ಅದೊಂದು ದಿನ ಕೆಲಸಕ್ಕೆ ಹೋದ Monday ವಾಪಾಸ್ ಮನೆಗೆ ಬರುವುದಿಲ್ಲ. ಆಕೆಯ ಕೈಯಲ್ಲಿ ಇರುವ ಜಿಪಿಎಸ್ ವಾಚ್ ಸಹ ಆಫ್ ಆಗಿದೆ. ಯಾಕೋ ಇದೆಲ್ಲ ವಿಚಿತ್ರವಾಗಿದೆ ಎಂದು ಉಳಿದ ಹೆಣ್ಣುಮಕ್ಕಳು ಯೋಚನೆ ಮಾಡ್ತಾರೆ – ನೆಟ್‌ಫ್ಲಿಕ್ಸ್‌ನಲ್ಲಿ ‘ವಾಟ್ ಹ್ಯಾಪನ್ಡ್ ಟು ಮಂಡೇ’ ಇಂಗ್ಲೀಷ್ ಸಿನಿಮಾ
ಈಗಾಗಲೇ ಜಗತ್ತಿನ ಹಲವೆಡೆ ಒಂದು ನಿಯಮವಿದೆ. ಕುಟುಂಬವೊಂದಕ್ಕೆ ಎರಡು ಮಕ್ಕಳು ಇರಬೇಕಷ್ಟೆ. ಹೀಗೆ ಇಲ್ಲಿಂದ ನೂರು ವರ್ಷ ಕಳೆದ ಮೇಲೆ ಜನಸಂಖ್ಯೆ ನಿಯಂತ್ರಣ ಆಗದಿದ್ದಾಗ, ಮನೆಗೆ ಒಂದೇ ಮಗು ಎನ್ನುವ ಕಠಿಣ ನಿಯಮ ಬರುತ್ತೆ. ಒಂದಕ್ಕಿಂತ ಹೆಚ್ಚು ಮಗು ಆದೊಡನೆ ಸರ್ಕಾರವೇ ಮನೆಯೊಳಗೇ ನುಗ್ಗಿ ಮಗುವನ್ನು ತೆಗೆದುಕೊಂಡು ಹೋಗಿ ಸೂಜಿ ಚುಚ್ಚಿ ಕೋಮಾ ಸ್ಥಿತಿಗೆ ತಳ್ಳುತ್ತದೆ. ಜಗತ್ತು ಸಹಜ ಸ್ಥಿತಿಗೆ ಬಂದೊಡನೆ ಮಗುವನ್ನು ಎಚ್ಚರಿಸಿ ಸರ್ಕಾರವೇ ನೋಡಿಕೊಳ್ಳುತ್ತೆ!
ಹೀಗೆ ಕಠಿಣ ನಿಯಮ ಇರುವ ಅದೇ ಕಾಲದಲ್ಲಿ ಒಂದು ಹೆಣ್ಣಿಗೆ ಒಂದೇ ಹೆರಿಗೆಯಲ್ಲಿ ಏಳು ಹೆಣ್ಣು ಮಕ್ಕಳು ಜನಿಸುತ್ತವೆ. ತಾಯಿಯನ್ನು ಕಳೆದುಕೊಂಡ ಆ ಮಕ್ಕಳನ್ನು ತಾತಾನೇ ನೋಡಿಕೊಳ್ಳುತ್ತಾನೆ, ಸರ್ಕಾರಕ್ಕೆ ತಿಳಿಯದಂತೆ ಮನೆಯೊಳಗೇ ಒಂದು ರಹಸ್ಯಕೋಣೆ ಮಾಡಿಟ್ಟು. ಆ ಏಳು ಮಕ್ಕಳಿಗೆ Monday Tuesday Wednesday ಎಂದು ವಾರದ ಏಳು ದಿನದ ಹೆಸರನ್ನು ನಾಮಕರಣ ಮಾಡುತ್ತಾನೆ. ಇಂದು ಸೋಮವಾರ ಅಂದ್ರೆ ತನ್ನೊಂದಿಗೆ Monday ಮಾತ್ರ ಬರಬೇಕು. ಹೀಗೆ ಆ ದಿನ ಯಾವ ವಾರವೋ ಅದೇ ಮಗು ತನ್ನೊಂದಿಗೆ ಹೊರಗೆ ಬರಬಹುದು. ಬರೋರು ಅವರ ಕೈಯಲ್ಲಿ ಇರುವ ವಾಚ್‌ನಲ್ಲಿ ಆ ದಿನ ನಡೆಯುವ ಅಷ್ಟೂ ವಿಷಯಗಳು ರೆಕಾರ್ಡ್ ಆಗುತ್ತೆ. ಅದನ್ನು ಮನೆಗೆ ಬಂದೊಡನೆ ಉಳಿದವರಿಗೆ ಪ್ಲೇ ಮಾಡಿ ತೋರಿಸಬೇಕು. ಇದನ್ನು ಅವರು ಎಂದಿಗೂ ಅನುಸರಿಸಲೇಬೇಕು.
ಹೀಗೆ ಅಲ್ಲಿಂದ ಮೂವತ್ತು ವರ್ಷ ಕಳೆಯುತ್ತದೆ. ಈಗ ತಾತ ಸಹ ಇಲ್ಲ. ಆ ಏಳೂ ಜನರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕು. ಹೀಗಿರುವಾಗ ಅದೊಂದು ದಿನ ಕೆಲಸಕ್ಕೆ ಹೋದ Monday ವಾಪಾಸ್ ಮನೆಗೆ ಬರುವುದಿಲ್ಲ. ಆಕೆಯ ಕೈಯಲ್ಲಿ ಇರುವ ಜಿಪಿಎಸ್ ವಾಚ್ ಸಹ ಆಫ್ ಆಗಿದೆ. ಯಾಕೋ ಇದೆಲ್ಲ ವಿಚಿತ್ರವಾಗಿದೆ ಎಂದು ಉಳಿದ ಹೆಣ್ಣುಮಕ್ಕಳು ಯೋಚನೆ ಮಾಡ್ತಾರೆ. ಸರಿ ನಾಳೆ ಆಫೀಸ್‌ಗೆ ಹೋಗಿ ನೋಡುತ್ತೇನೆ ಎಂದು Tuesday ಹೋಗುತ್ತಾಳೆ. ಅವಳು ಸಹ ಕಣ್ಮರೆಯಾಗುತ್ತಾಳೆ. ಏನು ನಡೆಯುತ್ತಾ ಇದೆ ಎಂದು ಯೋಚನೆ ಮಾಡುವಾಗಲೇ ಯಾರೋ ಇವರಿರುವ ಆ ರಹಸ್ಯ ಕೋಣೆಯೊಳಗೆ ಪ್ರವೇಶ ಮಾಡಿದ ಸದ್ದು. ಆ ಬಾಗಿಲು ಆ ಏಳು ಜನರ ಕಣ್ಣುಗಳನ್ನು ಕೀ ಆಗಿ ಬಳಸುವಂತೆ ಮಾಡಿರುವ ಬಾಗಿಲು. ಯಾರು ಬಾಗಿಲು ತೆರೆದಿದ್ದು ಎಂದು ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ನೋಡಿದರೆ Tuesday ಎಂದು ತೋರಿಸುತ್ತೆ. ಹೊರಗೆ ಇರುವ ಕ್ಯಾಮೆರಾ ಆನ್ ಮಾಡುವಾಗ ಅಲ್ಲಿ ಬರ್ತಾ ಇರೋದು ಇಬ್ಬರು ಗಂಡಸರು. ಅವರ ಕೈಯಲ್ಲಿ Tuesdayಳ ಕಿತ್ತ ಕಣ್ಣು ಗುಡ್ಡೆ ಇದೆ! ಫಿಲಂ ಇಲ್ಲಿಂದ ತನ್ನ ಗಿಯರ್ ಬದಲಾಯಿಸಿ ಶರವೇಗಕ್ಕೆ ಹೋಗುತ್ತೆ. ಈ ಫಿಲಂನಲ್ಲಿ ಏಳು ಪಾತ್ರಗಳನ್ನೂ ನಿಭಾಯಿಸಿರೋದು ಒಬ್ಬರೇ ನಟಿ. ನಿಜಕ್ಕೂ ದೊಡ್ಡ ಪ್ರತಿಭಾವಂತೆ. ಕಾರಣ ಏಳು ಜನರ ಸ್ವಭಾವ ಸಂಪೂರ್ಣ ಬದಲಾವಣೆ ಇರುತ್ತೆ. ಎಲ್ಲೂ ಸಹ ಒಬ್ಬರೇ ಅಂತ ನಮಗೆ ಅನ್ನಿಸೋದೇ ಇಲ್ಲಾ. ಜೊತೆಗೆ ಹನ್ನೆರಡು ವರ್ಷದ ಹುಡುಗಿಯಾಗಿದ್ದಾ ತೋರಿಸುವಾಗಲೇ ಆ ಪಾತ್ರಗಳಲ್ಲಿ ಒಬ್ಬಳೇ ಹುಡುಗಿ ಕಾಣಿಸಿಕೊಂಡಿದ್ದಾಳೆ. ಇದೊಂದು ಅಪರೂಪದ ಕಥಾವಸ್ತುವಿನ ಸಿನಿಮಾ.