ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿನಿಮಮ್ ಗ್ಯಾರಂಟಿ ಹೀರೋ ಎನಿಸಿಕೊಂಡಿರುವ ವಿನೋದ್ ಪ್ರಭಾಕರ್ ಈಗ ತಮ್ಮ ಇನ್ನೊಂದು ಚಿತ್ರದೊಂದಿಗೆ ತೆರೆಗೆ ಬರಲಿದ್ದಾರೆ. ಅವರ ‘ವರದ’ ಸಿನಿಮಾ ಈಗ ಡಬ್ಬಿಂಗ್ ಮುಗಿಸಿ ಬಿಡುಗಡೆಯ ಹಂತದಲ್ಲಿದೆ.
ವಿನೋದ್ ಪ್ರಭಾಕರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ವಿಶೇಷ ಸ್ಥಾನವಿದೆ. ಕೆಲವು ದೊಡ್ಡ ಸ್ಟಾರ್ ನಾಯಕರ ಸಿನಿಮಾಗಳು ಆರಂಭದ ಎರಡು ಮೂರು ವಾರಗಳಲ್ಲೇ ಚಿತ್ರಮಂದಿರಗಳಲ್ಲಿ ಹಣ ದೋಚಿದರೆ, ಇನ್ನು ಕೆಲವರ ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ಸದ್ದು ಮಾಡದೇ ಇದ್ದರೂ ಸ್ಯಾಟಲೈಟ್ ರೈಟ್ಸ್, ಡಬ್ಬಿಂಗ್ ರೈಟ್ಸ್‌ಗಳ ಮೂಲಕ ನಿರ್ಮಾಪಕರನ್ನು ಸೇಫ್ ಮಾಡುತ್ತವೆ. ಅಂತಹ ನಾಯಕರ ಸಾಲಿನಲ್ಲಿ ವಿನೋದ್ ಪ್ರಭಾಕರ್ ಪ್ರಮುಖರು. ಅವರ ಸಿನಿಮಾಗಳು ಭಾರತದಾದ್ಯಂತ ಡಬ್ ಆಗಿ ಅನೇಕ ಭಾಷೆಗಳಲ್ಲಿ ಬಿಡುಗಡೆ ಆಗುವುದರಿಂದ ಅವರ ಕಾಲ್ ಶೀಟ್‌ಗೆ ಸಾಕಷ್ಟು ಬೇಡಿಕೆ ಇದೆ. ಈಗ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ‘ವರದ’ ಚಿತ್ರದ ಡಬ್ಬಿಂಗ್ ಹಾಗೂ ರೀರೆಕಾರ್ಡಿಂಗ್ ಮುಕ್ತಾಯವಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ.
ಚಿತ್ರದ ಟ್ರೇಲರ್ ಕೂಡ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಕೆ.ಕಲ್ಯಾಣ್ ಹಾಗೂ ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕ ರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು.ಡಿ.ವಿ. ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನವಿದೆ. ತಂದೆ ಮಗನ ಬಾಂಧವ್ಯದ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಉಮೇಶ್ ಬಣಕಾರ್, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ.