ಶಾರುಖ್ ಪುತ್ರ ಆರ್ಯನ್ ತಾನು ಡ್ರಗ್ಸ್ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರ್ಯನ್ ಪರ ಮಾತನಾಡಿದ್ದ ನಟ ಸುನೀಲ್ ಶೆಟ್ಟಿ ಕೂಡ ಈಗ ಟ್ರೋಲ್‌ಗೆ ಒಳಗಾಗಿದ್ದಾರೆ.
ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶನಿವಾರ ಬಂಧಿಸಿ ವಿಚಾರಣೆಗೊಳಪಡಿಸಿತ್ತು. ಈ ಹಂತದಲ್ಲಿ ನಟ ಸುನೀಲ್ ಶೆಟ್ಟಿ ಆರ್ಯನ್ ಪರ ವಕಾಲತ್ತು ವಹಿಸಿ ಮಾತನಾಡಿದ್ದರು. ಇತ್ತೀಚೆಗೆ ನಡೆದ ಒಂದು ಈವೆಂಟ್‌ನಲ್ಲಿ ಸುನೀಲ್ ಶೆಟ್ಟಿ ಮಾತನಾಡುತ್ತಾ, “ಆರ್ಯನ್‌ಗೆ ಉಸಿರಾಡಲು ಅವಕಾಶ ಕೊಡಿ. ಎಲ್ಲಿ ದಾಳಿ ನಡೆದರೂ, ಹಲವಾರು ಜನರು ಸಿಕ್ಕಿಬೀಳುತ್ತಾರೆ. ಮತ್ತು ಅಲ್ಲಿದ್ದವರೆಲ್ಲಾ ಅಪರಾಧಿಗಳು ಎಂದು ನಾವು ಊಹಿಸುತ್ತೇವೆ. ಆದರೆ ಪ್ರಕ್ರಿಯೆಗಳು ನಡೆಯುತ್ತಿವೆ. ಆ ಹುಡುಗನಿಗೆ ಮಾತನಾಡಲು ಅವಕಾಶ ನೀಡೋಣ .ಬಾಲಿವುಡ್‌ನಲ್ಲಿ ಏನಾದರೂ ಸಂಭವಿಸಿದಾಗ, ಮಾಧ್ಯಮವು ಎಲ್ಲವನ್ನೂ ಗಮನಿಸುತ್ತದೆ ಮತ್ತು ತನ್ನದೇ ಆದ ತೀರ್ಮಾನಕ್ಕೆ ಬರುತ್ತದೆ. ಆದರೆ, ಆ ಹುಡುಗ ಮೊದಲು ಏನಾದರೂ ಮಾತನಾಡಲಿ. ನೈಜ ವರದಿಗಳು ಹೊರಬರಲಿ. ಅವನಿನ್ನೂ ಸಣ್ಣವನು. ಆತನನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದಿದ್ದಾರೆ ಸುನಿಲ್.
ಇನ್ನು, ಇದಾದ ನಂತರ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ, “ಶಾರುಖ್ ಖಾನ್ ಅವರ ಮಗ, ಆರ್ಯನ್ ಖಾನ್ ಅವರನ್ನು ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಕಚೇರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪ್ರಶ್ನಿಸುತ್ತಿದೆ. ಅವರು ರೇವ್ ಪಾರ್ಟಿ ನಡೆದ ಕ್ರೂಸ್ ಹಡಗಿನಲ್ಲಿದ್ದರು. ರಾತ್ರಿಯಲ್ಲಿ ದಾಳಿ ಮಾಡಿ ರೇವ್ ಪಾರ್ಟಿಯನ್ನು ನಿಲ್ಲಿಸಿದೆ” ಎಂದು ಹೇಳಿದ್ದರು. ಆರ್ಯನ್ ಖಾನ್ ಹೊರತುಪಡಿಸಿ, ಇತರ ಬಂಧಿತರನ್ನು ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಮತ್ತು ಅರ್ಬಾಜ್ ಮರ್ಚೆಂಟ್ ಎಂದು ಗುರುತಿಸಲಾಗಿದೆ, ಎನ್‌ಡಿಬಿ ಅಧಿಕಾರಿ ಎಂಟಿಎಂಎ, ಎಕ್ಸಟಸಿ, ಕೊಕೇನ್, ಎಂಡಿ (ಮೆಫೆಡ್ರೋನ್) ಮತ್ತು ಚರಸ್ ಅನ್ನು ಶನಿವಾರ ಸಂಜೆ ನಡೆಸಿದ ದಾಳಿಯ ಸಮಯದಲ್ಲಿ ಅವರಿಂದ ವಶಪಡಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಆರ್ಯನ್ ತಾನು ಡ್ರಗ್ಸ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದಲೂ ತನಗೆ ಈ ಡ್ರಗ್ಸ್ ಚಟ ಇದೆ ಎಂದು ಎನ್‌ಸಿಬಿ ಎದುರು ಹೇಳಿಕೆ ನೀಡಿದ್ದಾನೆ. ಈ ಬೆಳವಣಿಗೆ ಬಾಲಿವುಡ್ ವಲಯಕ್ಕೆ ಆತಂಕ ತಂದೊಡ್ಡಿದೆ. ಆರ್ಯನ್ ಪರ ಮಾತನಾಡಿದ್ದ ನಟ ಸುನೀಲ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.