ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಇಂದ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆತ್ಮೀಯ ಸ್ನೇಹಿತನಿಗೆ ನಟ ರಕ್ಷಿತ್‌ ಶೆಟ್ಟಿ ಭರಪೂರ ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದಾರೆ. ಸದ್ಯ ‘ಕಾಂತಾರ 2’ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಿಷಭ್‌ರಿಗೆ ಸ್ಯಾಂಡಲ್‌ವುಡ್‌ನ ಹಲವರು ಶುಭ ಹಾರೈಸಿದ್ದಾರೆ.

‘ವರ್ಷವಿಡೀ ಸಂಭ್ರಮಿಸುವಂಥ ದೊಡ್ಡ ಸಾಧನೆಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ, ಖುಷಿ ನಿನ್ನದಾಗಲಿ ಎಂದು ಹಾರೈಸುತ್ತೇನೆ ಮಗಾ’ ಎಂದು‌ ಟ್ವೀಟ್‌ ಮಾಡಿ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರು ತಮ್ಮ ಆತ್ಮೀಯ ಗೆಳೆಯ ರಿಷಭ್‌ ಬರ್ತ್‌ಡೇಗೆ ಶುಭಾಶಯ ಹೇಳಿದ್ದಾರೆ. ಇಬ್ಬರೂ ಒಟ್ಟಿಗೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ರಕ್ಷಿತ್‌ಗೆ ದೊಡ್ಡ ಬ್ರೇಕ್‌ ಸಿಕ್ಕಿದ್ದು ರಿಷಭ್‌ ನಿರ್ದೇಶನದ ‘ಕಿರಿಕ್‌ ಪಾರ್ಟಿ’ಯಲ್ಲಿ. ಇಬ್ಬರೂ ಪರಸ್ಪರರ ಚಿತ್ರಗಳನ್ನು ಪ್ರೊಮೋಟ್‌ ಮಾಡುತ್ತಾ ಬೆಳೆಯುತ್ತಿದ್ದಾರೆ. ರಿಷಭ್‌ರೊಂದಿಗೆ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರು ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವರು ರಿಷಭ್‌ರಿಗೆ ಶುಭಾಶಯ ಕೋರಿದ್ದಾರೆ.

ಹೊಂಬಾಳೆ ಬ್ಯಾನರ್‌ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ರಿಷಭ್‌ರ ಸಾಧನೆ, ಪ್ರತಿಭೆಯನ್ನು ಕೊಂಡಾಡಿ ಅವರಿಗೆ ಶುಭ ಹಾರೈಸಿದೆ. ಹೊಂಬಾಳೆ ಸಂಸ್ಥೆಯಡಿ ತಯಾರಾದ, ರಿಷಭ್‌ ನಟಿಸಿ – ನಿರ್ದೇಶಿಸಿದ್ದ ‘ಕಾಂತಾರ’ ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿತ್ತು. ‘KGF’ ಸರಣಿ ಸಿನಿಮಾಗಳ ನಂತರ PAN ಇಂಡಿಯಾ ಸಿನಿಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು ‘ಕಾಂತಾರ’. ‘ಅಪ್ಪಟ ಪ್ರತಿಭಾವಂತ ಮತ್ತು ಸಹೃದಯ ವ್ಯಕ್ತಿತ್ವದ ರಿಷಭ್‌ರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಪ್ರತಿಭೆ ಮುಂದಿನ ದಿನಗಳಲ್ಲಿ ಭಾರತೀಯ ಸಿನಿಮಾರಂಗದಲ್ಲಿ ಹೆಜ್ಜೆ ಗುರುತು ಮೂಡಿಸಲಿ’ ಎನ್ನುವ ಒಕ್ಕಣಿಯ ಟ್ವೀಟ್‌ನೊಂದಿಗೆ ಹೊಂಬಾಳೆ ರಿಷಭ್‌ರಿಗೆ ಶುಭಾಶಯ ಹೇಳಿದೆ. ಇನ್ನು ರಿಷಭ್‌ ಇದೇ ಮೊದಲ ಬಾರಿಗೆ ಬೆಂಗಳೂರಿನ ನಂದಿ ಲಿಂಕ್ಸ್‌ ಮೈದಾನದಲ್ಲಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here