ಮೇರು ಸಾಹಿತಿ ಶಿವರಾಮ ಕಾರಂತರ ಕುರಿತ ಕತೆಯಲ್ಲ ‘ಕಡಲ ತೀರದ ಭಾರ್ಗವ’. ಹೊಸಬರ ತಂಡದಿಂದ ಕಡಲತೀರದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಪ್ರೇಮಕತೆ.

ಕಡಲ ತೀರದ ಭಾರ್ಗವ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಸಾಹಿತಿ ಶಿವರಾಮ ಕಾರಂತರು. ಈಗ ಅದೇ ಹೆಸರನ್ನಿಟ್ಟುಕೊಂಡು ಸಿನಿಮಾ ಒಂದು ತಯಾರಾಗಿದೆ. ಆದರೆ ಇದಕ್ಕೂ ಕಾರಂತರಿಗೂ ಏನು ಸಂಬಂಧ ಅಂತ ಮಾತ್ರ ಕೇಳಬೇಡಿ. ಯಾಕಂದ್ರೆ ಏನೂ ಸಂಬಂಧ ಇಲ್ಲ ಅನ್ನೋದು ಚಿತ್ರತಂಡದ ಉತ್ತರ. ಆದರೆ ಸದ್ಯಕ್ಕೆ ಈ ಚಿತ್ರ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯ ಹಂತದಲ್ಲಿದೆ. ಹಾಗಾಗಿ ಕಡಲ ತೀರದ ತೆರೆಗಳೊಂದಿಗೆ ಸಂಬಂಧವಿರುವ ಈ ಚಿತ್ರ ಈಗ ಚಿತ್ರಮಂದಿರಗಳ ತೆರೆಯ ಮೇಲೆ ಬರೋಕೆ ಸಿದ್ಧವಾಗಿದೆ ಎನ್ನಬಹುದು.

ವಿಭಿನ್ನ ಕಥಾಹಂದರ ಹೊಂದಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಇದೇ ಹದಿನೆಂಟನೇ ತಾರೀಖು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಟೀಸರ್ ಮೂಲಕ ಟ್ರೇಲರ್ ಹಾಗೂ ಚಿತ್ರ‌ ‌ಬಿಡುಗಡೆ ಬಗ್ಗೆ ಮಾಹಿತಿ ಕೊಡಲು ಸಿದ್ಧವಾಗಿದೆ ಚಿತ್ರತಂಡ. ಏವಕಲ್ಯ ಸ್ಟುಡಿಯೋ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ಈ ಚಿತ್ರದ ನಿರ್ಮಾಪಕರು. ವಿಜಯಂ ವಜ್ರ ವೆಂಕ್ಚರ್ಸ್ ಸಹ ನಿರ್ಮಾಣ ಚಿತ್ರಕ್ಕಿದೆ. ನಿರ್ಮಾಪಕರಾದ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಶೃತಿ ಪ್ರಕಾಶ್ ನಾಯಕಿ. ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಇತರರು ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಮತ್ತಿತರೆಡೆ ಚಿತ್ರೀಕರಣ ನಡೆದಿದೆ. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಅನಿಲ್ ಸಿ.ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ ಭೋಸಗಿ ಅವರ ಸಂಕಲನವಿದೆ. “ಇದು ಸಾಹಿತಿ ಶಿವರಾಮ ಕಾರಂತ ಅವರ ಕುರಿತಾದ ಚಿತ್ರವಲ್ಲ. ‌ಕಡಲ ತೀರದಲ್ಲಿ ವಾಸಿಸುವ ನಾಯಕನ ಹೆಸರು ಭಾರ್ಗವ ಅಂತ.‌ ಹಾಗಾಗಿ ಈ ಚಿತ್ರದ ಶೀರ್ಷಿಕೆ ‘ಕಡಲ ತೀರದ ಭಾರ್ಗವ’” ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

LEAVE A REPLY

Connect with

Please enter your comment!
Please enter your name here