ಗಾಂಧಿ ಜಯಂತಿ ಮುಗಿದರೂ ಗಾಂಧಿ ಬಗೆಗಿನ ಸಿನಿಮಾಗಳ ಕ್ರೇಜ್ ಮುಗಿದಿಲ್ಲ. ಅಂದಹಾಗೆ, ಇದು ಫೀಚರ್ ಫಿಲ್ಮ್‌ ಸುದ್ದಿಯಲ್ಲ, ಬದಲಾಗಿ ಎಸ್.ಎಲ್.ಎನ್‌ .ಸ್ವಾಮಿ ಅವರ ಸಾರಥ್ಯದ ಕಿರುಚಿತ್ರದ್ದು.

ರಂಗಭೂಮಿ ಧುರೀಣ ಎಸ್.ಎಲ್.ಎನ್‌ .ಸ್ವಾಮಿ ನೇತೃತ್ವದಲ್ಲಿ ‘ನಮೋ ಗಾಂಧಿ’ ಎಂಬ ಕಿರುಚಿತ್ರ ಕೇವಲ 24 ಗಂಟೆ ಅವಧಿಯಲ್ಲಿ ನಿರ್ಮಾಣವಾಗಿದೆ. ಗಾಂಧೀಜಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಕಿರುಚಿತ್ರ ‘ನಮೋ ಗಾಂಧಿ’. ಸುಮಾರು ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸುಮಾರು 3000ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ, ನಾಟಕ ಕ್ಷೇತ್ರದಲ್ಲೇ ಸುಮಾರು ಹದಿನೈದು ವಿಶ್ವದಾಖಲೆ ನಿರ್ಮಿಸಿರುವ, ಎದೆ ತುಂಬಿ ಹಾಡುವೆನು, ಆದರ್ಶ ದಂಪತಿಗಳು, ಕುಹು ಕುಹು, ಅಕ್ಷರ ಮಾಲೆ ಮುಂತಾದ ಕಾರ್ಯಕ್ರಮಗಳ ನಿರ್ಮಾಪಕರಾದ ಎಸ್.ಎಲ್.ಎನ್. ಸ್ವಾಮಿ ಈ ಕಿರುಚಿತ್ರದ ಹಿಂದಿರುವ ಶಕ್ತಿ. ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದು ಈ ಕಿರುಚಿತ್ರದ ಕಥಾವಸ್ತು.

ಪುಟಾಣಿ ಪ್ರತಿಭೆ ಸಾಕ್ಷಿ, ಶ್ವೇತ ಶ್ರೀನಿವಾಸ್, ಟೈಗರ್ ಗಂಗ, ಸಿಂಹಾದ್ರಿ ಮೊದಲಾದವರು ಇದರಲ್ಲಿ ನಟಿಸಿದ್ದಾರೆ. ಟ್ರಯೋ ಆಪರೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶೇಷಶಯನಂ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ಚಂದ್ರ ಹಾಗೂ ಸುರೇಖ ಹೆಗ್ಡೆ ಅವರ ಗಾಯನದಲ್ಲಿ ಗೀತೆಯೊಂದು ಮೂಡಿಬಂದಿದೆ. ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಹತ್ತಿರ ಹತ್ತಿರ ಹೋಗುತ್ತಿದಂತೆ ಅವರ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಜಟಿಲ. ಅರ್ಥ ಮಾಡಿಕೊಂಡರೆ ಸುಲಭ. ಒಬ್ಬ ಬಾಲಕಿ ಗಾಂಧಿ ತತ್ವಗಳಿಂದ ಪ್ರೇರಿತಳಾಗಿ, ಸಮಾಜದ ಅನ್ಯಾಯಗಳನ್ನು ಸರಿಪಡಿಸುವ ಪ್ರಯತ್ನವನ್ನು ಈ ಕಿರುಚಿತ್ರದ ಮೂಲಕ ಹೇಳಹೊರಟಿದ್ದೇನೆ ಎನ್ನುತ್ತಾರೆ ಎಸ್.ಎಲ್.ಎನ್.ಸ್ವಾಮಿ.

LEAVE A REPLY

Connect with

Please enter your comment!
Please enter your name here