ನಟ ವಿನಯ್‌ ರಾಜಕುಮಾರ್‌ ಅಭಿನಯದ ‘ಪೆಪೆ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಶ್ರೀಲೇಶ್‌ ನಾಯರ್‌ ನಿರ್ದೇಶನದ ಗ್ಯಾಂಗ್‌ಸ್ಟರ್‌ ಡ್ರಾಮಾ ಕತೆಯಲ್ಲಿ ವಿನಯ್‌ ಡಾರ್ಕ್‌ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾದಾಗಲೇ ‘ಪೆಪೆ’ ಸಿನಿಮಾ ಕುರಿತು ಚರ್ಚೆಯಾಗಿತ್ತು. ಈ ಹಿಂದಿನ ಅವರ ಮೂರು ಸಿನಿಮಾಗಳು ವಿನಯ್‌ ಲವ್‌, ಫ್ಯಾಮಿಲಿ – ಡ್ರಾಮಾ, ಥ್ರಿಲ್ಲರ್‌ ಜಾನರ್‌ನಲ್ಲಿದ್ದವು. ಇಂದು ‘ಪೆಪೆ’ ಟೀಸರ್‌ ಬಿಡುಗಡೆಯಾಗಿದ್ದು ವಿನಯ್‌ ಪಾತಕ ಜಗತ್ತಿನ ಪಾತ್ರ ನಿರ್ವಹಿಸುತ್ತಿರುವ ಸೂಚನೆ ಸಿಕ್ಕಿದೆ. ಫ್ಯಾಮಿಲಿ ಕತೆಗಳಿಂದ ಬೇರೆಯದ್ದೇ ಜಾನರ್‌ಗೆ ಹೊರಳುವ ಧೈರ್ಯ ಮಾಡಿದ್ದಾರೆ ವಿನಯ್‌. ಟೀಸರ್‌ ನೋಡಿದರೆ ಚಿತ್ರದ ನಾಯಕ ‘ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ’ ಎನ್ನುವಂತೆ ಕಾಣಿಸುತ್ತಿದೆ. ಕೈಲಿ ಮಚ್ಚು ಹಿಡಿದು ಕೊಚ್ಚುವ ಹೀರೋ ಆಗಿ ವಿನಯ್‌ ತನ್ನ ಜನರ ರಕ್ಷಣೆಗೆ ನಿಲ್ಲುವ ವ್ಯಕ್ತಿಯಾಗಿ ತೋರುತ್ತಾರೆ. ಟೀಸರ್‌ನ ಕೊನೆಯ ದೃಶ್ಯ ಇದನ್ನು ಹೇಳುತ್ತಿದೆ. ರಕ್ತಸಿಕ್ತ ಮೈಕೈಗೆ ನೀರು ಸುರಿದುಕೊಳ್ಳುವ ಹೀರೋನ ಕತೆ ಕುಟುಂಬದ ಎಲ್ಲರೂ ಕುಳಿತು ನೋಡುವಂತಹ ಚಿತ್ರವಾಗುತ್ತದೆಯೇ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದು ಹೊಸ ತಲೆಮಾರಿನ ನಿರ್ದೇಶಕರು ಕತೆ ಹೇಳುವ ಶೈಲಿ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

“ಇದು 1970ರಿಂದ 2020ರ ಕಾಲಘಟ್ಟದಲ್ಲಿ ನಡೆಯುವ ಕತೆ. ಅರುಣಾ ಬಾಲರಾಜ್‌, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ, ಕಾಜಲ್‌ ಕುಂದರ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದೆ” ಎನ್ನುತ್ತಾರೆ ನಿರ್ದೇಶಕ ಶ್ರೀಲೇಶ್‌ ನಾಯರ್‌. ಕೊಡಗಿನಲ್ಲಿ ಚಿತ್ರೀಕರಣ ನಡೆದಿದ್ದು, ಕ್ರೈಂ – ಡ್ರಾಮಾ ಕತೆಗೆ ಅಲ್ಲಿನ ಕಾಡು, ಪರಿಸರ ಪರಿಣಾಮಕಾರಿ ಹಿನ್ನೆಲೆ ಒದಗಿಸಿದೆ. ಉದಯ ಶಂಕರ್‌ ನಿರ್ಮಾಣದ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಸಮರ್ಥ ಉಪಾಧ್ಯ ಛಾಯಾಗ್ರಹಣ ನಿರ್ವಹಿಸಿದ್ದು, ಮನು ಶೇಡ್ಗಾರ್‌ ಸಂಕಲನ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ವಿನಯ್‌ ರಾಜಕುಮಾರ್‌ ಅಭಿನಯದ ‘ಅದೊಂದಿತ್ತು ಕಾಲ’ ಚಿತ್ರವೂ ತೆರೆಗೆ ಸಿದ್ಧವಾಗಿದೆ. ಇವುಗಳ ಹೊರತಾಗಿ ಮತ್ತೆರೆಡು ಹೊಸ ಚಿತ್ರಗಳಿಗೆ ವಿನಯ್‌ ಸಹಿ ಹಾಕಿದ್ದಾರೆ.

Previous articleಟ್ರೈಲರ್‌ | ದುಲ್ಕರ್‌ ಸಲ್ಮಾನ್‌ ‘ಹೇ ಸಿನಾಮಿಕಾ’; ತ್ರಿಕೋನ ಪ್ರೇಮದ ತಮಿಳು ಸಿನಿಮಾ
Next articleತಂದೆ, ಬ್ಯಾಡ್ಮಿಂಟನ್‌ ಚಾಂಪಿಯನ್‌ ಪ್ರಕಾಶ್‌ ಪಡುಕೋಣೆ ಬಯೋಪಿಕ್‌ ನಿರ್ಮಿಸಲಿರುವ ದೀಪಿಕಾ

LEAVE A REPLY

Connect with

Please enter your comment!
Please enter your name here