ಸಿನಿಮಾದ ಆಶಯ ಮತ್ತು ಪ್ರಯತ್ನ ಮುಖ್ಯ, ಮಿಕ್ಕಿದ್ದೆಲ್ಲಾ ಗೌಣ ಎನ್ನುವ ಅಭಿಪ್ರಾಯಗಳು ಹಾದಿ ತಪ್ಪಿಸುತ್ತವೆ. ಮಿಕ್ಕಿದ್ದೆಲ್ಲಾ ಮುಖ್ಯವಾದಾಗಲೇ ಆಶಯಕ್ಕೆ ಬಲ ಬರುತ್ತದೆ ಮತ್ತು ಅದು ಅರ್ಥ ಪಡೆದುಕೊಳ್ಳುತ್ತದೆ. ಇಂದು ವಿ.ಎಸ್‌. ನಿರ್ದೇಶನದ ’19(1)(a)’ ಮಲಯಾಳಂ ಸಿನಿಮಾ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

19(1) (ಎ) ದಂತಹ ಸಮಜೋ- ರಾಜಕೀಯ ಸಿನಿಮಾ ಮಾಡುವಾಗ, ಲೇಖಕ- ಹೋರಾಟಗಾರ ಅದರ ಹೂರಣವಾಗಿದ್ದಾಗ ಮತ್ತು ಅದು ನಿರ್ದೇಶಕರ ಮೊದಲ ಸಿನಿಮಾವಾಗಿದ್ದಾಗ ಪ್ರಾಥಮಿಕ ಪಾಠವೆಂದರೆ ಮಹಾತ್ವಕಾಂಕ್ಷೆಯನ್ನು ಹೇರಿಕೊಳ್ಳಬಾರದು. ಒಮ್ಮೆ ಹೇರಿಕೊಂಡರೆ ನಿಭಾಯಿಸಲೇಬೇಕು. ಇಲ್ಲದೆ ಹೋದರೆ ಎಲ್ಲವನ್ನೂ ಸರಳೀಕರಿಸಿ ಪ್ರೇಕ್ಷಕರಿಗೆ ನೂರರ ಜೊತೆ ಮತ್ತೊಂದು ಸಿನಿಮಾ ನೋಡಿದಂತಾಗುತ್ತದೆ. ಈ ಸಿನಿಮಾ ಹಾಗಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವ 19(1) (ಎ) ಶೀರ್ಷಿಕೆ ನೋಡಿದಾಗ, ಇದು ‘ಜನಗಣ ಮನ’ ಘರಾಣಕ್ಕೆ ಸೇರಿದೆ ಎಂದು ಉತ್ಸಾಹ ಪಟ್ಟರೆ ಸರಿಯಾಗಿ ತಣ್ಣೀರು ಎರಚುತ್ತದೆ. ಇಂದಿನ ನಿರಂಕುಶ ಆಡಳಿತವಿರುವ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಳಗೊಂಡ ಕಥನವನ್ನು ನಿರೂಪಿಸುವಾಗ ಅದು ‘ನುಡಿದರೆ ಸ್ಪಟಿಕದ ಶಲಾಕೆ’ಯಂತಿರಬೇಕು. ನಮ್ಮ ಮಾತುಗಳನ್ನೇ ಕತ್ತರಿಸುತ್ತಿರುವಂತಹ ಈ ಸಂದರ್ಭದಲ್ಲಿ ಆ ವಿಷಯಕ್ಕೆ ಒಳಕಸುವು ತಂತಾನೇ ಹುಟ್ಟಿಕೊಳ್ಳುತ್ತದೆ. ನಿರ್ದೇಶಕ ಅದನ್ನು ಬಳಸಿಕೊಳ್ಳಬೇಕಷ್ಟೆ. ಆದರೆ 19(1) (ಎ) ನ ಯುವ ನಿರ್ದೇಶಕಿ ಇಂದು ವಿ. ಎಸ್. ಬೊಗಸೆಯಲ್ಲಿನ ಆನೆಯನ್ನು ಪಳಗಿಸಲಾಗದೆ ಕೈ ಚೆಲ್ಲಿದ್ದಾರೆ

ದೀಬಂಕರ್ ನಿರ್ದೇಶನದ ‘ಶಾಂಘೈ’ ಸಿನಿಮಾದಲ್ಲೂ ಹೀಗೆಯೇ ಲವಲವಿಕೆಯಿಂದ ಸಾಗುತ್ತಾ ಅರ್ಧ ದಾರಿಯ ನಂತರ ಎಡವುತ್ತಾ ಹೋಗುತ್ತದೆ. ಆದರೆ 19(1) (ಎ) ಸಿನಿಮಾಗೆ ಆರಂಭವೇ ತೊಡಕಾಗಿದೆ. ಜೆರಾಕ್ಸ್ ಅಂಗಡಿ ನೋಡಿಕೊಳ್ಳುವ ಪ್ರೊಟಗಾನಿಸ್ಟ್ ನಿತ್ಯಾ ಮೆನನ್ ದೈನಂದಿನ ಚಟುವಟಿಕೆಗಳ ನಿರೂಪಣೆಯೇ ಕಾಲು ಭಾಗವಿದೆ. ಆಗ ಹಠಾತ್ತನೆ ಲೇಖಕ- ಹೋರಾಟಗಾರ ಗೌರಿ ಶಂಕರ (ವಿಜಯ ಸೇತುಪಥಿ) ತನ್ನ ಹೊಸ ಬರಹಗಳೊಂದಿಗೆ ನಿತ್ಯಾ ಮೆನನ್ ಅಂಗಡಿಗೆ ಬಂದು ತನ್ನ ಪುಸ್ತಕವನ್ನು ಜೆರಾಕ್ಸ್ ಮಾಡಲು ಕೊಡುತ್ತಾನೆ. ಆದರೆ ಅದನ್ನು ಮರಳಿ ಪಡೆಯಲು ಬರುವುದಿಲ್ಲ.

ಇಲ್ಲಿ ನಿರ್ದೇಶಕಿ, ಗೌರಿ ಶಂಕರನ ವ್ಯಕ್ತಿತ್ವದ ನಿರೂಪಣೆಗೆ ಹೊರಳಿಕೊಳ್ಳುತ್ತಾರೆ. ಆದರೆ ಈ ಲೇಖಕ- ಹೋರಾಟಗಾರನ ಸಂಕೀರ್ಣ ಆದರೆ ಪಾರದರ್ಶಕ ಬದುಕಿನ ಕಥನ ಕಟ್ಟುವಂತಹ ನಿರ್ಣಾಯಕ ಹಂತದಲ್ಲಿ ಅತ್ಯಂತ ಸುರಕ್ಷಿತ ಮಾರ್ಗ ಹುಡುಕಿಕೊಳ್ಳುವ ನಿರ್ದೇಶಕಿ ನಿರಾಶೆ ಮೂಡಿಸುತ್ತಾರೆ. ಮತ್ತು ಅಪಾರ ಸಾಧ್ಯತೆಗಳಿರುವ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಕಥನ ಅತಿಯಾಗಿ ಸರಳೀಕರಣಗೊಂಡು ಟೊಳ್ಳಾಗಿಬಿಡುತ್ತದೆ. ಇಲ್ಲಿಯೇ ‘ಜನಗಣಮನ’, ‘ಪದ’ ಸಿನಿಮಾಗಳ ಮಹತ್ವ ಅರಿವಾಗುತ್ತದೆ.

ಲೇಖಕ ಕೇವಲ ಕಲಮು ಹಿಡಿಯುವುದಿಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ಆತ/ಆಕೆಯ ಕಾವ್ಯವು ಖಡ್ಗವಾಗುತ್ತದೆ ಎಂದು ನಂಬಿದ ಗೌರಿಶಂಕರನ ಪಾತ್ರವೇ ಈ ಸಿನಿಮಾದ ದುರ್ಬಲ ಕೊಂಡಿಯಾಗಿಬಿಡುವುದಂತೂ ನಿಜಕ್ಕೂ antithesis. ಪ್ರೊಟಗಾನಿಸ್ಟ್ ನಿತ್ಯಾಳ ದೈನಂದಿನ ಚಟುವಟಿಕೆಗೆ ಹಠಾತ್ ತಿರುವು ಕೊಡುವ ಗೌರಿಶಂಕರ್ ಕೊಲೆ ಕನಿಷ್ಠ ಆ ದಿಕ್ಕಿನಲ್ಲಾದರೂ ಮುಂದುವರಿಯುತ್ತದೆ ಎನ್ನುವ ನಿರೀಕ್ಷೆಯೂ ಹುಸಿಯಾಗುತ್ತದೆ. ಸರಣಿ ಘಟನೆಗಳ ಮೂಲಕ ನಿರೂಪಣೆ ಹಿಗ್ಗಿಸುವ ಯಾವುದೇ ಪ್ರಯತ್ನ ಮಾಡದ ಇಂದೂ ಅವರು ನಿರಾಶೆ ಮೂಡಿಸುತ್ತಾರೆ. ಕಡೆಗೆ ಸಿನಿಮಾದ ಆಶಯ ಮತ್ತು ಪ್ರಯತ್ನ ಮುಖ್ಯ, ಮಿಕ್ಕಿದ್ದೆಲ್ಲಾ ಗೌಣ ಎನ್ನುವ ಅಭಿಪ್ರಾಯಗಳು ಹಾದಿ ತಪ್ಪಿಸುತ್ತವೆ. ಮಿಕ್ಕಿದ್ದೆಲ್ಲಾ ಮುಖ್ಯವಾದಾಗಲೇ ಆಶಯಕ್ಕೆ ಬಲ ಬರುತ್ತದೆ ಮತ್ತು ಅದು ಅರ್ಥ ಪಡೆದುಕೊಳ್ಳುತ್ತದೆ ಎನ್ನುವುದು ನನ್ನ ಬಲವಾದ ಅಭಿಪ್ರಾಯ.

LEAVE A REPLY

Connect with

Please enter your comment!
Please enter your name here