ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲೋದು ಕಷ್ಟ. ಅಂಥದ್ದರಲ್ಲಿ ದಬ್ಬಾಳಿಕೆಯಿಂದ ಸಾಧ್ಯವೇ? ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವುದು ಹೌದು. ಆದರೆ ಅದು ಅನ್ವಯವಾಗುವುದು ಭವಿಷ್ಯಕ್ಕೆ ಹೊರತು ವಾಸ್ತವಕ್ಕಲ್ಲ ಅಲ್ಲವೇ? – ‘ಯೆಹ್ ಕಾಲಿ ಕಾಲಿ ಆಂಖೇ’ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇದೊಂದು ರೋಚಕ ತಿರುವುಗಳ ತ್ರಿಕೋನ ಪ್ರೇಮಕಥೆ. ಬಿಡಿಸಿಕೊಂಡಷ್ಟು ಬಿಗಿಯಾಗುವ ಕಗ್ಗಂಟಿನಂತಹ ಸಮಸ್ಯೆಗಳ ಚಿಂತನೆ ಮತ್ತು ಬದುಕಿನ ಕಡೇ ಗಳಿಗೆಯವರೆಗೂ ಗೆಲುವಿನ ದಾರಿ ಹುಡುಕುವ ವ್ಯಕ್ತಿಯೊಬ್ಬನ ಗೌಪ್ಯ ಹೋರಾಟದ ಕಥೆ. ಏಕಾಏಕಿ ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನವನ್ನೇ ಮತ್ತೊಬ್ಬರು ಆಕ್ರಮಿಸಿದರೆ ಹೇಗೆ? ಆತನ ಆಸೆ, ಕನಸು, ಪ್ರೀತಿ ಸೇರಿದಂತೆ ಸಂಪೂರ್ಣ ಸ್ವಾತಂತ್ರವನ್ನೇ ಕಸಿದರೆ? ಇಂಥದ್ದೊಂದು ಕಲ್ಪನೆಗೂ ನಿಲುಕದ ಪರಿಕಲ್ಪನೆಯ ವಿಶಿಷ್ಟ ನಾಟಕೀಯ ಸುದೀರ್ಘ ಕಥೆ.
ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಅದು ಅನ್ವಯವಾಗುವುದು ಭವಿಷ್ಯಕ್ಕೆ. ಆದರೆ ವಾಸ್ತವದಲ್ಲೇ ನಮ್ಮ ಜೀವನದ ಯಾವುದೇ ವಿಚಾರ ಮತ್ತು ನಿರ್ಧಾರಗಳು ನಮ್ಮ ಹಿಡಿತ ತಪ್ಪಿದೆ ಎಂದಾಗ ಏನು ತಾನೇ ಮಾಡಲು ಸಾಧ್ಯ? ಅಂತಿಮವಾಗಿ ಇಂಥದ್ದೊಂದು ಪರಿಸ್ಥಿತಿ ಎದುರಾದಾಗ ಕಥಾನಾಯಕ ತನ್ನ ಜೀವನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಿರ್ಧರಿಸಿ, ತೀರ ತಲೆಕೆಡಿಸಿಕೊಳ್ಳುತ್ತ ಗೊಂದಲಮಯ ಎನಿಸಿದರೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಸಾಗುತ್ತಾನೆ. ಒಬ್ಬ ವ್ಯಕ್ತಿ ತನ್ನ ತಿಳುವಳಿಕೆಗೆ ಬಾರದ ವಿಚಾರಗಳನ್ನು ಶಾರ್ಟ್‌ಕಟ್‌ನಲ್ಲಿ ಹೇಗೆ ತಿಳಿದುಕೊಳ್ಳುತ್ತಾನೋ ಹಾಗೆಯೇ. ಒಂದು ಹಂತದಲ್ಲಿ ಹಳೇ ಸ್ನೇಹಿತರು ಮತ್ತು ಗೂಗಲ್ ಯೂಟ್ಯೂಬ್ ವೀಡಿಯೊಗಳಿಂದ ತಿಳಿದುಕೊಳ್ಳುತ್ತ ಹೆಜ್ಜೆಯಿಡುತ್ತಾನೆ. ಕೊನೆಯದಾಗಿ ‘ಮಾಡು ಇಲ್ಲವೆ ಮಡಿ’ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದು ಅಸಾಧ್ಯವಾದ ಪ್ರಯತ್ನ, ಪ್ರಯೋಗದಿಂದಾಚೆಗೂ ಪ್ರಯತ್ನ ಪಡುವ ಕಥಾನಾಯಕ ಕೊನೆಗೂ ಆ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾನೆಯೇ? ತನ್ನ ಹೋರಾಟದಲ್ಲಿ ಜಯಗಳಿಸುತ್ತಾನೋ, ಇಲ್ಲವೋ? ಎನ್ನುವುದೇ ಈ ಸೀರಿಸ್‌ನ ರೋಚಕ ಕಥಾವಸ್ತು.
ಈ ಕಾಲ್ಪನಿಕ ಕೌಟುಂಬಿಕ ಪಾತ್ರಗಳು, ಆ ಪ್ರೇಮಲೋಕ ಮತ್ತು ರಾಜಕೀಯ ರಂಗದ ಕ್ರೌರ್ಯ, ಡಾರ್ಕ್ ವೆಬ್ ಎಂಬ ಕರಾಳ ಲೋಕ. ದ್ರೋಹ, ಮೋಹ, ಪ್ರೇಮ ಮಮತೆ ಈ ಎಲ್ಲವನ್ನೂ ಹೆಣೆದಿರುವ ಸರಣಿಯ ನಿರೂಪಣೆ ಪ್ರೇಕ್ಷಕನನ್ನು ಒಳಗೊಳ್ಳುತ್ತದೆ. ಕೊನೆಯವರೆಗೂ ಕುತೂಹಲ ಕಾಯ್ದಿರಿಸಿಕೊಳ್ಳುವ ಸರಣಿಯು ಮುಂದಿನ ಸೀಸನ್‌ಗಾಗಿ ಕಾಯುವಂತೆ ಮಾಡುತ್ತದೆ. ಒಂದು ಪ್ರಾಂತ್ಯದ ದಬ್ಬಾಳಿಕೆಯ ದೊರೆ, ಪ್ರಬಲ ರಾಜಕಾರಣಿ ‘ಅಕಿರಾಜ್ ಅವಸ್ತಿ’ಯ ಮಗಳು ‘ಪೂರ್ವ’, ಆ ರಾಜಕಾರಣಿಯ ಅಕೌಂಟೆಂಟ್ ಚೌಹಾಣ್ ಮಗ ‘ವಿಕ್ರಾಂತ್’. ಬಾಲ್ಯದ ಶಾಲಾ ದಿನಗಳಲ್ಲೇ ಈ ಪೂರ್ವ ಮತ್ತು ವಿಕ್ರಾಂತ್ ಪರಸ್ಪರ ಪರಿಚಿತರು. ಆದರೆ ಅದ್ಯಾಕೋ ಆಗಲೇ ಅವಳಿಗೆ ಅವನೆಂದರೆ ಇಷ್ಟ. ಖುದ್ದು ತಾನೇ ಹೋಗಿ ಚಾಕೊಲೇಟ್ ಕೊಟ್ಟು ಸ್ನೇಹ ಬಯಸುತ್ತಾಳೆ. ಆದರೆ ಅವಳೆಂದರೆ ಇವನಿಗೆ ಕಷ್ಟ. ನೇರವಾಗಿಯೇ ತಿರಸ್ಕರಿಸುತ್ತಾನೆ.
ಈಗ ವಿಕ್ರಾಂತ್ ಬೆಳೆದು ಇಂಜಿನಿಯರಿಂಗ್ ಮುಗಿಸಿದ್ದಾನೆ. ಕಾಲೇಜಿನಲ್ಲಿ ಶಿಖಾಳೊಂದಿಗೆ ಪ್ರೀತಿ ಚಿಗುರಿ ಹೆಮ್ಮರವಾಗಿದೆ. ಒಂದೊಳ್ಳೆ ಸಂಸ್ಥೆಯ ಕೆಲಸದ ನಿರೀಕ್ಷೆಯಲ್ಲಿದ್ದಾನೆ. ಇಬ್ಬರೂ ನಗರದಿಂದ ದೂರ ಹೋಗಿ ಒಂದು ಪುಟ್ಟ ಹಾಗು ಸುಂದರ ಬದುಕು ಕಟ್ಟಿಕೊಳ್ಳುವ ಯೋಜನೆ ರೂಪಿಸಿಕೊಂಡಿದ್ದಾರೆ. ಆದರೆ ಚೌಹಾಣ್ ತನ್ನ ಆರಾಧ್ಯ ದೈವವಾಗಿರುವ ಅಕಿರಾಜ್ ಅವಸ್ತಿಯ ಆಶ್ರಯದಲ್ಲೇ ತನ್ನ ಮಗ ವಿಕ್ರಾಂತ್ ಬದುಕು ರೂಪಿಸಿಕೊಳ್ಳಲಿ ಎನ್ನುವ ಆಶಯದಲ್ಲಿ ಗೊತ್ತೋ, ಗೊತ್ತಿಲ್ಲದೆಯೋ ವ್ಯವಸ್ಥೆಯ ಜಾಲಕ್ಕೆ ತನ್ನ ಮಗನನ್ನು ಕರೆತರುತ್ತಾನೆ. ಆಗ ಬಾಲ್ಯದಲ್ಲಿಯೇ ಸ್ನೇಹ ಬಯಸಿದ್ದ ಆ ಬಾಲೆ ‘ಪೂರ್ವ’ ಮತ್ತೆ ಬೇಟಿಯಾಗುತ್ತಾಳೆ. ಹೀಗೆ ನಾಟಕೀಯವಾಗಿಯೇ ಶುರುವಾಗುವ ಕತೆ ರೋಮಾಂಚಕ ತಿರುವುಗಳೊಂದಿಗೆ ಕುತೂಹಲ ಉಳಿಸಿಕೊಂಡು ಸಾಗುತ್ತದೆ.
ಪೂರ್ವ, ವಿಕ್ರಾಂತನಿಗಾಗಿ ಹಂಬಲಿಸುತ್ತಾಳೆ, ಪ್ರೇಮಿಸುತ್ತಾಳೆ, ಮೋಹಿಸುತ್ತಾಳೆ. ಅವನನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗಲು ಅವಳು ಸಿದ್ದ. ಆದರೆ ವಿಕ್ರಾಂತ್‌ಗೆ ಅವಳು ಸುತಾರಾಂ ಇಷ್ಟವಿಲ್ಲ. ಕಾರಣ ವಿಕ್ರಾಂತ್, ಶಿಖಾಳ ಗಾಢ ಪ್ರೇಮದಲ್ಲಿದ್ದಾನೆ. ಆ ಪ್ರೇಮಕಥೆಗೆ ಪೂರ್ವ ಖಳನಾಯಕಿಯಾಗುತ್ತಾಳೆ. ವಿಕ್ರಾಂತ್ ಬಯಸುವ ಶಿಖಾಳನ್ನು ಪೂರ್ವ ಪರೋಕ್ಷವಾಗಿ ಎಡಬಿಡದೆ ಕಾಡುತ್ತಾಳೆ. ಕೊಲ್ಲುವ ಹಂತಕ್ಕೆ ತಲುಪುತ್ತಾಳೆ. ಷಡ್ಯಂತ್ರದಿಂದ ವಿಕ್ರಾಂತನನ್ನು ಮದುವೆಯಾಗುತ್ತಾಳೆ. ಅವನ ಜೀವನವನ್ನೇ ಆಕ್ರಮಿಸುತ್ತಾಳೆ. ವಿಕ್ರಾಂತ್ ತನ್ನ ಪ್ರೇಯಸಿ ಶಿಖಾಳನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ? ಅನಿವಾರ್ಯತೆಗೆ ಸಿಲುಕಿ ಪೂರ್ವಾಳನ್ನು ಹೇಗೆ ಸಂಭಾಳಿಸುತ್ತಾನೆ? ತನ್ನ ಜೀವನವನ್ನು ಮರಳಿ ಪಡೆಯಲು ಏನೆಲ್ಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ? ಅನ್ನೋದೇ ರೋಚಕ ಚಿತ್ರಕಥೆ.
ಕಥೆ ನಾಟಕೀಯವಾದರೂ ನಿರೂಪಣೆ ಚೆನ್ನಾಗಿದೆ. ಶ್ವೇತಾ ತ್ರಿಪಾಠಿ ಅಭಿಮಾನಿಗಳು, ನಟಿಗೆ ವಯಸ್ಸು ಹೆಚ್ಚಾಗುತ್ತಿದೆಯೋ, ಕಡಿಮೆಯಾಗುತ್ತಿದೆಯೋ ಎಂದು ಅಚ್ಚರಿ ಪಡಬಹುದು! ‘ಕಲ್ಲೂ ಮಾಮ’ ಸೌರಭ್ ಶುಕ್ಲಾ, ತಾಹಿರ್ ರಾಜ್ ಭಾಸಿನ್, ಆಂಚಲ್ ಸಿಂಗ್, ಬ್ರಿಜೇಂದ್ರ ಕಲಾ, ಅನಂತ್ ಜೋಶಿ ಎಲ್ಲರ ಅಭಿನಯ ಉತ್ತಮವಾಗಿದೆ. ಕೆಲವು ಕಡೆ ಪಾತ್ರಧಾರಿಗಳ ಭಾವಾಭಿವ್ಯಕ್ತಿ ತುಸು ಹೆಚ್ಚೇ ಎನಿಸಿದರೂ ಈ ಕ್ರೈಮ್ ಥ್ರಿಲ್ಲರ್ ಸರಣಿ ಸರಾಗವಾಗಿ ನೋಡಿಸಿಕೊಳ್ಳುವ ಗುಣ ಹೊಂದಿದೆ. ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.