ರಾಜ್ಯದ ಹಲವೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸಿ ಪುನೀತ್‌ ಅಂತಿಮ ದರ್ಶನ ಪಡೆದಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಸಿನಿಮಾದ ಹಲವರು ಅಪ್ಪುಗೆ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಾಳೆ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

ಅಗಲಿದ ತಮ್ಮ ನೆಚ್ಚಿನ ನಟನನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಲು ರಾಜ್ಯದ ಎಲ್ಲೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ. ರಾಜ್ಯ ಸಾರಿಗೆ ಬಸ್‌ಗಳು, ಕಾರು, ಟ್ಯಾಕ್ಸಿ, ಬೈಕುಗಳಲ್ಲಿ ತಂಡೋಪತಂಡವಾಗಿ ನಿನ್ನೆಯಿಂದಲೂ ಜನರು ಬರುತ್ತಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಅಭಿಮಾನಿ ಬಳಗವಿದು. ಜನರ ಹರಿವು ಹೆಚ್ಚಾಗುತ್ತಿದ್ದಂತೆ ಪೊಲೀಸ್ ಬಂದೋಬಸ್ತು ಕೂಡ ಹೆಚ್ಚು ಮಾಡಲಾಗಿತ್ತು. ಸಂಜೆಯವರೆಗೂ ದೊಡ್ಡ ಸಂಖ್ಯೆಯಲ್ಲೇ ಜನರು ಬರುವ ನಿರೀಕ್ಷೆ ಸಿಗುತ್ತಿದ್ದಂತೆ ನಾಳೆ ಅಂತ್ಯ ಸಂಸ್ಕಾರ ನಡೆಸುವ ನಿರ್ಧಾರ ಕೈಗೊಳ್ಳಲಾಯ್ತು. ನಾಳೆ ಬೆಳಗಿನ ಜಾವದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ಮೆರವಣಿಗೆ ಮೂಲಕ ಕಂಠೀರವ ಸ್ಟೂಡಿಯೋಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುವುದು. ನಾಳೆ ಹನ್ನೊಂದು, ಹನ್ನೆರೆಡು ಗಂಟೆ ಹೊತ್ತಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಕನ್ನಡ ಚಿತ್ರರಂಗದ ನಟ – ನಟಿಯರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸ್ಯಾಂಡಲ್‌ವುಡ್‌ನ ಸಾವಿರಾರು ಮಂದಿ ಪುನೀತ್‌ರಿಗೆ ಅಂತಿಮ ನಮನ ಸಲ್ಲಿಸಿದರು. ದಕ್ಷಿಣ ಭಾರತದ ಪ್ರಮುಖ ತಾರೆಯರಾದ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್‌, ಅರ್ಜುನ್‌ ಸರ್ಜಾ, ಶ್ರೀಕಾಂತ್, ಜ್ಯೂನಿಯರ್ ಎನ್‌ಟಿಆರ್‌, ಅಲಿ, ರಾಣಾ ದಗ್ಗುಬಾಟಿ, ಪ್ರಭುದೇವ ಹಾಗೂ ಮತ್ತಿತರರು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಪುನೀತ್‌ರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ರಾಜ್‌ ಕುಟುಂಬದೊಂದಿಗಿನ ತಮ್ಮ ಬಾಂಧವ್ಯ, ಪುನೀತ್‌ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸಚಿವರು, ವಿರೋಧ ಪಕ್ಷಗಳ ಪ್ರಮುಖ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಆಗಮಿಸಿ ಪುನೀತ್‌ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

Previous articleನೀನು ಇರದೆ ಹೋದರೂ, ನಿನ್ನ ನಗೆಯ ಬೆಳಕಿದೆ; ‘ಅಪ್ಪು’ಗೆ ಭಟ್ಟರ ಗೀತನಮನ
Next articleಬಾರದೂರಿಗೆ ಅಪ್ಪು; ಪುನೀತ್ ಅಮರ

LEAVE A REPLY

Connect with

Please enter your comment!
Please enter your name here