ತೆಲುಗು ಚಿತ್ರರಂಗದ ಸಿನಿಮಾ ಕುಟುಂಬಗಳು MAA ಚುನಾವಣೆಯನ್ನು ಪ್ರತಿಷ್ಠೆಯಾಗಿ ಭಾವಿಸುತ್ತವೆ. ಈ ಬಾರಿಯೂ ಇದು ಜಾರಿಯಲ್ಲಿದ್ದು, ಅವರು ತಮಗೆ ಬೇಕಾದ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.
ಟಾಲಿವುಡ್‌ನಲ್ಲಿ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (MAA) ಪದಾಧಿಕಾರಿಗಳ ಆಯ್ಕೆಗೆ ನಾಡಿದ್ದು ಅಕ್ಟೋಬರ್ 10ರಂದು ಚುನಾವಣೆ ನಡೆಯಲಿದೆ. ಇದು ಎರಡು ವರ್ಷಗಳ ಅವಧಿಗೆ ನಡೆಯುವ ಆಯ್ಕೆ. ಕನ್ನಡ ಮೂಲದ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ತೆಲುಗು ಯುವನಟ ವಿಷ್ಣು ಮಂಚು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಹಿಂದಿನಿಂದಲೂ MAA ಚುನಾವಣೆಯನ್ನು ಟಾಲಿವುಡ್‌ನ ಸಿನಿಮಾ ಕುಟುಂಬಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತವೆ. ಈ ಬಾರಿಯೂ ಅದು ಜಾರಿಯಲ್ಲಿದೆ. ನಟ ಪ್ರಕಾಶ್ ರೈ ಅವರಿಗೆ ಚಿರಂಜೀವಿ ಕುಟುಂಬ ಬೆಂಬಲಕ್ಕೆ ನಿಂತಿದ್ದರೆ, ವಿಷ್ಣು ಮಂಚು ಬೆನ್ನಿಗೆ ಇನ್ನು ಕೆಲವು ಸಿನಿಮಾ ಕುಟುಂಬಗಳು ನಿಂತಿವೆ ಎನ್ನಲಾಗುತ್ತಿದೆ.
ಕಳೆದ ಮೂರು ವಾರಗಳಿಂದ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಾಶ್ ರೈ ಮತ್ತು ವಿಷ್ಣು ಮಂಚು ಮಧ್ಯೆ ಕೆಲವು ವಾಗ್ವಾದಗಳು ನಡೆದಿದ್ದವು. ನಟ ಪವನ್ ಕಲ್ಯಾಣ್ ಅವರು ಪ್ರಕಾಶ್ ರೈ ಅವರನ್ನು ಬೆಂಬಲಿಸಿದ್ದರು. ಈ ಸಂದರ್ಭದಲ್ಲಿ ವಿಷ್ಣು ಮಂಚು ನಟ ಪವನ್ ಕಲ್ಯಾಣ್ ಕುರಿತು ಹಗುರವಾಗಿ ಮಾತನಾಡಿದ್ದರು. ಆಗ ಪ್ರಕಾಶ್ ರೈ, “ಪವನ್ ಕಲ್ಯಾಣ್ ಸಿನಿಮಾದ ಮಾರ್ನಿಂಗ್ ಶೋ ಗಳಿಕೆಯಷ್ಟು ನಿಮ್ಮ ಸಿನಿಮಾ ಬಜೆಟ್” ಎಂದು ಟಾಂಗ್ ಕೊಟ್ಟಿದ್ದರು. ಈ ಮಧ್ಯೆ ವಿಷ್ಣು ಮಂಚು ಅವರಿಗೆ ಸ್ವತಃ ಮುಖ್ಯಮಂತ್ರಿ ಜಗನ್ ರೆಡ್ಡಿ ಬೆಂಬಲ ನೀಡುತ್ತಿದ್ದಾರೆ ಎನ್ನುವ ವದಂತಿಯೂ ಹರಡಿತ್ತು. ಈ ಬಗ್ಗೆ ಅವರ ಸರ್ಕಾರದ ಮಂತ್ರಿಯೊಬ್ಬರು ವೀಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ್ದು, “ಮುಖ್ಯಮಂತ್ರಿ ಅಥವಾ ವೈಎಸ್‌ಆರ್ ಕಾಂಗ್ರೆಸ್ ಪಕ್ಷ MAA ಚುನಾವಣೆ ಕುರಿತು ತಲೆಹಾಕುತ್ತಿಲ್ಲ” ಎಂದಿದ್ದಾರೆ. ನಟ ಪ್ರಕಾಶ್ ರೈ ಟ್ವಿಟರ್‌ನಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ.
ಈ ಮಧ್ಯೆ ವಿಷ್ಣು ಮಂಚು ಅವರು, “ನಾನು ಈ ನೆಲದ ಮಗ” ಎನ್ನುವ ಅರ್ಥದಲ್ಲಿ ಮಾತನಾಡಿ ಪ್ರಕಾಶ್ ರೈ ಅವರನ್ನು ‘ಹೊರಗಿನವರು’ ಎನ್ನುವ ಅರ್ಥದಲ್ಲಿ ಬಿಂಬಿಸುತ್ತಿದ್ದಾರೆ. “ಬಹುಭಾಷಾ ನಟ ಪ್ರಕಾಶ್ ರೈ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದ ಅವಿಭಾಜ್ಯ ಅಂಗವಾಗಿದ್ದಾರೆ. ಅವರನ್ನು ಹೊರಗಿನವರು ಎಂದು ಬಿಂಬಿಸುವುದು ಕೀಳು ಮನಸ್ಥಿತಿ” ಎಂದು ಹಿರಿಯ ನಟರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯ ತೆಲುಗು ನಟ ನಾಗಾಬಾಬು ನೇರವಾಗಿ ಪ್ರಕಾಶ್ ರೈ ಪರ ಮಾತನಾಡುತ್ತಾ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪ್ರಕಾಶ್ ರೈ ಅವರು ಚುನಾವಣೆಗೆ ಸಂಬಂಧಿಸಿದಂತೆ ವಿಷ್ಣು ಮಂಚು ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಮಂಚು ಕುಟುಂಬದ ಕಡೆಯವರು ಸುಮಾರು ಐವತ್ತು ಕಲಾವಿದರ ಬ್ಯಾಲೆಟ್ ಚಾರ್ಜ್ ಭರಿಸಿರುವ ಸುಳಿವು ಸಿಕ್ಕಿದೆ. ಪರೋಕ್ಷವಾಗಿ ಅವರು ಹಣ ನೀಡಿದಂತಾಗಿದೆ ಎಂದು ಆಪಾದಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ವಿಷ್ಣು, “ಪ್ರಕಾಶ್ ರೈ ಅವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಾನು ಚುನಾವಣೆಗೆ ಪ್ರಚಾರ ನಡೆಸುವ ಸಲುವಾಗಿ ಹಿರಿಯ ಕಲಾವಿದರನ್ನು ಭೇಟಿ ಮಾಡುತ್ತಿದ್ದೇನೆ. ಹುರುಳಿಲ್ಲದ ಆರೋಪಗಳನ್ನು ಮಾಡುವುದರ ಬದಲು ಪ್ರಕಾಶ್ ರೈ ಕೂಡ ಹಿರಿಯ ನಟ-ನಟಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿ” ಎಂದಿದ್ದಾರೆ. ಒಟ್ಟಾರೆ MAA ಚುನಾವಣೆ ಗಲಾಟೆ ಜೋರಾಗಿದ್ದು, ಟಾಲಿವುಡ್ ಸಿನಿಮಾ ಕುಟುಂಬಗಳು ಒಳಗೊಳಗೇ ತಮಗೆ ಬೇಕಾದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆ. ನಾಡಿದ್ದು ಚುನಾವಣೆ ನಡೆಯಲಿದೆ. ಇಪ್ಪತ್ತಾರು ಸ್ಥಾನಕ್ಕೆ ಸುಮಾರು 900 ಜನರು ವೋಟ್ ಮಾಡಲಿದ್ದಾರೆ.