ಚಲನಚಿತ್ರಗಳ ಪ್ರಭಾವ ಹೆಚ್ಚಾಗಿ, ರಂಗಭೂಮಿ ಹಿನ್ನಡೆ ಅನುಭವಿಸುತ್ತಿರುವಾಗ ಮಾಸ್ ಮಟ್ಟದಲ್ಲಿ ಜನರನ್ನು ಮತ್ತೆ ರಂಗಭೂಮಿಯ ಕಡೆಗೆ ಬರುವಂತೆ ಮಾಡಿದ ಕಲಾವಿದ ಕಾಶೀನಾಥ್ ಘಾಣೇಕರ್. ಮರಾಠಿ ರಂಗಭೂಮಿಯ ಮೇರು ನಟನ ಕುರಿತ ಮರಾಠಿ ಸಿನಿಮಾ ‘ಆಣಿ…ಡಾ.ಕಾಶೀನಾಥ್‌ ಘಾಣೇಕರ್‌’. ಅಭಿಜಿತ್‌ ದೇಶಪಾಂಡೆ ನಿರ್ದೇಶನದ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಾನು ಈ ಚಿತ್ರ ನೋಡಿದ್ದು ಸ್ನೇಹಿತರೊಬ್ಬರ ಆಗ್ರಹಪೂರ್ವಕ ಸಲಹೆಯ ಕಾರಣಕ್ಕೆ. ಆದರೆ ಆಗ ಈ ಸಿನಿಮಾ ಈ ಮಟ್ಟಿಗೆ ನನ್ನನ್ನು ಆವರಿಸಿಕೊಳ್ಳಬಹುದು ಎನ್ನುವ ಯಾವುದೇ ಸುಳಿವೂ ನನಗಿರಲಿಲ್ಲ. ಮರಾಠಿ ರಂಗಭೂಮಿಗೆ ಒಂದು ಭವ್ಯ ಇತಿಹಾಸ ಇದೆ. ಅಲ್ಲಿ ಪ್ರತಿದಿನಕ್ಕೆ ಮೂರು ನಾಟಕ ಪ್ರದರ್ಶನಗಳು ನಡೆಯುತ್ತವೆ. ರಂಗವಿನ್ಯಾಸ ಮತ್ತು ರಂಗಕ್ರಿಯೆಗಿಂತಾ ಹೆಚ್ಚಾಗಿ ಸಂಭಾಷಣೆ ಮತ್ತು ಅಭಿನಯ ಅಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಚಲನಚಿತ್ರಗಳ ಪ್ರಭಾವ ಹೆಚ್ಚಾಗಿ, ರಂಗಭೂಮಿ ಹಿನ್ನಡೆ ಅನುಭವಿಸುತ್ತಿರುವಾಗ ಮಾಸ್ ಮಟ್ಟದಲ್ಲಿ ಜನರನ್ನು ಮತ್ತೆ ರಂಗಭೂಮಿಯ ಕಡೆಗೆ ಬರುವಂತೆ ಮಾಡಿದ ಕಲಾವಿದ ಕಾಶಿನಾಥ್ ಘಾಣೇಕರ್‌. ಮೊಟ್ಟಮೊದಲ ಬಾರಿಗೆ ನಟನೊಬ್ಬನ ಎಂಟ್ರಿಗೆ ಜನ ಚಪ್ಪಾಳೆ ಹೊಡೆಯುತ್ತಾರೆ, ಅಪಾರ ಶಿಸ್ತಿನ ರಂಗಭೂಮಿ ಪ್ರಿಯರ ನಡುವಿಂದ ಮೊದಲ ಸೀಟಿ ಬರುವುದು ಇವರ ಅಭಿನಯಕ್ಕೆ, ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟ ಆಗುತ್ತವೆ, ದಿನಕ್ಕೆ ನಾಲ್ಕು ಶೋ ಆಗುತ್ತವೆ, ಎಲ್ಲಾ ಹೌ‌ಸ್‌ಫುಲ್! ಆತ ಜನಗಳೊಂದಿಗೆ ಕನೆಕ್ಟ್ ಆಗುವ ರೀತಿಯೇ ವಿಶೇಷ. ನಾಟಕ ಮುಗಿಸಿ ಬಂದವ ಸಿಗರೇಟು ಹಚ್ಚಬೇಕಾದರೆ, ನಾಟಕ ಮಂದಿರದ ಕಾವಲುಗಾರ ಎಸೆದ ಬೆಂಕಿಪೆಟ್ಟಿಗೆ ಹಿಡಿಯುತ್ತಾನೆ, ನಡುರಾತ್ರಿಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ ಯಾವನೋ ಅಪರಿಚಿತನ ಜೇಬಿನಿಂದ ಬೀಡಿ ತೆಗೆದು ಸೇದಿ, ಮರೆಯದೆ ಅವನ ಜೋಬಿಗೆ ದುಡ್ಡು ತುರುಕುತ್ತಾನೆ, ಫುಟ್‌ಪಾತ್‌ನಲ್ಲಿ ಚಿಂತೆಯಿಂದ ಕುಳಿತವನ ಪಕ್ಕ ಕೂತು, ’ಈಗೇನು, ನಿನಗೆ ಹಣ ಬೇಕೋ, ಕೆಲಸ ಬೇಕೋ’ ಎಂದು ಕೇಳುತ್ತಾನೆ, ’ಮಗ ಸ್ವಲ್ಪ ಮುಖೇಡಿ, ಹಾಸ್ಟೆಲ್ ಹುಡುಗರು ಜೀವ ತಿನ್ನುತ್ತಾರೆ, ಅವನ ಹುಟ್ಟುಹಬ್ಬಕ್ಕೆ ದಯವಿಟ್ಟು ಒಂದು ಫೋನ್ ಮಾಡುವಿರಾ?’ ಎಂದು ಕೇಳಿಕೊಂಡ ತಾಯಿಯೊಬ್ಬಳ ಪತ್ರ ಓದಿ, ನಡುರಾತ್ರಿ ಆ ಹಾಸ್ಟೆಲ್ಲಿಗೆ ಹೋಗಿ ಆ ಹುಡುಗನಿಗೆ ವಿಶ್ ಮಾಡಿ, ಡೈಲಾಗ್ ಹೇಳಿ ರಂಜಿಸುತ್ತಾನೆ. ಇದೆಲ್ಲಾ ಅವನ ವ್ಯಕ್ತಿತ್ವದ ಒಂದು ಪದರ ಮಾತ್ರ, ಅವನ ಅಸ್ಮಿತೆಗೆ ಇನ್ನೂ ಹಲವು ಪದರಗಳಿವೆ. With extreme genius comes extreme eccentricities ಎನ್ನುವ ಮಾತಿಗೆ ಈತ ಜೀವಂತ ಉದಾಹರಣೆ! ಅತ್ಯುನ್ನತ ಎತ್ತರ ಮತ್ತು ಅಧಮವಾದ ಪತನ ಚಿತ್ರದ ವಸ್ತು. ಈ ಕಲಾವಿದನ ಬದುಕು ಒಂದು ಗ್ರೀಕ್ ಟ್ರಾಜಿಡಿಗೆ ಜೀವಂತ ಉದಾಹರಣೆ. ಇದು ಕಥೆಯಲ್ಲ, ಸತ್ಯಘಟನೆಗಳ ನಿರೂಪಣೆ ಎನ್ನುವುದರಲ್ಲಿ ಈ ದುರಂತಗಾಥೆ ಮತ್ತಷ್ಟು ಗಾಢವಾಗುತ್ತದೆ.

ಡಾ ಕಾಶೀನಾಥ್ ಘಾಣೇಕರ್ – ಯೂನಿವರ್ಸಿಟಿ ಗೋಲ್ಡ್ ಮೆಡಲ್ ಪಡೆದ ಡೆಂಟಿಸ್ಟ್, ಆದರೆ ಅಪ್ಪನ ದೃಷ್ಟಿಯಲ್ಲಿ ದಂತಶಾಸ್ತ್ರ ಎನ್ನುವುದೇ ನಾಲಾಯಕ್, ಹಾಗಾಗಿ ಈ ಮಗ ಒಬ್ಬ ಫೆಲ್ಯೂರ್. ಬದುಕಿನುದ್ದಕ್ಕೂ ಈತ ಅಪ್ಪನ ಒಂದು ಮೆಚ್ಚುನುಡಿಗಾಗಿ ಹಂಬಲಿಸುತ್ತಲೇ ಇರುತ್ತಾನೆ. ಈತನ ಹೆಂಡತಿ ಸಹ ವೈದ್ಯಳೇ, ಡಾ ಇರಾವತಿ. ಆದರೆ ಕಾಶೀನಾಥ್ ಮನಸ್ಸಿನ ಒಂದೇ ಮಹದಾಸೆ ನಟನೆ. ಅದಕ್ಕಾಗಿ ಏಳು ವರ್ಷಗಳಿಂದ ಥಿಯೇಟರ್ ಸುತ್ತಲೂ ಅಲೆಯುತ್ತಲೇ ಇದ್ದಾನೆ. ಅದನ್ನು ಬಿಡುತ್ತೇನೆ ಎಂದು ಹೇಳುತ್ತಾನಾದರೂ ಇವನ ಚಡಪಡಿಕೆ ನೋಡಲಾಗದೇ ಅವಳೇ ಇವನನ್ನು ರಂಗಮಂದಿರದ ಬಳಿ ಬಿಡುತ್ತಾಳೆ. ಅಂದು ವಸಂತ್ ಖಾನೇಟ್ಕರ್ ಅವರು ಸಂಬಾಜಿಯನ್ನಿಟ್ಟುಕೊಂಡು ಬರೆದ ನಾಟಕದ ಕಾಸ್ಟಿಂಗ್ ನಡೆಯುತ್ತಿರುತ್ತದೆ. ಪ್ರಖ್ಯಾತ ನಿರ್ದೇಶಕ ಮಾಸ್ಟರ್ ದತ್ತಾರಾಂ ನಿರ್ದೇಶನ. ಆ ಸಂದರ್ಭದಲ್ಲಿ ಇವನ ಸಿಟ್ಟು, ಸೆಡವು, ದರ್ಪ, ಅಹಂ ನೋಡಿದ ನಿರ್ದೇಶಕರಿಗೆ ಇವನೇ ಸಂಭಾಜಿ ಅನ್ನಿಸಿಬಿಡುತ್ತದೆ. ಆದರೂ ಎನೋ ಒಂದು ಸಣ್ಣ ಕೊರೆ. ನಿರ್ದೇಶಕರು ಅವನಿಗೆ ಸಂಭಾಜಿಯ ಪಾತ್ರ ವಿವರಿಸುತ್ತಾರೆ, ‘ಸಂಭಾಜಿ – ಅತ್ಯಂತ ಯಶಸ್ವಿ ಅಪ್ಪನ ಅಯಶಸ್ವಿ ಮಗ, ಎಂದೂ ಅಪ್ಪನ ಪ್ರೀತಿ ಪಡೆಯದ – ಅಪ್ಪ ಬಯಸಿದ ಎತ್ತರಕ್ಕೇರದ ದುರ್ದೈವಿ…’, ಬಾಣ ನಾಟಿರುತ್ತದೆ. ಡಾ ಕಾಶೀನಾಥ್ ಸ್ವತಃ ಸಂಭಾಜಿ ಆಗಿರುತ್ತಾರೆ. ನಾಟಕ ಅಭೂತಪೂರ್ವ ಯಶಸ್ಸನ್ನು ಪಡೆಯುತ್ತದೆ. ಸಂಭಾಜಿಯ ಅಳಲು ಎಲ್ಲರನ್ನೂ ಅಲುಗಾಡಿಸಿರುತ್ತದೆ.

ನಾಟಕದ ನೂರನೆಯ ಪ್ರದರ್ಶನ, ಕಾಶೀನಾಥ್ ಬದುಕು ನಾನಾ ಸ್ತರಗಳಲ್ಲಿ ಬದಲಾದ ದಿನ ಅದು. ನಾಟಕಕ್ಕೆ ಅವರ ತಂದೆ ತಾಯಿ ಬಂದಿರುತ್ತಾರೆ. ಆ ಕಾಲದ ಪ್ರಸಿದ್ಧ ಅಭಿನೇತ್ರಿ ಸುಲೋಚನಾ ತಾಯಿ ತಮ್ಮ ಹದಿವಯಸ್ಸಿನ ಮಗಳೊಂದಿಗೆ ನಾಟಕ ನೋಡಲು ಬಂದಿರುತ್ತಾರೆ. ತಂದೆಯ ಪ್ರೀತಿ ತನಗೆ ಸಿಕ್ಕಲೇ ಇಲ್ಲ, ಅವರ ಕಣ್ಣುಗಳಲ್ಲಿ ನನಗೆ ಕಂಡಿದ್ದು ಬರೀ ಅವಹೇಳನ ಎಂದು ವಿಲಪಿಸುವಾಗ ಸಂಭಾಜಿ ಇಡೀ ರಂಗಮಂದಿರವನ್ನು ಒಂದು ಬಿರುಗಾಳಿಯ ರೀತಿ ವ್ಯಾಪಿಸಿಕೊಂಡಿರುತ್ತಾರೆ. ಅವರ ಮಾತುಗಳು ತಂದೆಯನ್ನೂ ಪ್ರಶ್ನಿಸಿರುತ್ತದೆ. ನಾಟಕ ಮುಗಿದಾಗ ಇವರ ಬದುಕು ಬದಲಿಸುವ ಸಂಘಟನೆಗಳು ಜರುಗುತ್ತವೆ. ಶಿವಾಜಿ ಪಾತ್ರ ವಹಿಸಿದ್ದ ನಿರ್ದೇಶಕ ದತ್ತಾರಾಂ, ಈ ವೇಷದಲ್ಲಿಲ್ಲದಿದ್ದರೆ ಇಂದು ನಿನ್ನ ಅಭಿನಯಕ್ಕೆ ಪೊಡಮಡುತ್ತಿದ್ದೆ ಎನ್ನುತ್ತಾರೆ. ತಂದೆ ‘ಹೂ ನಾಟಕ ಚೆನ್ನಾಗಿ ಬರೆದಿದ್ದಾರೆ’ ಎಂದು ಹೊರನಡೆಯುತ್ತಾರೆ. ಅಪ್ಪನ ನಿರಾಕರಣೆ ಮತ್ತೊಮೆ ಇವರನ್ನು ಚೂರು ಮಾಡುತ್ತದೆ. ಇದೊಂದೇ ದೃಶ್ಯದಲ್ಲಿ ಬರುವ ಅವರ ತಂದೆತಾಯಿ ಪಾತ್ರಗಳ ಅಭಿನಯಕ್ಕೆ ಮೂಕರಾಗುತ್ತೇವೆ. ಅಮ್ಮ ಸುಲೋಚನರೊಡನೆ ನಾಟಕ ನೋಡಲು ಬಂದಿದ್ದ ಹುಡುಗಿ ಕಂಚನ್ ಮನಸ್ಸಿನಲ್ಲಿ ಕಾಶೀನಾಥ್ ಬೇರೂರಿ ನಿಂತುಬಿಡುತ್ತಾರೆ. ಆ ದಿನದ ಇನ್ನೊಂದು ಸಂಭವ ಎಂದರೆ ರಾಜಮನೆತನದವರಿಗಾಗಿ ಖಾಸಗಿ ಪ್ರದರ್ಶನಕ್ಕಾಗಿ ವೀಳ್ಯೆ ಸಿಕ್ಕಿದೆ ಎಂದ ಸಂಚಾಲಕರೊಡನೆ, ನಮ್ಮದೇನು ಬೀದಿಕುಣಿತವೆ ಎಂದು ಸಿಡಿಯುವ ಕಾಶೀನಾಥ್ ಅಷ್ಟು ಪ್ರೀತಿಸಿದ್ದ ನಾಟಕ ಬಿಟ್ಟು ನಡೆದುಬಿಡುತ್ತಾರೆ. ನಾಟಕ ಬರೆದಿದ್ದ ವಸಂತ್ ಖಾನೇಟ್ಕರ್, ‘ಇನ್ನೆಂದೂ ನಿನ್ನೊಂದಿಗೆ ಕೆಲಸ ಮಾಡುವುದಿಲ್ಲ’ ಎಂದು ಮರು ಆವಾಜ್ ಹಾಕುತ್ತಾರೆ. ಸಾವಿರ ಪ್ರದರ್ಶನ ಕಾಣಬಹುದಾಗಿದ್ದ ನಾಟಕವೊಂದು ನೂರೇ ಪ್ರದರ್ಶನಗಳಿಗೆ ನಿಂತು ಹೋಗುತ್ತದೆ.

ಮತ್ತೆ ಹುಡುಕಾಟ. ಆಗ ಅವರ ಬದುಕಿಗೆ ಬರುವುದು ಕಡೆತನಕ ಅವರ ಆತ್ಮೀಯ ಮಿತ್ರನಾಗೇ ಉಳಿದ ಪ್ರಭಾಕರ್ ಫಾಂಸೀಕರ್. ನಾಟಕ ಕಂಪನಿಯ ಒಡೆಯ. ಅವರ ಬಳಿ ಒಂದು ನಾಟಕ ಇರುತ್ತದೆ, ಅವರಿಗೆ ಕಾಶಿನಾಥ್ ಬೇಕಾಗಿರುತ್ತದೆ. ಆದರೆ ಒಂದೇ ಸಮಸ್ಯೆ, ನಾಟಕದ ಕರ್ತೃ, ವಸಂತ್ ಖಾನೇಟ್ಕರ್, ಮತ್ತೆಂದೂ ನಿನ್ನೊಂದಿಗೆ ಕೆಲಸ ಮಾಡುವುದಿಲ್ಲ ಎಂದ ಅದೇ ಖಾನೇಟ್ಕರ್. ಬಲವಂತಕ್ಕೆ ಮಣಿದ ಅವರು ಬೇಕೆಂದೆ ಕಾಶೀನಾಥ್ ಅಭಿನಯಿಸಬೇಕಿದ್ದ ’ಲಾಲ್ಯಾ’ ಪಾತ್ರವನ್ನು ಕಡೆಗಣಿಸುತ್ತಾರೆ. ರಿಹರ್ಸಲ್ ಸಮಯದಿಂದಲೂ ಕಾಶೀನಾಥರಿಗೆ ಈ ಪಾತ್ರ ಯಾಕೋ ಸರಿಯಾಗುತ್ತಿಲ್ಲ ಎಂದೇ ತೊಳಲಾಟ. ಅದಕ್ಕೂ ನಾಟಕಕಾರರನ್ನು ಕೇಳೇ ಬಿಡುತ್ತಾರೆ. ಅವರು ಉರಿಯುವ ಗಾಯಕ್ಕೆ ಉಪ್ಪು ಹಾಕಿದಂತೆ ಮಿಕ್ಕ ಕಲಾವಿದರು ಗಟ್ಟಿಗರು, ಸಂಬಾಳಿಸಿಕೊಳ್ಳುತ್ತಾರೆ ಬಿಡು ಎಂದು ಬಿಡುತ್ತಾರೆ. ನಾಟಕದ ದಿನವೂ ಬಂದು ಬಿಡುತ್ತದೆ. ಇವರ ಒದ್ದಾಟ ನಿಲ್ಲುತ್ತಿಲ್ಲ. ಅದೇ ಮನಸ್ಥಿತಿಯಲ್ಲಿ ಮೇಕಪ್ ಹಾಕಿಕೊಳ್ಳುತ್ತಿದ್ದಾಗ ಹೋಟೆಲಿನ ಹುಡುಗನೊಬ್ಬ ಟೀ ತರುತ್ತಾನೆ ಯಾರೋ ಏನೋ ಕೇಳಿದ್ದಕ್ಕೆ ಪರಮ ಉಡಾಫೆಯಿಂದ ಅವನು ಉತ್ತರಿಸುತ್ತಾನೆ. ಇವರ ತಲೆಯಲ್ಲಿ ಆಗ ಗಂಟೆ ಹೊಡೆಯುತ್ತದೆ. ಲಾಲ್ಯಾನ ಪಾತ್ರ ಇರಬೇಕಾದ್ದು ಹೀಗೆ ಅನ್ನಿಸುತ್ತದೆ. ಥಟ್ಟನೆ ಎದ್ದು ಖಾನೇಟ್ಕರ್ ರನ್ನು ಹುಡುಕಿಕೊಂಡು ಹೋಗುತ್ತಾರೆ. ಇವರ ವಾದವನ್ನು ನಿರಾಕರಿಸುತ್ತಿರುವಾಗ ಮಾತಿನ ಮಧ್ಯೆ ಖಾನೇಟ್ಕರ್‌ಗೂ ಇವರು ಸತ್ಯ ಹೇಳುತ್ತಿದ್ದಾರೆ ಅನ್ನಿಸುತ್ತದೆ. ಎಲ್ಲಾ ಈಗೋಗಳನ್ನೂ ಕಲೆ ಗೆಲ್ಲುವ ಘಳಿಗೆ ಅದು! ಆ ಎರಡು ನಿಮಿಷದ ಅವಧಿಯಲ್ಲಿ ಬಟ್ಟೆ ಬದಲಾಯಿಸಿಕೊಂಡು, ಖಾನೇಟ್ಕರ್ ಅವರಿಗೊಂದು ಮುತ್ತು ಕೊಟ್ಟು, ಎದ್ದುಬಿದ್ದು ಓಡುವ ಕಾಶಿನಾಥ್ ರಂಗದ ಮೇಲೆ ಬೀಳುತ್ತಾರೆ. ಎದ್ದುನಿಂತು ಅವರು ಡೈಲಾಗ್ ಹೇಳುವ ರೀತಿಯಲ್ಲಿ ಅವರು ಪ್ರೇಕ್ಷಕರಲ್ಲಿ ಒಬ್ಬರಾಗಿ ಅವರ ’ಕಾಶ್ಯಾ’ ಆಗಿಬಿಟ್ಟಿರುತ್ತಾರೆ. ಒಂದು ಹೊಸ ಇತಿಹಾಸ ನಿರ್ಮಾಣವಾಗುತ್ತಲಿರುತ್ತದೆ. ಚಿತ್ರದ ಮ್ಯಾಜಿಕಲ್ ಘಳಿಗೆ ಅದು!

ಕಂಚನ್ – ಕಾಶೀನಾಥ್ ಅವರ ಅರ್ಧ ವಯಸ್ಸಿನ ಹುಡುಗಿ, ಹೆಂಡತಿಯ ಗೆಳತಿ – ಸುಲೋಚನಾರ ಮಗಳು. ಅವರೂ ಸಹ ಮೊದಲಸಲ ಅವರ ಮನೆಗೆ ಹೋದಾಗ ’ಕಾಶೀನಾಥ್ ಕಾಕಾ ಬಂದಿದ್ದಾರೆ ಎಂದು ಅಮ್ಮನಿಗೆ ಹೇಳು’ ಎಂದೇ ಪರಿಚಯಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರ ನಡುವೆ ಅನೂಹ್ಯ ಸೆಳೆತ ಇರುತ್ತದೆ. ಅಷ್ಟು ಚಿಕ್ಕಹುಡುಗಿ ಅವರನ್ನು, ಅವರ ಗುಣ, ಶಕ್ತಿ, ದೌರ್ಬಲ್ಯಗಳನ್ನು ಅವರಿಗಿಂತಾ ಹೆಚ್ಚಾಗಿ ಅರ್ಥ ಮಾಡಿಕೊಂಡಿರುತ್ತಾಳೆ. ನಾಟಕ ನೋಡಿದ ನಂತರ ಶಾಲೆಯಲ್ಲಿ ಅವಳು ಬರೆದ ಒಂದು ಪ್ರಬಂಧದಲ್ಲಿ ಯಾವುದೇ ಮನೋವಿಶ್ಲೇಷಕರಿಗಿಂತ ಮಿಗಿಲಾಗಿ ಕಾಶೀನಾಥ್ ಅವರ ಸ್ವಭಾವವನ್ನು ಹಿಡಿದಿಟ್ಟಿರುತ್ತಾಳೆ, ಅವರ ಬಗೆಗಿನ ತನ್ನ ಮೋಹವನ್ನೂ ಬಿಚ್ಚಿಟ್ಟಿರುತ್ತಾಳೆ. ರಾಜಮನೆತನದ ಖಾಸಗಿ ಪ್ರದರ್ಶನಕ್ಕೆ ತಾನು ಯಾಕೆ ಒಪ್ಪಲಿಲ್ಲ ಎನ್ನುವುದು ಸ್ವತಃ ಕಾಶೀನಾಥರಿಗೂ ಅಸ್ಪಷ್ಟವಾಗಿರುವಾಗ ’10-12 ಜನರ ಚಪ್ಪಾಳೆ ರಂಗಮಂದಿರದ ಸಾವಿರಾರು ಮಂದಿಯ ಚಪ್ಪಾಳೆಗಳಿಗೆ ಸರಿಯಾಗುತ್ತದೆಯೆ?’ ಎಂದು ಅವನ ಅಸ್ಪಷ್ಟತೆಗೆ ರೂಪ ಕೊಡುತ್ತಾಳೆ. ಮುಂದೊಮ್ಮೆ ಅವರು ಚಲನಚಿತ್ರದಲ್ಲಿ ಅಭಿನಯಿಸಿದಾಗ ಎಲ್ಲರೂ ಅವರನ್ನು ಹೊಗಳುವಾಗಲೂ ಕಾಶೀನಾಥ್ ಕಾಯುವುದು ಇವಳ ಪ್ರತಿಕ್ರಿಯೆಗೆ. ಚಲನಚಿತ್ರದಲ್ಲಿ ನೀವು ಬಂಧಿಯಾದಂತೆ ಇರುವಿರಿ, ರಂಗದ ಮೇಲಿನ ನಿಶೃಂಕಲತೆಯಲ್ಲಿ ನೀವು ಹೆಚ್ಚು ಶೋಭಿಸುತ್ತೀರಿ ಎಂದು ಹೇಳಿ ಅವರನ್ನು ನಿಬ್ಬೆರಗಾಗಿಸುತ್ತಾಳೆ. ಏಕೆಂದರೆ ಅದು ನಿಜವೂ ಆಗಿರುತ್ತದೆ, ಚಿತ್ರೀಕರಣದ ಸಂದರ್ಭದಲ್ಲಿ ಒಂದು ಪರ್ಫೆಕ್ಟ್ ಶಾಟ್ ನಂತರ, ನಿರ್ದೇಶಕರು ಓಕೆ ಎಂದು ಹೇಳಿದಮೇಲೂ ಅವರ ಕಣ್ಣುಗಳು ಅಲ್ಲಿ ನೆರೆದಿದ್ದ ಎಲ್ಲರ ಪ್ರತಿಕ್ರಿಯೆಗೆ ಹುಡುಕಾಡುತ್ತಿರುತ್ತವೆ!

ಇವರ ಹೆಂಡತಿ ಇರಾ, ಮನೆಯ ಖರ್ಚು ನಾನು ನೋಡಿಕೊಳ್ಳುತ್ತೇನೆ, ನೀವು ನಿಮ್ಮ ಕನಸ್ಸಿನ ಹಿಂದೆ ನಡೆಯಿರಿ ಎಂದು ಹೇಳಿ ಜೊತೆಗೆ ನಿಂತವರು. ಆದರೆ ಅವರು ಕಾಶೀನಾಥರಿಗೆ ಒತ್ತಾಸೆಯಾಗಬಲ್ಲರೇ ಹೊರತು ಅವರ ಸಂಭ್ರಮ ಮತ್ತು ರಂಗಭೂಮಿಯ ಪ್ಯಾಶನ್ ಹಂಚಿಕೊಳ್ಳಲಾರರು. ಅದು ಅವರ ಸ್ವಭಾವವೂ ಅಲ್ಲ, ಆಕೆ ಒಬ್ಬ ಹೆಸರಾಂತ ಗೈನಕಾಲಜಿಸ್ಟ್. ’ಇಂದು ಮೊದಲಬಾರಿ ನಾಟಕ ನಾಲ್ಕು ಪ್ರದರ್ಶನ ಕಂಡಿತು, ಜನ ನನ್ನ ಎಂಟ್ರಿಗೆ ಸೀಟಿ ಹೊಡೆಯುತ್ತಿದ್ದರು’ ಎಂದು ಕಾಶೀನಾಥ್ ಉತ್ಸಾಹದಲ್ಲಿ ಹೇಳುವಾಗ ಕತ್ತಲಲ್ಲಿ ಕುಳಿತ ಆಕೆ ’ಕರೆಂಟ್ ಬಿಲ್ ಯಾಕೆ ಕಟ್ಟಲಿಲ್ಲ, ಅವರು ಕರೆಂಟ್ ತೆಗೆದಿದ್ದಾರೆ’ ಎಂದು ಪ್ರಶ್ನಿಸುತ್ತಿರುತ್ತಾಳೆ. ಕಾಶೀನಾಥ್ ಅಪ್ರತಿಮ ಕಲಾವಿದರು, ಆದರೆ ತಮ್ಮ ಆಚೆಗೆ ಅವರು ಯಾವುದರ ಅಸ್ತಿತ್ವವನ್ನೂ ಗಮನಿಸದವರು. ಅದು ಇಜ್ಜೋಡು ದಾಂಪತ್ಯ. ಅವರ ಮೊದಲ ಹಿಂಜರಿಕೆಯನ್ನೂ ಮೀರಿ ಅವರ ಮತ್ತು ಕಂಚನ್ ನಡುವೆ ಸಂಬಂಧ ಘಟಿಸಿಬಿಡುತ್ತದೆ. ಮೊದಲಬಾರಿ ಅದು ಇರಾ ಅವರಿಗೆ ತಿಳಿಯುವ ದೃಶ್ಯದ ಚಿತ್ರಣ ಮತ್ತು ಪಾತ್ರಧಾರಿಗಳ ನಿರ್ವಹಣೆ ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಗಂಡಹೆಂಡತಿಯರಿಗೆ ಹಾದಿಯಲ್ಲಿ ಸಿಕ್ಕ ಕಂಚನ್ ಐಸ್ಕ್ರೀಂ ತರುತ್ತೇನೆ ಎಂದು ಹೋಗುತ್ತಾಳೆ, ಅತಿ ಸಾಧಾರಣ ವಿಷಯವೇನೋ ಅನ್ನುವಂತೆ ಕಾಶೀನಾಥ್, ನಾನು ಇನ್ನೊಬ್ಬಳೊಡನೆ ಸಂಬಂಧದಲ್ಲಿದ್ದೇನೆ ಎಂದು ಹೇಳುತ್ತಾರೆ. ಅದನ್ನು ಹೇಳುವಾಗ ಅವರ ಮುಖದಲ್ಲಿ ಎಳ್ಳಷ್ಟೂ ಹಿಂಜರಿಕೆ, ಗಿಲ್ಟ್, ನೋವು ಇರುವುದಿಲ್ಲ. ’ಆದರೆ ನನಗೆ ನೀನೂ ಬೇಕು’ ಎಂದು ಸೇರಿಸುತ್ತಾರೆ. ಆಘಾತದಲ್ಲಿದ್ದ ಇರಾ, ’ಯಾರದು?’ ಎಂದು ಕೇಳಿದಾಗ, ’ಅದೇ ಕಂಚನ್…’ ಎನ್ನುತ್ತಾರೆ. ಇರಾಗೆ ಅದನ್ನು ನಂಬಲೂ ಆಗುವುದಿಲ್ಲ, ನೋವು, ಅಪನಂಬಿಕೆ, ಆಘಾತ ಎಲ್ಲವನ್ನೂ ಅವರ ಮುಖ ಮಾತ್ರ ಕೂಗಿಕೂಗಿ ಹೇಳುತ್ತದೆ. ’ಅಯ್ಯೋ ಅಕ್ಕನಿಗೆ ಹೇಗೆ ಹೇಳುವುದು…ಹೊರಗೆಲ್ಲೂ ಭೇಟಿಯಾಗಬೇಡಿ…ನಮ್ಮ ಮನೆ..ನಾನು ಹೇಗೂ ಯಾವಾಗಲೂ ಆಸ್ಪತ್ರೆಯಲ್ಲೇ ಇರುತ್ತೇನೆ’ ಎಂದು ತೊದಲುತ್ತಾರೆ. ಕಂಚನ್‌ಳನ್ನೂ ಕಾರಿನಲ್ಲೇ ಕೂರಿಸಿಕೊಂಡು, ತಾವು ಹಿಂದಿನ ಸೀಟಿನಲ್ಲಿ ಕೂರುತ್ತಾರೆ. ಆಗ..ಆಗ ಅವರ ಕಣ್ಣುಗಳು ತುಂಬಿಕೊಳ್ಳುತ್ತವೆ. ನಮ್ಮ ಎದೆ ಒಡೆದುಹೋಗುತ್ತದೆ. ಅಷ್ಟೇ ಅದ್ಭುತ ನಟನೆ ಸುಲೋಚನ ಅವರದು. ಈ ವಿಷಯ ಫೋನಿನಲ್ಲಿ ತಿಳಿಯುತ್ತದೆ. ಅವರು ಆಡುವುದು ಒಂದೆರೆಡೇ ಮಾತುಗಳು. ಅವರ ಕೋಪ, ಅಸಹ್ಯ ಎಲ್ಲವನ್ನೂ ಅದು ವ್ಯಕ್ತಗೊಳಿಸಿಬಿಡುತ್ತದೆ.

ಸುಲೋಚನ ಈ ವಿಷಯವನ್ನು ತಮ್ಮ ಗುರು, ಆಗಿನ ಪ್ರಖ್ಯಾತ ಚಿತ್ರನಿರ್ಮಾಪಕ ಭಾಳಾಜಿ ಫೆಂಡಾರ್ಕರ್ ಅವರಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ಅವರು ಕಂಚನ್‌ಗೆ ಹಾಕುವುದು ಒಂದೇ ಕಂಡೀಷನ್, ಒಂದು ವರ್ಷ ನೀವಿಬ್ಬರೂ ಯಾವುದೇ ಸಂಪರ್ಕ ಇಲ್ಲದೆ ಇರಬೇಕು, ಹಾಗಿದ್ದರೆ ನಿಮ್ಮ ಪ್ರೀತಿಯನ್ನು ಒಪ್ಪುತ್ತೇವೆ ಎಂದು. ಅದನ್ನು ಆಕೆ ಕಾಶೀನಾಥ್‌ರಲ್ಲಿ ಹೇಳಿದಾಗಲೂ ಅವರು ಕೇಳುವ ಮೊದಲ ಪ್ರಶ್ನೆ, ’ಅಷ್ಟರಲ್ಲಿ ನಿನಗೆ ಇನ್ಯಾರ ಮೇಲಾದರೂ ಪ್ರೀತಿ ಆಗಿಬಿಟ್ಟರೆ?’ ಇದೂ ಅವರ ಸ್ವಭಾವದ ಒಂದು ಭಾಗವೇ. ಇದಕ್ಕೆ ಮೊದಲೂ ಸಹ ಅವರ ಹಠದ ಸ್ವಭಾವ, ಉಡಾಫೆ, ಕುಡಿತ, ಸಿಗರೇಟು, ಸ್ವಕೇಂದ್ರಿತ ಚಿಂತನೆಯಿಂದ ವೃತ್ತಿಬದುಕಿನಲ್ಲಿ ಹಲವಾರು ಎಡವಟ್ಟುಗಳನ್ನು ಮಾಡಿಕೊಂಡಿರುತ್ತಾರಾದರೂ ಕಂಚನ್ ದೂರಾದ ನಂತರ ಅದು ಮಿತಿಮೀರುತ್ತದೆ. ಸದಾಕಾಲ ಅವರ ಜೊತೆಗಿರುವ ಆತ್ಮೀಯ ಮಿತ್ರ ಪ್ರಭಾಕರ್ ಒಂದು ಮಾತು ಹೇಳುತ್ತಾರೆ, ’ಶಾಲೆಯಲ್ಲಿ ಒಂದು ಅತ್ಯಂತ ಬುದ್ಧಿವಂತ ಮಗು ಇರುತ್ತದೆ, ಅದು ಪ್ರತಿಸಲ ನಾನು ಇದರಿಂದ ತಪ್ಪಿಸಿಕೊಳ್ಳಬಲ್ಲೆ ಎಂದು ಸಾಬೀತು ಮಾಡಲೆಂದೇ ತರಲೆ, ತಂಟೆ ಮಾಡುತ್ತಿರುತ್ತದೆ…. ನಾನು ಹೇಳಿದ್ದು ಅರ್ಥವಾಯಿತಾ?’ ಅನ್ನುತ್ತಾರೆ. ನಿರಮ್ಮಳವಾಗಿ ಕಾಶೀನಾಥ್ ’ಆ ಮಗು ನಾನು’ ಎನ್ನುತ್ತಾರೆ! ನಾಟಕ ನಡೆಯುತ್ತಿದ್ದಾಗ ನಾಯಕಿ ತನ್ನ ಸೂಚನೆಗೆ ವಿರುದ್ಧವಾಗಿ ನಡೆದಳು ಎನ್ನುವ ಕಾರಣಕ್ಕೆ ಅಲ್ಲೇ ಜೋರಾಗಿ ಅವಳ ಸೊಂಟ ಹಿಂಡುತ್ತಾರೆ. ಸುದ್ದಿ ಹೊರಗೆ ಬರುತ್ತದೆ. ಅವರನ್ನು ಪ್ರೀತಿಸಿದ್ದ, ಆರಾಧಿಸಿದ್ದ, ಹೊತ್ತು ಮೆರೆಸಿದ್ದ ಅದೇ ಜನ ಅವರೆಡೆಗೆ ತಿರಸ್ಕಾರ ಬೆಳೆಸಿಕೊಳ್ಳುತ್ತಾರೆ. ನಾಟಕ ಮುಗಿಸಿ ಅವರು ಹೊರಬಂದಾಗ ಎಂದಿನಂತೆ ಮುತ್ತಿಕೊಳ್ಳದೆ ತಮ್ಮ ಹೆಣ್ಣುಮಕ್ಕಳನ್ನು ಪಕ್ಕಕ್ಕೆ ಕರೆದುಕೊಳ್ಳುತ್ತಾರೆ. ಜನರಿಂದಲೇ ಬದುಕಲು, ನಟಿಸಲು ಬೇಕಾದ ಒತ್ತಾಸೆ ಕಂಡುಕೊಳ್ಳುತ್ತಿದ್ದ ಅವರಿಗೆ ಜನರ ನಿರಾಕರಣೆಯ ಸ್ಪಷ್ಟ ಸಂದೇಶ ರಂಗದ ಮೇಲೆಯೇ ಸಿಕ್ಕಿಬಿಡುತ್ತದೆ. ಯಾವ ಲಾಲ್ಯಾನ ಪಾತ್ರದ ಒಂದೊಂದು ಸಂಭಾಷಣೆಗೂ ಜನ ಹುಚ್ಚೆದ್ದು ಕುಣಿಯುತ್ತಿದ್ದರೋ ಕಾಶೀನಾಥ್ ಅದೇ ಲಾಲ್ಯಾನ, ಅದೇ ಸಂಭಾಷಣೆ ಹೇಳುತ್ತಾರೆ …ಜನರ ಪ್ರತಿಕ್ರಿಯೆಯೇ ಇಲ್ಲ. ಆ ಆಘಾತ ಎಷ್ಟು ಮಟ್ಟಿಗೆ ಅವರನ್ನು ಅಲ್ಲಾಡಿಸುತ್ತದೆ ಎಂದರೆ ಅದೇ ಸಂಭಾಷಣೆಯನ್ನು ಮತ್ತೆ ಮತ್ತೆ, ಮತ್ತೆ ಮತ್ತೆ ಹೇಳುತ್ತಾರೆ, ಜನರ ಮುಖಗಳಲ್ಲಿ ಆ ಹಳೆಯ ಮೆಚ್ಚುಗೆಯನ್ನು ಹುಡುಕುತ್ತಾರೆ. ಕಡೆಯ ಸಲ ಸಂಭಾಷಣೆ ಹೇಳುವಾಗ ಅವರ ಧ್ವನಿ ಒಡೆದಿರುತ್ತದೆ.

ಇವರ ಈ ಮಹಾಕುಸಿತದ ಪಯಣದಲ್ಲಿ ಇನ್ನೊಬ್ಬ ಕಲಾವಿದರು ಮೇಲೇಳುತ್ತಿರುತ್ತಾರೆ. ಅವರು ಸಹ ವೈದ್ಯರೇ, ಡಾ ಶ್ರೀರಾಂ ಲಾಗೂ. ಇವರಿಬ್ಬರ ನಡುವಿನ ಯುದ್ಧ ಆಗ ಪ್ರಖ್ಯಾತಿಯನ್ನು ಹೊಂದಿರುತ್ತದೆ. ಅವರನ್ನು ಹಣಿಯಬೇಕು ಎಂದುಕೊಂಡಾಗೆಲ್ಲಾ ಇವರು ಇನ್ನೊಂದು ಹೆಜ್ಜೆ ಕುಸಿಯುತ್ತಾರೆ. ಅವರ ನಾಟಕ ನಡೆಯುತ್ತಿರುವಾಗ ಯಾವುದೇ ಕಲಾವಿದ ಮಾಡಬಾರದ ತಪ್ಪು ಮಾಡುತ್ತಾರೆ, ನಾಟಕದ ನಡುವೆ ಹೋಗಿ, ಜೋರು ಧ್ವನಿಯಲ್ಲಿ ಮಾತನಾಡಿ, ಕಲಾವಿದರ ಏಕಾಗ್ರತೆ ಭಂಗಗೊಳಿಸಿ, ನಾಟಕ ನಿಲ್ಲುವಂತೆ ಮಾಡಿದ್ದಲ್ಲದೆ, ನಂತರ ಚಿಟಿಕೆ ಹೊಡೆದು ’ಹೂ ಮುಂದುವರೆಸಿ’ ಎನ್ನುತ್ತಾರೆ. ಆದರೆ ಹೀಗಾದಾಗೆಲ್ಲಾ ತಾವೇ ಇನ್ನಷ್ಟು ಕುಸಿಯುತ್ತಾರೆ.

ಈಗೀಗ ಮನೆಗೇ ಹೆಂಗಸರನ್ನು ಕರೆದುಕೊಂಡು ಬರುತ್ತಿರುತ್ತಾರೆ. ಒಮ್ಮೆ ಆಸ್ಪತ್ರೆಯಿಂದ ಬಂದ ಹೆಂಡತಿ ’ಹೀಗೇಕಾದಿರಿ’ ಎಂದು ಅನುನಯಿಸುತ್ತಿರುತ್ತಾಳೆ, ’ನಾವಿಬ್ಬರೂ ಹೊಸದಾಗಿ ಜೀವನ ಶುರು ಮಾಡೋಣ ಇರಾ, ಇದೆಲ್ಲದರಿಂದ ದೂರ ಹೋಗಿಬಿಡೋಣ’ ಎಂದು ಹೇಳುವಷ್ಟರಲ್ಲಿ ಅಲಮಾರದ ಬಾಗಿಲು ದೂಡಿಕೊಂಡು ಹೆಣ್ಣೊಬ್ಬಳು ಹೊರಗೆ ಬೀಳುತ್ತಾಳೆ. ಹೆಂಡತಿ ಬಂದಳು ಎಂದು ಅವಿತುಕೊಂಡ ಅವಳಿಗೆ ಉಸಿರು ಕಟ್ಟಿರುತ್ತದೆ. ಇರಾ ಎದ್ದು ಅವಳ ಮುಖಕ್ಕೆ ನೀರು ಚುಮುಕಿಸಿ ಅರೈಕೆ ಮಾಡುತ್ತಾ, ’ಮಕ್ಕಳಿಲ್ಲ ಎನ್ನುವ ಕೊರತೆಯೆಲ್ಲವನ್ನೂ ನಿಮ್ಮನ್ನು ನೋಡಿಕೊಳ್ಳುವುದರಲ್ಲಿ ಹಿಂದೆ ತಳ್ಳುತ್ತಿದ್ದೆ. ಇನ್ನು ನನ್ನಿಂದಾಗಲ್ಲ..’ ಅನ್ನುತ್ತಾರೆ. ಒಂದಿಷ್ಟೂ ಗಿಲ್ಟ್ ಇಲ್ಲದ ಕಾಶಿನಾಥ್ ಆಗಲೂ ಕೇಳುವುದು, ’ನಿನ್ನ ಜೀವನದಲ್ಲಿ ಇನ್ಯಾರಾದರೂ ಇದ್ದಾರಾ?’! ಇರಾ ಹೌದೆನ್ನುತ್ತಾರೆ ಅವರನ್ನು ಮದುವೆಯಾಗುತ್ತೇನೆ ಎನ್ನುತ್ತಾರೆ. ತಮಗೆ ಕಂಚನ್ ಜೊತೆ ಇರುವ ಸಂಬಂಧವನ್ನು ನಿರ್ಭಾವುಕತೆಯಿಂದ ಹೇಳುವ ಇವರು ಈಗ ದುಃಖದಲ್ಲಿ ಪುಡಿಪುಡಿಯಾಗುತ್ತಾರೆ.

ಇದರ ನಡುವೆ ಇವರನ್ನು ಪ್ರೀತಿಯಿಂದ ’ರಾಜೇ’ ಎಂದು ಕರೆಯುತ್ತಿದ್ದ, ನೆರಳಿನಂತೆ ಇರುತ್ತಿದ್ದ ಸಹಾಯಕನಿಗೆ ಬೇರೆ ಕೆಲಸ ಕೊಡಿಸಿ ಕಳಿಸಿಬಿಡುತ್ತಾರೆ. ನಾಟಕ ನಿಲ್ಲಿಸಿಬಿಡುತ್ತಾರೆ. ಕುಡಿತ, ಸಿಗರೇಟು, ಇವರು ಮಾಡಿದ್ದೆಲ್ಲಕ್ಕೂ ಉಘೇ ಉಘೇ ಅನ್ನುವ ಹಿಂಬಾಲಕರು… ಸ್ನೇಹಿತ ಪ್ರಭಾಕರ್ ಆಗ ಬಾಳಾಜಿ ಯವರಿಗೆ ಕರೆ ಮಾಡುತ್ತಾನೆ. ಒಂದು ವರ್ಷ ದೂರ ಇರಿ ಎಂದು ಅವರು ಹಾಕಿದ ಕಂಡಿಶನ್ ಗೆ ತಲೆಬಗ್ಗಿಸಿ, ನೀವು ಮತ್ತೆ ಅಮ್ಮ ಅವರನ್ನು ಒಪ್ಪಿಕೊಳ್ಳುವರೆಗೂ ಕಾಯುತ್ತೇನೆ ಅಂದಿದ್ದ ಕಂಚನ್ ಹತ್ತು ವರ್ಷಗಳಾದರೂ ಕಾಯುತ್ತಲೇ ಇರುತ್ತಾಳೆ. ಕಡೆಗೂ ಅವರಿಬ್ಬರ ಮದುವೆ ಆಗುತ್ತದೆ.

ಕಡೆಯ ದೃಶ್ಯ : ಲಾಲ್ಯ ಪಾತ್ರದಲ್ಲಿ ಅವರಿಗೆ ಅಭೂತಪೂರ್ವ ಜನಮನ್ನಣೆ ಕೊಟ್ಟಿದ್ದ ನಾಟಕದ ಮರುಪ್ರದರ್ಶನ ಅಮರಾವತಿಯಲ್ಲಿ. ಸುರಿಯುವ ಮಳೆ. ಸೋರುತ್ತಿರುವ ರಂಗಮಂದಿರ. ಕಂಪನಿ ಒಡೆಯ ಪ್ರಭಾಕರ್ ಅವರಿಗೆ ಅಳುಕು, ಈ ಮಳೆಯಲ್ಲಿ ಜನ ಬರುವುದು ಹೌದೆ? ಖಾಲಿ ಖಾಲಿ ಕುರ್ಚಿಗಳು. ನಾಟಕದ ಸಮಯ ಬರುತ್ತದೆ. ಜನ ಬರತೊಡಗುತ್ತಾರೆ. ಕಣ್ಣುಕಾಣದವರೂ ಸಾಲುಗಟ್ಟಿ ನಿಲ್ಲುತ್ತಾರೆ. ಸೋರುವ ರಂಗಮಂದಿರದಲ್ಲಿ ಕೊಡೆಹಿಡಿದು ಕೂರುತ್ತಾರೆ. ‘ನೀನು ಮರಾಠಿ ರಂಗಭೂಮಿಯ ಮೊದಲ ಸೂಪರ್ ಸ್ಟಾರ್ ಅಂದಿದ್ದೆ, ತಪ್ಪು ನೀನು ಇಲ್ಲಿನ ಏಕೈಕ ಸೂಪರ್ ಸ್ಟಾರ್’ ಎಂದು ಪ್ರಭಾಕರ್ ಗದ್ಗದಿಸುತ್ತಾರೆ. ನಾಟಕದ ಮೂರನೆಯ ಬೆಲ್ ಹೊಡೆಯುತ್ತದೆ. ಆದರೆ….

ಎಲ್ಲಾ ಕಲಾವಿದರೂ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಆದರೆ ಕಾಶೀನಾಥ್ ಆಗಿ ಸುಬೋಧ್ ಭಾವೆ ಅವರ ಅಭಿನಯ, ಅದು ಬೇರೆಯದೇ ಮಜಲು. ಆ ಪಾತ್ರದ ಸೂಕ್ಷ್ಮಾತಿಸೂಕ್ಷ್ಮಗಳನ್ನು ಅವರು ಹಿಡಿದಿಟ್ಟಿದ್ದಾರೆ. ಚಿತ್ರ ನೋಡಿದ ವಿಮರ್ಶಕರೊಬ್ಬರು, ’ಬಹುಶಃ ಇನ್ನು ಮುಂದೆ ಕಾಶೀನಾಥ್ ಘಾಣೇಕರ್ ಎಂದಾಗ ನಮ್ಮ ಮುಂದೆ ಸುಬೋಧ್ ಭಾವೆ ಅವರ ಮುಖವೇ ಬರಬಹುದು!’ ಎನ್ನುತ್ತಾರೆ. ಕಾಶೀನಾಥ್ ಘಾಣೇಕರ್ ಹಲವಾರು ದೋಷಗಳನ್ನು, ದೌರ್ಬಲ್ಯಗಳನ್ನು ಹೊಂದಿದ್ದವರು. ಆದರೂ ಏಕೆ ಮನಸ್ಸು ಅವೆಲ್ಲದರ ಹೊರತಾಗಿಯೂ ಅವರನ್ನು ‘ಅರ್ಥ ಮಾಡಿಕೊಳ್ಳಲು’ ಕಾರಣಗಳನ್ನು ಹುಡುಕುತ್ತದೆ? ಇದೇ ಸುಬೋಧ್ ಭಾವೆ ನಟಿಸಿರುವ ಇನ್ನೊಂದು ಅದ್ಭುತ ಚಿತ್ರ ‘ಬಾಲಗಂಧರ್ವ’. ಅಲ್ಲಿ ಅವರ ತಾಯಿಯ ಪಾತ್ರಧಾರಿ, ಅವರ ಹೆಂಡತಿಯ ಪಾತ್ರಧಾರಿಗೆ ಒಂದು ಮಾತು ಹೇಳುತ್ತಾರೆ, ‘ಆ ಲೋಕದ ಗಂಧರ್ವನನ್ನು ನಾವು ಭೂಲೋಕದ ನಿಯಮಗಳಿಂದ ಕಟ್ಟುಹಾಕಲು ನೋಡಿದೆವೆ?’ ಚಿತ್ರದ ಕಡೆಯಲ್ಲಿ ಕಾಶೀನಾಥ್ ಸಹ ಒಂದು ಮಾತು ಹೇಳುತ್ತಾರೆ, ‘ನಾನು ಒಳ್ಳೆಯ ಮಗ ಆಗಬಹುದಿತ್ತು, ಪರಿ ಆಗಬಹುದಿತ್ತು, ಸ್ನೇಹಿತ ಆಗಬಹುದಿತ್ತು…ಆದರೆ ಆಗ ನಾನು ಈಗೇನಾಗಿರುವೆನೋ ಆ ಕಾಶೀನಾಥ್ ಆಗಲು ಬಹುಶಃ ಸಾಧ್ಯವಿರುತ್ತಿರಲಿಲ್ಲ.’ ಯಾವುದು ಸರಿ, ಯಾವುದು ತಪ್ಪು??

LEAVE A REPLY

Connect with

Please enter your comment!
Please enter your name here