‘ಪೆಪೆ’ ಸಿನಿಮಾ ವಿನಯ್ ರಾಜಕುಮಾರ್ ಅವರ ವೃತ್ತಿಬದುಕಿಗೆ ತಿರುವು ನೀಡಲಿದೆ ಎಂದೇ ಉದ್ಯಮದವರು ಮಾತನಾಡುತ್ತಿದ್ದಾರೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಚಿತ್ರ ಮೇಕಿಂಗ್‌ನಿಂದಾಗಿ ಗಮನ ಸೆಳೆಯುತ್ತಿರುವುದಂತೂ ಹೌದು. ಇದೀಗ ವಿನಯ್ ಬರ್ತ್‌ಡೇ ನಿಮಿತ್ತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ವರನಟ ರಾಜಕುಮಾರ್ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಅವರಿಗೆ ಬೆಳ್ಳಿತೆರೆಯಲ್ಲಿ ದೊಡ್ಡ ಯಶಸ್ಸಿನ್ನೂ ಸಿಕ್ಕಿಲ್ಲ. ಈ ಹಿಂದೆ ಫೀಲ್ ಗುಡ್ ಸಿನಿಮಾಗಳ ಮೂಲಕ ಪ್ರೇಕ್ಷಕರೆದುರು ಬಂದಿದ್ದರು ಅವರು. ಇದೀಗ ‘ಪೆಪೆ’ ಅವರ ಇಮೇಜನ್ನು ಬದಲಿಸುವ ಸೂಚನೆ ನೀಡುತ್ತದೆ. ಗ್ಯಾಂಗ್‌ಸ್ಟರ್ ಕತೆಯಲ್ಲಿ ಅವರು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರಿಸಿರುವ ಕತೆ ವಿಶೇಷವಾಗಿ ಮೇಕಿಂಗ್‌ನಿಂದ ಆಕರ್ಷಿಸುತ್ತದೆ. ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೇದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ. ರವಿವರ್ಮಾ, ಚೇತನ್ ಡಿಸೋಜಾ, ಡಿಫರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್‌ನಡಿ ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಂ ಕೋಲಾರ ಚಿತ್ರ ನಿರ್ಮಿಸಿದ್ದಾರೆ. ಬಿಡುಗಡೆ ದಿನಾಂಕವಿನ್ನೂ ಹೊರಬೀಳಬೇಕಿದೆ.










