ಸದ್ದಿಲ್ಲದೆ ತಯಾರಾದ ವಿಷ್ಣು ವಿಶಾಲ್ ನಿರ್ಮಿಸಿ, ನಟಿಸಿರುವ ‘FIR’ ತಮಿಳು ಸಿನಿಮಾ ಈಗ ಬಿಡುಗಡೆಯ ಹೊತ್ತಿನಲ್ಲಿ ಮಾಡುತ್ತಿದೆ. ಮನು ಆನಂದ್ ನಿರ್ದೇಶನದ ಚಿತ್ರದಲ್ಲಿ ಭಯೋತ್ಪಾದನೆ ಹಿನ್ನೆಲೆಯ ಕಥಾವಸ್ತು ಇದೆ. ಫೆ.11ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.
ಸಾಮಾನ್ಯ ವ್ಯಕ್ತಿಯೊಬ್ಬನನ್ನು ಹೇಗೆ ಭಯೋತ್ಪಾದಕನೆಂದು ಬಿಂಬಿಸಲಾಗುತ್ತದೆ? ಆತ ಹೇಗೆ ತಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸುತ್ತಾನೆ ಎನ್ನುವುದು ‘FIR’ ಸಿನಿಮಾದ ಅಸಲಿ ಕಥೆ. ಭಯೋತ್ಪಾದನೆ ಹಿನ್ನೆಲೆಯಲ್ಲಿ ಸಾಗುವ ಸಿನಿಮಾದಲ್ಲಿ ವಿಷ್ಣು ವಿಶಾಲ್ ಅವರು ಇರ್ಫಾನ್ ಅಹ್ಮದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ವಿಷ್ಣು ಸಿಕ್ಸ್ ಪ್ಯಾಕ್‌ನಲ್ಲಿ ಎದುರಾಗಿದ್ದಾರೆ. ಅವರ ನಿರ್ಮಾಣ ಸಂಸ್ಥೆಯಡಿ ಸಿನಿಮಾ ತಯಾರಾಗಿದ್ದು, ಫೆ.11ರಂದು ತೆರೆಕಾಣಲಿದೆ.
ಚಿತ್ರೀಕರಣದ ಹಂತದಲ್ಲಿ ಸಿನಿಮಾ ಹೆಚ್ಚು ಸುದ್ದಿಯಾಗಿರಲಿಲ್ಲ. ಇತ್ತೀಚೆಗಷ್ಟೇ ಪ್ರಚಾರ ಆರಂಭಿಸಿರುವ ಚಿತ್ರತಂಡ ತೆಲುಗು ಭಾಷೆಯಲ್ಲೂ ತೆರೆಕಾಣುತ್ತಿದೆ. ಆಕ್ಷನ್ – ಥ್ರಿಲ್ಲರ್ ಚಿತ್ರದ ನಿರ್ದೇಶಕ ಮನು. ಮಂಜಿಮ್ ಮೋಹನ್, ರೆಬಾ ಮೋನಿಕಾ ಜಾನ್, ರೈಜ್ ವಿಲ್ಸನ್ ಚಿತ್ರದ ಮೂವರು ನಾಯಕಿಯರು. ಗೌತಮ್ ಮೆನನ್ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್, ಕೊಯಿಮತ್ತೂರು, ಕೊಚ್ಚಿ, ದೆಹಲಿ, ಕೋಲೋಂಬೋದಲ್ಲಿ ಚಿತ್ರೀಕರಣ ನಡೆದಿದೆ. ಅರುಲ್ ವಿನ್ಸಂಟ್ ಛಾಯಾಗ್ರಹಣ, ಅಶ್ವತ್ಥ ಸಂಗೀತ, ಜಿಕೆ ಪ್ರಸನ್ನ ಸಂಕಲನ ಚಿತ್ರಕ್ಕಿದೆ. ಉದಯನಿಧಿ ಸ್ಟಾಲಿನ್ ಅವರ ರೆಡ್ ಗೇಂಟ್ ಮೂವಿಸ್ ಸಂಸ್ಥೆ ತಮಿಳುನಾಡಿನಲ್ಲಿ ಹಾಗೂ ಅಭಿಷೇಕ್ ಪಿಕ್ಚರ್ಸ್ ಆಂಧ್ರದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿವೆ.