ನಿಗದಿತ ದಿನದಂದು ‘ಕೋಟಿಗೊಬ್ಬ 3’ ತೆರೆಗೆ ಬರದಂತೆ ತಡೆಯಲು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ವಿತರಕ ಜಾಕ್ ಮಂಜು ಆಪಾದಿಸಿದ್ದಾರೆ. ಮತ್ತೊಂದೆಡೆ ತಮಗೆ ಮತ್ತು ಚಿತ್ರಮಂದಿರ ಮಾಲೀಕರಿಗಾದ ನಷ್ಟ ಭರಿಸಲು ಚಿತ್ರದ ನಿರ್ಮಾಪಕರು ಸಂಬಂಧಪಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸುವ ಸಾಧ್ಯತೆಗಳೂ ಇವೆ.
ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಗೆ ತೊಂದರೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ವಿತರಕರು ಕೊನೆಯ ಕ್ಷಣದಲ್ಲಿ ನಿರ್ಮಾಪಕರಿಗೆ ಕೈಕೊಟ್ಟಿದ್ದು, ಇದರಿಂದ ಫೈನಾನ್ಶಿಯರ್ NOC ಕೊಡದ ಕಾರಣ ಸ್ಯಾಟಲೈಟ್ನವರು ಚಿತ್ರದ ಬಿಡುಗಡೆ ತಡೆಹಿಡಿದದ್ದು, ಕೊನೆಗೆ ಸುದೀಪ್ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದು ಮರುದಿನ ಸಿನಿಮಾ ಬಿಡುಗಡೆಯಾಗಿದ್ದು… ಎಲ್ಲವೂ ಆಯ್ತು. ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ಮೊದಲ ದಿನ ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರ ಮಾಲೀಕರಿಗಾದ ನಷ್ಟ ತುಂಬಿಕೊಡುವವರು ಯಾರು? ಕೆಲವೆಡೆ ಅಭಿಮಾನಿಗಳು ಚಿತ್ರಮಂದಿರಗಳಿಗೆ ಕಲ್ಲು ತೂರಾಟ ನಡೆಸಿ ಗಲಾಟೆ ನಡೆಸಿದ್ದೂ ಆಯ್ತು. ಸುದೀಪ್ ಹಾಗೂ ಚಿತ್ರತಂಡ ಅಭಿಮಾನಿಗಳ ಕ್ಷಮೆ ಕೋರಬೇಕಾಗಿ ಬಂತು. ಇವೆಲ್ಲಾ ಅಪಸವ್ಯಗಳ ಬಗ್ಗೆ ಸುದೀಪ್ ಆಪ್ತರು ಹಾಗೂ ‘ಕೋಟಿಗೊಬ್ಬ 3’ ವಿತರಣೆ ಟೇಕ್ಓವರ್ ಮಾಡಿದ ಜಾಕ್ ಮಂಜು ಮಾತನಾಡಿದ್ದಾರೆ.
ಸಿನಿಮಾಗೆ ಮೊದಲ ದಿನ ತೊಂದರೆಯಾದಾಗಲೇ ಸುದೀಪ್, “ಈ ಕೆಲಸಗಳ ಹಿಂದೆ ಯಾರ ಕೈವಾಡ ಇದೆ ಎನ್ನುವುದು ನಮಗೆ ಗೊತ್ತಿದೆ. ಕಾಲಾನಂತರ ಅದಕ್ಕೆ ನಾವು ಉತ್ತರ ಕೊಡಲಿದ್ದೇವೆ” ಎಂದಿದ್ದರು. ಇದೀಗ ಅವರ ಆಪ್ತ, ವಿತರಕ ಜಾಕ್ ಮಂಜು ಈ ಷಡ್ಯಂತ್ರದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. “ಸುದೀಪ್ ವಿರುದ್ಧ ಕೆಲವು ವರ್ಷಗಳಿಂದಲೂ ಕುತಂತ್ರ ನಡೆಯುತ್ತಲೇ ಇದೆ. ಇಂಥದ್ದೊಂದು ಸಂದರ್ಭ ಎದುರಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ಈ ಬಾರಿ ಅವರೇ ಗೆದಿದ್ದಾರೆ. ಹಾಗೆಂದು ನಾವು ಸುಮ್ಮನೆ ಕೂರುವುದಿಲ್ಲ. ಹಿಂದೆ ಯಾವಾಗಲೋ ಅವರಿಗೆ ಸುದೀಪ್ ಕಾಲ್ಶೀಟ್ ಸಿಕ್ಕಿರೋಲ್ಲ, ಅವರ ಕಾರ್ಯಕ್ರಮಕ್ಕೆ ಇವರು ಹೋಗಲು ಸಾಧ್ಯವಾಗಿರೋಲ್ಲ. ಇದನ್ನೇ ನೆಪ ಮಾಡಿಕೊಂಡು ಕೆಲವರು ಸುದೀಪ್ರನ್ನು ಹಣಿಯಲು ಸಿದ್ಧವಾಗುತ್ತಾರೆ. ಅದೇ ಮನಸ್ಥಿತಿಯ ಮತ್ತೆ ಕೆಲವರು ಅವರನ್ನು ಕೂಡಿಕೊಳ್ಳುತ್ತಾರೆ” ಎಂದು ಆಪಾದಿಸುವ ಜಾಕ್ ಮಂಜು ಯಾರ ಹೆಸರುಗಳನ್ನೂ ಪ್ರಸ್ತಾಪಿಸುವುದಿಲ್ಲ.
ಸುದೀಪ್ ಮೇಲೆ ದ್ವೇಷ ಏಕೆ? : ವಿನಾಕಾರಣ ನಟ ಸುದೀಪ್ ಸಿನಿಮಾಗಳಿಗೆ ತೊಂದರೆ ಕೊಡುತ್ತಿದ್ದಾರೆ ಎನ್ನುವುದು ಜಾಕ್ ಮಂಜು ಹೇಳಿಕೆ. “ನೀವು ಕೂಡ ಗಾಂಧಿನಗರದವರೇ. ನಿಮಗೂ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರ ಮಾಲೀಕರ ಕಷ್ಟಗಳು ಗೊತ್ತಿರುತ್ತವೆ. ಹಿಂದೆ ಸುದೀಪ್ ಅಭಿನಯದ ‘ಕಿಚ್ಚ ಹುಚ್ಚ’ ಸಿನಿಮಾ ಎದುರು ‘ಜಾಕಿ’ ರಿಲೀಸ್ ಮಾಡಿಸಿದಿರಿ, ‘ಮುಕುಂದ – ಮುರಾರಿ’ ಸಿನಿಮಾ ಎದುರು ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ತೆರೆಗೆ ತಂದಿರಿ. ‘ಪೈಲ್ವಾನ್’ ಸಿನಿಮಾ ಬಿಡುಗಡೆಯಾದ ಕ್ಷಣವೇ ಪೈರಸಿ ಬಂತು. ‘ಕೋಟಿಗೊಬ್ಬ 3’ ರಿಲೀಸ್ಗೆ ಮುನ್ನವೇ ಪೈರಸಿ ಬರುತ್ತದೆ ಎನ್ನುವ ಗುಲ್ಲು ಹಬ್ಬಿಸಲಾಗಿತ್ತು. ನಮ್ಮವರೇ ನಮಗೆ ಮುಳುವಾದರೆ ಹೇಗೆ?” ಎಂದು ಜಾಕ್ ಮಂಜು ಪ್ರಶ್ನಿಸಿದ್ದಾರೆ.
ನಿರ್ಮಾಪಕರ ಅಳಲು : ‘ಕೋಟಿಗೊಬ್ಬ 3’ ದುಬಾರಿ ಬಜೆಟ್ ಸಿನಿಮಾ. ಬಹುಪಾಲು ಚಿತ್ರೀಕರಣ ದೂರದ ಪೋಲ್ಯಾಂಡ್ನಲ್ಲಿ ನಡೆದಿದೆ. ಕೋವಿಡ್ನಿಂದಾಗಿ ಸಿನಿಮಾ ತೀರಾ ವಿಳಂಬವಾಯ್ತು. ಸಹಜವಾಗಿಯೇ ನಿರ್ಮಾಪಕರಿಗೆ ಇದು ಬಹುದೊಡ್ಡ ಹೊಡೆತ. ಈ ಬಗ್ಗೆಯೂ ಮಾತನಾಡುವ ಮಂಜು, “ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಸಿನಿಮಾ ಈ ವರ್ಷಾರಂಭದಲ್ಲೇ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದಾಗಿ ಚಿತ್ರವನ್ನು ಬಿಡುಗಡೆ ವಿಳಂಬವಾಯ್ತು. ಫೈನಾನ್ಸ್ ತಂದು ಸಿನಿಮಾ ಮಾಡಿದ್ದ ನಿರ್ಮಾಪಕರು ಬಳಲಬೇಕಾಯ್ತು. ನಿರ್ಮಾಪಕ ಸೂರಪ್ಪ ಬಾಬು ಕೂಡ ಚಿತ್ರೀಕರಣದ ಹಂತದಲ್ಲೂ ಮೋಸ ಹೋಗಿದ್ದರು. ಯಾರೋ ಮಧ್ಯವರ್ತಿಗಳನ್ನು ನಂಬಿ ಪೋಲ್ಯಾಂಡ್ ಚಿತ್ರೀಕರಣಕ್ಕೆ ತೆರಳಿದ್ದು ಅವರ ಜೇಬಿಗೆ ದುಬಾರಿಯಾಯ್ತು. ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದ ನಿರ್ಮಾಪಕರು ಕುತಂತ್ರಗಳಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಯ್ತು” ಎಂದು ಜಾಕ್ ಮಂಜು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಾನೂನು ಸಮರ : ಸಿನಿಮಾಗೆ ಮೊದಲ ದಿನದ ತೊಂದರೆಯಿಂದ ಪ್ರಮುಖವಾಗಿ ಚಿತ್ರದ ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರು ತೊಂದರೆ ಅನುಭವಿಸುವಂತಾಯ್ತು. ಸಮಸ್ಯೆ ತಿಳಿಗೊಳಿಸಿ ವಿತರಣೆಯನ್ನು ಟೇಕ್ಓವರ್ ಮಾಡಿ ಚಿತ್ರವನ್ನೇನೋ ಬಿಡುಗಡೆ ಮಾಡಲಾಯ್ತು. ಆದರೆ ಆರಂಭದ ಡ್ಯಾಮೇಜ್ನಿಂದ ಚೇತರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇದರಿಂದ ಸುದೀಪ್ ಇಮೇಜಿಗೂ ಧಕ್ಕೆಯಾಗಿದೆ. ಹಾಗಾಗಿ ಚಿತ್ರದ ನಿರ್ಮಾಪಕರು ತೊಂದರೆ ಕೊಟ್ಟ ವಿತರಕರ ವಿರುದ್ಧ ಕಾನೂನು ಸಮರ ಸಾರಲು ಸಿದ್ಧತೆ ನಡೆಸಿದ್ದಾರೆ, ಅವರಲ್ಲಿ ಅಗತ್ಯ ದಾಖಲೆಗಳೂ ಇವೆ ಎನ್ನಲಾಗಿದೆ. ಮುಂದಿನ ವಾರ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಈ ಎಲ್ಲಾ ಬೆಳವಣಿಗೆಗಳು ಗಾಂಧಿನಗರದಲ್ಲಿ ಏನೆಲ್ಲಾ ಚರ್ಚೆಗೆ ನಾಂದಿಯಾಗಬಹುದು ಎಂದು ನೋಡಬೇಕು.