ಕೊರೋನಾ ತಂದೊಡ್ಡಿರುವ ಸನ್ನಿವೇಶದ ಕಾರಣದಿಂದ ದೇಶದಲ್ಲಿ ಸಿನೆಮಾ ಹಾಲ್, Multiplexಗಳೆಲ್ಲವೂ ಬಾಗಿಲು ಮುಚ್ಚಿವೆ. ಇಂಥ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಮನರಂಜನೆ ಸಿಗಬೇಕು ಮತ್ತು ಲಕ್ಷಾಂತರ ಜನರಿಗೆ ಜೀವನಾಧಾರವಾಗಿರುವ ಸಿನೆಮಾ ರಂಗ ಉಳಿಯಬೇಕು ಅನ್ನುವ ಅನಿವಾರ್ಯತೆ,  ಭಾರತೀಯ ಸಿನೆಮಾ ರಂಗದಲ್ಲಿ ಹಲವಾರು ವಿನೂತನ ಪ್ರಯೋಗಗಳಿಗೆ ವೇದಿಕೆ ಸೃಷ್ಟಿಸಿದೆ.

ಇದೇ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಸಿ.ವಿ.ಕುಮಾರ್, Regal Talkies ಎಂಬ ಹೊಸ OTT ವೇದಿಕೆ ಆರಂಭಿಸುವುದಾಗಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ShemarooMe ಕೂಡ ತನ್ನದೇ ಆದ Box Office ಎಂಬ ಹೊಸ Digital ವೇದಿಕೆ ಅನಾವರಣಗೊಳಿಸಲು ಮುಂದಾಗಿದೆ.

2019ರ ಫೆಬ್ರವರಿಯಲ್ಲಿ ಆರಂಭವಾದ ShemarooMe ಭಾರತದ ಜನಪ್ರಿಯ OTT ವೇದಿಕೆಗಳಲ್ಲಿ ಒಂದು. ಬಾಲಿವುಡ್ ಸಿನೆಮಾಗಳು, ಗುಜರಾತಿ, ಪಂಜಾಬಿ, ಮರಾಠಿ ಇತ್ಯಾದಿ ಪ್ರಾದೇಶಿಕ ಭಾಷೆಗಳ ಸಿನೆಮಾಗಳು, ಮಕ್ಕಳ ಮನರಂಜನೆ, ಭಕ್ತಿ ಸಂಗೀತ ಮತ್ತಿತರ  ಕಾರ್ಯಕ್ರಮಗಳನ್ನು ShemarooMe ತನ್ನ ವೀಕ್ಷಕರಿಗೆ ತಲುಪಿಸುತ್ತದೆ.

ಮೊಬೈಲ್ ಫೋನ್ ಗಳು, ವೆಬ್ ಸೈಟ್, Amazon Fire Stick TV, Apple TV, Android TV ಮತ್ತಿತರ ವ್ಯವಸ್ಥೆಗಳ ಮೂಲಕ ShemarooMe ಪ್ರಸ್ತುತ ಪಡಿಸುವ ಸಿನೆಮಾಗಳು, ಟಿವಿ ಶೋಗಳು ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ದೊಡ್ಡ ಬಜೆಟ್ ನಲ್ಲಿ ನಿರ್ಮಾಣಗೊಂಡಿರುವ ಸಿನೆಮಾಗಳನ್ನು ಖರೀದಿಸಿ, ಅವನ್ನು ಜನರಿಗೆ ತಲುಪಿಸಿ ಲಾಭ ಮಾಡಿಕೊಳ್ಳುವುದು ಯಾವುದೇ OTT ವೇದಿಕೆಗೆ ಕಷ್ಟ ಅನ್ನುವುದನ್ನು ಅರ್ಥಮಾಡಿಕೊಂಡಿರುವ ShemarooMe, ಇತರೆ OTTಗಳ ದಾರಿಯನ್ನು ಬಿಟ್ಟು, ತನ್ನದೇ ಆದ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಹೊರಟಿದೆ.

ಹೀಗಾಗಿ, ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಆದರೆ, ಜನರು ನೋಡಲು ಇಷ್ಟ ಪಡುವಂಥ Bollywood ಸಿನೆಮಾಗಳು ಮತ್ತು ಪ್ರಾದೇಶಿಕ ಭಾಷೆಯ ಸಿನೆಮಾಗಳನ್ನು, ತನ್ನ ಹೊಸ ಡಿಜಿಟಲ್ ವೇದಿಕೆ Box Office ಮೂಲಕ ವೀಕ್ಷಕರಿಗೆ ತಲುಪಿಸಲು ನಿರ್ಧರಿಸಿದೆ.

ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿದ್ದರೂ ಕೂಡ, ಸಿನೆಮಾದಲ್ಲಿನ ಹೊಸತನ,  ಕಥಾವಸ್ತು ಮತ್ತಿತರ ವಿಶೇಷ ಕಾರಣಗಳಿಗಾಗಿ ವಿಮರ್ಶಕರಿಂದ ಉತ್ತಮ ಸಿನೆಮಾ ಎಂದು ಪ್ರಶಂಸೆ ಪಡೆದಿರುವ ಚಿತ್ರಗಳೇ ShemarooMe ಸಂಸ್ಥೆಯ ಗುರಿಯಾಗಿವೆ.

ಇಂಥ ಸಿನೆಮಾಗಳನ್ನು ನೇರವಾಗಿ ವೀಕ್ಷಕರಿಗೆ ತಲುಪಿಸುವ ದೃಷ್ಟಿಯಿಂದ  ಈಗಾಗಲೇ ದೇಶಾದ್ಯಂತ ಸಾಕಷ್ಟು ಜನಪ್ರಿಯವಾಗಿರುವ  www.bookmyshow.com ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ShemarooMe App ಮೂಲಕವೂ ವೀಕ್ಷಕರು ಟಿಕೆಟ್ ಬುಕ್ ಮಾಡಬಹುದು.

ಇಲ್ಲಿ ವೀಕ್ಷಕರಿಗಿರುವ ಲಾಭವೇನೆಂದರೆ, ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಮುಂದಿನ ಮೂರು ದಿನಗಳವರೆಗೆ ಎಷ್ಟು ಬಾರಿ ಬೇಕಾದರೂ ಆ ಸಿನೆಮಾವನ್ನು ನೋಡಬಹುದು.

ShemarooMe ನಲ್ಲಿ  ತೆರೆಕಾಣುವ ಸಿನೆಮಾಗಳ ಟಿಕೆಟ್ ಮಾರಾಟಕ್ಕೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಗಿದೆ. ತಮ್ಮ ಸಿನೆಮಾದ ಎಷ್ಟು ಟಿಕೆಟ್ ಗಳು ಮಾರಾಟವಾಗಿವೆ ಎಂಬುದನ್ನು ಆ ಸಿನೆಮಾದ ನಿರ್ಮಾಪಕರು real time ನಲ್ಲೇ ತಿಳಿಯಬಹುದಾಗಿದೆ.

ತನ್ನ ವೇದಿಕೆಯಡಿಯಲ್ಲಿ  ಹೆಚ್ಚಿನ ವೀಕ್ಷಕರನ್ನು ತಲುಪುವ ಉದ್ದೇಶ ಹೊಂದಿರುವ Shemaroo, ಅದಕ್ಕಾಗಿ ಹೊಸ ಸಿನೆಮಾಗಳ ಬಗ್ಗೆ ಮತ್ತು ಅದರ ವಿಶೇಷತೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಲಿದೆ. ಈ ಮೂಲಕ ತಾನು ಜನರಿಗೆ ನೋಡಲು ಒದಗಿಸುವ ಸಿನೆಮಾಗಳ ಬಗ್ಗೆ ಮೊದಲೇ ಮಾಹಿತಿ ನೀಡಿ, ವೀಕ್ಷಕರನ್ನು ಆಕರ್ಷಿಸುವ ಮತ್ತು ವೀಕ್ಷಣೆಗಾಗಿ ಸಜ್ಜುಗೊಳಿಸುವ ವಿಶಿಷ್ಟ ಚಿಂತನೆ ನಡೆಸಿದೆ.

ಈ ರೀತಿ ಮಾಡುವುದರಿಂದ ಸಿನೆಮಾಗಳಿಗೆ ಹೆಚ್ಚು ಪ್ರಚಾರ ಸಿಗುತ್ತದೆ ಮತ್ತು ShemarooMe ನಲ್ಲಿ ಪ್ರದರ್ಶನಗೊಂಡ ನಂತರದ ದಿನಗಳಲ್ಲಿ, ಆ ಸಿನೆಮಾದ ಟಿವಿ ಪ್ರಸಾರ ಹಕ್ಕುಗಳು ಹೆಚ್ಚಿನ ಹಣಕ್ಕೆ ಮಾರಾಟವಾಗುತ್ತವೆ ಅನ್ನುವುದು ಅವರ ಅಭಿಪ್ರಾಯ.

ಇದೇ ಜುಲೈ 31ರಿಂದ ShemarooMe Box Office ಆರಂಭವಾಗಲಿದೆ, ಶರೀಬ್ ಹಷ್ಮಿ, ಅಂಜಲಿ ಪಾಟೀಲ್ ಮತ್ತು ಅಭಿಮನ್ಯು ಸಿಂಗ್ ಅಭಿನಯಿಸಿರುವ ಹಾಗೂ ಪ್ರಭಾಕರ್ ಮೀನಾ ಭಾಸ್ಕರ್ ಪಂತ್ ನಿರ್ದೇಶನದ My Client’s Wife ಸಿನೆಮಾ Box Office ಮೂಲಕ ವೀಕ್ಷಕರನ್ನು ತಲುಪಲಿರುವ ಮೊದಲ ಸಿನೆಮಾ ಆಗಲಿದೆ. ಇದರ ನಂತರ ಮನೀಶ್ ವಾತ್ಸಲ್ಯ ನಿರ್ದೇಶನದ, ಪ್ರಶಸ್ತಿ ವಿಜೇತ Crime Thrillerಸಿನೆಮಾ Scotland, ಬಾಕ್ಸ್ ಆಫೀಸ್ ಮೂಲಕ ಬಿಡುಗಡೆ ಕಾಣಲಿದೆ. ಆ ಬಳಿಕ, Graham Staines Ek An kahi Sachhai ಮತ್ತು The Hidden Strike ಸಿನೆಮಾಗಳು ವೀಕ್ಷಕರನ್ನು ತನ್ನ ಕಡೆಗೆ ಸೆಳೆಯಲಿವೆ ಅನ್ನುವುದು Box Office ವಿಶ್ವಾಸ.

ಒಟ್ಟಿನಲ್ಲಿ, ಇಡೀ ಸಿನೆಮಾ ಉದ್ಯಮ ಸಂಕಷ್ಟ ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ Box Office ಮತ್ತು Regal Talkies ನಂಥ ಹೊಸ ಪರಿಕಲ್ಪನೆಗಳು ಭರವಸೆ ಹುಟ್ಟಿಸುವ ಪ್ರಯತ್ನ ಮಾಡುತ್ತಿವೆ. ವೀಕ್ಷಕರಿಗೆ ಹೊಸ ಸಿನೆಮಾ ನೋಡುವ ಖುಷಿ ಜೊತೆಗೆ, ಸಿನೆಮಾ ತಯಾರಕರ ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ತಂದುಕೊಡುವಲ್ಲಿ ಇಂಥ ಮಾದರಿಗಳು ಯಶಸ್ವಿಯಾದರೆ, ಅದು ಸಿನೆಮಾ ರಂಗಕ್ಕೆ ಆಗಬಹುದಾದ ದೊಡ್ಡ ಲಾಭ ಅನ್ನಬಹುದು. ShemarooMe Box Officeಗೆ ಮಾಧ್ಯಮ ಅನೇಕದ ಶುಭ ಹಾರೈಕೆಗಳು.

LEAVE A REPLY

Connect with

Please enter your comment!
Please enter your name here