ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾಗೆ ಚಾಲನೆ ಸಿಕ್ಕಿದೆ. ಡಾರ್ಕ್ ಥ್ರಿಲ್ಲರ್ ಕಥಾಹಂದರದ ಸಿನಿಮಾ ಮೂಲಕ ನಟಿ ಪ್ರೇಮಾ ಲಾಯರ್ ಪಾತ್ರದಲ್ಲಿ ತೆರೆಗೆ ಮರಳುತ್ತಿದ್ದಾರೆ. ನಿಶಾನ್ ನಾಣಯ್ಯ ಮತ್ತು ಸೋನು ಗೌಡ ಪ್ರಮುಖ ಪಾತ್ರಧಾರಿಗಳು.
ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಲ್ಲಿ ಸಹಾಯಕರಾಗಿ ಕೆಲಸ ಮಾಡಿರುವ ವಿಕ್ರಂ ಪ್ರಭು ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಸೆಟ್ಟೇರಿದೆ. ಮೊನ್ನೆ ಸೆಟ್ಟೇರಿದ ಸಿನಿಮಾದ ಮೊದಲ ದೃಶ್ಯಕ್ಕೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಆರಂಭ ಫಲಕ ತೋರಿಸಿದರೆ, ನಟಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು. ‘ವೆಡ್ಡಿಂಗ್ ಗಿಫ್ಟ್’ನೊಂದಿಗೆ ನಟಿ ಪ್ರೇಮಾ ನಾಲ್ಕು ವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ಅವರಿಗೆ ಚಿತ್ರದಲ್ಲಿ ಲಾಯರ್ ಪಾತ್ರ. ಮುಹೂರ್ತದ ನಂತರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾಹಿತಿ ನೀಡಿದರು.
ನಿರ್ಮಾಪಕ ಮತ್ತು ನಿರ್ದೇಶಕ ವಿಕ್ರಂ ಪ್ರಭು ಅವರು ಚಿತ್ರದ ಬಗ್ಗೆ ಮಾತನಾಡಿ, “ಹಿರಿಯ ಚಿತ್ರನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಲ್ಲಿ ನಾನು ಕೆಲವು ವರ್ಷ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನೇ ಕಥೆ ಬರೆದಿದ್ದು, ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು ಆದರೆ, ಇದು ಡಾರ್ಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ” ಎಂದರು.
ನಟ ನಿಶಾನ್ ನಾಣಯ್ಯ ಅವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ ತರಭೇತಿ ಪಡೆದಿದ್ದೇನೆ. ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ಈ ಚಿತ್ರದಲ್ಲಿ ವಿಲಾಸ್ ಎನ್ನುವ ಪಾತ್ರ ನಿರ್ವಹಿಸಿಸುತ್ತಿದ್ದೇನೆ” ಎಂದರು. “ನಾನು ಈವರೆಗೂ ಮಾಡಿರದಂತಹ ಪಾತ್ರದ ನಿರೀಕ್ಷೆಯಲ್ಲಿದ್ದೆ. ಈ ಚಿತ್ರದಲ್ಲಿ ಅದು ಸಿಕ್ಕಿದೆ. ಗಂಡ – ಹೆಂಡತಿ ಮಧ್ಯೆ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು. ಎಲ್ಲರಿಗೂ ಹಿಡಿಸಲಿದೆ ಎನ್ನುವ ವಿಶ್ವಾಸವಿದೆ” ಎಂದು ತಮ್ಮ ಪಾತ್ರದ ಪರಿಚಯ ನೀಡಿದರು ನಾಯಕಿ ಸೋನು ಗೌಡ. ಬಾಲಚಂದ್ರ ಪ್ರಭು ಸಂಗೀತ ಸಂಯೋಜನೆ, ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ. ಪವಿತ್ತಾ ಲೋಕೇಶ್, ಯಮುನಾ ಶ್ರೀನಿಧಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.