ಥಿಯೇಟರ್ಗೆ ಸಂಬಂಧಿಸಿದಂತೆ ತಮ್ಮ ಚಿತ್ರಕ್ಕೂ ತೊಂದರೆಯಾಗಿದೆ ಎಂದಿದ್ದಾರೆ ‘ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಈ ಅಡೆತಡೆಗಳ ಮಧ್ಯೆಯೂ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ ಎನ್ನುವುದು ಅವರ ಖುಷಿ.
ನಿರ್ಮಾಪಕರು ಮತ್ತು ವಿತರಕರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ‘ಕೋಟಿಗೊಬ್ಬ 3 ಚಿತ್ರದ ಬಿಡುಗಡೆಗೆ ತೊಂದರೆಯಾಗಿತ್ತು. ಒಂದು ಹಂತದಲ್ಲಿ ‘ಸಲಗ’ ಚಿತ್ರಕ್ಕೆ ನೆರವಾಗಲು ವಿತರಕರು ಬೇಕೆಂದೇ ಇಂಥದ್ದೊಂದು ಶಡ್ಯಂತ್ರ ಮಾಡಿದ್ದಾರೆ ಎಂದೂ ಗಾಂಧಿನಗರದಲ್ಲಿ ಗುಲ್ಲಾಗಿತ್ತು. ಈ ಬಗ್ಗೆ ಮಾತನಾಡಿದ ‘ಸಲಗ’ ಚಿತ್ರದ ನಿರ್ಮಾಪಕ ಶ್ರೀಕಾಂತ್, “ನಮ್ಮ ಚಿತ್ರಕ್ಕೂ ಷಡ್ಯಂತ್ರ ನಡೆದಿತ್ತು. ಯಾರು ಈ ಷಡ್ಯಂತ್ರ ಮಾಡಿದ್ರೋ ಅವರಿಗೆ ದೇವರು ಒಳ್ಳೇದು ಮಾಡಲಿ. ನಾನು ವರನಟ ಡಾ.ರಾಜಕುಮಾರ್ ಅವರ ಅಭಿಮಾನಿ. ಚಿತ್ರರಂಗವನ್ನು ಒಂದು ಕುಟುಂಬ ಎನ್ನುವಂತೆ ಭಾವಿಸಿದ್ದ ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ. ಎಲ್ಲಾ ಕನ್ನಡ ಚಿತ್ರಗಳೂ ಚೆನ್ನಾಗಿ ಹೋಗಬೇಕೆಂದು ನಾನು ಬಯಸುತ್ತೇನೆ. ನಮಗೆ ತೊಂದರೆಯಾದಾಗ ಚಿತ್ರರಂಗದ ಹಿರಿಯರೊಂದಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದೆ” ಎಂದು ಯಾರ ಹೆಸರುಗಳನ್ನೂ ನೇರವಾಗಿ ಪ್ರಸ್ತಾಪಿಸದೆ ಮಾತನಾಡಿದರು.
ಶ್ರೀಕಾಂತ್ ನಿರ್ಮಾಣದ ಮೊದಲ ಸಿನಿಮಾ ‘ಟಗರು’ ಮತ್ತು ಈಗ ‘ಸಲಗ’ ಸಿನಿಮಾಗಳ ಚಿತ್ರೀಕರಣಕ್ಕೆ ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿತ್ತು. ಅದು ತಮಗೆ ಶುಭ ಎಂದೇ ಶ್ರೀಕಾಂತ್ ಭಾವಿಸುತ್ತಾರೆ. ಈಗ ‘ಸಲಗ’ ಉತ್ತಮ ಪ್ರದರ್ಶನ ಕಾಣುತ್ತಿದ್ದು, ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು ಪ್ರೊಮೋಷನ್ಗೆ ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಈ ಕಾರ್ಯಕ್ಕೆ ದೇವಸ್ಥಾನದಿಂದಲೇ ಚಾಲನೆ ಸಿಗಲಿ ಎಂದು ಚಿತ್ರತಂಡದವರು ಬಂಡಿಮಹಾಕಾಳಿ ದೇವಸ್ಥಾನದಲ್ಲಿ ಸೇರಿದ್ದರು. “ಬೆಳಗಾವಿಯಿಂದ ಚಾಮರಾಜನಗರದವರೆಗೂ ರಾಜ್ಯದ ಪ್ರತೀ ಥಿಯೇಟರ್ಗಳಲ್ಲೂ ಸಿನಿಮಾ ಚೆನ್ನಾಗಿ ಹೋಗುತ್ತಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಕ್ಲಾಸ್ ಆಡಿಯನ್ಸ್ ಕೂಡ ಚಿತ್ರವನ್ನು ಮೆಚ್ಚಿ ನೋಡುತ್ತಿರುವುದು ನಮಗೆ ಅಚ್ಚರಿಯ ಸಂಗತಿ” ಎನ್ನುವ ಅವರಿಗೆ ಎರಡನೆ ವಾರಕ್ಕೆ ಥಿಯೇಟರ್ ಕಡಿಮೆಯಾಗುತ್ತವೆ ಎನ್ನುವ ಭಯವೇನೂ ಇದ್ದಂತಿಲ್ಲ.
“ಸಿನಿಮಾ ಚೆನ್ನಾಗಿ ಹೋಗುತ್ತಿದೆ. ಚೇಂಬರ್ ನಿಯಮದ ಪ್ರಕಾರ ಕೆಲಕ್ಷನ್ ಚೆನ್ನಾಗಿದ್ದಾಗ ಸಿನಿಮಾ ತೆಗೆಯುವಂತಿಲ್ಲ. ಮುಂದಿನ ವಾರ ನಮಗೆ ಇನ್ನೂ ಹೆಚ್ಚಿನ ಥಿಯೇಟರ್ಗಳು ಸಿಗಲಿವೆ. ಅಲ್ಲಿಗೆ 380ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನಗೊಳ್ಳಲಿದೆ. ವಿತರಕರಾದ ಜಯಣ್ಣ ಮತ್ತು ಜಗದೀಶ್ ಇವೆಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ” ಎನ್ನುತ್ತಾರೆ ಶ್ರೀಕಾಂತ್. ಚಿತ್ರದ ಕಲೆಕ್ಷನ್ ಬಗ್ಗೆ ಅವರು ಸದ್ಯಕ್ಕೆ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಈ ಶುಕ್ರವಾರದ ನಂತರ ಕಲೆಕ್ಷನ್ ಕುರಿತಾಗಿ ಮಾಹಿತಿ ನೀಡಲೆಂದೇ ಸೂಕ್ತ ದಾಖಲೆಗಳೊಂದಿಗೆ ಒಂದು ಪ್ರೆಸ್ಮೀಟ್ ಮಾಡುವುದಾಗಿ ಹೇಳುತ್ತಾರೆ.