ದೇವನೂರು ಚಂದ್ರು ನಿರ್ದೇಶನದಲ್ಲಿ ವಿನಯ್‌ ರಾಜಕುಮಾರ್‌ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಗ್ರಾಮೀಣ ಹಿನ್ನೆಲೆಯ ಕಥಾವಸ್ತು. ಸ್ಥಗಿತಗೊಂಡಿದ್ದ ಪ್ರಾಜೆಕ್ಟ್‌ ಮತ್ತೆ ಟೇಕ್‌ ಆಫ್‌ ಆಗಿದ್ದು, ಚಿತ್ರರಂಗದ ಹಲವು ಗಣ್ಯರು ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.

ವಿನಯ್‌ ರಾಜಕುಮಾರ್‌ ಅವರ ‘ಗ್ರಾಮಾಯಣ’ಕ್ಕೆ ಚಾಲನೆ ಸಿಕ್ಕಿದೆ. ಐದು ವರ್ಷಗಳ ಹಿಂದೆ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಪ್ರಾಜೆಕ್ಟ್‌ ಇದು. ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್‌ ಜೊತೆಗೂಡಿ ಮತ್ತೆ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿನಯ್‌ ಚಿತ್ರಕ್ಕೆ ಹಾರೈಸಲು ಚಿತ್ರರಂಗದ ಪ್ರಮುಖರನೇಕರು ಆಗಮಿಸಿದ್ದರು. ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿತು. ಚಿತ್ರದ ಮೊದಲ ದೃಶ್ಯಕ್ಕೆ ಉಪೇಂದ್ರ ಆರಂಭ ಫಲಕ ತೋರಿಸಿದರೆ, ಅಶ್ವಿನಿ ಪುನೀತ್‌ ರಾಜಕುಮಾರ್‌ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಆರ್ ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕರು ಮುಹೂರ್ತಕ್ಕೆ ಸಾಕ್ಷಿಯಾಗಿದ್ದು ವಿಶೇಷ.

ನಿರ್ದೇಶಕ ದೇವನೂರು ಚಂದ್ರು ಅವರ ಬಹುವರ್ಷಗಳ ಕನಸು ‘ಗ್ರಾಮಾಯಣ’. ಚಿತ್ರಕ್ಕೆ ನಾಯಕನನ್ನು ಅವರು ಆಯ್ಕೆ ಮಾಡಿದ್ದು ಹೇಗೆ? ದೇವನೂರು ಚಂದ್ರು ಹೇಳುವುದು ಹೀಗೆ – ‘ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೆ ಈ ಕಥೆಗೆ ಇವರೇ ಸೂಕ್ತ ನಾಯಕ ಅಂದುಕೊಂಡೆ. ಅವರು ಕತೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು’

ತಮ್ಮ ಸಿನಿಮಾ ಕುರಿತು ಮಾತನಾಡುವ ವಿನಯ್‌ ರಾಜಕುಮಾರ್‌, ‘ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ “ಗ್ರಾಮಾಯಣ. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗಡೆ ಇತರೆ ಪ್ರಮುಖ ಕಲಾವಿದರು.

Previous articleSpider Man – Across the Spider Verse | ಸದ್ದು ಮಾಡುತ್ತಿದೆ ಅನಿಮೇಷನ್‌ ಸಿನಿಮಾ
Next articleಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘Supplier ಶಂಕರ’ | ನಿಶ್ಚಿತ್‌ – ದೀಪಿಕಾ ಜೋಡಿ ಸಿನಿಮಾ

LEAVE A REPLY

Connect with

Please enter your comment!
Please enter your name here