ರಾಮ್ ಗೋಪಾಲ್ ವರ್ಮಾ ಅಂದಾಕ್ಷಣ ಆ ಕ್ಷಣಕ್ಕೆ ಎಲ್ಲರ ಮನದಲ್ಲಿ ಒಂದು ವಿಲಕ್ಷಣ ಅನುಭವ ಆಗೋದು ಗ್ಯಾರಂಟಿ. ಅದಕ್ಕೆ ಕೇವಲ ವರ್ಮಾ ಮಾಡುವ ಸಿನಿಮಾಗಳು ಮಾತ್ರ ಕಾರಣವಲ್ಲ. ಅವರ ವೈಯಕ್ತಿಕ ಬದುಕು, ಅವರ ಹೇಳಿಕೆಗಳು, ಕೆಲಸಗಳು ಎಲ್ಲವೂ ಕಾರಣ.
ಹೌದು, ಈ ಬಾರಿ ರಾಮ್ ಗೋಪಾಲ್ ವರ್ಮಾ ದೇವಸ್ಥಾನದಲ್ಲಿ ದೇವರಿಗೆ ವಿಸ್ಕಿ ಕುಡಿಸಿದ್ದಾರೆ. ಏನಪ್ಪಾ ಇದು, ರಾಮ್ ಗೋಪಾಲ್ ವರ್ಮಾಗೆ ಏನಾಯ್ತು, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಡ್ತಾ ಇದ್ದಾರೆ ಅಂತ ಅಂದುಕೊಳ್ಳೋ ಮುನ್ನ ಈ ಸ್ಟೋರಿ ಪೂರ್ತಿ ಓದಿ. ರಾಮ್ ಗೋಪಾಲ್ ವರ್ಮಾ ಈಗ ‘ಕೊಂಡ’ ಅನ್ನೋ ಸಿನಿಮಾ ಮಾಡ್ತಾ ಇದ್ದಾರೆ. ಆದ್ರೆ ‘ಕೊಂಡ’ಕ್ಕೂ ಹೆಂಡಕ್ಕೂ ಏನು ಸಂಬಂಧ ಅಂತ ನೀವು ಕೇಳಿದ್ರೆ ಅದಕ್ಕೆ ಸಂಬಂಧ ಇದೆ ಅನ್ನೋದು ಉತ್ತರ ಆಗುತ್ತೆ. ‘ಕೊಂಡ’ ಚಿತ್ರದ ಸಮಾರಂಭದಲ್ಲಿ ಭಾಗವಹಿಸಲು ವಾರಂಗಲ್ಗೆ ತೆರಳಿರುವ ವರ್ಮಾ ಅಲ್ಲಿನ ಮೈಸಮ್ಮ ದೇವಾಲಯದಲ್ಲಿ ದೇವಿಗೆ ವಿಸ್ಕಿ ಕುಡಿಸಿದ್ದಾರೆ.
ದೇವಿಗೆ ವಿಸ್ಕಿ ಕುಡಿಸುನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು, ‘ನಾನು ವೋಡ್ಕಾ ಕುಡಿಯುತ್ತೇನೆ. ಆದ್ರೆ ಮೈಸಮ್ಮನಿಗೆ ವಿಸ್ಕಿ ಕುಡಿಸಿದೆ’ ಎಂದಿದ್ದಾರೆ ವರ್ಮಾ. ಇಲ್ಲಿ ಅಸಲಿ ವಿಷಯ ಏನಂದ್ರೆ, ಈ ಕೆಲಸ ಮಾಡಿರೋದು ರಾಮ್ ಗೋಪಾಲ್ ವರ್ಮಾ ಒಬ್ಬರೇ ಅಲ್ಲ. ಮೈಸಮ್ಮ ದೇವರಿಗೆ ಮದ್ಯದ ನೈವೇದ್ಯ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರೋ ಪದ್ಧತಿ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ಈ ಸಂಪ್ರದಾಯ ಇದೆ. ಹಾಗಾಗಿ ಈ ಸಂಪ್ರದಾಯವನ್ನು ವರ್ಮಾ ಪಾಲಿಸಿದ್ದಾರೆ ಅಷ್ಟೇ. ಆದರೆ ಇದರ ಅರಿವಿಲ್ಲದ ಅನೇಕ ನೆಟ್ಟಿಗರು, ‘ಹಿಂದೂ ದೇವತೆಗೆ ಅವಮಾನ ಮಾಡಿದ್ದೀರ, ಮದ್ಯದ ಜೊತೆಗೆ ಕೆಎಫ್ಸಿ ಚಿಕನ್ ಅನ್ನೂ ತಿನ್ನಿಸಬೇಕಿತ್ತು’ ಎಂದೆಲ್ಲಾ ಗರಂ ಆಗಿದ್ದಾರೆ. ಅಂದಹಾಗೆ ‘ಕೊಂಡ’ ಚಿತ್ರ, ಕೊಂಡ ಮುರಳಿ ಮತ್ತು ಕೊಂಡ ಸುರೇಖ ದಂಪತಿಗಳ ಕಥೆ. ಭೂಮಾಲೀಕರ ವಿರುದ್ಧ ಹೋರಾಟ ನಡೆಸಿ, ನಕ್ಸಲೈಟ್ ಲೋಕದಲ್ಲಿ ಓಡಾಡಿ, ಈಗ ರಾಜಕೀಯದಲ್ಲಿ ಸಕ್ರಿಯರಾಗಿರುವ ಈ ದಂಪತಿಗಳ ಕತೆ. ಈ ರಕ್ತಸಿಕ್ತ ಚರಿತ್ರೆಯನ್ನು ವರ್ಮಾ ‘ಕೊಂಡ’ ಚಿತ್ರದಲ್ಲಿ ತೆರೆಗೆ ಅಳವಡಿಸುತ್ತಿದ್ದಾರೆ.