ಚಿತ್ರವೊಂದರ ಸ್ಪೆಷಲ್ ಹಾಡೊಂದರಲ್ಲಿ ಕುಣಿದು ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಂಡವರು ರಾಗಿಣಿ ದ್ವಿವೇದಿ. ಇದೀಗ ಅವರು ಶ್ರೇಯಸ್ ಅಭಿನಯದ ‘ರಾಣಾ’ ಚಿತ್ರದ ಐಟಂ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ.
ನಟಿ ರಾಗಿಣಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದರ ಜೊತೆಗೆ ಸ್ಟೆಷಲ್ ಸಾಂಗ್, ಗೆಸ್ಟ್ ಸಾಂಗ್ ಅಥವಾ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಮಿಂಚುವುದಕ್ಕೂ ಫೇಮಸ್. ‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದ ‘ತುಪ್ಪಾ ಬೇಕಾ ತುಪ್ಪಾ’ ಹಾಡು ಎಷ್ಟು ಫೇಮಸ್ ಅಂದ್ರೆ ಗಾಂಧಿನಗರದಲ್ಲಿ ಈಗಲೂ ಅವರನ್ನು ‘ತುಪ್ಪದ ಬೆಡಗಿ’ ಅಂತಾನೇ ಕರಿತಾರೆ. ಅಲ್ಲದೆ ‘ವಿಕ್ಟರಿ’ ಚಿತ್ರಕ್ಕೆ ಅವರು ಹೆಜ್ಜೆ ಹಾಕಿದ ‘ಯಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ’ ಹಾಡು ಕೂಡಾ ದೊಡ್ಡ ಹಿಟ್ ಆಗಿತ್ತು. ಈಗ ರಾಗಿಣಿ ಅದೇ ‘ವಿಕ್ಟರಿ’ ಸಾಹಿತಿಯೊಂದಿಗೆ ಮತ್ತೊಮ್ಮೆ ಸೇರಿಕೊಂಡು ಹೊಸ ಹಾಡಿಗೆ ರೆಡಿಯಾಗಿದ್ದಾರೆ.
ಶ್ರೇಯಸ್ ಕೆ. ಮಂಜು ಅಭಿನಯದ ‘ರಾಣ’ ಚಿತ್ರದ ಹಾಡೊಂದಕ್ಕೆ ನಟಿ ರಾಗಿಣಿ ಹೆಜ್ಜೆ ಹಾಕಲಿದ್ದಾರೆ. ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ‘ವಿಕ್ಟರಿ’ ಚಿತ್ರಕ್ಕಾಗಿ ಶಿವು ಭೇರ್ಗಿ ಅವರು ಬರೆದಿದ್ದ ‘ಯಕ್ಕ ನಿನ್ನ ಮಗಳು’ ಹಾಡು ಇಂದಿಗೂ ಆರ್ಕೇಸ್ಟ್ರಾಗಳಲ್ಲಿ ಕೇಳಿಸುತ್ತದೆ. ಈ ಹಾಡಿನಲ್ಲೂ ರಾಗಿಣಿ ತಮ್ಮ ಕಮಾಲ್ ತೋರಿಸಿದ್ದರು. ಈಗ ‘ರಾಣ’ ಚಿತ್ರಕ್ಕೂ ಶಿವು ಭೇರ್ಗಿ ಅವರು ಹಾಡೊಂದನ್ನು ಬರೆದಿದ್ದು, ರಾಗಿಣಿ ಹಾಡಿನಲ್ಲಿ ಅಭಿನಯಿಸಿದ್ದಾರೆ.
ಈ ಹಾಡು ಕೂಡ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆ ಚಿತ್ರತಂಡದ್ದು. ‘ವಿಕ್ಟರಿ’ ನಿರ್ದೇಶಕ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ನಾಯಕ ಶ್ರೇಯಸ್ ಮಂಜುಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.