ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ‘ರೈಡರ್’ ಸಿನಿಮಾದೊಂದಿಗೆ ತೆರೆಗೆ ಬರಲು ಸಜ್ಜಾಗಿದ್ದಾರೆ. ಚಿತ್ರದ ‘ಢವ ಢವ’ ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

“ನನಗೆ ವೇದಿಕೆ ಹತ್ತಿದ ಮೇಲೆ ಏಕೋ ಢವ ಢವ ಎನ್ನಲು ಶುರುವಾಗಿದೆ. ನಾವೇನೋ ಸಿನಿಮಾ ಮಾಡಿರುತ್ತೇವೆ. ಆದರೆ, ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ, ನಾವು ಅವರಿಗೆ ಬೇಕಾದ ಹಾಗೆ ಸಿನಿಮಾ ಮಾಡಿದ್ದೀವಾ? ಎಂಬ ಪ್ರಶ್ನೆ ಕಾಡುತ್ತದೆ. ಕಾಡಲೂಬೇಕು. ಆದರೂ ನಮ್ಮ ತಂಡಕ್ಕೆ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ” ಎನ್ನುತ್ತಾರೆ ಯುವನಟ ನಿಖಿಲ್ ಕುಮಾರಸ್ವಾಮಿ. ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಅವರು ಹೀರೋ ಆಗಿ ನಟಿಸುತ್ತಿರುವ ‘ರೈಡರ್‌’ ಸಿನಿಮಾ ತೆರೆಗೆ ಬರುತ್ತಿದೆ. ಇದೀಗ ಚಿತ್ರದ ಹಾಡು ಬಿಡುಗಡೆಯಾಗಿದೆ. ‘ಬಹದ್ದೂರ್’ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಅವರದು. ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಹಾಡು ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

“ಇಂದಿನ ಆರೋಗ್ಯಕರ ಪೈಪೋಟಿಯಲ್ಲಿ ನಮ್ಮನ್ನು ಗುರುತಿಸಬೇಕಾದರೆ ನಾವು ಹೆಚ್ಚಿನ ಶ್ರಮ ಪಡಬೇಕು. ಆಗ ಖಂಡಿತಾ ಜನ ಒಪ್ಪಿಕೊಳ್ಳುತ್ತಾರೆ” ಎನ್ನುವ ನಿಖಿಲ್ ತಮ್ಮ ಸಿನಿಮಾ ಬಗ್ಗೆ ಸಾಕಷ್ಟು ಆತ್ಮವಿಶ್ವಾಸ ಹೊಂದಿದ್ದಾರೆ. ‘ಸೀತಾರಾಮ ಕಲ್ಯಾಣ’ ಚಿತ್ರದ ಸಮಯದಲ್ಲಿ ಈ ರೀತಿಯ ಕಥೆ ಬೇಕು ಎಂದು ನಿರ್ದೇಶಕ ವಿಜಯಕುಮಾರ್ ಕೊಂಡ ಅವರಿಗೆ ನಿಖಿಲ್ ಹೇಳಿದ್ದರಂತೆ. ನಿರ್ದೇಶಕರು ಅವರ ಆಶಯಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ ಎನ್ನುವ ಸಮಾಧಾನ ಅವರಿಗಿದೆ. ಚಿತ್ರದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದರು.

ನಿರ್ದೇಶಕ ವಿಜಯಕುಮಾರ್ ಕೊಂಡ ತೆಲುಗಿನಲ್ಲಿ ಹಲವು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. “ನಿಖಿಲ್ ಕುಮಾರ್ ಅವರು ಕತೆ ಹೀಗೇ ಇರಲಿ ಎಂದು ಕೆಲವು ಸಲಹೆ, ಸೂಚನೆ ನೀಡಿದ್ದರು. ನಾನು ಅದರಂತೆ ಕತೆ ಸಿದ್ಧಪಡಿಸಿ ರೀಡಿಂಗ್ ಕೊಟ್ಟಾಗ ಅವರಿಗೆ ತುಂಬಾ ಇಷ್ಟವಾಯ್ತು. ಒಳ್ಳೆಯ ದಿನದಂದು ಸಿನಿಮಾ ಶುರುವಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರದಲ್ಲಿ ಆಕ್ಷನ್‌, ಲವ್‌, ಎಮೋಷನ್‌ ಎಲ್ಲವೂ ಹದವಾಗಿ ಬೆರೆತಿದೆ” ಎಂದು ನಿರ್ಮಾಪಕ ವಿಜಯಕುಮಾರ್‌ ಕೊಂಡ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸುತ್ತಾರೆ. ನಾಯಕನಟಿ ಕಶ್ಮೀರಾ ಪರದೇಸಿ ಅವರಿಗೆ ಕನ್ನಡದಲ್ಲಿದು ಮೊದಲ ಸಿನಿಮಾ. ಎಲ್ಲರಿಗೂ ಇಷ್ಟವಾಗುವಂತಹ ಸೌಮ್ಯ ಸ್ವಭಾವದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಅವರು ಹೇಳುತ್ತಾರೆ.

ಸುನೀಲ್ ಮತ್ತು ಲಹರಿ ಚಂದ್ರು ಚಿತ್ರದ ನಿರ್ಮಾಪಕರು. ಲಹರಿ ಆಡಿಯೋದ ವೇಲು ಅವರ ಅಣ್ಣನ ಪುತ್ರ ಚಂದ್ರು. “ನಿಖಿಲ್ ಕುಮಾರ್ ಅಭಿನಯ ತುಂಬಾ ಚೆನ್ನಾಗಿದೆ. ದೊಡ್ಡ ಕುಟುಂಬದ ಹುಡುಗನಾದರೂ ಅವರ ಸರಳತೆ ಎಲ್ಲರಿಗೂ ಮಾದರಿ. ನಮ್ಮ ಲಹರಿ ಸಂಸ್ಥೆಯಡಿ ಮುಂದಿನ ಕೆಲವೇ ದಿನಗಳಲ್ಲಿ ಮತ್ತೆರೆಡು ಹಾಡುಗಳು ಬಿಡುಗಡೆಯಾಗಲಿದೆ” ಎನ್ನುತ್ತಾರೆ ವೇಲು. ಎಂಎಲ್‌ಸಿ ಶರವಣ ಅವರು ಅತಿಥಿಯಾಗಿ ಪಾಲ್ಗೊಂಡು ಚಿತ್ರತಂಡವನ್ನು ಹಾರೈಸಿದರು. ‘ಕೆಜಿಎಫ್‌’ ಖ್ಯಾತಿಯ ‘ಗರುಡ’ ರಾಮ್‌ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿವರಾಜ ಕೆ.ಆರ್‌.ಪೇಟೆ, ಮಂಜು ಪಾವಗಡ, ನರಸಿಂಹ ಜಾಲಹಳ್ಳಿ, ಛಾಯಾಗ್ರಾಹಕ ಶ್ರೀಶ ಕುದುವಳ್ಳಿ, ನೃತ್ಯ ನಿರ್ದೇಶಕ ಭೂಷಣ್, ಸಾಹಸ ನಿರ್ದೇಶಕ ಅರ್ಜುನ್ ಕಾರ್ಯಕ್ರಮದಲ್ಲಿದ್ದರು.

LEAVE A REPLY

Connect with

Please enter your comment!
Please enter your name here