೊಳೆಯುವ ಬಣ್ಣಗಳಾಚೆಗೆ ಈ ಸಾಕ್ಷ್ಯಚಿತ್ರ ಹೆಚ್ಚಿನದೇನನ್ನೂ ನಮ್ಮೊಳಗೆ ಉಳಿಸುವುದಿಲ್ಲ. ಕಣ್ಣು ಈ ಸೊಗಸನ್ನು ಒಳಗಿಳಿಸಿಕೊಳ್ಳುವಾಗಲೂ ಮನಸ್ಸು ಇನ್ನೇನೋ ಕಡಿಮೆಯಾಗಿದೆ ಎಂದು ಹೇಳುತ್ತಲೇ ಇರುತ್ತದೆ.

ಮುಂದಿನ ಪೂರ್ಣಕುಂಭಮೇಳ ನಡೆಯುವುದು 2025ರಲ್ಲಿ. ಅಷ್ಟರಲ್ಲಿ ಕೋವಿಡ್‌ನ ಎಲ್ಲ ಅವತಾರಗಳೂ ಮುಗಿದು, ಅದರ ಪರದೆ ಇಳಿದಿರಬಹುದೆ? ಈಗಿನಿಂದಲೇ ನಾನು ಕಾಯುತ್ತಿದ್ದೇನೆ. ಅಲ್ಲಿನ ತೀರ್ಥಸ್ನಾನಕ್ಕಾಗಿಯಲ್ಲ, ಅಲ್ಲಿ ಕಂಡುಬರುವ ಆದಿಮ ಭಾರತದ ಬಹುತ್ವದ ರೂಪಕ್ಕಾಗಿ, ನೆಲಮೂಲದ ಆಚರಣೆಗಳಿಗಾಗಿ, ಸಾಮುದಾಯಿಕ ಅನುಭಾವಕ್ಕಾಗಿ, ಆ ಎಲ್ಲಾ ಕೊಡುಕೊಳ್ಳುವಿಕೆಯ ಒಂದು ಸಣ್ಣ ಭಾಗವಾಗುವ ಆಸೆಗಾಗಿ…

LEAVE A REPLY

Connect with

Please enter your comment!
Please enter your name here