ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ ಹೆಚ್ ಎಂ ಕೆ ಮೂರ್ತಿ ಅವರ ಮೊಮ್ಮಗ ಯಶಸ್ವ್ ಸಿನಿಮಾರಂಗಕ್ಕೆ ಪದಾರ್ಪನೆ ಮಾಡುತ್ತಿದ್ದಾರೆ. ಯಶಸ್ವ್ ಹೀರೋ ಆಗಿ ನಟಿಸಿರುವ ‘ಅಗ್ನಿಲೋಕ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ದಿ. ಹೆಚ್ ಎಂ ಕೆ ಮೂರ್ತಿ ಅವರ ಮೊಮ್ಮಗ ಯಶಸ್ವ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೂರ್ತಿ ಅವರ ಪುತ್ರ, ಚಿತ್ರನಿರ್ದೇಶಕ ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವ್. ‘ಅಗ್ನಿಲೋಕ’ ಚಿತ್ರದೊಂದಿಗೆ ಅವರು ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ತಾತ, ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಅವರದು. ಈಗಾಗಲೇ ಸಮೂಹ ಸಂವಹನ ವಿಷಯದಲ್ಲಿ ಪದವಿ ಮುಗಿಸಿಕೊಂಡಿದ್ದಾರೆ. ತಮ್ಮ ತಾತನ ಹಾಗೆ ಚಿತ್ರರಂಗದಲ್ಲಿ ನಟನೆ ಜೊತೆಗೆ ಬರವಣಿಗೆ, ನಿರ್ಮಾಣ ವಿಭಾಗದಲ್ಲೂ ತೊಡಗಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ.
ಪುತ್ರನ ಚಿತ್ರಕ್ಕೆ ರಾಜೇಶ್ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಂಕಲನವನ್ನೂ ಸಹ ನಿರ್ವಹಿಸಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. Vishnu Pushpa Films ಬ್ಯಾನರ್ ಅಡಿಯಲ್ಲಿ ಶ್ರೀಮತಿ ಪುಷ್ಪ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಂಜುಶ್ರೀ ಚಿತ್ರದ ನಾಯಕಿ. ಬಹಳ ವರ್ಷಗಳ ನಂತರ ನೆ ಲ ನರೇಂದ್ರಬಾಬು ಅವರ ಸಹೋದರ ನೆ ಲ ಮಹೇಶ್ ನಾಯಕನ ತಂದೆಯ ಪಾತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಬಿ ಎಸ್ ಮಂಜುನಾಥ್, ಅಜಿತ್ ಕುಮಾರ್, ಪ್ರಮೋದ್ ಹಿರೇಮಠ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ವಿನೋದ್ ಛಾಯಾಗ್ರಹಣ, ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ‘ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಮಾರ್ಚ್ ಮೊದಲನೇ ವಾರ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎನ್ನುತ್ತಾರೆ ನಿರ್ದೇಶಕ ರಾಜೇಶ್ ಮೂರ್ತಿ.