ಪ್ರೀತಿ ಎಲ್ಲೋ, ಹೇಗೋ ಆಗತ್ತೆ, ಆದ್ರೆ ಅದು ಎಲ್ಲಿಗ್‌ ಹೋಗ್‌ ನಿಲ್ಲುತ್ತೆ ಅಂತ ಗೊತ್ತಾಗೋಲ್ಲ ಅಂತಾರೆ ಪ್ರೀತಿ ಮಾಡಿದೋರು! ಈ ಸಿನಿಮಾದ ಪ್ರೇಮಿಗಳು ತಮ್ಮ ಪ್ರೀತಿ ಉಳಿಸಿಕೊಳ್ಳುವುದರ ಜೊತೆಗೆ ಸಂಬಂಧಗಳನ್ನೂ ಉಳಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಆ ಮೂಲಕ ಸಮಾಜಕ್ಕೆ ಸಂದೇಶ ರವಾನಿಸುವ ಪ್ರಯತ್ನವೂ ಇಲ್ಲಿದೆ. – ’14 PHERE’ ಹಿಂದಿ ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸಂಜಯ್‌ ಮತ್ತು ಅದಿತಿ ಪ್ರೇಮಿಗಳು. ಇವರ ಪ್ರೇಮ ಪಯಣ ಕಾಲೇಜಿನಲ್ಲಿ ಶುರುವಾದದ್ದು. ಅವರೀಗ ಕೆರಿಯರ್‌ ರೂಪಿಸಿಕೊಂಡು ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಹಾಯಾಗಿ ಓಡಾಡಿಕೊಂಡು ದಿಲ್ಲಿಯಲ್ಲಿದ್ದಾರೆ. ಈಗ ಇಬ್ಬರ ಮನೆಗಳಲ್ಲಿ ಮದುವೆ ಸಂಬಂಧಗಳನ್ನು ನೋಡುತ್ತಿದ್ದಾರೆ. ಮನೆಗಳಲ್ಲಿ ಪ್ರೀತಿಯ ವಿಚಾರ ಹೇಳಿ ಹಿರಿಯರನ್ನು ಒಪ್ಪಿಸಿ ಮದುವೆಯಾಗುವ ಆಸೆ ಇವರು. ಆದರೆ ಪರಿಸ್ಥಿತಿ ಸರಳವಾಗಿಲ್ಲ. ಇಬ್ಬರ ಜಾತಿಗಳು ಬೇರೆ ಬೇರೆ. ಎರಡೂ ಸಂಪ್ರದಾಯಸ್ಥ ಕುಟುಂಬಗಳು. ಗತ್ತು, ಗಾಂಭೀರ್ಯ, ಪ್ರತಿಷ್ಠೆಯ ವಿಚಾರದಲ್ಲಿ ಸೋಲುವು ಕುಟುಂಬಗಳಂತೂ ಅಲ್ಲವೇ ಅಲ್ಲ.

ಹೀಗಿರುವಾಗ ಸಂಜಯ್‌ ಮತ್ತು ಅದಿತಿ ತಮ್ಮ ಗೆಳೆಯರ ಬಳಗ ಹಾಗೂ ಆಫೀಸ್‌ ಬಳಗದ ಸಹಾಯದಿಂದ ಮನೆಯವರನ್ನು ಅದು ಹೇಗೇಗೋ ಒಪ್ಪಿಸುತ್ತಾರೆ. ಒಂದಲ್ಲಾ, ಎರಡು ಸಲ ಮದುವೆ ಆಗುತ್ತಾರೆ! ಎರಡು ಕುಟುಂಬಗಳ ಮರ್ಯಾದೆಗಳೂ ಉಳಿಯುತ್ತವೆ! ಅದು ಹೇಗೆ ಅನ್ನೋದು ಗೊತ್ತು ಮಾಡಿಕೊಳ್ಳಲು ನೀವು ಸಿನಿಮಾ ನೋಡಬೇಕು. ಗಂಭೀರವಾಗಿಯೇ ಶುರುವಾಗುವ ಸಿನಿಮಾ ತಿಳಿಹಾಸ್ಯದ ನಿರೂಪಣೆಯೊಂದಿಗೆ ಸಾಗುತ್ತದೆ. ಕತೆಗಾರ ಮನೋಜ್‌ ಕಾಲ್ವಾನಿ ಹಾಗು ನಿರ್ದೇಶಕ ದೇವಾಂಶು ಸಿಂಗ್ ಇಂದಿನ ಕಾಲಘಟ್ಟದ ಗಂಭೀರ, ಸೂಕ್ಷ್ಮ ವಿಚಾರವಾದ ಜಾತೀಯತೆ, ಮರ್ಯಾದಾ ಹತ್ಯೆ ಇನ್ನಿತರೆ ವಿಷಯಗಳನ್ನು ಒಂದು ಪ್ರೇಮಕತೆಯ ಮುಖೇನ ಮನರಂಜನಾತ್ಮಕವಾಗಿ ಹೆಣೆದಿದ್ದಾರೆ.

ಪ್ರೇಮಿಗಳಾಗಿ ವಿಕ್ರಾಂತ್‌ ಮೆಸ್ಸಿ ಮತ್ತು ಕೃತಿ ಕರಬಂಧ ಇಷ್ಟವಾಗುತ್ತಾರೆ. ಕೌಟುಂಬಿಕ ಸಮಸ್ಯೆಗಳ ಮಧ್ಯೆ ನಿಸ್ಸಹಾಯಕಳಾಗುವ ಅಮ್ಮನ ಪಾತ್ರದಲ್ಲಿ ಜಮೀಲ್‌ ಖಾನ್‌, ರಂಗಭೂಮಿ ಕಲಾವಿದರಾಗಿ ಗೌಹರ್‌ ಖಾನ್‌ ಪಾತ್ರಗಳ ಪೋಷಣೆ ಚೆನ್ನಾಗಿದೆ. ಇವರಿಬ್ಬರ ಮಧ್ಯೆ ಬರುವ ಅಭಿನಯದ ಸಿದ್ದಾಂತ ಪ್ರದರ್ಶನದ ಹಾಸ್ಯ ದೃಶ್ಯಗಳು ನಗು ತರಿಸುತ್ತವೆ. ಚಿತ್ರಕಥೆಯಲ್ಲಿ ಉಂಟಾಗುವ ಗೊಂದಲಗಳು ಪ್ರೇಕ್ಷಕರಲ್ಲಿ ಮುಂದೇನಾಗಬಹುದು ಎನ್ನುವ ಕುತೂಹಲ ಹೆಚ್ಚಿಸುತ್ತವೆ. ಆರೋಗ್ಯಕರ ಹಾಸ್ಯ, ಸದಭಿರುಚಿಯ ಸಂಭಾಷಣೆಗಳುಳ್ಳ ಕುಟುಂಬ ಸಮೇತ ನೋಡಬಹುದಾದ ಕೌಟುಂಬಿಕ ಸಿನಿಮಾ. ಫ್ಯಾಮಿಲಿ – ಡ್ರಾಮಾ ನೋಡುವ ಆಸಕ್ತರಿಗೆ ಒಂದೊಳ್ಳೆಯ ಎಂಟರ್‌ಟೇನರ್‌ ಮೂವೀ.

LEAVE A REPLY

Connect with

Please enter your comment!
Please enter your name here