ಭಾರತದ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಶಿರಡಿ ಸಾಯಿಬಾಬಾ ಕುರಿತ ಗೀತೆಗೆ ರಾಗಸಂಯೋಜಿಸಿದ್ದಾರೆ. ಈ ಹಾಡಿನ ಕನ್ನಡ ಅವತರಣಿಕೆಗೆ ವಾಸುಕಿ ವೈಭವ್ ಗೀತರಚನೆಯಿದೆ.
“‘ಸಾಯಿ ಶಿರಡಿ ಸಾಯಿ’ ಕನ್ನಡ ವರ್ಷನ್ ಮಾಡುವುದಾಗಿ ನಿಮಗೆ ಪ್ರಾಮಿಸ್ ಮಾಡಿದ್ದೆ. ಇಲ್ಲದೆ ನೋಡಿ ವೀಡಿಯೋ! ಸಾಯಿಬಾಬಾನ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಪಾಸಿಟೀವ್ ಎನರ್ಜಿಯಿಂದ ನಮ್ಮೆಲ್ಲರಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸಲಿ ಎಂದು ಆಶಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ ಸಂಗೀತ ಸಂಯೋಜಕ ಎ.ಆರ್.ರೆಹಮಾನ್. ಅವರು ಸಂಯೋಜನೆಯ ‘ಸಾಯಿ ಶಿರಡಿ ಸಾಯಿ’ ಹಾಡು ಸಾಕಷ್ಟು ಜನಪ್ರಿಯವಾಗಿದೆ. ಜೋನಿತಾ ಗಾಂಧಿ ಹಾಡಿದ್ದ ಇದು ಮೂಲ ಹಿಂದಿ ಗೀತೆ. ತಮಿಳು, ತೆಲುಗಿನಲ್ಲೂ ಹಾಡು ಬಂದಿದೆ. ಕನ್ನಡ ವರ್ಷನ್‌ಗೆ ಕನ್ನಡದ ಗೀತರಚನೆಕಾರ ಮತ್ತು ಸಂಗೀತ ಸಂಯೋಜಕ ವಾಸುಕಿ ವೈಭವ್ ಗೀತೆ ರಚಿಸಿದ್ದಾರೆ. ಗಾಯಕಿ ಜೋನಿತಾ ಅವರೇ ಕನ್ನಡದಲ್ಲೂ ದನಿಯಾಗಿದ್ದಾರೆ. ಇದು ಸಿದ್ಧವಾಗುತ್ತಿದ್ದಂತೆ ರೆಹಮಾನ್ ಟ್ವೀಟ್ ಮಾಡಿ ಕನ್ನಡಿಗರಿಗೆ ಗೀತೆಯನ್ನು ಅರ್ಪಿಸಿದ್ದಾರೆ.
ಅಂದಹಾಗೆ, ಈ ಅವಕಾಶ ವಾಸುಕಿ ವೈಭವ್‌ರಿಗೆ ಸಿಕ್ಕಿದ್ದು ಹೇಗೆ? ವಾಸುಕಿ ಹೇಳುವುದು ಹೀಗೆ – “ನನ್ನ ಸ್ನೇಹಿತ ನಕುಲ್ ಅಭಯಂಕರ್ ಅವರು ರೆಹಮಾನ್ ಸರ್ ಅವರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ತಿಂಗಳುಗಳ ಹಿಂದೆ ಅವನು ಹೀಗೊಂದು ಹಾಡು ಬರೆಯುವ ಅವಕಾಶವಿದೆ ಎಂದಿದ್ದೆ. ನಾನು ತುಂಬಾ ಸಂತೋಷದಿಂದ ಅವರಿಂದ ಕಾನ್ಸೆಪ್ಟ್ ತರಿಸಿಕೊಂಡು ಗೀತೆ ರಚಿಸಿ ಕಳುಹಿಸಿದ್ದೆ. ಇದಾಗ ಸುಮಾರು ದಿನಗಳೇ ಆಗಿದ್ದವು. ನಾಲ್ಕು ದಿನಗಳ ಹಿಂದೆ ಅವರ ಕಡೆಯಿಂದ ಒಂದು ಕರೆ ಬಂತು. ಹಾಡು ಸಿದ್ಧವಾಗಿದೆ, ಏನಾದರೂ ಕರೆಕ್ಷನ್ ಇದ್ದರೆ ಹೇಳಿ ಎಂದಿದ್ದರು. ಹಾಡನ್ನು ತುಂಬಾ ಪ್ರೊಫೆಷನಲ್ ಅಗಿ ಸಿದ್ಧಪಡಿಸಿದ್ದರು. ಕಾನ್ಸೆಪ್ಟ್ ಹೇಗಿತ್ತು ಅಂದ್ರೆ, ಹಿರೋಯಿನ್ ಶಿರಡಿ ಸಾಯಿ ಭಕ್ತೆ. ಆಕೆಯ ಪ್ರಿಯತಮನ ಹೆಸರು ಕೂಡ ಸಾಯಿ. ಹಾಗಾಗಿ ಆಧ್ಯಾತ್ಮ ಮತ್ತು ಪ್ರೀತಿಯ ಸಂಯೋಜನೆಯ ಧಾಟಿ ಇಲ್ಲಿ ಬೇಕಿತ್ತು. ನಿನ್ನೆ ಕನ್ನಡ ವರ್ಷನ್ ಬಿಡುಗಡೆಯಾಗಿದೆ. ರೆಹಮಾನ್ ಸರ್ ಕೂಡ ಟ್ವೀಟ್ ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಅಪೂರ್ವ ಅವಕಾಶ ನನ್ನದಾಯ್ತು!”